ವಿಜಯದಶಮಿ

ವಿಜಯದಶಮಿ ನವರಾತ್ರಿಯ ಕೊನೆಯ ದಿನ. ನವರಾತ್ರಿಯನ್ನು ಕರ್ನಾಟಕದಲ್ಲಿ ನಾಡ ಹಬ್ಬವಾಗಿ ಆಚರಿಸಲಾಗುತ್ತದೆ. ವಿಜಯನಗರದ ಅರಸರು ಆರಂಭಿಸಿದ್ದ ಈ ಪರಂಪರೆ ಮೈಸೂರು ಒಡೆಯರ ಕಾಲದಲ್ಲಿ ಮುಂದುವರೆದು ಕೊಂಡು ಬಂದಿತ್ತು. ಈಗಲೂ ನವರಾತ್ರಿಯನ್ನು ನಾಡಿನೆಲ್ಲೆಡೆ ಪರಾಂಪರಾಗತವಾದ ನಂಬಿಕೆಗಳೊಂದಿಗೆ ನಡಿಸಿ ಕೊಂಡು ಬರಲಾಗುತ್ತಿದೆ. ನವರಾತ್ರಿ ಎಂದರೆ ಒಂಬತ್ತು ರಾತ್ರಿಗಳು. ಈ ಒಂಬತ್ತು ರಾತ್ರಿಗಳ ಶಕ್ತಿ ದೇವತೆಗಳ ಪೂಜೆಯ ನಂತರ ಬರುವುದೇ ಹತ್ತನೇ ಹಗಲು. ಅದೇ ವಿಜಯ ದಶಮಿ. ಹತ್ತು ಹಗಲುಗಳ ಲೆಕ್ಕವನ್ನು ಹಿಡಿದು ಈ ಆಚರಣೆಯನ್ನು ದಸರಾ ಎಂದು ಕೂಡ ಕರೆಯುತ್ತಾರೆ. ಕ್ರಿಸ್ತಪೂರ್ವದಿಂದಲೂ ಈ ಆಚರಣೆ ಅಸ್ವಿತ್ವದಲ್ಲಿ ಇರುವುದಕ್ಕೆ ಆಧಾರಗಳು ಸಿಕ್ಕುತ್ತವೆ. ಶಕ್ತಿಯನ್ನು ಜಗನ್ಮಾತಾ ಎಂದು ಆರಾಧಿಸುವ ವಿಚಾರ ಋಗ್ವೇದದಲ್ಲಿಯೇ ಬರುತ್ತದೆ. ಇದು ನಿತ್ಯವೂ(ಕಡ್ಡಾಯ) ಕಾಮ್ಯ (ಐಚ್ಚಿಕ) ಎರಡೂ ಆಗಿರುವ ಅಪರೂಪದ ವ್ರತ. ಆಷಾಢ ಶುಕ್ಲ ಅಷ್ಟಮಿಯಂದು ಮಲಗಿದ್ದ ದುರ್ಗಾ ಮಾತೆಯನ್ನು ಅಶ್ವಯುಜ ಶುಕ್ಲ ಅಷ್ಟಮಿಯಂದು ಎಬ್ಬಿಸಲಾಗುತ್ತದೆ ಎನ್ನುವುದು ನಂಬಿಕೆ. ಇಲ್ಲಿಂದ ಮೂರು ದಿನಗಳನ್ನು ತ್ರಿರಾತ್ರಿ ಎಂದು ಆಚರಿಸಲಾಗುತ್ತದೆ. ಮಹಾ ನವಮಿಯಂದು ಆಯುಧ ಪೂಜೆಯನ್ನು ನಡೆಸುವ ಪದ್ದತಿಯೂ ಇದೆ. ವಿಜಯ ದಶಮಿ ಆಚರಣೆಯ ಹಿಂದಿರುವ ಪ್ರಮುಖ ಕಥೆಯೆಂದರೆ ದುರ್ಗಾದೇವಿಯು ದುಷ್ಟನಾದ ಮಹಿಷಾಸುರ ಎನ್ನುವ ರಾಕ್ಷಸನನ್ನು ಸಂಹರಿಸಿರುವುದು. ಮಹಿಷಾಸುರನು ಕಾಡೆಮ್ಮೆಯ ರೂಪದಲ್ಲಿ ಕಾಣಿಸಿಕೊಂಡ ಎನ್ನಲಾಗುತ್ತದೆ. ಈ ರಾಕ್ಷಸನು ಯಾವುದೇ ಮನುಷ್ಯನಿಂದ, ದೇವರಿಂದ ಅಥವಾ ವಿಶಿಷ್ಟ ಶಕ್ತಿಯಿಂದ ತನ್ನನ್ನು ಸಂಹರಿಸಲು ಸಾಧ್ಯವಾಗಬಾರದು ಎನ್ನುವ ವರವನ್ನು ಪಡೆದಿದ್ದನು. ತನ್ನ ಅಮರತ್ವದ ವರವನ್ನು ಹೊಂದಿರುವ ರಾಕ್ಷಸ ಅಹಂಕಾರದಿಂದ ಮೂರು ಲೋಕದ ಜನರಿ ಹಾಗೂ ದೇವತೆಗಳಿಗೆ ತೊಂದರೆ ಕೊಡಲು ಪ್ರಾರಂಭಿಸಿದನು. ಆಗ ಎಲ್ಲರೂ ರಾಕ್ಷಸನ ಕಾಟ ತಪ್ಪಿಸಬೇಕೆಂದು ಬೇಡಿಕೊಳ್ಳುತ್ತಿದ್ದರು.

ಮೂರುಲೋಕದ ಜನರ ಪ್ರಾರ್ಥನೆ ಕೇಳಿದ ದೇವಿ ದುರ್ಗೆಯಾಗಿ ಅವತರಿಸಿದಳು. ಭವ್ಯವಾದ ಮತ್ತು ಭಯವನ್ನುಂಟುಮಾಡುವಂತಹ ಶಕ್ತಿ ರೂಪಳಾಗಿ, ಸಿಂಹದ ಮೇಲೆ ಕುಳಿತು, ಹತ್ತು ಕೈಗಳಲ್ಲಿ ಹತ್ತು ಬಗೆಯ ಆಯುಧಗಳನ್ನು ಹಿಡಿದು ಬಂದಳು. ರಾಕ್ಷಸನಾದ ಮಹಿಷಾಸುರನನ್ನು ವಿಜಯ ದಶಮಿಯ ದಿನ ಸಂಹಾರ ಮಾಡಿದಳು. ಅಂದಿನಿಂದ ವಿಜಯ ದಶಮಿಯನ್ನು ಭಕ್ತರು ಬಹಳ ಅದ್ದೂರಿಯಿಂದ ಹಬ್ಬವನ್ನಾಗಿ ಆಚರಿಸಿದರು ಎನ್ನುವ ಪ್ರತೀತಿ ಇದೆ.

ವಿಜಯ ದಶಮಿ ನವರಾತ್ರಿಯ ಕಡೆಯ ದಿನ, ತ್ರಿರಾತ್ರಿ ಆಚರಣೆಯ ಕೊನೆಯ ದಿನ ಕೂಡ ಹೌದು. ಈ ದಿನವನ್ನು ಪಾಂಡವರು ಕೌರವರ ಮೇಲೆ ವಿಜಯ ಸಾಧಿಸಿದ ದಿನ, ರಾವಣನನ್ನು ಶ‍್ರೀರಾಮನು ಸಂಹರಿಸಿದ ದಿನ ಎಂದೂ ನಂಬಲಾಗಿದೆ. ಉತ್ತರ ಭಾರತದ ಕೆಲವು ಕಡೆ ಈ ದಿನವನ್ನು ಹೊಸ ವರ್ಷದ ದಿನ ಎಂದೂ ಕೂಡ ಆಚರಿಸುವ ಪದ್ದತಿ ಇದೆ. ಮಹಾ ಭಾರತದಲ್ಲಿ ಪಾಂಡವರು ವಿರಾಟನ ರಾಜ್ಯದಲ್ಲಿ ತಮ್ಮ ಅಜ್ಞಾತ ವಾಸವನ್ನು ಯಶಸ್ವಿಯಾಗಿ ಪೂರೈಸಿದರು. ಈ ಸಂದರ್ಭದಲ್ಲಿ ತಮ್ಮ ಶಸ್ತ್ರಾಸ್ತ್ರಗಳನ್ನು ಶಮಿ ವೃಕ್ಷದಲ್ಲಿ ಅಡಗಿಸಿ ಇಟ್ಟಿದ್ದರು. ಶಮಿ ವೃಕ್ಷವನ್ನು ದುರ್ಗಾಮಾತೆಯನ್ನು ಸ್ಮರಿಸಿ ಮಹಾಭಾರತದ ಯುದ್ಧದಲ್ಲಿ ಜಯಶಾಲಿಯಾದರು. ವಿಜಯ ದಶಮಿ ಎಂದು ಹೆಸರು ಬರಲು ಇದೂ ಒಂದು ಕಾರಣ ಎನ್ನುವ ನಂಬಿಕೆ ಕೂಡ ಇದೆ. ಇದನ್ನು ಗಮನದಲ್ಲಿರಿಸಿ ವಿಜಯದಶಮಿಯಂದು ಇಂದಿಗೂ ಗುರುಹಿರಿಯರಿಗೆ ಶಮೀ ವೃಕ್ಷದ ಎಲೆಗಳನ್ನು ನೀಡಿ ನಮಿಸುತ್ತಾ ಈ ಕೆಳಗಿನ ಶ್ಲೋಕವನ್ನು ಹೇಳುವುದು ರೂಢಿಯಲ್ಲಿದೆ.

ಶಮೀ ಶಮಯತೇ ಪಾಪಂ ಶಮೀ ಶತ್ರುವಿನಾಶಿನೀ |

ಅರ್ಜುನಸ್ಯ ಧನುರ್ಧಾರೀ ರಾಮಸ್ಯ ಪ್ರಿಯದರ್ಶಿನೀ ||

ಕರಿಷ್ಯಮಾಣಯಾತ್ರಾಯಾ ಯಥಾಕಾಲಂ ಸುಖಂ ಮಯಾ |

ತತ್ರ ನಿರ್ವಿಘ್ನಕರ್ತ್ರೀ ತ್ವಂ ಭವ ಶ್ರೀರಾಮಪೂಜಿತಾ ||

ಈ ವಿಜಯ ದಶಮಿ ದಿನದ೦ದೇ, ‘ದ್ವೈತ ವೇದಾ೦ತ’ ಅಥವ ‘ತತ್ವ ಸಿದ್ಧಾ೦ತ’ದ ಪ್ರತಿಷ್ಠಾಪನಾಚಾರ್ಯರಾದ ಶ್ರೀ ಶ್ರೀ ವಿಶ್ವ ಗುರು ಶ್ರೀ ಮಧ್ವಾಚಾರ್ಯರು, ಉಡುಪಿಯ ಬಳಿ ಇರುವ ‘ಪಾಜಕ’ ಎ೦ಬ ಸ್ಥಳದಲ್ಲಿ ಕ್ರಿ.ಶ. ೧೨೩೮ರಲ್ಲಿ ಅವತರಿಸಿದರು.

ವಾಲ್ಮೀಕಿ ಜಯಂತಿ

ಭಾರತೀಯ ಸಂಸ್ಕೃತಿಯ ತಾಯಿ ಬೇರು ಎಂದು ಕರೆಸಿ ಕೊಂಡಿರುವ ರಾಮಾಯಣ ಕೃತಿಯನ್ನು ರಚಿಸಿದವರೇ ವಾಲ್ಮೀಕಿ. ವಾಲ್ಮೀಕಿಯ ಜೀವನದ ಕುರಿತಾಗಿ ಅನೇಕ ದಂತಕಥೆಗಳಿವೆ. ಅದರಲ್ಲಿ ಒಂದು ಕಥೆಯ ಪ್ರಕಾರ, ವಾಲ್ಮೀಕಿ ಋಷಿಯಾಗುವ ಮೊದಲು ರತ್ನಾಕರ. ನಾರದನ ಉಪದೇಶದಿಂದ ರತ್ನಾಕರನಿಗೆ ಜ್ಞಾನೋದಯವಾಯಿತೆಂದು ಹೇಳಲಾಗುತ್ತದೆ. ವಾಲ್ಮೀಕಿ ಮಹರ್ಷಿಗಳು ಪ್ರಚೇತಸ ಮುನಿಯ ಮಗ. ಹೀಗಾಗಿ ಅವರಿಗೆ ‘ಪ್ರಾಚೇತಸ’ ಎಂಬ ಹೆಸರಿದೆ. ಪರಮಾತ್ಮನನ್ನು ಕುರಿತು ಬಹಳ ವರ್ಷಗಳ ಕಾಲ ತಪಸ್ಸು ಮಾಡುತ್ತಿದ್ದಾಗ ಅವರ ಸುತ್ತ ಹುತ್ತ ಬೆಳೆದಿತ್ತು. ಹುತ್ತ(ಸಂಸ್ಕೃತದಲ್ಲಿ-ವಲ್ಮೀಕ)ವನ್ನು ಭೇದಿಸಿಕೊಂಡು ಹೊರಗೆ ಬಂದಿದ್ದರಿಂದ ‘ವಾಲ್ಮೀಕಿ’ ಎಂಬ ಹೆಸರು ಬಂತು.

ವಾಲ್ಮೀಕಿ ಮಹರ್ಷಿಗಳು ತಮಸಾ ನದೀತೀರದಲ್ಲಿ ಸಂತೋಷವಾಗಿ ಹಾರಾಡುತ್ತಿದ್ದ ಕ್ರೌಂಚಪಕ್ಷಿ ಜೋಡಿಯನ್ನು ನೋಡುತ್ತಿದ್ದಾಗ, ಬೇಡನೊಬ್ಬನು ಬಂದು ಬಾಣ ಹೂಡಿ ಅವುಗಳಲ್ಲಿ ಗಂಡು ಹಕ್ಕಿಯನ್ನು ಕೊಂದು ಬಿಡುತ್ತಾನೆ. ಅದರ ಸಂಗಾತಿ ಹೆಣ್ಣು ಹಕ್ಕಿಯು ಸಂಕಟದಿಂದ ಕೂಗಲಾರಂಭಿಸುತ್ತದೆ. ಈ ಹೃದಯ ವಿದ್ರಾವಕ ಸನ್ನಿವೇಶವನ್ನು ನೋಡಿ, ಕರುಣೆ, ದುಃಖ,ಕೋಪದಿಂದ ಮಹರ್ಷಿಗಳು ಬೇಡನನ್ನು ಶಪಿಸುವಾಗ, ಶೋಕದಿಂದ ಕೆಳಕಂಡ ವಾಕ್ಯವನ್ನು ಶ್ಲೋಕ ರೂಪದಲ್ಲಿ ಉದ್ಗರಿಸುತ್ತಾರೆ.

ಈ ಶ್ಲೋಕವು ಗದ್ಯರೂಪದಲ್ಲಿರದೆ, ಪ್ರಾಸಬದ್ಧವಾಗಿ,ಲಯ-ಛಂದಸ್ಸುಗಳಿಂದ ಕೂಡಿತ್ತು.

ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ |

ಯತ್ಕ್ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮ್ ||

ಆ ವೇಳೆಗೆ ಬ್ರಹ್ಮದೇವ ಮಹರ್ಷಿಗಳ ಆಶ್ರಮಕ್ಕೆ ಬಂದು ಇದೇ ಶ್ಲೋಕರೂಪದಲ್ಲಿ ರಾಮಾಯಣ ಕಾವ್ಯ ರಚಿಸಲು ಹೇಳುತ್ತಾರೆ. ನಾರದರು ತಮಗೆ ಸಂಗ್ರಹವಾಗಿ ಹೇಳಿದ್ದ ರಾಮನ ಕಥೆಯನ್ನು ವಾಲ್ಮೀಕಿ ಮಹರ್ಷಿಗಳು ೨೪,೦೦೦ ಶ್ಲೋಕಗಳನ್ನೊಳಗೊಂಡ ಮಹಾಕಾವ್ಯವಾಗಿ ಬರೆದರು.

ವಾಲ್ಮೀಕಿ ಮಹರ್ಷಿಯು ರಚಿಸಿದ ರಾಮಾಯಣವು ಅನೇಕ ಸಾಧಕರಿಗೆ ಮಾರ್ಗಸೂಚಿಯಾಗಿದೆ ವಾಲ್ಮೀಕಿ ರಾಮಾಯಣವನ್ನು ಆಧರಿಸಿಕೊಂಡು ಹೋರಬಂದಿರುವ ಅನೇಕ ಪದ್ಯ, ಪ್ರಬಂಧಗಳು, ಕಾವ್ಯಗಳು, ನಾಟಕಗಳು, ಗ್ರಂಥಗಳು, ಹಾಗೂ ಮುಂತಾದ ನಾನಾ ವಿಧದ ಕಾವ್ಯ ಕೃತಿಗಳಿಗೆ ವಾಲ್ಮೀಕಿ ರಾಮಾಯಣ ಜನ್ಮದಾತೆಯಾಗಿದೆ. ಹಾಗೂ ವಾಲ್ಮೀಕಿ ರಚಿಸಿದ ರಾಮಾಯಣ ಮಹಾಕಾವ್ಯವು “ಧರ್ಮ ಮಾರ್ಗದಲ್ಲಿ ಧಾರ್ಮಿಕ, ಸಾಮಾಜೀಕ ಸದ್ಗುಣಗಳನ್ನು ಪ್ರತಿಪಾದಿಸುವ ದಾರಿ ದೀಪವಾಗಿ, ಜ್ಞಾನದ ದಾರಿ ತೋರಿಸುತ್ತಿದೆ” ಎಂಬುದು ನಿತ್ಯ ಸತ್ಯ. ವಾಲ್ಮೀಕಿ ಜಯಂತಿ ಆ ದ್ರಷ್ಟಾರರನ್ನು ಸ್ಮರಣೆ ಮಾಡುವಂತಹ ದಿನ.

ರಂಜಾನ್ ಅಥವಾ ಈದ್-ಉಲ್-ಫಿತರ್

ರಂಜಾನ್ ಅಥವ ರಮದಾನ್ ಇಸ್ಲಾಮಿಕ್ ಕ್ಯಾಲೆಂಡರ್‍ನಲ್ಲಿ ಒಂಬತ್ತನೇ ತಿಂಗಳು. ರಮ್‌ದ್‌ ಎಂದರೆ ಅರಬ್‌ ಭಾಷೆಯಲ್ಲಿ ‘ಅತಿಯಾದ ಶಾಖ’ ಎಂದರ್ಥ. ಈ ಪದದಿಂದ ಹುಟ್ಟಿದ ರಮ್‌ದಾನ್‌ ನ ಅರ್ಥವೂ ಕೂಡ ಭಿನ್ನವಾಗಿದೆ. ರಮ್‌ದಾನ್‌ ಎಂದರೆ ‘ಬಿಸಿಲಿಗೆ ಕಾದ ಮರಳು’ ಎಂಬರ್ಥವನ್ನು ಹೊಂದಿದೆ. ಬಿಸಿಲಿನ ಶಾಖ ನೆಲವನ್ನು ಸುಡುವಂತೆ ಮನುಷ್ಯನಲ್ಲಿ ಉದ್ಭವಿಸುವ ಹಸುವಿನ ಶಾಖ ಮಾನವನಲ್ಲಿನ ಕೆಟ್ಟ ಆಲೋಚನೆಗಳನ್ನು ಸುಟ್ಟು ಹಾಕುತ್ತದೆ ಎಂಬ ನಂಬಿಕೆ ಮುಸ್ಲೀಂರದ್ದು. ಮುಸ್ಲಿಂ ಬಾಂಧವರು ರಂಜಾನ್ ಸಮಯದಲ್ಲಿ ಒಂದು ತಿಂಗಳುಗಳ ಕಾಲ ಉಪವಾಸ ವ್ರತವನ್ನು ಆಚರಿಸುತ್ತಾರೆ. ಈ ಉಪವಾಸ ಮಾಡುವುದರಿಂದ ಅಲ್ಲಾ ನು ಪ್ರಸನ್ನನಾಗಿ ನಮಗೆ ಶುಭ ಫಲವನ್ನೇ ನೀಡುತ್ತಾನೆಂಬೂದು ಅವರ ನಂಬಿಕೆ. ಈ ಪವಿತ್ರ ಮಾಸದಲ್ಲಿ ಅವರು ಸೂರ್ಯೋದಯಕ್ಕೂ ಮುನ್ನ ಎದ್ದು, ಆಹಾರವನ್ನು ಸೇವಿಸಿದರೆ ಇನ್ನು ಅವರು ಆಹಾರವನ್ನು ಸೇವಿಸುವುದು ಸೂರ್ಯಾಸ್ತದ ನಂತರವೇ. ಅಲ್ಲಿಯವರೆಗೆ ಅವರು ಏನನ್ನೂ ಕೂಡ ಸೇವಿಸಲಾರರು. ಸತತ ಒಂದು ತಿಂಗಳ ಕಾಲ ಮುಸ್ಲಿಂ ರು ಹಗಲಿನಲ್ಲಿ ಅನ್ನ, ಅಹಾರ, ಆಸೆ, ಲೈಂಗಿಕ ಕಾಮನೆಗಳನ್ನು ತೊರೆದು, ಭಕ್ತಿಯಿಂದ ಪ್ರತಿದಿನವೂ 5 ಬಾರಿ ನಮಾಜ್‌ ಮಾಡುತ್ತಾರೆ.

ರಮ್‌ದಾನ್‌ ನ ಒಮದು ತಿಂಗಳ ಆಚರಣೆಗೆ ತೆರೆ ಎಳೆಯುವ ಹಬ್ಬವೇ ಈ ಈದ್‌ ಉಲ್‌ ಫಿತರ್‌. ತಮ್ಮ ಒಂದು ತಿಂಗಳ ಉಪವಾಸಕ್ಕೆ ನಾಂದಿ ಹಾಡುತ್ತಿದ್ದೇವೆಂದು ಮುಸ್ಲಿಂ ಬಾಂಧವರು ಈ ಹಬ್ಬದ ಆಚರಣೆಯ ಮೂಲಕ ತೋರಿಸಿಕೊಡುತ್ತಾರೆ. ಈದ್‌ ಎಂದರೆ ಅರಬ್‌ ಭಾಷೆಯಲ್ಲಿ ಸಂತೋಷ, ಆನಂದ ಮತ್ತೆ ಮರಳಿ ಬರುವುದು ಎಂದರ್ಥ. ಹಾಗೂ ಫಿತರ್‌ ಎಂದರೆ ಕೈಲಾಗದಿರುವವರಿಗೆ ದಾನ ಮಾಡುವುದು ಎಂದರ್ಥ.

ಈ ಹಬ್ಬದಲ್ಲಿ ಶ್ರೀಮಂತ, ಬಡವ, ಬಲ್ಲಿದ ಎನ್ನದೇ ಎಲ್ಲರೂ ಕೂಡ ತಮ್ಮ ಕೈಲಾದಷ್ಟು ದಾನವನ್ನನು ಮಾಡುತ್ತಾರೆ. ಅದರಲ್ಲೂ ಮುಖ್ಯವಾಗಿ ನಿರಾಶ್ರಿತರಿಗೆ, ತುಂಬಾ ಬಡವರಿಗೆ ಈ ಸಮಯದಲ್ಲಿ ದಾನವನ್ನು ಮಾಡಲಾಗುತ್ತದೆ. ಇದಕ್ಕೆ ಜಕಾತ್‌ ಎಂದೂ ಹೇಳುತ್ತಾರೆ. ಈ ದಾನದಲ್ಲಿ 2 ರಿಂದ 5 ಕೆ.ಜಿಯಷ್ಟು ಅಕ್ಕಿ ಅಥವಾ ಗೋಧಿಯನ್ನು ಬಡವರಿಗೆ ಹಂಚಲಾಗುತ್ತದೆ. ಹಬ್ಬದ ದಿನ ಮಾಡುವ ವಿಶೇಷ ಪ್ರಾರ್ಥನೆ ಅಥವಾ ನಮಾಜ್‌ ಗೂ ಮುನ್ನವೇ ಈ ದಾನವನ್ನು ನೀಡಬೇಕು. ಈ ಈದ್‌ ಹಬ್ಬವು ಚಂದ್ರನನ್ನು ಆಧರಿಸಿರುತ್ತದೆ.

ಈ ಮೇಲೆ ಹೇಳಿರುವ ಹಾಗೇ ಉಪವಾಸದ ತಿಂಗಳ ಕೊನೆಯಲ್ಲಿ ಯಾವಾಗ ಚಂದ್ರ ಕಾಣಿಸಿಕೊಳ್ಳುತ್ತಾನೋ ಅಂದು ಉಪವಾಸವನ್ನು ತೆಗೆದು ಹಾಕಿ, ಮರುದಿನ ಈ ಹಬ್ಬವನ್ನು ಆಚರಿಸಲಾಗುತ್ತದೆ. ಒಂದು ತಿಂಗಳ ರಮ್‌ದಾನ್‌ ಉಪವಾಸದಲ್ಲಿದ್ದ ಮುಸ್ಲಿಂರಿಗೆ ಈದ್‌ ಉಲ್‌ ಫಿತರ್‌ ಹಬ್ಬದಲ್ಲೇನೋ ಹೊಸ ಚೈತನ್ಯ, ಸಂಭ್ರಮ, ಸಡಗರ. ಈದ್‌ ಉಲ್‌ ಫಿತರ್‌ ನಂದು ಅಲ್ಲಾಹುವಿಗೆ ವಿಶೇಷ ನಮಾಜ್‌ ಸಲ್ಲಿಸಿ, ವಿವಿಧ ಬಗೆಯ ಖಾದ್ಯಗಳನ್ನು, ಬಿರ್ಯಾನಿಗಳನ್ನು ತಯಾರಿಸಿ ಮನೆಯವರೆಲ್ಲರೂ ಕೂಡ ಜೊತೆಯಾಗಿ ಸೇರಿ ಊಟ ಮಾಡುತ್ತಾರೆ.

ಮೊಹರಂ ಕೊನೆ ದಿನ

ಮೊಹರಂ ಎಂದರೆ ಮರೆತು ಬಿಡುವುದು ಅಥವಾ ನಿಷಿದ್ದ ಅಥವಾ ನಿಷೇಧಿತ ಎಂದು ಅರ್ಥ. ಇಸ್ಲಾಮಿಕ್ ಕ್ಯಾಲೆಂಡರ್‍ನ ಮೊದಲ ತಿಂಗಳಾದ ಮೊಹರಂನ ಹತ್ತನೇ ದಿನವನ್ನು ಮೊಹರಂ ಹಬ್ಬವಾಗಿ ಆಚರಿಸಲಾಗುತ್ತದೆ. ಇದು ಸಂಭ್ರಮದ ಆಚರಣೆ ಅಲ್ಲ.ಪ್ರವಾದಿ ಮೊಹಮ್ಮದ್ ಪೈಗಂಬರರ ಮಗಳು ಬೀಬಿ ಫಾತಿಮಾರ ಪತಿ ಹಜರತ್ ಅಲಿ(ನಾಲ್ಕನೇ ಖಲೀಫ) ಅವರ ಪುತ್ರ ಇಮಾನ್ ಹುಸೇನ್ ಇಬ್ನ್ ಅಲಿ. ಕ್ರಿ.ಶ 620ರಲ್ಲಿ ಜನಿಸಿದರು. ಪ್ರವಾದಿ ಮೊಹಮ್ಮದರು ತೋರಿಸಿಕೊಟ್ಟ ಸನ್ಮಾರ್ಗದಲ್ಲಿ ಹುಸೇನ್ ಸಾಗುತ್ತಾರೆ. ಪ್ರವಾದಿ ಮೊಹಮ್ಮದರಂತೆ ಮೆಕ್ಕಾದಿಂದ ಮದೀನಾಕ್ಕೆ ಯಾತ್ರೆ ಕೈಗೊಳ್ಳುವಂತೆ ಹುಸೇನರು ಕರ್ಬಲಾದ ದಾರಿ ಹಿಡಿಯುತ್ತಾರೆ. ಹುಸೇನರ ಜೊತೆಗೆ 72 ಮಂದಿ ಇಸ್ಲಾಂ ಧರ್ಮನಿಷ್ಠರಿರುತ್ತಾರೆ. ಹುಸೇನರ ಸೋದರ ಹಸನ್ ರನ್ನು ವಿಷಾಹಾರ ಮೂಲಕ ಕೊಲ್ಲಲಾಗುತ್ತದೆ. ಕರ್ಬಲಾ ಮರುಭೂಮಿಯಲ್ಲಿ ಯಜೀದ್ ಗಳು ಹುಸೇನ್ ಹಾಗೂ ಪರಿವಾರವನ್ನು ಅಡ್ಡಗಟ್ಟಿ ನೀರು, ಆಹಾರ ಕೊಡದಂತೆ ಹಿಂಸಿಸುತ್ತಾರೆ. ಕೊನೆಗೆ 10 ದಿನದಂದು ನಮಾಜ್ ಮಾಡುವಾಗ ಹುಸೇನರನ್ನು ಮೋಸದಿಂದ ಕೊಲ್ಲಲಾಗುತ್ತದೆ. ಈ ಬಲಿದಾನದ ಸ್ಮರಣೆಯೇ ಮೊಹರಂ ಆಚರಣೆಯ ಉದ್ದೇಶ. ಈ ದಿನದಂದು ಸಂಭ್ರಮಾಚರಣೆಗಳು ನಡೆಯುವುದಿಲ್ಲ. ಕರ್ಬಾಲಾ ಯುದ್ಧದ ಘಟನೆಗಳನ್ನು ಗೀತದ, ನಾಟಕದ ರೂಪಕದಲ್ಲಿ ಪ್ರದರ್ಶಿಸಿ ಹುಸೇನರ ಬಲಿದಾನವನ್ನು ಸ್ಮರಿಸಲಾಗುತ್ತದೆ. ಯುದ್ಧವು ಹತ್ತು ದಿನಗಳ ಕಾಲ ನಡೆದು ಹತ್ತನೇ ದಿನದಂದು ಇಮಾಮರ ಬಲಿದಾನವಾಗುತ್ತದೆ. ಈ ಕಾರಣದಿಂದ ಈ ಆಚರಣೆಯನ್ನು ಮೊಹರಂ ಕೊನೆಯ ದಿನ ಎಂದೂ ಕೂಡ ಕರೆಯಲಾಗುತ್ತದೆ. ಇಸ್ಲಾಂನ ನಾಲ್ಕು ಪವಿತ್ರ ಮಾಸಗಳಲ್ಲಿ ಮೊಹರಂ ಕೂಡ ಒಂದು. ಇದು ಆತ್ಮ ನಿರೀಕ್ಷಣೆಯ ತಿಂಗಳು. ಸಾಂಕೇತಿಕವಾಗಿ ಇದನ್ನು ಸೂಚಿಸಲು ಸ್ವಯಂ ಶಿಕ್ಷೆಯನ್ನು ವಿಧಿಸಿ ಕೊಳ್ಳುವ ಆಚರಣೆ ಕೂಡ ಇದೆ.ಈ ತಿಂಗಳ 9.10 ಮತ್ತು 11ನೇ ದಿನಗಳಂದು ರೋಜ್ ಎ ಆಷುರಾ ಎಂಬ ಹೆಸರಿನಲ್ಲಿ ಉಪವಾಸವನ್ನು ನಡೆಸಲಾಗುತ್ತದೆ. ಈ ಮೂರು ದಿನಗಳಲ್ಲಿ ನಡೆಸುವ ಉಪವಾಸ ಮೂವತ್ತು ದಿನಗಳ ಉಪವಾಸಕ್ಕೆ ಸಮ ಎಂದು ನಂಬಲಾಗಿದೆ. ಈ ದಿನದಂದು ವಿಶೇಷ ಪ್ರಾರ್ಥನೆಗಳು ಅಯೋಜಿತವಾಗಿರುತ್ತವೆ. ಶಿಯಾ ಪಂಗಡಕ್ಕೆ ಸೇರಿದ ಮುಸ್ಲೀಮರು ಮೆರವಣಿಗೆ ನಡೆಸುತ್ತಾರೆ. ಕರ್ನಾಟಕದ ಹಲವೆಡೆ ಹುಲಿವೇಷನ್ನು ಹಾಕುವ ಪದ್ದತಿ ಕೂಡ ಇದೆ,

ಮೇ ದಿನಾಚರಣೆ

ಮೇ ಒಂದರಂದು ಅಂತರರಾರಾಷ್ಟ್ರೀಯ ಕಾರ್ಮಿಕ ದಿನವನ್ನು ಆಚರಿಸಿಲಾಗುತ್ತದೆ. ಶ್ರಮ ಜೀವಿಗಳು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ಗೌರವಿಸುವುದು ಈ ಆಚರಣೆಯ ಪ್ರಮುಖ ಉದ್ದೇಶ, 1886ರ ಮೇ 4ರಂದು ಚಿಕಾಗೋ ನಗರದ ಇಲಿಯಾನ್ಸ್ ಪ್ರದೇಶದ ಹೇ ಮಾರು ಕಟ್ಟೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕಾರ್ಮಿಕರ ಮೇಲೆ ಹಿಂಸಾತ್ಮಕ ದಮನಕಾರಿ ನಡವಳಿಕೆಯನ್ನು ಆಡಳಿತ ಪ್ರದರ್ಶಿಸಿದರು. ಇದರಿಂದ ಹಲವು ಕಾರ್ಮಿಕರು ಮೃತರಾದರು ಮತ್ತು ಗಾಯಗೊಂಡರು. 1889ರಲ್ಲಿ ರಾಬರ್ಟ್ ಓವೆನ್ ಕಾರ್ಮಿಕ ಶಕ್ತಿಯನ್ನು ಗುರುತಿಸುವ ಕಾರಣಕ್ಕೆ ಈ ದಿನದ ಹಿನ್ನೆಲೆಯಲ್ಲಿ ಮೇ ಒಂದರಂದು ಕಾರ್ಮಿಕ ದಿನಾಚಣೆಯ ಆಚರಣೆಯನ್ನು ಸೂಚಿಸಿದ, ಅದೇ ವರ್ಷ ಪ್ಯಾರೀಸಿನಲ್ಲಿ ನಡೆದ ಜಾಗತಿಕ ಸಮಾಜವಾದಿ ಮೊದಲ ಅಧಿವೇಶನದಲ್ಲಿ ಇದನ್ನು ಅಂತರರಾಷ್ಟ್ರೀಯ ಉತ್ಸವವಾಗಿ ಆಚರಿಸಲು ನಿರ್ಧರಿಸಲಾಯಿತು. ಜಗತ್ತಿನ ಬಹುತೇಕ ದೇಶಗಳಲ್ಲಿ ಈ ಆಚರಣೆ ನಡೆದು ಕೊಂಡು ಬಂದಿತು. 1892ರಿಂದಲೇ ಬ್ರಿಟನ್‍ನಲ್ಲಿ ಮೇ ದಿನದ ಆಚರಣೆ ಆರಂಭವಾಯಿತು. ಆಗ ಬ್ರಿಟನ್ ಅಧೀನಕ್ಕೆ ಒಳ ಪಟ್ಟಿದ್ದ ಭಾರತದಲ್ಲಿ ಕೂಡ ಇದರ ಆಚರಣೆ ಕಾಣಿಸಿ ಕೊಂಡಿತು. 1927ರಿಂದ ಇದು ನಿರಂತರವಾಗಿ ಆಚರಣೆಯಾಗುತ್ತಾ ಬಂದಿತು. ಎರಡನೇ ಮಹಾಯುದ್ಧದ ನಂತರ ಇದರ ಆಚರಣೆ ವ್ಯಾಪಕವಾಯಿತು. ಭಾರತ ಸರ್ಕಾರ ಕೂಡ ಸ್ವಾತಂತ್ರ್ಯಾ ನಂತರದಿಂದಲೂ ಈ ಆಚರಣೆಗೆ ಮನ್ನಣೆ ನೀಡಿ ಸಾರ್ವತ್ರಿಕ ರಜಾ ದಿನವನ್ನಾಗಿ ಇದನ್ನು ಘೋಷಿಸಿದೆ.

ಮಹಾವೀರ ಜಯಂತಿ

ಜೈನ ಧರ್ಮದ ಪ್ರಮುಖ ಆಚರಣೆ ಮಹಾವೀರ ಜಯಂತಿ. ಅದು ಕೊನೆಯ ತೀರ್ಥಂಕರನಾದ ಭಗವಾನ್ ಮಹಾವೀರರ ಜಯಂತಿ. ಇದುವರೆಗೆ ಸಿಕ್ಕಂತಹ ಜೈನರ ಗ್ರಂಥಗಳು ಮತ್ತು ಜೈನ ಧರ್ಮದ ಲಿಪಿಗಳ ಪ್ರಕಾರ, ಭಗವಾನ್ ಮಹಾವೀರರು ಪಾಟ್ನಾದಿಂದ ಸ್ವಲ್ಪ ದೂರವಿರುವ ಬಿಹಾರಿನ ಕುಂದಲಾಪುರದಲ್ಲಿ ಭಾರತೀಯ ಪಂಚಾಂಗದ ಚೈತ್ರ ಮಾಸದ ತ್ರಯೋದಶಿಯಂದು ಜನ್ಮ ತಾಳಿದರು. ಆ ಸಮಯದಲ್ಲಿ ವೈಶಾಲಿ ಎಂಬ ಸ್ಥಳ ಬಿಹಾರ್ ರಾಜ್ಯದ ರಾಜಧಾನಿಯಾಗಿತ್ತು. ವೈಶಾಲಿಯ ರಾಜ ಸಿದ್ದಾರ್ಥ ಮತ್ತು ರಾಣಿ ತ್ರಿಶಲ. ಇವರಿಬ್ಬರಿಗೆ ಹುಟ್ಟಿದ ಮಗುವನ್ನು ವರ್ಧಮಾನ ಎಂದು ನಾಮಕರಣ ಮಾಡಿದರು. ಶ್ವೇತಾಂಬರ ಜೈನರ ಪ್ರಕಾರ ಕ್ರಿಸ್ತ ಪೂರ್ವ 599 ರಲ್ಲಿ ಮಹಾವೀರ ಜನಿಸಿದರು. ಅದರಂತೆ ದಿಗಂಬರ ಪಂಥದವರ ಪ್ರಕಾರ ಕ್ರಿಸ್ತ ಪೂರ್ವ 615 ಭಗವಾನ್ ಮಹಾವೀರರು ಜನಿಸಿದರು.

ರಾಜ ಕುಮಾರರರಾಗಿ ಜನಿಸಿದ ವರ್ಧಮಾನರು ತಮ್ಮ ಮೂವತ್ತನೇ ವರ್ಷದಲ್ಲಿ ಸಿಂಹಾಸನವನ್ನು ತೊರೆದು ವೈರಾಗ್ಯವನ್ನು ತಾಳಿ ಮುಕ್ತಿ ಮಾರ್ಗವನ್ನು ಅರಸಿದರು. 12 ವರ್ಷಗಳ ಕಾಲ ತಪಸ್ಸನ್ನುಆಚರಿಸಿದ ನಂತರ ಅವರಿಗೆ ಕೇವಲ ಜ್ಞಾನವು ಲಭಿಸಿತು.ಅಹಿಂಸಾ ಮಾರ್ಗವನ್ನು ಅವರು ಉಪದೇಶಿಸಿದರು. ಹಲವು ಜೈನ ಧಾರ್ಮಿಕ ಗ್ರಂಥಗಳ ಪ್ರಕಾರ ಮಹಾವೀರನು ತನ್ನ 72ವಯಸ್ಸಿಗೆ ಜ್ಞಾನೋದಯವನ್ನು ಪಡೆದನು. ಜೈನ ಸಾಹಿತ್ಯದಲ್ಲಿ ಇದನ್ನು ‘ನಿರ್ವಾಣ’ ಎಂದು ಕರೆಯುತ್ತಾರೆ.

ಮಹಾವೀರ ಜಯಂತಿ ಜೈನರಿಗೆ ಬಹು ದೊಡ್ಡ ಹಬ್ಬ. ಈ ಸಮಯದಲ್ಲಿ ಅವರು ಹಲವಾರು ಬಗೆಯ ಸಂಭ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ. ದೂರದ ಬಂಧು - ಬಳಗ, ನೆಂಟರು - ಇಷ್ಟರು ಮತ್ತು ಸ್ನೇಹಿತರುಗಳು ಒಟ್ಟಿಗೆ ಕೂಡಿ ಹಬ್ಬ ಆಚರಿಸುತ್ತಾರೆ. ಈ ಸಂದರ್ಭದಲ್ಲಿ ಎಲ್ಲರೂ ಭಗವಾನ್ ಮಹಾವೀರನನ್ನು ಭಕ್ತಿಯಿಂದ ಪೂಜಿಸಿ ಸ್ಮರಿಸುತ್ತಾರೆ. ಪ್ರತಿಯೊಬ್ಬ ಜೈನರ ಮನೆಯಲ್ಲೂ ಕೂಡ ಭಗವಾನ್ ಮಹಾವೀರನ ಪ್ರತಿಮೆ ಇಟ್ಟು, ಅದಕ್ಕೆ ಸುಗಂಧ ಭರಿತವಾದ ತೈಲದಿಂದ ಅಭ್ಯಂಜನ ಸ್ನಾನ ಮಾಡಿಸಿ ತಮ್ಮ ಪರಿಶುದ್ಧವಾದ ಭಕ್ತಿಯನ್ನು ಸಮರ್ಪಿಸಿ ಪೂಜಿಸುತ್ತಾರೆ. ಜೈನರ ಪವಿತ್ರ ಕ್ಷೇತ್ರಗಳಿಗೆ ಭೇಟಿ ನೀಡುತ್ತಾರೆ.

ಮಹಾಲಯ ಅಮಾವಾಸ್ಯೆ

ಭಾದ್ರಪದ ಮಾಸದ ಕೃಷ್ಣ ಪಕ್ಷದ ಹದಿನೈದು ದಿನಗಳನ್ನು ಪಿತೃಪಕ್ಷ ಎಂದು ಕರೆಯಲಾಗುತ್ತದೆ. ಇದರಲ್ಲಿನ ಪ್ರತಿ ದಿನದಂದು ಅಗಲಿದವರನ್ನು ಸ್ಮರಿಸುವ ಕ್ರಮವಿದೆ. ಇದರ ಕೊನೆಯ ದಿನ ಅಮಾವಾಸ್ಯೆಯಂದು ಸರ್ವಪಿತೃ ಅಮಾವಾಸ್ಯೆಯನ್ನು ಆಚರಿಸಲಾಗುತ್ತದೆ. ಇದನ್ನು ಸರ್ವಪಿತ್ರಿ ಅಮಾವಾಸ್ಯೆ ಎಂದೂ ಕರೆಯಲಾಗುತ್ತದೆ. ಮಹಾಲಯ ಅಮಾವಾಸ್ಯೆಂದು ಪಿತೃಗಳಿಗೆ ತರ್ಪಣ ನೀಡುವುದರೊಂದಿಗೆ, ಸದ್ಗತಿಯನ್ನು ಕೋರಿ ಪ್ರಾರ್ಥನೆಯನ್ನು ಮಾಡಲಾಗುತ್ತದೆ. ಮಹಾಲಯ ಅಮಾವಾಸ್ಯೆಯ ಹಿಂದೆ ಪೌರಾಣಿಕ ಹಿನ್ನಲೆಯೂ ಇದೆ.

ನಮಗಾಗಿ ಜೀವ ಸವೆದು ಸ್ವರ್ಗ ಸೇರಿದ ಪೂರ್ವಜರಿಗೆ ತರ್ಪಣ ಬಿಡಲು ಇರುವ ಅವಧಿಯೇ ಮಹಾಲಯ ಅಮವಾಸ್ಯೆ. ವರ್ಷಕ್ಕೊಮ್ಮೆ ಬರುವ ಈ ಸಮಯವನ್ನು ಹಿಂದೂ ಧರ್ಮದಲ್ಲಿ ಪಿತೃಗಳಿಗೆ ಮೀಸಲಾದ ಅವಧಿ ಎನ್ನಲಾಗುತ್ತದೆ. ಅಗಲಿದ ಪೂರ್ವಜರನ್ನು ಭಕ್ತಿಯಿಂದ ನೆನೆಯುವ ಪರ್ವ ಕಾಲಕ್ಕೆ ಪಿತೃಪಕ್ಷ ಎಂದು ಕರೆಯಲಾಗುವುದು. ಹಿರಿಯರಿಗೆ ತರ್ಪಣವನ್ನು ತಂದೆ-ತಾಯಿ ಇರುವವರು ನೀಡುವಂತಿಲ್ಲ. ಮೂರು ತಲೆಮಾರಿನ ಪೂರ್ವಜರು ವಸುರೂಪ, ವಿಶ್ವೇದೇವರು ಮತ್ತು ಆದಿತ್ಯ ರೂಪದಲ್ಲಿ ತರ್ಪಣವನ್ನು ಸ್ವೀಕರಿಸುತ್ತಾರೆ ಎನ್ನುವುದು ನಂಬಿಕೆ. ಮಹಾಲಯ ಅಮಾವಾಸ್ಯೆಯಂದು ಪೂರ್ವಜರಲ್ಲದೆ ಮಾರ್ಗದರ್ಶಕರಾದ ಹಿರಿಯರಿಗೂ ಕೂಡ ತರ್ಪಣ ಬಿಡ ಬಹುದಾಗಿದೆ. ವಾರಣಾಸಿ, ಬದರಿ, ಗಯಾ, ಕಾಶಿ, ಶೇಷಂಬಾಡಿ, ರಾಮೇಶ್ವರ ಸೇರಿದಂತೆ 108 ಕ್ಷೇತ್ರಗಳನ್ನು ಪಿತೃ ಮೋಕ್ಷ ಕ್ಷೇತ್ರವೆಂದು ಪರಿಗಣಿಸಲಾಗುತ್ತದೆ. ಇಲ್ಲಿ ನೀಡುವ ತರ್ಪಣವನ್ನು ಶ್ರೇಷ್ಟವೆಂದೂ ಕರೆಯಲಾಗುತ್ತದೆ. ಮಹಾಭಾರತದಲ್ಲಿ ಕರ್ಣನು ಮಹಾದಾನಿ ಆಗಿದ್ದರೂ ಅನ್ನದಾನ ಮಾಡದೆ ಇದ್ದಿದ್ದರಿಂದ ಪಿತೃಋಣವನ್ನು ತೀರಿಸಿರಲಿಲ್ಲವೆಂದೂ ಅದಕ್ಕಾಗಿ ಅವನಿಗೆ ಯಮನು ಮಹಾಲಯ ಅಮಾವಾಸ್ಯೆಯಂದು ಭೂಮಿಗೆ ಬಂದು ಪಿತೃ ಋಣ ತೀರಿಸುವ ಅವಕಾಶ ನೀಡಿದ ಎಂಬ ಕಥೆ ಕೂಡ ಪ್ರಚಲಿತವಾಗಿದೆ.

ಕನ್ನಡ ರಾಜ್ಯೋತ್ಸವ

ಕನ್ನಡ ರಾಜ್ಯೋತ್ಸವದ ಆಚರಣೆಯ ಹಿಂದೆ ಕರ್ನಾಟಕ ಏಕೀಕರಣ ಹೋರಾಟದ ಸುದೀರ್ಘ ಇತಿಹಾಸವಿದೆ. ಏಕೀಕರಣಕ್ಕೆ ಮೊದಲು ಕನ್ನಡ ಮಾತನಾಡುವ ಪ್ರದೇಶಗಳು ಇಪ್ಪತ್ತು ವಿವಿಧ ಭಾಗಗಳಲ್ಲಿ ಹಂಚಿ ಹೋಗಿದ್ದವು. ಇದನ್ನು ಒಂದುಗೂಡಿಸುವ ಪ್ರಯತ್ನಗಳು 1830ರ ಸುಮಾರಿಗೆ ಆರಂಭವಾದವು. 1890ರಲ್ಲಿ ಸ್ಥಾಪನೆಯಾದ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ, 1915ರಲ್ಲಿ ಸ್ಥಾಪನೆಯಾದ ಕನ್ನಡ ಸಾಹಿತ್ಯ ಪರಿಷತ್ತು ಈ ಹೋರಾಟಕ್ಕೆ ಪ್ರಧಾನ ನೆಲೆ ಎನ್ನಿಸಿಕೊಂಡವು. ಅನೇಕ ಕನ್ನಡ ಪತ್ರಿಕೆಗಳೂ ಕೂಡ ಏಕೀಕರಣದ ಕಾವನ್ನು ಹೆಚ್ಚಿಸಿದವು. 1924ರಲ್ಲಿ ಕರ್ನಾಟಕ ಏಕೀಕರಣ ಸಭಾ ಆರಂಭವಾಗಿ ನಾಡಿನ ಅನೇಕ ಕಡೆ ಸಮಾವೇಶಗಳನ್ನು ನಡೆಸಿತು. 1937ರ ಅಕ್ಟೋಬರ್ 10ರಂದು ಕರ್ನಾಟಕ ಏಕೀಕರಣ ದಿವಸವನ್ನು ನಾಡಿನೆಲ್ಲೆಡೆ ಆಚರಿಸಿ ಏಕೀಕರಣಕ್ಕೆ ಸಂಕಲ್ಪ ಮಾಡಲಾಯಿತು.

ಸ್ವಾತಂತ್ರ್ಯಾನಂತರ ಕೂಡ ಏಕೀಕರಣವಾಗದೆ ಹೋದಾಗ ಕನ್ನಡಿಗರ ಆಕ್ರೋಶ ಮೇರೆ ಮೀರಿತು. ಹೋರಾಟ ತೀವ್ರ ಸ್ವರೂಪ ಪಡೆಯಿತು. 1952ರಂದು ಆಂಧ‍್ರ ಪ್ರದೇಶದ ಸ್ಥಾಪನೆಗೆ ಉಪವಾಸ ಮುಷ್ಕರ ಕುಳಿತ ಪೊಟ್ಟಿ ಶ‍್ರೀರಾಮಲು 58 ದಿನಗಳ ಉಪವಾಸದ ನಂತರ ನಿಧನರಾದರು. ಆಗ ಭುಗಿಲೆದ್ದ ಆಕ್ರೋಶದ ಕಾರಣ ಆಂಧ್ರ ಪ್ರದೇಶವು ರೂಪುಗೊಂಡಿತು. ಇದನ್ನು ಅನುಸರಿಸಿ 1953ರಲ್ಲಿ ಅಂದಾನಪ್ಪ ದೊಡ್ಡಮೇಟಿ ಅವರು ತಮ್ಮ ಊರಾದ ಜಕ್ಕಲಿಯಲ್ಲಿ ಉಪವಾಸ ಮುಷ್ಕರವನ್ನು ಆರಂಭಿಸಿದರು. ನಾಡಿನ ಎಲ್ಲೆಡೆ ಅದರ ಕಾವು ಹಬ್ಬಿತು. ದೇಶದೆಲ್ಲೆಡೆ ಇಂತಹ ಸ್ಥಿತಿ ರೂಪುಗೊಂಡಿದ್ದರಿಂದ 1953ರ ಡಿಸಂಬರ್ 23ರಂದು ರಾಜ್ಯ ಪುನರ್ವಿಂಗಡಣಾ ಅಯೋಗ ರಚನೆಯಾಯಿತು. ಈ ಸಮಿತಿಯ ವರದಿಯಂತೆ 1956ರ ನವಂಬರ್ ಒಂದರಂದು ವಿಶಾಲ ಮೈಸೂರು ರಾಜ್ಯ ರೂಪುಗೊಂಡಿತು. ಆದರೆ ಕನ್ನಡಿಗರ ಬಯಕೆಯಂತೆ ಕರ್ನಾಟಕ ಎನ್ನುವ ಹೆಸರು ಬರಲಿಲ್ಲ. ಇದಕ್ಕಾಗಿ ಹೋರಾಟವು ಮುಂದುವರೆಯಿತು. ಕೊನೆಗೆ 1973ರ ನವಂಬರ್ ಒಂದರಂದು ಕರ್ನಾಟಕ ಎಂಬ ಅಧಿಕೃತ ನಾಮಕರಣ ನಡೆಯಿತು.

ಕರ್ನಾಟಕ ಏಕೀಕರಣಕ್ಕೆ ಹಲವು ಮಹನೀಯರು ದುಡಿದಿದ್ದಾರೆ. ಅಲೂರು ವೆಂಕಟರಾಯರಂತೂ ಇಡೀ ತಮ್ಮ ಜೀವನವನ್ನೇ ಅದಕ್ಕಾಗಿ ಮುಡಿಪಾಗಿಟ್ಟಿದ್ದರು. ಇದಕ್ಕಾಗಿ ಅವರನ್ನು ‘ಕನ್ನಡ ಕುಲಪುರೋಹಿತ’ ಎಂದೂ ಕೂಡ ಕರೆಯಲಾಗುತ್ತದೆ. ಅವರ ಜೊತೆಗೆ ಕಡಪಾ ರಾಘವೇಂದ್ರ ರಾಯರು, ಮುದವೀಡ ಕೃಷ್ಣರಾಯರು, ಫ.ಗ.ಹಳಕಟ್ಟಿ, ಬೆನಗಲ್ ರಾಮರಾವ್, ಮಂಗಳವಾಡ ಶ್ರೀನಿವಾಸ ರಾವ್, ಅಂದಾನಪ್ಪ ದೊಡ್ಡಮೇಟಿ ಮೊದಲಾದ ಅನೇಕರು ತೀವ್ರ ಹೋರಾ ಟವನ್ನು ನಡೆಸಿದರು. ಕರ್ನಾಟಕ ಪತ್ರ, ರಾಜಹಂಸ, ವಾಗ್ಭೂಷಣ, ವಾಗ್ಧೇವಿ, ವಿಜಯ, ಕನ್ನಡ ನುಡಿ, ವಿಶ್ವ ಕರ್ನಾಟಕ, ಸ್ವತಂತ್ರ ಕರ್ನಾಟಕ, ಕಂಠೀರವ, ನವಭಾರತ, ಸಾಧ್ವಿ ಮೊದಲಾದ ಪತ್ರಿಕೆಗಳು ಏಕೀಕರಣ ಹೋರಾಟವನ್ನು ಜೀವಂತವಾಗಿಟ್ಟವು. ಹುಯಿಲುಗೋಳ ನಾರಾಯಣ ರಾಯರ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಮತ್ತು ಕುವೆಂಪು ಅವರ ‘ಜೈ ಭಾರತ ಜನನಿಯ ತನುಜಾತೆ’ ಗೀತೆಗಳು ಹೋರಾಟದ ತಾರಕ ಮಂತ್ರಗಳಾಗಿದ್ದವು.

ಹೀಗೆ ಶತಮಾನದ ಹೋರಾಟದ ಫಲವಾಗಿ ಒಂದುಗೂಡಿರುವ ನಾಡು-ನುಡಿಯ ಹಿರಿಯಮೆಯನ್ನು ಸಾರುವ ಮತ್ತು ಅದಕ್ಕಾಗಿ ಮತ್ತೆ ನಮ್ಮ ಸಮರ್ಪಿಸಿ ಕೊಳ್ಳುವ ಆಚರಣೆಯೇ ‘ಕನ್ನಡ ರಾಜ್ಯೋತ್ಸವ.

ಕನಕ ದಾಸ ಜಯಂತಿ

ಕರ್ನಾಟಕದ ಭಕ್ತಿ ಪಂಥದ ಪ್ರಮುಖರಲ್ಲಿ ಕನಕದಾಸರು ಮುಖ್ಯವಾದವರು. ಅವರ ನಿಜವಾದ ಹೆಸರು -ತಿಮ್ಮಪ್ಪನಾಯಕ] (1508-1606) ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊ೦ದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು. ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಬಣ್ಣಿಸಲಾಗಿದೆ.

ಕನಕದಾಸರು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ 1509ರಲ್ಲಿ ಕುರುಬ ಜನಾಂಗಕ್ಕೆ ಸೇರಿದ ಬಚ್ಚಮ್ಮ ಮತ್ತು ಬೀರಪ್ಪನಾಯಕ ಎಂಬ ದಂಪತಿಗಳ ಮಗನಾಗಿ ಜನಿಸಿದರು. ಕನಕದಾಸರು ಬರಿ ಕುರುಬ ಜಾತಿಗೆ ಸೀಮಿತವಾದ ಭಕ್ತರಲ್ಲ ಎಲ್ಲಾ ಜಾತಿಗಳಿಗೆ ಬೇಕಾದವರು. 15-16 ನೆಯ ಶತಮಾನದಲ್ಲೇ ಜಾತಿ ವ್ಯವಸ್ಥೆಯ ಬಗ್ಗೆ ಸಮರ ಸಾರಿದ ಭಕ್ತ ಎಂದರೆ ಕನಕದಾಸರು ಎಂದರೆ ತಪ್ಪಾಗಲಾರದು. ಕನಕದಾಸರು ಅನೇಕ ಕೀರ್ತನೆಗಳನ್ನು ರಚಿಸಿದ್ದಾರೆ. ಸುಮಾರು ಐದು ನೂರು ವರ್ಷಗಳ ಹಿಂದಿನ ಮಾತು. ವಿಜಯನಗರ ಸಾಮ್ರಾಜ್ಯದಲ್ಲಿದ್ದ ಬಂಕಾಪುರ ಪ್ರಾಂತದ ಮುಖ್ಯಪಟ್ಟಣದ ಹೆಸರು ಬಾಡ ಎಂದು. ವಿಜಯನಗರದಿಂದ ಗೋವಾಕ್ಕೆ ಹೋಗುವ ಹೆದ್ದಾರಿ. ಈ ಬಾಡದಿಂದಲೇ ಹಾಯ್ದು ಹೋಗುತ್ತಿತ್ತು. ಬಾಡ ಒಳ್ಳೇ ಆಯಕಟ್ಟಿನ ಸ್ಥಳ. ಈ ಬಂಕಾಪುರ ಪ್ರಾಂತಕ್ಕೆ ದಂಡನಾಯಕನಾಗಿದ್ದ ಬೀರಪ್ಪನಾಯಕರ ಮಗನೇ ಕನಕ ದಾಸರು. ತಿರುಪತಿ ವೆಂಕಟರಮಣನ ಮೇಲಿನ ಭಕ್ತಿಯಿಂದ ಕೋರಿ ಕೊಂಡಿದ್ದರ ಫಲವಾಗಿ ಕನಕದಾಸರು ಜನಿಸಿದರು ಎನ್ನುವುದು ನಂಬಿಕೆ.

ಕನಕ ದಾಸರಿಗೆ ಬಾಲ್ಯದಲ್ಲಿಯೇ ಅಕ್ಷರಾಭ್ಯಾಸ, ಬಂಕಾಪುರದ ಶ್ರೀನಿವಾಸಾಚಾರ್ಯರ ಬಳಿ ವಿದ್ಯಾಭ್ಯಾಸವಾಗಿ, ವ್ಯಾಕರಣ, ತರ್ಕ, ಮೀಮಾಂಸೆ, ಸಾಹಿತ್ಯಗಳಲ್ಲಿ ಪಾರಂಗತನಾದನು. ಜೊತೆಗೆ ಕತ್ತಿವರಸೆ, ಕುದುರೆ ಸವಾರಿಯನ್ನೂ ಕಲಿತರು ಕೆಲವು ವರ್ಷಗಳಲ್ಲಿ ಹೆತ್ತವರು ತೀರಿ ಕೊಂಡರು. ತಂದೆಯ ಬಳಿಕ ತಿಮ್ಮಪ್ಪ ನಾಯಕ ತನ್ನ ಕಿರಿವಯಸ್ಸಿನಲ್ಲಿಯೇ ಬಂಕಾಪುರ ಪ್ರಾಂತಕ್ಕೆ ದಂಡನಾಯಕರಾದರು. ಯುದ್ಧವೊಂದರಲ್ಲಿ ಗಾಯಗೊಂಡಾಗ ಅವರಿಗೆ ಪರಮಾತ್ಮನ ಪ್ರೇರಣೆಯಾಗಿ ಸಾಮ್ರಾಜ್ಯವನ್ನು ಬಿಟ್ಟು ಭಕ್ತಿ ಪಂಥದ ಕಡೆ ನಡೆದರು. ಕನಕದಾಸರು ವ್ಯಾಸರಾಯರ ಮೆಚ್ಚಿನ ಶಿಷ್ಯರು. ವ್ಯಾಸರಾಯದಿಂದ ಮಧ್ವ ತತ್ವಶಾಸ್ತ್ರವನ್ನು ಕಲಿತು ಒಪ್ಪಿಕೊಂಡ ಕನಕದಾಸರು ಉಡುಪಿ ಶ್ರೀ ಕೃಷ್ಣನ ಅನನ್ಯ ಭಕ್ತರು. ಕಾಗಿನೆಲೆಯ ಆದಿಕೇಶವನ ಭಕ್ತರಾದ ಕನಕದಾಸರು ಜಾತಿಪದ್ಧತಿಯ ತಾರತಮ್ಯಗಳನ್ನು ಅಲ್ಲಗಳೆದರು. ಇವರ ಕೀರ್ತನೆಗಳ ಅಂಕಿತ ಕಾಗಿನೆಲೆಯ ಆದಿಕೇಶವರಾಯ ಎಂಬುದು.

ಕನಕ ದಾಸರು ಸ್ವಾತಂತ್ರ ಕಾಂತಿವುಳ್ಳವರೂ, ಸಮಾಜ ಸುಧಾರಕರೂ, ವೈಚಾರಿಕ ಮನೋಧರ್ಮದವರಾಗಿದ್ದರು. ಇವರು ಕೀರ್ತನೆಗಳಲ್ಲದೆ ಅನೇಕ ಕಾವ್ಯಗಳಾದ “ಮೋಹನ ತರಂಗಿಣಿ” ಹರಿಭಕ್ತಸಾರ, ನಳಚರಿತ್ರೆ, ರಾಮಧ್ಯಾನ ಚರಿತ್ರೆ, ಮುಂತಾದವುಗಳನ್ನು ಅಲ್ಲದೇ ಅಲ್ಲಮನ ಬೆಡಗಿನ ವಚನಗಳಂತೆ ಮುಡಿಗೆಗಳನ್ನು ರಚಿಸಿ ದಾಸ ಸಾಹಿತ್ಯಕ್ಕೆ ಅಪಾರವಾದ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಇವರ ಕೀರ್ತನೆ ಕಾವ್ಯಾಂಶ ಪ್ರಧಾನವಾಗಿರುವುದರಿಂದ ಹಲವು ವಿಮರ್ಶಕರು ಗುರುತಿಸಿರುವುದನ್ನು ತಿಳಿದಿದ್ದೇವೆ. ಅವರು ಬಳಸಿರುವಂಥ ಪದ ಪ್ರಯೋಗಗಳು, ಅಲಂಕಾರಗಳು, ಛಂದಸ್ಸು ಚಮತ್ಕಾರ ವರ್ಣನೆಗಳಲ್ಲಿ ಕಾವ್ಯದ ಪ್ರಜ್ಞೆಯೆ ಎದ್ದು ಕಾಣಿಸುತ್ತಿದೆ. ಅನೇಕರ ನಂಬಿಕೆಯಂತೆ ಕನಕರು ಕೂಡ ಶ್ರೀಕೃಷ್ಣನ ಭಕ್ತರು. ಉಡುಪಿಯ ದೇವಾಲಯದಲ್ಲಿ ಅವರಿಗೆ ಪ್ರವೇಶ ದೊರೆಯದೆ ಹೋದಾಗ ದೇವಸ್ಥಾನದ ಹಿಂಭಾಗದ ಸ್ಥಳದಲ್ಲಿ ನಿಂತು “ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇ” ಎಂದೂ ಹಾಡತೊಡಗಿದರು. ಆಗ ಹಿಂಬಾಗದ ಗೋಡೆ ಬಿರುಕು ಒಡೆದು ಕೃಷ್ಣನ ವಿಗ್ರಹ ತಿರುಗಿತಂತೆ ಅವರ ಭಕ್ತಿಗೆ ಶ್ರೀಕೃಷ್ಣ ಪರಮಾತ್ಮನ ದರ್ಶನ ನೀಡಿರುವ ಕಿಂಡಿಯನ್ನು ಇಂದಿಗೂ “ಕನಕನ ಕಿಂಡಿ” ಎಂದೆ ಪ್ರಸಿದ್ದಿ ಪಡೆದಿದೆ. ಅಂದು ಕಂಡಂತಹ ಉಡುಪಿಯ ಶ್ರೀಕೃಷ್ಣನ ದರ್ಶನವನ್ನು ಇಂದಿಗೂ ಕಾಣಬಹುದು.

ಸ್ವಾತಂತ್ರ್ಯ ದಿನಾಚರಣೆ

15 ಆಗಸ್ಟ್ 1947 ರಂದು ನಮ್ಮ ಭಾರತ ದೇಶವು ಸ್ವತಂತ್ರವಾಯಿತು. ಪರಕೀಯ ಆಳ್ವಿಕೆಯಿಂದ ದೇಶ ಮುಕ್ತಿಯನ್ನು ಪಡೆದು ಕೊಂಡಿತು. ಆ ನೆನಪಿಗಾಗಿ ನಾವು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತೇವೆ. ಈ ದಿನದಂದು ಇಡೀ ದೇಶದಲ್ಲಿ ಸ್ವಾತಂತ್ರ್ಯದ ಮಹತ್ವವನ್ನು ಸಾರುವ ಆಚರಣೆಗಳು ನಡೆಯುತ್ತವೆ. ತ್ರಿವರ್ಣ ಧ್ವಜವನ್ನು ಹಾರಿಸಿ ಸಿಹಿ ಹಂಚಲಾಗುತ್ತದೆ. ಈ ಆಚರಣೆಯ ಪ್ರಮುಖ ಸಮಾರಂಭ ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯತ್ತದೆ. ಈ ಸಮಾರಂಭದಲ್ಲಿ, ಭಾರತದ ಪ್ರಧಾನ ಮಂತ್ರಿಗಳು ರಾಷ್ಟ್ರೀಯ ಧ್ವಜವನ್ನು ಹಾರಿಸಿ ಭಾರತದ ರಾಷ್ಟ್ರಗೀತೆ ಜನ ಗಣ ಮನ ವನ್ನು ಹಾಡಿ ನಂತರ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡುತ್ತಾರೆ. ಈ ಭಾಷಣದಲ್ಲಿ ದೇಶದ ಸಾಧನೆ, ದೇಶದ ಮುಂದಿರುವ ಪ್ರಮುಖ ಸವಾಲುಗಳ ಬಗ್ಗೆ ಮಾತನಾಡಿ, ಕೆಲವು ಪ್ರಗತಿ ಯೋಜನೆಗಳನ್ನು ಪ್ರಕಟಿಸಲಾಗುತ್ತದೆ. ಈ ದಿನದಂದು ದೇಶದ ಸ್ವಾತ್ರಂತ್ರ್ಯಕ್ಕೆ ಮಡಿದ ನಾಯಕರನ್ನು ಸ್ಮರಿಸಲಾಗುತ್ತದೆ.

ಭಾರತವು ಸ್ವತಂತ್ರವಾಗುವ ಮೊದಲು ಮೊಗಲರು, ಪೋರ್ತುಗೀಜರು, ಆದಿಲಶಾಹ, ಕುತುಬಶಾಹ ಮತ್ತು ಆಂಗ್ಲರಂತಹ ಅನೇಕರು ಭಾರತವನ್ನು ಆಳಿದರು. ಇವರೆಲ್ಲರೂ ಭಾರತದಲ್ಲಿದ್ದ ಸ್ವಾರ್ಥಿ ಮತ್ತು ಭ್ರಷ್ಟ ಜನರನ್ನು ತಮ್ಮ ಪಕ್ಷದಲ್ಲಿ ಸೇರಿಸಿಕೊಂಡು ಸ್ವಾತಂತ್ರ್ಯಕ್ಕಾಗಿ ಹೋರಾಡುವ ಸೈನಿಕರ ಮೇಲೆ ದೌರ್ಜನ್ಯ ನಡೆಸಿ ರಾಜ್ಯವಾಳಿದರು. ವ್ಯಾಪಾರ ಮಾಡುವ ನಿಮಿತ್ತ ಆಂಗ್ಲರು ಭಾರತಕ್ಕೆ ಬಂದರು. ಹೀಗೆ ಬೆರಳೆಣಿಕೆಯಷ್ಟು ಸಂಖ್ಯೆಯಲ್ಲಿದ್ದ ಆಂಗ್ಲರು ನಮ್ಮ ದೇಶವನ್ನು 150 ವರ್ಷಗಳ ಕಾಲ ಆಳಿದರು.

.ಇಂಗ್ಲೀಷ್ ಈಸ್ಟ್ ಇಂಡಿಯಾ ಕಂಪನಿಯ ವ್ಯಾಪಾರಿಗಳಾಗಿ ಭಾರತಕ್ಕೆ ಬಂದ ಬ್ರಿಟಿಷರು ಇಲ್ಲಿ ಅಧಿಕೃತವಾಗಿ ಅಧಿಪತ್ಯ ಸ್ಥಾಪಿಸಿದ್ದು 1757ರಲ್ಲಿ. ಪ್ಲಾಸಿ (ಪಲಾಶಿ) ಕದನದಲ್ಲಿ ಬಂಗಾಳ ನವಾಬ ಸಿರಾಜ್-ಉದ್-ದೌಲಾ ಮತ್ತವರ ಫ್ರೆಂಚ್ ಮೈತ್ರಿ ಸೇನೆಯನ್ನು ಬ್ರಿಟಿಷರು ಸೋಲಿಸಿದರು. ಅದಾದ ಬಳಿಕ ಆಫ್ಘಾನಿಸ್ತಾನದಿಂದ ಹಿಡಿದು ಮಯನ್ಮಾರ್​ವರೆಗೆ ಬಹುತೇಕ ಎಲ್ಲಾ ಪ್ರದೇಶಗಳು ಬ್ರಿಟಿಷರ ಕೈವಶವಾದವು. ಇದಕ್ಕೆ ನಿರ್ಣಾಯಕವಾಗಿದ್ದು 1757ರ ಪ್ಲಾಸಿ ಕದನವೇ. ಆದರೆ, ಬ್ರಿಟಿಷರ 190 ವರ್ಷಗಳ ಆಡಳಿತ ಸುಗಮವಾಗಿಯೇನೂ ಇರಲಿಲ್ಲ. ಅಲ್ಲಲ್ಲಿ ಪ್ರತಿರೋಧಗಳು ವ್ಯಕ್ತವಾಗುತ್ತಲೇ ಹೋದವು. 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಅವರಿಗೆ ಎದುರಾದ ಮೊದಲ ಸವಾಲು. ಮಹಾತ್ಮ ಗಾಂಧಿ ಅವರಂಥವರ ಅಹಿಂಸಾತ್ಮಕ ಹೋರಾಟಗಳು; ಸುಭಾಷ್ ಚಂದ್ರ ಬೋಸ್ ಅವರ ಮಿಲಿಟರಿ ಹೋರಾಟ; ಭಗತ್ ಸಿಂಗ್ ಅವರಂಥವರ ಕ್ರಾಂತಿಕಾರಿ ಹೋರಾಟಗಳು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪಥವನ್ನು ಸುಗಮಗೊಳಿಸಿದವು. ಅಂತಿಮವಾಗಿ 1947, ಆಗಸ್ಟ್ 15ರಂದು ಭಾರತಕ್ಕೆ ಸ್ವಾತಂತ್ರ್ಯ ದಕ್ಕಿತು. ಆದರೆ, ಅದಕ್ಕೆ ಮುಂಚೆ ಭಾರತ ಮತ್ತು ಪಾಕಿಸ್ತಾನವನ್ನು ಧರ್ಮದ ಆಧಾರವಾಗಿ ಪ್ರತ್ಯೇಕಗೊಳಿಸಿದರು. ಮುಸ್ಲಿಮ್ ಬಾಹುಳ್ಯ ಇದ್ದ ಭಾರತದ ಪಶ್ಚಿಮ ಭಾಗವನ್ನು ಹಾಗೂ ಪೂರ್ವ ಬಂಗಾಳ ಇರುವ ಪ್ರದೇಶಗಳನ್ನು ಭಾರತದಿಂದ ಪ್ರತ್ಯೇಕಿಸಿ ಪಾಕಿಸ್ತಾನ ನಿರ್ಮಾಣ ಮಾಡಲಾಯಿತು.

ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ 1947 ಆಗಸ್ಟ್ 15ರಂದು ಕೆಂಪುಕೋಟೆಯಲ್ಲಿ ಭಾರತದ ನೂತನ ರಾಷ್ಟ್ರಧ್ವಜವನ್ನು ಹಾರಿಸಿ, ನಂತರ ದೇಶವನ್ನುದ್ದೇಶಿಸಿ ಮಾತನಾಡಿದರು. ಆ ಬಳಿಕ ಭಾರತೀಯ ಸೇನಾ ಪಡೆಗಳ ಪಥ ಸಂಚಲನ ಇತ್ಯಾದಿ ನಡೆದವು. ಈ ಪರಂಪರೆಯು ವರ್ಷದಿಂದ ವರ್ಷಕ್ಕೆ ಪಾಲನೆಯಾಗುತ್ತಲೇ ಬಂದಿದೆ.

ಗುಡ್ ಪ್ರೈಡೇ

ಗುಡ್ ಪ್ರೈಡೇ ಕ್ರೈಸ್ತರಿಗೆ ಪವಿತ್ರವಾದ ದಿನ. ಕ್ರಿಸ್‍ಮಸ್ ಯೇಸು ಕ್ರಿಸ್ತನ ಜನನವನ್ನು ಸೂಚಿಸಿದರೆ ಗುಡ್ ಪ್ರೈಡೇ ಕ್ರಿಸ್ತನ ಬಲಿದಾನವನ್ನು ಸಂಕೇತಿಸುತ್ತದೆ. ಇದನ್ನು ಶುಭ ಶುಕ್ರವಾರ, ಪವಿತ್ರ ಶುಕ್ರವಾರ ಅಥವಾ ದೊಡ್ಡ ಶುಕ್ರವಾರ ಎಂಬ ಹೆಸರುಗಳಿಂದಲೂ ಕರೆಯಲಾಗುತ್ತದೆ.

ಮನುಕುಲದ ಒಳಿತಿಗಾಗಿ ಕ್ರಿಸ್ತನು ತಾನೇ ಶಿಲುಬೆಗೆ ಏರಿದನು. ತನ್ನನ್ನ ಶಿಲುಬೆ ಏರಿಸಿದವರನ್ನೂ ದೂಷಿಸದೆ ‘ಕ್ಷಮಿಸವರನೆಲೆ ತಂದೆ ತಾವೆಸಗಿದ ಅಪರಾಧ ಏನೆಂದರಿಯದವರನು’ ಎಂದು ಕರ್ತನನ್ನು ಕೋರಿದನು. ಶಾಂತಿಗೆ ತಾನೇ ಸ್ವತ: ರೂಪಕವಾಗಿ ನಿಂತನು. ಯೇಸು ಕ್ರಿಸ್ತ ಬಂಧನಕ್ಕೆ ಒಳಗಾಗುವ ಘಟನೆಯಿಂದ ಹಿಡಿದು ಶಿಲುಬೆಗೆ ಏರುವುರದರವರೆಗಿನ ಘಟನೆಗಳನ್ನು 14 ಭಾಗಗಳಾಗಿ ವಿಂಗಡಿಸಿ ಪ್ರತಿಯೊಂದು ಭಾಗವನ್ನೂ ಗುಡ್‍ ಪ್ರೈಡೇಯಲ್ಲಿ ಅವಲೋಕಿಸುತ್ತಾ ಸಾಗಲಾಗುತ್ತದೆ. ಕೆಲವು ಚರ್ಚುಗಳಲ್ಲಿ ಇದನ್ನು ರಂಗರೂಪದಲ್ಲಿ ಕೂಡ ಅಭಿನಯಿಸುವುದು ಉಂಟು. ಈ ದಿನವನ್ನು ಕ್ರೈಸ್ತರು ಉಪವಾಸದ ದಿನವಾಗಿ ಆಚರಿಸುತ್ತಾರೆ.

ಗುಡ್ ಪ್ರೈಡೇ

ಈಸ್ಟರ್ ಹಬ್ಬಕ್ಕೂ ಮುಂಚೆ ಬರುವ ಗುಡ್ ಪ್ರೈಡೇ ಯೇಸು ಕ್ರಿಸ್ತನಲ್ಲಿ ನಂಬಿಕೆ ಇಡುವ ಪ್ರತಿಯೊಬ್ಬರಿಗೂ ಅನ್ವಯಿಸುವಂಥದ್ದು. ಕಾರಣ ಹಿಂದಿನಿಂದಲೂ ಪಾಪ ಪ್ರಾಯಶ್ಚಿತ್ತಕ್ಕಾಗಿ ಒಂದು ಪ್ರಾಣಿಯನ್ನು ಬಲಿ ಕೊಡುವ ಪದ್ಧತಿ ಇಸ್ರೇಲ್ ಜನಾಂಗದಲ್ಲಿ ರೂಢಿಯಲ್ಲಿತ್ತು. ಆದರೆ ಮಾನವನ ಪಾಪಗಳಿಗೆ ಕೇವಲ ಒಂದು ಪ್ರಾಣಿಯ ರಕ್ತ ಮಾತ್ರ ಸಾಲದು. ಅದಕ್ಕೆ ಪರಿಶುದ್ಧವಾದ ರಕ್ತ ಸುರಿಯಬೇಕಿತ್ತು. ಅದೇ ತಂದೆಯಾದ ದೇವರ ಚಿತ್ತವಾಗಿತ್ತು. ಹಾಗೆ ತಂದೆಯ ಚಿತ್ತವನ್ನು ನೆರವೇರಿಸಲೆಂದೇ ದೇವರ ಒಬ್ಬನೇ ಮಗನಾದ ಯೇಸುಕ್ರಿಸ್ತನು ಭೂಮಿಗೆ ಮನುಷ್ಯನಾಗಿ ಬಂದನು. ತಂದೆಯಾದ ದೇವರ ಚಿತ್ತವನ್ನು ನೆರವೇರಿಸಲೆಂದೇ ತನ್ನ ಪರಿಶುದ್ಧವಾದ ರಕ್ತವನ್ನು ಕಲ್ವಾರಿ ಶಿಲುಬೆಯಲ್ಲಿ ಸುರಿಸಿ ತನ್ನನ್ನು ಮರಣಕ್ಕೆ ಒಪ್ಪಿಸಿದನು. ಅಂದು ನಡೆದ ಈ ಕಾರ್ಯದಿಂದ ಮನು‍ಷ್ಯ ಪಾಪದಿಂದ ವಿಮೋಚನೆ ಹೊಂದಿದ್ದಾನೆ. ಅಂದರೆ ಯಾರ್ಯಾರು ಯೇಸು ಮಾಡಿದ ಈ ವಿಶೇಷ ಕಾರ್ಯವನ್ನು ನಂಬುತ್ತಾರೋ ಅವರೆಲ್ಲರೂ ಪಾಪಗಳಿಂದ ವಿಮೋಚಿಸಲ್ಪಟ್ಟು ದೇವರಿಗೆ ಮಕ್ಕಳಾಗುವ ಅಧಿಕಾರವನ್ನು ಯೇಸುಕ್ರಿಸ್ತನು ಕೊಟ್ಟಿದ್ದಾನೆ. ನಿಜವಾಗಿ ಆತನು ಶಿಲುಬೆಗೆ ಏರಿಸಲ್ಪಟ್ಟಿದ್ದರಿಂದಲೇ ಮನುಷ್ಯರ ಪಾಪವಿಮೋಚನೆಯಾಯಿತು. ಆದ್ದರಿಂದಲೇ ಈ ದಿನವನ್ನು ಗುಡ್ ಪ್ರೈಡೇ (ಶುಭ ಶುಕ್ರವಾರ) ಎನ್ನಲಾಗಿದೆ.

ಮರುದಿನ ಹೋಲಿ ಸಾಟರ್‍ ಡೇ. ಕ್ರಿಸ್ತನು ಶಿಲುಬೆ ಏರಿದ ನಂತರ ಇಡೀ ಜಗತ್ತನ್ನು ಕತ್ತಲೆ ಆವರಿಸಿಕೊಳ್ಳುತ್ತದೆ. ಇದನ್ನು ವಿಷಾದ ಭಾವದಿಂದ ಆಚರಿಸುತ್ತಾರೆ. ಕೆಲವೆಡೆ ಇದನ್ನು ವ್ರತದಂತೆ, ಹರಕೆಯಂತೆ ಕೂಡ ಆಚರಿಸಲಾಗುತ್ತದೆ. ಮೂರನೇ ದಿನ ಈಸ್ಟರ್ ಸಂಡೇ ಈ ದಿನದಂದು ಕ್ರಿಸ್ತನು ಪುನರುತ್ಥಾನಗೊಂಡನು ಎನ್ನುವುದು ನಂಬಿಕೆ. ಎರಡು ದಿನಗಳ ಶೋಕದ ಆಚರಣೆ ಮುಗಿದು ಈ ದಿನದಂದು ಸಂಭ್ರಮದ ಆಚರಣೆಗಳು ನಡೆಯುತ್ತವೆ. ಇಡೀ ಗುಡ್ ಪ್ರೈಡೇಯ ಆಚರಣೆ ಕತ್ತಲಿನಿಂದ ಬೆಳಕಿನ ಕಡೆಗೆ ಸಾಗುವ ಉನ್ನತ ಆಶಯವನ್ನು ಹೊಂದಿದೆ.

ಗಾಂಧಿ ಜಯಂತಿ

ಭಾರತ ಸ್ವಾತಂತ್ರ್ಯ ಸಂಗ್ರಾಮದ ನೇತೃತ್ವ ವಹಿಸಿದವರು ಮಹಾತ್ಮ ಗಾಂಧಿ. ಅವರ ಅಹಿಂಸೆಯ ಹೋರಾಟ ದೇಶಕ್ಕೆ ಪರಕೀಯರ ಆಳ್ವಿಕೆಯಿಂದ ಮುಕ್ತಿಯನ್ನು ದೊರಕಿಸಿ ಕೊಟ್ಟಿತು. ಇದಕ್ಕಾಗಿಯೇ ಅವರನ್ನು ರಾಷ್ಟ್ರಪತಿ ಎಂದು ಕರೆದು ಗೌರವಿಸಲಾಗಿದೆ.

ಇವರ ಪೂರ್ಣ ಹೆಸರು ಮೋಹನದಾಸ್ ಕರಮ‍ಚಂದ್ ಗಾಂಧಿ ಅಕ್ಟೋಬರ್ 2, 1869 ರಲ್ಲಿ ಭಾರತದ ಗುಜರಾತ್ ರಾಜ್ಯದ ಪೋರಬಂದರ್ ನಲ್ಲಿ ಜನಿಸಿದರು. ಇವರ ತಂದೆ ಕರಮಚಂದ್ ಗಾಂಧಿ, ತಾಯಿ ಪುತಲೀಬಾಯಿ. 13 ನೆಯ ವಯಸ್ಸಿನಲ್ಲಿ ಗಾಂಧೀಜಿ ಕಸ್ತೂರಿ ಬಾ ಅವರನ್ನು ವಿವಾಹವಾದರು. ಇವರಿಗೆ ನಾಲ್ವರು ಮಕ್ಕಳು ಹರಿಲಾಲ್ ಗಾಂಧಿ, ಮಣಿಲಾಲ್ ಗಾಂಧಿ , ರಾಮದಾಸ್ ಗಾಂಧಿ ಮತ್ತು ದೇವದಾಸ್ ಗಾಂಧಿ. ಮುಂಬಯಿ ನಗರದಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಿದರು ಎರಡು ವರ್ಷಗಳ ನಂತರ ದಕ್ಷಿಣ ಆಫ್ರಿಕಾದಲ್ಲಿ ಉದ್ಯೋಗ ನಿರ್ವಹಿಸುವ ಅವಕಾಶ ಅವರಿಗೆ ದೊರಕಿತು. ಅಲ್ಲಿ ಭಾರತೀಯ ನಿವಾಸಿಗಳಿಗೆ ಸಮಾನ ಹಕ್ಕುಗಳನ್ನು ನೀಡದ ಬ್ರಿಟಿಷ್ ಸರ್ಕಾರದ ವರ್ಣಭೇದ ನೀತಿಯನ್ನು ಅಳಿಸಲು ಚಳುವಳಿಯನ್ನು ಆರಂಭಿಸಿದರು. ಅಲ್ಲಿನ ಪೀಟರ್ ಮ್ಯಾರಿಟ್ಸ್ ಬರ್ಗ್ ಎಂಬ ನಗರದಲ್ಲಿ ರೈಲಿನಲ್ಲಿ ಮೊದಲ ದರ್ಜೆ ಟಿಕೆಟ್ ತೆಗೆದು ಕೊಂಡಿದ್ದರೂ ಅಲ್ಲಿ ಕೂರಲು ಬಿಡದೆ ರೈಲಿನಿಂದ ಹೊರ ಹಾಕಿದಾಗ, ಅವರ ವರ್ಣಭೇದ ನೀತಿಯ ವಿರುದ್ಧ ಹೋರಾಡುವ ನಿಶ್ವಯ ಸ್ಥಿರವಾಯಿತು. ನವೆಂಬರ್ 6, 1913 ರಲ್ಲಿ ಭಾರತೀಯ ಗಣಿಗಾರರ ಒಂದು ಮೆರವಣಿಗೆಯಲ್ಲಿ ಹೋಗುತ್ತಿದ್ದಾಗ ಗಾಂಧೀಜಿ ಬಂಧಿತರಾದರು.

ಭಾರತಕ್ಕೆ ಮರಳಿ ಬಂದ ನಂತರ ಉಪವಾಸ ಸತ್ಯಾಗ್ರಹ ಮತ್ತು ಅಸಹಕಾರ ಚಳುವಳಿಗಳ ಮೂಲಕ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ರೂಪವನ್ನು ನೀಡಿದರು. ಹಲವಾರು ಬಾರಿ ಬ್ರಿಟಿಷ್ ಸರ್ಕಾರ ಇವರನ್ನು ಬಂಧನದಲ್ಲಿರಿಸಿತು. ಆದರೆ ಅವರ ಉತ್ಸಾಹ ಅದರಿಂದ ಕುಗ್ಗಲಿಲ್ಲ. ಸ್ವದೇಶಿ ತತ್ವದ ಅನ್ವಯ ಖಾದಿ ಬಟ್ಟೆಗಳನ್ನೇ ತೊಡುವ ಸಂಪ್ರದಾಯ ಜನಪ್ರಿಯವಾಯಿತು. ಭಾರತೀಯ ಮಹಿಳೆಯರಿಗೆ ಪ್ರತಿ ದಿನವೂ ಖಾದಿ ನೇಯುವಂತೆ ಕೇಳಿ ಗಾಂಧೀಜಿಯವರು ಮಹಿಳೆಯರಿಗೂ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸುವ ಅವಕಾಶ ಮಾಡಿಕೊಟ್ಟರು.

ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಹಳ ಮುಖ್ಯವಾದ ಘಟನೆ ದಂಡಿಯಾತ್ರೆ. ಉಪ್ಪಿನ ಉತ್ಪಾದನೆಗೆ ಬ್ರಿಟಿಷ್ ಸರ್ಕಾರಕ್ಕೆ ಕರ ಕೊಡುವ ಬದಲು ಜನರು ತಾವಾಗಿಯೇ ಉಪ್ಪನ್ನು ಉತ್ಪಾದಿಸಲು ಗಾಂಧೀಜಿ ಮಾರ್ಚ್ 12, 1930 ರಂದು ಸಹಸ್ರಾರು ಜನರೊಡನೆ ಸಮುದ್ರತೀರಕ್ಕೆ ನಡೆದು ಉಪ್ಪನ್ನು ಉತ್ಪಾದಿಸಿದರು. ಮೇ 8, 1933 ರಂದು ಆರಂಭಗೊಂಡು 21 ದಿನಗಳ ಕಾಲಬ್ರಿಟಿಷ್ ಆಡಳಿತವನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹ ನಡೆಸಿದರು. * ಮಾರ್ಚ್ 3, 1939 ರಂದು ಆರಂಭಗೊಂಡು ಇನ್ನೊಂದು ಉಪವಾಸವನ್ನು ನಡೆಸಿದರು. ಗಾಂಧೀಜಿ 1924 ರಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷ ರಾಗಿದ್ದರು.”ಭಾರತ ಬಿಟ್ಟು  ತೊಲಗಿರಿ” ಚಳುವಳಿ 1942 ರಲ್ಲಿ ಆರಂಭವಾಯಿತು. ಆಗಸ್ಟ್ 9, 1942 ರಂದು ಬ್ರಿಟಿಷರು ಗಾಂಧೀಜಿಯನ್ನು ಮತ್ತೆ ಬಂಧಿಸಿ ಎರಡು ವರ್ಷಗಳ ಕಾಲ ಬಂಧನದಲ್ಲಿರಿಸಿದರು.

ಕೊನೆಗೂ 1947 ಅಗಸ್ಟ 15 ರಂದು ಭಾರತಕ್ಕೆ ಸ್ವಾತಂತ್ರ್ಯ ಬಂದಿತು. ಆದರೆ ದೇಶ ಭಾರತ ಮತ್ತು ಪಾಕಿಸ್ತಾನ ಇಬ್ಬಾಗವಾಯಿತು ಆಗ ಉಂಟಾದ ಕೋಮುಗಲಭೆಯನ್ನು ತಡೆಯಲು ಗಾಂಧೀಜಿ ಶ್ರಮಿಸಿದರು. ಆದರೆ 1948ರ ಜನವರಿ 30ರಂದು ನಾಥಾರಾಮ್ ವಿನಾಯಕ್ ಗೋಡ್ಸೆ ಎನ್ನುವವನು ಮಹಾತ್ಮ ಗಾಂಧೀಜಿಯವರ ಹತ್ಯೆಯನ್ನು ಮಾಡಿದ. ಅವರು ಸಾರಿದ ನೀತಿ-ತತ್ವಗಳಿಗೆ ಎಂದಿಗೂ ಸಾವಿಲ್ಲ.

ಈದ್ ಮಿಲಾದ್

ಈದ್ ಮಿಲಾದ್ ಇಸ್ಲಾಂ ಧರ್ಮದ ಪ್ರಮುಖ ಆಚರಣೆಗಳಲ್ಲಿ ಒಂದು. ಇಸ್ಲಾಂ ಧರ್ಮದ ಕೊನೆಯ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲಮರ ಜನ್ಮ ದಿನಾಚರಣೆಯನ್ನು ಪ್ರತೀವರ್ಷ ಈದ್ ಮಿಲಾದ್ ಎಂಬ ಹೆಸರಿನಲ್ಲಿ ಜಗತ್ತಿನಾದ್ಯಂತ ಮುಸಲ್ಮಾನರು ಆಚರಿಸುತ್ತಾರೆ. ಇಸ್ಲಾಂ ಧರ್ಮದಲ್ಲಿ ಈದ್ ಮಿಲಾದ್ ಆಚರಣೆಗೆ ಅತ್ಯಂತ ದೊಡ್ಡ ಪ್ರಾಮುಖ್ಯತೆಯಿದೆ. ಈದ್ ಮಿಲಾದ್ ಆಚರಣೆಯನ್ನು ಜಗತ್ತಿನ ವಿವಿಧ ಕಡೆಗಳಲ್ಲಿ ವಿವಿಧ ರೀತಿಯಾಗಿ ಆಚರಿಸಲಾಗುತ್ತದೆ. ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲಮ್ ಹುಟ್ಟಿದ ರಬ್ಬಿ-ಉಲ್-ಅವಲ್ ತಿಂಗಳ ಆರಂಭದಿಂದ ತಿಂಗಳ ಕೊನೆಯವರೆಗೂ ಒಂದು ತಿಂಗಳ ಕಾಲ ವಿಶ್ವದಾದ್ಯಂತ ಈದ್ ಮೀಲಾದ್ ಆಚರಣೆಗಳು ನಡೆಯುತ್ತವೆ. ಭಾರತದಲ್ಲಿ ಈದ್ ಮೀಲಾದ್ ಆಚರಣೆಯನ್ನು ಎಲ್ಲಾ ಪಂಗಡದ ಮುಸಲ್ಮಾನರು ಆಚರಿಸುತ್ತಾರೆ.

ಈದ್ ಮೀಲಾದ್ ಆಚರಣೆಯ ಪ್ರಮುಖ ಕಾರ್ಯಕ್ರಮಗಳಲ್ಲಿ ಮೆರವಣಿಗೆಯೂ ಒಂದು. ರಬೀವುಲ್ ಅವ್ವಲ್ ತಿಂಗಳ ಹನ್ನೆರಡನೆಯ ದಿನ ಅಂದರೆ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲಮ್ ಜನಿಸಿದ ದಿನದಂದು ಜಗತ್ತಿನ ಎಲ್ಲಾ ಕಡೆಗಳಲ್ಲೂ ಆಯ ಪ್ರದೇಶದ ಸಮಯಕ್ಕೆ ಹೊಂದಿಕೊಂಡು ಮೆರವಣಿಗೆಯನ್ನು ಆಯೋಜಿಸಲಾಗುತ್ತದೆ. ಪ್ರವಾದಿಯ ಮುಹಮ್ಮದರ ಜನ್ಮ ದಿನದ ಖುಷಿಗಾಗಿ ಮೆರವಣಿಗೆಯನ್ನು ಆಯೋಜಿಸಲಾಗುತ್ತದೆ. ಇಸ್ಲಾಂ ಧರ್ಮದಲ್ಲಿ ಮೆರವಣಿಗೆ ಮಾಡಿ ಆಚರಿಸುವ ಪ್ರಮುಖ ಹಬ್ಬವಾಗಿದೆ ಈದ್ ಮಿಲಾದ್. ಮೆರವಣಿಗೆಯಲ್ಲಿ ವಿವಿಧ ಇಸ್ಲಾಮಿಕ್ ಕಲಾ ತಂಡಗಳು ಭಾಗವಹಿಸುತ್ತವೆ. ವಾಹನ ಮೆರವಣಿಗೆ, ಕಾಲ್ನಡಿಗೆ ಜಾಥ ಇವುಗಳಲ್ಲಿ ಪ್ರಮುಖವಾದವು. ಈದ್ ಮೀಲಾದ್ ಮೆರವಣಿಗೆಯ ದಾರಿಯುದ್ದಕ್ಕೂ ಸಿಹಿ ತಿಂಡಿಗಳನ್ನು ವಿತರಿಸಿವುದು ಮೆರವಣಿಗೆಯ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ಈದ್ ಮಿಲಾದ್ ಮೆರವಣಿಗೆಯಲ್ಲಿ ಕೇವಲ ಮುಸಲ್ಮಾನರಲ್ಲದೆ ಇತರ ಧರ್ಮೀಯರು ಪಾಲ್ಗೊಳ್ಳೊತ್ತಾರೆ.

ದೀಪಾವಳಿ

ಬೆಳಕಿನ ಹಬ್ಬ ಎಂದೇ ಪರಿಗಣಿತವಾಗಿರುವ ದೀಪಾವಳಿಯನ್ನು ಮೂರು ದಿನಗಳ ಹಬ್ಬವಾಗಿ ಆಚರಿಸಲ್ಪಡುತ್ತದೆ .ನರಕ ಚತರ್ದಶಿಯ ಹಿಂದಿನ ದಿನವನ್ನು ನೀರು ತುಂಬುವ ಹಬ್ಬ ಎಂದೂ ಕೂಡ ಕೆಲವು ಕಡೆಗಳಲ್ಲಿ ಆಚರಿಸಲಾಗುತ್ತದೆ. ದೀಪಾವಳಿ ಹಬ್ಬದ ಮೊದಲ ದಿನ ಎಣ್ಣೆ ಸ್ನಾನ ಮಾಡುವ ಸಂಪ್ರದಾಯವಿದೆ. ಇದಕ್ಕೆ ಕಾರಣ ಸಮುದ್ರಮಥನದ ಸಮಯದಲ್ಲಿ ಶ್ರೀವಿಷ್ಣು ಅಮೃತಕಲಶದೊಡನೆ ಧನ್ವಂತರಿಯಾಗಿ ಅವತಾರವೆತ್ತಿದ ಎಂಬ ನಂಬಿಕೆ. ಈ ದಿನ ತುಂಬುವ ಸ್ನಾನದ ನೀರಿನಲ್ಲಿ ಗಂಗೆಯೂ, ಎಣ್ಣೆಯಲ್ಲಿ ಧನಲಕ್ಷ್ಮೀಯೂ ಇರುತ್ತಾಳೆಂಬುದು ನಂಬಿಕೆ. ಈ ನೀರಿನಿಂದ ಸ್ನಾನಮಾಡಿದರೆ ಆಯುರಾರೋಗ್ಯ ಆಯಸ್ಸು ವೃದ್ಧಿಸುವುದೆಂದೂ ಮತ್ತು ಸಕಲ ಪಾಪಗಳೂ ನಿವಾರಣೆಯಾಗುವುದೆಂಬ ನಂಬಿಕೆಯಿದೆ. ನರಕಾಸುರನನ್ನು ಕೊಂದ ಪಾಪ ಪರಿಹಾರಕ್ಕಾಗಿ ಶ್ರೀಕೃಷ್ಣ ಕೂಡ ಈ ದಿನ ಎಣ್ಣೆಸ್ನಾನ ಶಾಸ್ತ್ರ ಮಾಡಿದ್ದನು ಎಂದು ಹೇಳಲಾಗುತ್ತದೆ.

ಹಬ್ಬದ ಮೊದಲ ದಿನ ನರಕಚತುದರ್ಶಿಯಾಗಿದ್ದು, ನರಕ ಚತುರ್ದಶಿಯ ಕೇಂದ್ರಬಿಂದುವೇ ನರಕಾಸುರ. ಮಹಾವಿಷ್ಣು ತನ್ನ ವರಾಹವತಾರದಲ್ಲಿದ್ದಾಗ ಅವನ ಶರೀರದಿಂದ ಒಂದು ತೊಟ್ಟು ಬೆವರು ಭೂಮಿಗೆ ಬೀಳಲಾಗಿ ಭೂದೇವಿಯಲ್ಲಿ ನರಕಾಸುರ ಜನಿಸುತ್ತಾನೆ. ಇದರಿಂದಾಗಿ ಅವನಿಗೆ ಭೌಮಾಸುರ, ಭೂಮಿಪುತ್ರ ಎಂಬ ಹೆಸರುಗಳೂ ಉಂಟು. ಭೂದೇವಿ ವಿಷ್ಣುವನ್ನು ಬೇಡಿ ತನ್ನ ಮಗ ನರಕಾಸುರನಿಗೆ ವೈಷ್ಣವಾಸ್ತ್ರವನ್ನು ವರವಾಗಿ ಕೊಡಿಸುತ್ತಾಳೆ. ಇದರಿಂದ ಬಲಿಷ್ಠನಾದ ನರಕಾಸುರ ಲೋಕಕಂಠಕನಾಗುತ್ತಾನೆ. ಇಂದ್ರ ಮತ್ತು ಅವನ ತಾಯಿ ಅಧಿತಿಯನ್ನೂ ಬಿಡದೆ ಕಾಡತೊಡಗಿದಾಗ ಇಂದ್ರ, ಶ್ರೀಕೃಷ್ಣನ ಮೊರೆಹೋಗುತ್ತಾನೆ.

ನರಕಾಸುರನ ದುಷ್ಟತನ ತಾಯಿ ಭೂದೇವಿಗೂ ಸಹಿಸದಾದಾಗ ಈ ದುಷ್ಟ ಮಗನನ್ನು ಕೊಂದು ಲೋಕವನ್ನು ಕಾಪಾಡುವಂತೆ ಭೂದೇವಿ ಶ್ರೀಕೃಷ್ಣನನ್ನು ಕೇಳಿ ಕೊಳ್ಳುತ್ತಾಳೆ. ಅಶ್ವಯುಜಕೃಷ್ಣ ಚತುರ್ದಶಿಯ ಕಗ್ಗತ್ತಲಿನಲ್ಲಿ ಶ್ರೀಕೃಷ್ಣನು ನರಕಾಸುರನನ್ನು ಸಂಹರಿಸಿದ ಎನ್ನುವುದು ಪೌರಾಣಿಕ ನಂಬಿಕೆ. ಆ ದಿನವೇ ನರಕ ಚತುರ್ದಶಿ. ದುಷ್ಟ ಸಂಹಾರದ ಸಂಕೇತವಾಗಿ ಆ ದಿನ ಪಟಾಕಿ ಸಿಡಿಸಿ ಎಲ್ಲರೂ ಖುಷಿಪಡುತ್ತಾರೆ. ಹಾಗೆಯೇ ನರಕಾಸುರನನ್ನು ಕೊಂದು ಅವನ ಬಂಧನದಲ್ಲಿದ್ದ ಸಾವಿರಾರು ಕನ್ಯೆಯರನ್ನು ಶ್ರೀಕೃಷ್ಣ ಬಂಧಮುಕ್ತಗೊಳಿಸಿದ್ದರಿಂದಾಗಿ ಕನ್ಯಾಸೆರೆ ಬಿಡಿಸಿದ ಶ್ರೀಕೃಷ್ಣ ಸ್ವರೂಪಿಯಾದ ಅಳಿಯಂದಿರನ್ನು ಕನ್ಯಾಪಿತೃಗಳು ಈ ಹಬ್ಬದಂದು ತಮ್ಮ ಮನೆಗೆ ಆಹ್ವಾನಿಸಿ ವಿಶೇಷವಾಗಿ ಆಧರಿಸಿ ಉಪಚರಿಸುವ ಸಂಪ್ರದಾಯವನ್ನು ಕೂಡ ಈ ದಿನ ಕಾಣಬಹುದಾಗಿದೆ.

ನರಕ ಚತುರ್ದಶಿಯ ಮಾರನೆಯ ದಿನ ಅಂದರೆ ದೀಪಾವಳಿಯ ಎರಡನೇ ದಿನ, ದೀಪಾವಳಿ ಅಮಾವಾಸ್ಯೆಯಾಗಿದ್ದು, ಅವತ್ತು ಲಕ್ಷ್ಮಿಪೂಜೆಯನ್ನು ಮಾಡಲಾಗುತ್ತದೆ. ಮಹಾವಿಷ್ಣುವಿನ ಪತ್ನಿಯೂ ಆದ ಮಹಾಲಕ್ಷ್ಮಿಯನ್ನು ಆರಾಧಿಸುವ ಹಬ್ಬವೇ ಧನಲಕ್ಷ್ಮೀ ಪೂಜೆ. ಇದು ಸಮುದ್ರ ಮಥನದಿಂದ ಲಕ್ಷ್ಮೀ ಉದಯಿಸಿದ ದಿನವೂ ಹೌದು. ಮುಖ್ಯವಾಗಿ ಉತ್ತರ ಭಾರತದಲ್ಲಿ ಇದರ ಆಚರಣೆ ಹೆಚ್ಚು. ವ್ಯಾಪಾರಿಗಳಿಗೆ ದೀಪ ಲಕ್ಷ್ಮೀ ಬೆಳಗಿ ಧನಲಕ್ಷ್ಮೀ ಬರುವ ಭಾಗ್ಯದ ದಿನವೇ ಆಗಿದೆ. ಅವರಿಗೆ ವ್ಯಾಪಾರ ವಹಿವಾಟಿನ ವಾಣಿಜ್ಯದ ನೂತನ ವರ್ಷ ಉದಯಿಸುವುದೇ ಈ ದಿನ. ಹಾಗಾಗಿ ಅತ್ಯಂತ ಸಂತೋಷದಿಂದ ಕಾರ್ತಿಕ ಮಾಸದ ಆರಂಭದ ಈ ಅಮಾವಾಸ್ಯೆಯ ಮಹಾರಾತ್ರಿಯಲ್ಲಿ ಮಹಾಲಕ್ಷ್ಮೀಗೆ ಮಹದಾನಂದದಿಂದ ದೀಪಾರಾಧನೆಯೊಡನೆ ಲಕ್ಷ್ಮೀಪೂಜೆಯನ್ನು ಮಾಡುತ್ತಾರೆ. ಈಗ ಕರ್ನಾಟಕದಲ್ಲಿ ಕೂಡ ಈ ಆಚರಣೆ ವ್ಯಾಪಕವಾಗಿ ವಿಸ್ತರಿಸಿ ಕೊಂಡಿದೆ.

ಹಬ್ಬದಲ್ಲಿ ಮೂರನೆಯ ದಿನವನ್ನು ಬಲಿಪಾಡ್ಯಮಿಯಾಗಿ ಆಚರಿಸಲಾಗುತ್ತಿದೆ. ಆವತ್ತು ಬಲಿಚಕ್ರವರ್ತಿ ಭೂಲೋಕ ಸಂಚಾರ ಬರುತ್ತಾನೆ ಎಂಬ ನಂಬಿಕೆಯೂ ಇದೆ. ಅಂದು ಬಲೀಂದ್ರ ಪೂಜೆಯೂ ನಡೆಯುತ್ತದೆ. ಪೌರಾಣಿಕ ಕಥೆಯ ಪ್ರಕಾರ ಮಹಾವಿಷ್ಣುಭಕ್ತ ದಾನಶೂರ ದೈತ್ಯರಾಜ ಬಲಿ ಚಕ್ರವರ್ತಿಯ ಬಳಿಗೆ ವಾಮನ ಅವತಾರಿಯಾಗಿ ಬಂದ ಮಹಾವಿಷ್ಣು, ಬಲಿಯಿಂದ ಮೂರು ಹೆಜ್ಜೆ ಊರುವಷ್ಟು ಭೂಮಿಯನ್ನು ದಾನವಾಗಿ ಪಡೆದು ಎರಡು ಹೆಜ್ಜೆಗಳಲ್ಲಿ ಆಕಾಶ ಭೂಮಿಗಳನ್ನು ಅಳೆದುಕೊಂಡು ತ್ರಿವಿಕ್ರಮನಾಗಿ ಬೆಳೆದು ಮೂರನೇ ಹೆಜ್ಜೆಯನ್ನು ಬಲಿಯ ಕೋರಿಕೆಯಂತೆ ಅವನ ತಲೆಯ ಮೇಲಿಟ್ಟು ಬಲಿಚಕ್ರವರ್ತಿಯನ್ನು ಪಾತಾಳಕ್ಕೆ ತುಳಿದುಬಿಡುತ್ತಾನೆ. ಆಗ ಬಲಿಯ ಭಕ್ತಿಯನ್ನು ಮತ್ತು ದಾನಶೀಲಗುಣವನ್ನು ಮೆಚ್ಚಿದ ವಿಷ್ಣು ಪ್ರತಿವರ್ಷ ಒಂದು ದಿನ ಅವನ ಹೆಸರಿನಲ್ಲಿ ಪೂಜೆ ನಡೆಯುವಂತೆ ವರ ನೀಡುತ್ತಾನೆ. ಆ ರೀತಿ ಆಚರಿಸಲ್ಪಡುವ ದಿನವೇ ಬಲಿಪಾಡ್ಯಮಿ. ಅಂದು ಬಲಿ ಚಕ್ರವರ್ತಿ ಭೂಲೋಕ ಸಂಚಾರಕ್ಕೆ ಬರುತ್ತಾನೆಂಬ ನಂಬಿಕೆಯಲ್ಲಿ ಬಲೀಂದ್ರಪೂಜೆ ನಡೆಯುತ್ತದೆ.

ಭಾಗವತ ಪುರಾಣದ ಪ್ರಕಾರ ಕಾರ್ತಿಕ ಶುಕ್ಲಪಾಡ್ಯಮಿ ಶ್ರೀಕೃಷ್ಣನು ಇಂದ್ರನನ್ನು ಸೋಲಿಸಿದ ದಿನ ಕೂಡ ಹೌದು. ಇಂದ್ರನ ದಾಳಿಯಿಂದ ತನ್ನ ಗೋಸಮೂಹವನ್ನು ರಕ್ಷಿಸಲು ಶ್ರೀಕೃಷ್ಣನು ಗೋವರ್ಧನ ಗಿರಿಯನ್ನೆತ್ತಿದ ದಿನವಿದು. ಆದ್ದರಿಂದಲೇ ಅಂದು ಗೋಪೂಜೆ ಮತ್ತು ಗೋವರ್ಧನ ಪೂಜೆಯನ್ನು ಆಚರಿಸಲಾಗುತ್ತದೆ. ಕೆಲವೆಡೆ ರೈತರು ಇದನ್ನು ಹಟ್ಟಿಹಬ್ಬವೆಂದು ಕೂಡ ಆಚರಿಸುತ್ತಾರೆ.

ದೀಪಾವಳಿ ಎಂದರೆ ಹಣತೆಗಳ ಸಾಲು, ದೀಪಗಳ ಜಗಮಗ, ಪಟಾಕಿಗಳು ಸೃಷ್ಟಿಸುವ ನಕ್ಷತ್ರಲೋಕ. ಬದುಕಿನ ಒಳಗೂ ಹೊರಗೂ ಬಣ್ಣದ ಬೆಳಕು ಹರಿಸಿ ಸಂತೋಷ, ಆತ್ಮವಿಶ್ವಾಸ ಹೆಚ್ಚಿಸುವ, ಹೊಸತನದೆಡೆಗೆ ತುಡಿಯುವಂತೆ ಮಾಡುವ ಹಬ್ಬ. ಬೆಳಕು ಬರೀ ಕಣ್ಣಿಗಲ್ಲ. ಮುಚ್ಚಿದ ಮನದ ಬಾಗಿಲೊಳಗೂ ಬೆಳಕಿನ ಕಿರಣಗಳು ಸೋಕುತ್ತವೆ. ಹೊಸ ಬೆಳಕು ಚೆಲ್ಲಿ, ಹಳೆ ನೋವು ಸಂಕಟಗಳನ್ನು ಕಿತ್ತುಹಾಕಿ ಸಂಭ್ರಮಕ್ಕೆ ಅಣಿ ಮಾಡುತ್ತವೆ. ಬೆಳಗುವ ಪ್ರತಿ ದೀಪದಲ್ಲಿ, ಸಿಡಿಯುವ ನಕ್ಷತ್ರಗಳಲ್ಲಿ ಸಡಗರ ಕೇಕೆ ಹೊಡೆಯುತ್ತದೆ. ದೀಪಾವಳಿ ನಿಜಾರ್ಥದಲ್ಲಿ ಕುಟುಂಬದ ಹಬ್ಬ. ಪುಟ್ಟ ಮಗುವಿನಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರನ್ನೂ ಎದ್ದು ನಿಲ್ಲಿಸುವಂತೆ ಮಾಡುವ ಚೆಲುವು ಇಲ್ಲಿದೆ. ಸಂಬಂಧಗಳು ದೂರವಾಗುತ್ತಿರುವ ಈ ಕಾಲದಲ್ಲೂ ಕುಟುಂಬದ ಎಲ್ಲರೂ ಜತೆ ಸೇರಲು, ಖುಷಿಪಡಲು, ಜತೆಯಾಗಿ ಊಟ ಸವಿಯಲು, ಕುಣಿದಾಡಲು ವೇದಿಕೆ ಕೊಡುವುದು ದೀಪಾವಳಿ. ಆಶೀರ್ವಾದದ ಮೂಲಕ ಹಿರಿಯರು ಎತ್ತರಕ್ಕೇರುತ್ತಾರೆ, ಎಣ್ಣೆ ಸ್ನಾನದ ಮೂಲಕ ತಾಯಿ-ಮಕ್ಕಳು, ಗಂಡ-ಹೆಂಡತಿ ಹತ್ತಿರವಾಗುತ್ತಾರೆ. ಒಲವಿನ ಅಡುಗೆ ಎಲ್ಲರನ್ನೂ ಒಂದು ಮಾಡುತ್ತದೆ. ಹಬ್ಬದ ಹೆಸರಲ್ಲಿ ಮಗಳು-ಅಳಿಯ ಮನೆಗೆ ಬರುತ್ತಾರೆ. ಕೊನೆಯ ದಿನ ಅಣ್ಣ ತಂಗಿಯ ಮನೆಗೂ ಹೋಗುತ್ತಾನೆ. ದೀಪಾವಳಿ ಮುಗಿದ ನಂತರದ ಮುಂದಿನ ಎರಡು ದಿನಗಳನ್ನು ಅಕ್ಕನ ತದಿಗೆ ಮತ್ತು ಭಾವನ ಬಿದಿಗೆ ಎಂದು ಆಚರಿಸುವ ಪದ್ದತಿ ಕೂಡ ಹಲವೆಡೆಗಳಲ್ಲಿ ಇದೆ.

ಕ್ರಿಸ್ ಮಸ್

ಕ್ರಿಸ್ ಮಸ್ ಎಂದರೆ ಕ್ರಿಸ್ತ ಜಯಂತಿ ಅಥವಾ ಯೇಸುಕ್ರಿಸ್ತನು ಹುಟ್ಟಿದ ಸಂಭ್ರಮದ ದಿನ. ಜಗತ್ತಿನಾದ್ಯಂತ ಪ್ರತಿ ವರ್ಷದ ಡಿಸೆಂಬರ್ ತಿಂಗಳ ಇಪ್ಪತ್ತೈದನೇ ದಿನವನ್ನು ಯೇಸುಕ್ರಿಸ್ತನ ಹುಟ್ಟುಹಬ್ಬವಾಗಿ ಆಚರಿಸಲಾಗುತ್ತದೆ. ಕ್ರಿಸ್ ಮಸ್ ಹಬ್ಬದ ಹಿಂದಿನ ದಿನವನ್ನು ಕ್ರಿಸ್ ಮಸ್ ಈವ್ ಎಂಬ ಹೆಸರಿನಲ್ಲಿ ಆಚರಿಸಲಾಗುತ್ತದೆ. ಹಲವು ದೇಶಗಳಲ್ಲಿ ಅನೇಕ ಧಾರ್ಮಿಕ, ರಾಷ್ಟ್ರೀಯ ಮತ್ತು ಜಾತ್ಯತೀತ ಸಂಪ್ರದಾಯಗಳು ಹಾಗೂ ಆಚರಣೆಗಳು ಕ್ರಿಸ್ಮಸ್ಸಿನೊಂದಿಗೆ ಸಂಬಂಧ ಹೊಂದಿವೆ. ಕ್ರಿಸ್ ಮಸ್ ಜೊತೆಗೆ ಈ ಕೆಳಕಂಡ ಆಚರಣೆಗಳೂ ರೂಢಿಯಲ್ಲಿವೆ.

ಮನೆಯಲ್ಲಿ ಪುಟ್ಟದಾದ ಕೊಟ್ಟಿಗೆ ಕಟ್ಟಿ ಕ್ರಿಸ್ತಜನನದ ಗೊಂಬೆಗಳನ್ನಿಡುವುದು ಕ್ರಿಸ್ ಮಸ್ ವೃಕ್ಷ ಇಟ್ಟು ಅಲಂಕರಿಸುವುದು ಮಿಸಲ್ಟೋ ಮೊದಲಾದ ಮರಗಳ ಎಲೆಗಳ ತೋರಣ ಕಟ್ಟುವುದು ಕ್ರಿಸ್ಮಸ್ಸಿಗೆಂದೇ ತಯಾರಿಸಿದ ವಿಶಿಷ್ಟ ತಿಂಡಿಗಳನ್ನು ಹಾಗೂ ಉಡುಗೊರೆಗಳನ್ನು ಹಂಚುವುದು ಉಡುಗೊರೆಗಳನ್ನು ಕೊಡುವುದು ಮತ್ತು ಪಡೆಯುವುದು ಕ್ರಿಸ್ಮಸ್ನ ವಿಶೇಷಗಳಲ್ಲೊಂದು. ಮಕ್ಕಳಿಗೆ ಉಡುಗೊರೆಗಳನ್ನು ತಂದುಕೊಡಲು ಸಾಂಟಾ ಕ್ಲಾಸ್ ಬರುತ್ತಾನೆ ಎಂಬುದು ಜನಪ್ರಿಯ ನಂಬುಗೆ.

“ಸಾಂಟಾ ಕ್ಲಾಸ್” ಎಂಬುದು “ಸಂತ ನಿಕೋಲಾಸ್” ಎಂಬುದರ ಅಪಭ್ರಂಶ.ಸಂತ ನಿಕೋಲಾಸ್ ನಾಲ್ಕನೆ ಶತಮಾನದಲ್ಲಿ ಜೀವಿಸಿದ್ದ ಒಬ್ಬ ಕ್ರೈಸ್ತ ಪಾದ್ರಿ. ಮಕ್ಕಳ ಮೇಲಿನ ಪ್ರೀತಿಗೆ ಸಂತ ನಿಕೋಲಾಸ್ ಪ್ರಸಿದ್ಧ. ಹಾಗಾಗಿ ಪ್ರತಿ ವರ್ಷ ಕ್ರಿಸ್ ಮಸ್ ದಿನದಂದು ಆತ ಮಕ್ಕಳಿಗೆ ಉಡುಗೊರೆ ತಂದುಕೊಡುತ್ತಾನೆ ಎನ್ನುವುದು ನಂಬಿಕೆ.

ಈ ದಿನದಂದು ಮನೆಗಳ ಮುಂದೆ ಕ್ರಿಸ್ ಮಸ್ ವೃಕ್ಷವನ್ನು ತಂದು ನಿಲ್ಲಿಸುವುದು ವಾಡಿಕೆ. ಈ ವೃಕ್ಷವನ್ನು ದೀಪಗಳು ಮತ್ತು ಇತರ ವಸ್ತುಗಳಿಂದ ಅಲಂಕೃತಗೊಳಿಸಲಾಗುತ್ತದೆ. ಅನೇಕ ಕಡೆಗಳಲ್ಲಿ ಮನೆಯ ಹೊರಗೂ ದೀಪಗಳ ತೋರಣ ಕಟ್ಟುವುದು ವಾಡಿಕೆ. ಹಾಗೆಯೇ ಕ್ರಿಸ್ ಮಸ್ ಹಬ್ಬದ ಅಂಗವಾಗಿ ಕೆಲವು ಹೂವುಗಳು ಮತ್ತು ಸಸ್ಯಗಳು (ಅಮರಿಲ್ಲಿಸ್, ಕ್ರಿಸ್ ಮಸ್ ಕ್ಯಾಕ್ಟಸ್) ಮೊದಲಾದವುಗಳನ್ನು ತರಲಾಗುತ್ತದೆ.

ವರಮಹಾಲಕ್ಷ್ಮೀ ವ್ರತ

ಶ್ರಾವಣ ಮಾಸದ ಎರಡನೇ ಶುಕ್ರವಾರ ವರಮಹಾಲಕ್ಷ್ಮಿ ವ್ರತವನ್ನು ಆಚರಿಸಲಾಗುತ್ತದೆ. ಸಂಪತ್ತಿನ ಅಧಿದೇವತೆ ಲಕ್ಷ್ಮಿಯನ್ನು ಈ ದಿನ ಪೂಜಿಸಿದರೆ, ಅಷ್ಟ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗಿದೆ. ಈ ಹಿನ್ನೆಲೆ ವರಮಹಾಲಕ್ಷ್ಮೀ ಹಬ್ಬವನ್ನು ಇಂದು (ಶುಕ್ರವಾರ) ಎಲ್ಲೆಡೆ ಆಚರಿಸಲಾಗುತ್ತಿದೆ.

ಲಕ್ಷ್ಮೀದೇವಿಯನ್ನು ಎಂಟು ರೂಪಗಳ ಸಂಪತ್ತಿಗೆ ಹೋಲಿಕೆ ಮಾಡಲಾಗಿದ್ದು, ಜ್ಞಾನ, ಐಶ್ವರ್ಯ, ಸುಖ, ಆರೋಗ್ಯ, ಧನ, ಧಾನ್ಯ, ಜಯ, ವಿಜಯ ಇವುಗಳನ್ನು ಲಕ್ಷ್ಮೀಯ ಲಕ್ಷಣಗಳೆಂದು ಹೇಳಲಾಗಿದ್ದು ವರಮಹಾಲಕ್ಷ್ಮಿ ವ್ರತವನ್ನಾಚರಿಸಿದರೆ ಜ್ಞಾನ, ಐಶ್ವರ್ಯ, ಸುಖ, ಆರೋಗ್ಯ, ಧನ, ಧಾನ್ಯ, ಜಯ, ವಿಜಯಗಳೆಂಬ ಅಷ್ಟ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎಂಬುದು ನಂಬಿಕೆ.

ವರಗಳನ್ನು ದಯಪಾಲಿಸುವುದರಿಂದ ಮತ್ತು ಶ್ರೇಷ್ಠಳಾಗಿರುವುದರಿಂದ ಆಕೆಯು ವರಮಹಾಲಕ್ಷ್ಮೀ. ಒಮ್ಮೆ ದೂರ್ವಾಸ ಮಹರ್ಷಿಗಳ ಶಾಪದಿಂದ ಇಂದ್ರನು ರಾಜ್ಯಭ್ರಷ್ಟನಾಗಲು, ಸ್ವರ್ಗಲಕ್ಷ್ಮಿಯೂ ಸಹ ಸ್ವರ್ಗವನ್ನು ಬಿಟ್ಟು ವೈಕುಂಠವನ್ನು ಸೇರಿದಳು. ಆಗ ಪರಮ ದುಃಖಕ್ರಾಂತರಾದ ದೇವತೆಗಳೆಲ್ಲರೂ ಚತುರ್ಮುಖಬ್ರಹ್ಮನನ್ನು ಮುಂದಿಟ್ಟುಕೊಂಡು(ಪುರಸ್ಕರಿಸಿ), ವೈಕುಂಠದಲ್ಲಿ ಪರಮಾತ್ಮನನ್ನು ಶರಣುಹೊಂದಿದರು. ಪರಮದಯಾಳುವಾದ ವಿಷ್ಣುವಿನ ಆಜ್ಞೆಯಂತೆ ದೇವತೆಗಳು ದಾನವರೊಡನೆ ಅಮೃತಕ್ಕಾಗಿ ಕ್ಷೀರಸಮುದ್ರವನ್ನು ಮಥಿಸಲು, ಮಹೇಂದ್ರನ ಸಂಪತ್ಸ್ವರೂಪಿಣಿಯಾದ ಮಹಾಲಕ್ಷ್ಮಿಯು ಅಲ್ಲಿ ಆವಿರ್ಭವಿಸಿ, ದೇವತೆಗಳಿಗೆ ವರವನ್ನು ಅನುಗ್ರಹಿಸಿದಳು ಹಾಗೂ ಮಹಾವಿಷ್ಣುವಿನ ಪಾಣಿಗ್ರಹಣ ಮಾಡಿದಳು(ವಿವಾಹವಾದಳು).

ಇನ್ನು, ಕ್ಷೀರಸಾಗರದಲ್ಲಿ ಶ್ವೇತವರ್ಣದಲ್ಲಿ ಅವತರಿಸಿದ್ದರಿಂದ ವರಮಹಾಲಕ್ಷ್ಮಿ ವ್ರತದಂದು ಲಕ್ಷ್ಮೀಗೆ ಶ್ವೇತ ವರ್ಣದ ಕೆಂಪು ಅಂಚಿನ ಸೀರೆಯನ್ನುಡಿಸುವ ಪದ್ಧತಿ ಇದೆ. ಕುಂಕುಮಾರ್ಚನೆ ಮಾಡುವುದರೊಂದಿಗೆ ಲಕ್ಷ್ಮಿದೇವಿಯನ್ನು ಆವಾಹನೆ ಮಾಡಿ 12ಗಂಟಿನ ದಾರವನ್ನು ದೇವರ ಮುಂದಿಟ್ಟು ಪೂಜಿಸಿ ಸುಮಂಗಲಿಯರು ಅದನ್ನು ಕೈಗೆ ಕಟ್ಟಿಕೊಳ್ಳುತ್ತಾರೆ.

ನಿತ್ಯ ಶುದ್ಧ-ಬುದ್ಧ-ಮುಕ್ತಸ್ವರೂಪಳೂ,ನಿತ್ಯಸಿದ್ಧಳೂ ಆದ ಈ ಮಂಗಲದೇವತೆಯ ಮಹಿಮೆಯನ್ನು ವರ್ಣಿಸುವ ಶಾಸ್ತ್ರಗಳಲ್ಲೇ ಆಕೆಯನ್ನು ಕ್ಷೀರಸಮುದ್ರಸಂಭವೆ, ಸಮುದ್ರರಾಜನ ಪುತ್ರಿ, ಚಂದ್ರನತಂಗಿ, ಯಜ್ಞಕುಂಡದಲ್ಲಿ ಉದ್ಭವವಾದವಳು, ಕಮಲದಲ್ಲಿ ಆವಿರ್ಭವಿಸಿದವಳು ಇತ್ಯಾದಿ ಅಭಿಪ್ರಾಯಗಳನ್ನು ಕಾಣುತ್ತೇವೆ.

ವರಮಹಾಲಕ್ಷ್ಮೀ ವ್ರತವನ್ನು ಅತ್ಯಂತ ಮಹತ್ವದ ಮತ್ತು ಶಕ್ತಿಯುತವಾದ ಆಚರಣೆಯೆಂದು ಪರಿಗಣಿಸಲಾಗಿದೆ. ಏಕೆಂದರೆ ಶಿವನು ಪಾರ್ವತಿ ದೇವಿಗೆ ಈ ವ್ರತ ಮಾಡಲು ಇದರ ಪ್ರಾಮುಖ್ಯತೆ ಬಗ್ಗೆ ಹೇಳಿದ್ದಾನೆ. ವರಮಹಾಲಕ್ಷ್ಮೀ ವ್ರತವನ್ನು ಮಾಡುವ ಜನರು ಎಲ್ಲಾ ರೀತಿಯ ನೋವು ಮತ್ತು ದುಃಖಗಳಿಂದ ಮುಕ್ತರಾಗುತ್ತಾರೆ ಮತ್ತು ವಿಷಯವನ್ನು ಅನುಭವಿಸುತ್ತಾರೆ. ಅಲ್ಲದೆ, ಭಕ್ತರ ಜೀವನ ಮತ್ತು ಮನೆಯಲ್ಲಿ ಸಾಮರಸ್ಯ ಮತ್ತು ಶಾಂತಿ ಮೇಲುಗೈ ಸಾಧಿಸುತ್ತದೆ.

ಹಬ್ಬದ ಆಚರಣೆ ಹೇಗೆ

ವ್ರತ ಮಾಡುವವರು ವರಮಹಾಲಕ್ಷ್ಮೀ ಹಬ್ಬದ ದಿನ ಬೆಳಗ್ಗೆ ಎದ್ದು ಮಂಗಳಸ್ನಾನ ಮಾಡಿ, ಪೂಜಾಸ್ಥಳವನ್ನು ಸ್ವಚ್ಛಗೊಳಿಸಿ, ಬಾಳೆ ಕಂದು, ಮಾವಿನ

ಎಲೆಗಳಿಂದ ಸಿಂಗರಿಸುತ್ತಾರೆ. ಅಷ್ಟದಳ ಪದ್ಮದ ರಂಗೋಲಿ ಹಾಕಿ ಅದರ ಮೇಲೆ ಕಲಶ ಸ್ಥಾಪಿಸಬೇಕು. ಒಂದು ಚೊಂಬಿನಲ್ಲಿ ಸ್ವಲ್ಪ ನೀರು, ಅಕ್ಕಿ ಹಾಕಿ,

ಜೊತೆಗೆ ಅರಿಶಿಣದ ಕೊಂಬು, ಅಡಿಕೆ, ಬೆಳ್ಳಿ ನಾಣ್ಯ ಇಟ್ಟು ಅದರ ಮೇಲೆ ಅರಿಶಿಣ ಕುಂಕುಮ ಸವರಿದ ತೆಂಗಿನಕಾಯಿ ಇಟ್ಟು ಲಕ್ಷ್ಮೀದೇವಿಯ ಬೆಳ್ಳಿಯ

ಮುಖವಾಡ ಇದ್ದರೆ ಅದನ್ನು ಈ ತೆಂಗಿನಕಾಯಿಗೆ ಜೋಡಿಸಬೇಕು.

ವೀಳ್ಯದೆಲೆ, ಮಾವಿನ ಎಲೆಗಳನ್ನು ಇಟ್ಟು ಸಿದ್ಧಪಡಿಸಿದ ಈ ಕಲಶವನ್ನು ಅಕ್ಕಿ ಹರಡಿರುವ ತಟ್ಟೆಯ ಮೇಲೆ ಇಡಬೇಕು. ಈ ತಟ್ಟೆಯನ್ನು ಅಷ್ಟದಳ ರಂಗೋಲಿಯ ಮೇಲಿಡಬೇಕು. ಕಲಶಕ್ಕೆ ಹೊಸ ರವಿಕೆ ಬಟ್ಟೆ ಅಥವಾ ಸೀರೆ ಉಡಿಸಿ, ಒಡವೆ ಹಾಕಿ ಅಲಂಕಾರ ಮಾಡುತ್ತಾರೆ. ದೇವಿಗೆ ಪೊಂಗಲ್‌ ನೈವೇದ್ಯ ಮಾಡಿ ಅರ್ಪಿಸುತ್ತಾರೆ. ಮುತ್ತೈದೆಯರನ್ನು ಪೂಜೆಗೆ ಆಮಂತ್ರಿಸಿ, ಪೂಜೆಯ ನಂತರ ಅವರಿಗೆ ತಾಂಬೂಲ ನೀಡುವ ಪದ್ಧತಿ ಇದೆ. ವ್ರತ ಮಾಡುವವರು ಪೂಜೆ ಮುಗಿದ ನಂತರ ಆಹಾರ ಸೇವಿಸುತ್ತಾರೆ.

ವಿಶ್ವ ಛಾಯಾಗ್ರಹಣ ದಿನ

ಮಹತ್ವ

ಒಂದು ಚಿತ್ರ ಸಾವಿರ ಪದಗಳಿಗಿಂತ ಹೆಚ್ಚು ಮೌಲ್ಯವನ್ನು ಒಳಗೊಂಡಿದೆ; ಅದು ವೈಯಕ್ತಿಕ ಅಭಿವ್ಯಕ್ತಿಯ ಒಂದು ಸಾಧನ ಮತ್ತು ಅದನ್ನು ಮೆಚ್ಚುವುದು, ಎಲ್ಲವೂ ಒಂದೇ ಸಮಯದಲ್ಲಿ. ಒಂದು ಛಾಯಾಚಿತ್ರವು ಭಾವನೆಗಳು, ಆಲೋಚನೆಗಳು, ಅನುಭವಗಳು, ಕ್ಷಣಗಳನ್ನು ಕಾಲಕಾಲಕ್ಕೆ ಸೆರೆಹಿಡಿಯುವ ಮತ್ತು ಅವುಗಳನ್ನು ಶಾಶ್ವತವಾಗಿ ಅಮರಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಈ ಅಭಿವ್ಯಕ್ತಿಗಳನ್ನು ವೇಗವಾಗಿ ಮತ್ತು ಕೆಲವೊಮ್ಮೆ ಶಬ್ದಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಡಿಜಿಟಲ್ ಜಗತ್ತಿನಲ್ಲಿ ಸಂವಹನದ ಒಂದು ಪ್ರಮುಖ ವಿಧಾನವಾಗಿ ಮಾರ್ಪಟ್ಟಿದೆ.

ಇತಿಹಾಸ ಮತ್ತು ವಿಕಾಸ

ವಿಶ್ವ ಛಾಯಾಗ್ರಹಣ ದಿನವು ವಿಜ್ಞಾನ, ಇತಿಹಾಸ, ಕಲೆ ಮತ್ತು ಛಾಯಾಚಿತ್ರಗಳ ಕರಕುಶಲತೆಯ ವಾರ್ಷಿಕ ಆಚರಣೆಯಾಗಿದೆ. ಇದು ಮೊದಲ ಬಾರಿಗೆ ಛಾಯಾಚಿತ್ರ ಪ್ರಕ್ರಿಯೆಯು ಅಭಿವೃದ್ಧಿಗೊಂಡ 1837ರಲ್ಲಿ ಅದರ ಮೂಲವನ್ನು ಗುರುತಿಸುತ್ತದೆ. 1839ರ ಜನವರಿ 9ರಂದು ಫ್ರೆಂಚ್ ಅಕಾಡೆಮಿ ಆಫ್ ಸೈನ್ಸಸ್ ಈ ಪ್ರಕ್ರಿಯೆಯನ್ನು ಘೋಷಿಸಿತು ಮತ್ತು ಅದೇ ವರ್ಷ, ಫ್ರೆಂಚ್ ಸರ್ಕಾರವು ಆವಿಷ್ಕಾರಕ್ಕಾಗಿ ಪೇಟೆಂಟ್ ಅನ್ನು ಖರೀದಿಸಿತು ಮತ್ತು "ಪ್ರಪಂಚಕ್ಕೆ ಉಚಿತ" ಎಂದು ನೀಡಿತು.

ಆದಾಗ್ಯೂ, 1861 ರಲ್ಲಿ ಮೊದಲ ದೀರ್ಘಬಾಳಿಕೆಯ ಬಣ್ಣದ ಛಾಯಾಚಿತ್ರವನ್ನು ತೆಗೆಯಲಾಯಿತು ಮತ್ತು 1957 ರಲ್ಲಿ ಮೊದಲ ಡಿಜಿಟಲ್ ಛಾಯಾಚಿತ್ರವನ್ನು ಕಂಡುಹಿಡಿಯಲಾಯಿತು ಎಂಬ ಊಹಾಪೋಹಗಳೂ ಇವೆ.

ಆಚರಣೆ

ಆಗಸ್ಟ್ 19, ‘ಫೋಟೋಗ್ರಫಿ’ ಬಗ್ಗೆ ಆಸಕ್ತಿ ಇರುವವರು ಒಂದೆಡೆ ಸೇರಿ ಜಾಗೃತಿ ಮೂಡಿಸಿ, ಫೋಟೋಗ್ರಫಿ ಕ್ಷೇತ್ರದ ಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳುವ ದಿನ. ಈ ಅನಧಿಕೃತ ರಜಾ ದಿನವು ದಶಕಗಳಿಂದ ಜನರನ್ನು ತನ್ನತ್ತ ಸೆಳೆಯುತ್ತಿರುವ ಛಾಯಾಚಿತ್ರಗಳ ಸೃಜನಶೀಲತೆ ಮತ್ತು ನ್ಯೂನ್ಯತೆಗಳ ಸಂಭ್ರಮವಾಗಿದೆ. ತಂತ್ರಜ್ಞಾನದಲ್ಲಿ ಹಲವಾರು ಪ್ರಗತಿಗಳನ್ನು ಹೊಂದಿರುವ ನಾವು ಹಲವಾರು ವರ್ಷಗಳಿಂದ ಛಾಯಾಗ್ರಹಣದ ವಿವಿಧ ವಿಧಾನಗಳನ್ನು ನೋಡಿದ್ದೇವೆ. ಆದರೆ ಅದರ ಸಾರವು ಒಂದೇ ರೀತಿಯಲ್ಲಿಯೇ ಇದೆ.

ಛಾಯಾಚಿತ್ರವು ಸ್ವತಃ ಒಂದು ಉದ್ದೇಶಪೂರ್ವಕ ಅಭಿವ್ಯಕ್ತಿಯನ್ನು ಹೊಂದಿದೆ. ಅದು ಛಾಯಾಚಿತ್ರಕಾರನ ಇಂದ್ರಿಯಗಳ ನಡುವಿನ ಸಂಬಂಧವನ್ನು ಸ್ಥಾಪಿಸುತ್ತದೆ. ಅದು ನೋಡುಗರನ್ನು ಎಷ್ಟರ ಮಟ್ಟಿಗೆ ಮಟ್ಟಿಗೆ ನೋಡಬಲ್ಲುದು ಎಂದರೆ ಅದು ಎಲ್ಲರಿಗೂ ಒಂದು ಬದಲಾವಣೆಯಾಗದ ಅನುಭವವನ್ನು ನೀಡುತ್ತದೆ. ಪ್ರತಿ ವರ್ಷ ಈ ಕಲಾ ಪ್ರಕಾರದ ಸಂಭ್ರಮದಲ್ಲಿ, ವಿವಿಧ ಶೀರ್ಷಿಕೆಗಳೊಂದಿಗೆ ಹಲವಾರು ಪ್ರಚಾರ ಛಾಯಾಚಿತ್ರ ಸ್ಪರ್ಧೆಗಳನ್ನು ಆಯ್ಕೆ ಮಾಡಲಾಗುತ್ತದೆ.

ಛಾಯಾಚಿತ್ರವು ವಿವಿಧ ವಿಧಾನಗಳು ವಿಭಿನ್ನ ಭಾವನೆಗಳನ್ನು ವ್ಯಕ್ತಪಡಿಸುತ್ತವೆ ಮತ್ತು ಅನೇಕ ವೇಳೆ ಪ್ರತಿ ಛಾಯಾಗ್ರಾಹಕರೂ ಕಾಲಕ್ರಮೇಣ ತಮ್ಮದೇ ಆದ ಶೈಲಿಯನ್ನು ಅಭಿವೃದ್ಧಿಪಡಿಸುತ್ತಾರೆ.


ವಿಷ್ಣುಪದ ಪುಣ್ಯಕಾಲ

ವಿಷ್ಣುಪದ ಪುಣ್ಯಕಾಲವು ಭಗವಾನ್ ವಿಷ್ಣುವಿಗೆ ಸಮರ್ಪಿತವಾದ ಒಂದು ಶುಭ ಕಾಲವಾಗಿದೆ. ಸಾಂಪ್ರದಾಯಿಕ ಹಿಂದೂ ಪಂಚಾಂಗದಲ್ಲಿ ನಾಲ್ಕು ವಿಷ್ಣುಪದ ಪರ್ವ ಪುಣ್ಯಕಾಲಗಳಿವೆ. ದಿನ ನಿರ್ದಿಷ್ಟ ಅವಧಿಯನ್ನು ನಾರಾಯಣ (ವಿಷ್ಣು) ಪೂಜೆ ಮಾಡಲು ತುಂಬಾ ಮಂಗಳಕರ ಎಂದು ಪರಿಗಣಿಸಲಾಗಿದೆ.

ವಿಷ್ಣುಪದ ಪರ್ವ ಪುಣ್ಯಕಾಲದ ಸಮಯದಲ್ಲಿ ಭಗವಾನ್ ವಿಷ್ಣುವು ವಿಶ್ವದ ಕಲ್ಯಾಣಕ್ಕಾಗಿ ಅಗತ್ಯವಾದ ಹಲವಾರು ದೈವಿಕ ಕಾರ್ಯಗಳನ್ನು ಮಾಡಿದನು ಎಂಬುದು ನಂಬಿಕೆಯಾಗಿದೆ. ಅವಧಿಯಲ್ಲಿ ಮಾಡುವ ಪೂಜೆ, ಪ್ರಾರ್ಥನೆಗಳು ಮೋಕ್ಷವನ್ನು ಪಡೆಯಲು ಸಹಾಯ ಮಾಡುತ್ತದೆ ಎಂದು ಕೆಲವರು ನಂಬುತ್ತಾರೆ. ವಿಷ್ಣುಪದ ಪುಣ್ಯಕಾಲವು ಸಾಮಾನ್ಯವಾಗಿ ನಿರ್ದಿಷ್ಟ ಕಾಲಗಳಲ್ಲಿ ಸಂಭವಿಸುತ್ತದೆ.

ಕೊಲ್ಲಂ ಹೊಸ ವರ್ಷ

ಮಲಯಾಳಂ ಕ್ಯಾಲೆಂಡರ್ ಅಥವಾ ಕೊಲ್ಲಂ ಯುಗವು ಕೇರಳದಲ್ಲಿ ಬಳಸಲಾಗುವ ಒಂದು ಸೌರ ಹಿಂದೂ ಪಂಚಾಂಗವಾಗಿದೆ. ಈ ಪಂಚಾಂಗದ ಉಗಮವನ್ನು ಕ್ರಿ.825 ಎಂದು ಗುರುತಿಸಲಾಗಿದೆ. ಈ ದಿನವನ್ನು ಕೇರಳದಲ್ಲಿ ಅಂದು ‘ವಿಶು’ ಎಂದು ಆಚರಿಸಲಾಗುತ್ತದೆ ಮತ್ತು ಭಾರತದ ಇತರ ಭಾಗಗಳಲ್ಲಿ ಇದೇ ರೀತಿಯ ಹೊಸ ವರ್ಷದ ಆಚರಣೆಯನ್ನು ಆಚರಿಸಲಾಗುತ್ತದೆ.

ಈ ಯುಗದ ಉಗಮದ ಬಗ್ಗೆ ಅನೇಕ ಸಿದ್ಧಾಂತಗಳಿವೆ. ಆದರೆ ಇತ್ತೀಚಿನ ವಿದ್ವಾಂಸರ ಪ್ರಕಾರ, ಪಾಂಡ್ಯರ ಆಳ್ವಿಕೆಯಿಂದ (ವೈನಾಡು) ಈ ಪ್ರದೇಶವನ್ನು ಪಾಂಡ್ಯರ ಆಳ್ವಿಕೆಯಿಂದ ಮುಕ್ತಗೊಳಿಸಿದ ನಂತರ ಕೊಲ್ಲಮ್ನ ಸ್ಥಾಪನೆಯನ್ನು ಸಂಕೇತವಾಗಿ ಅಥವಾ ಕೊಡುಂಗಲ್ಲೂರಿನಲ್ಲಿ ಚೇರ ರಾಜನ ಸಹಾಯದಿಂದ ಸ್ಥಾಪಿಸಲಾಗಿತ್ತು.

ಕೊಲ್ಲಂ ಯುಗವನ್ನು ಉಲ್ಲೇಖಿಸುವ ಅತ್ಯಂತ ಮುಂಚಿನ ದಾಖಲೆಯೆಂದರೆ, ವೈನಾಡಿನ ಪ್ರಮುಖನಾದ ಶ್ರೀ ವಲ್ಲವ ಗೋಡಾ, ಕ್ರಿ.973 (ಕೊಲ್ಲಂ ಯುಗ 149) ಎಂದು ಹೆಸರಿಸಲ್ಪಟ್ಟಿದೆ.


ಸ್ವಾತಂತ್ರ್ಯ ದಿನಾಚರಣೆ

ಭಾರತದ ಸ್ವಾತಂತ್ರ್ಯ ದಿನಾಚರಣೆಯನ್ನು ಪ್ರತಿ ವರ್ಷ ಆಗಸ್ಟ್ ೧೫ ರಂದು ಆಚರಿಸಲಾಗುತ್ತದೆ. ಬ್ರಿಟೀಷರ ಆಡಳಿತದಿಂದ ಭಾರತ ದೇಶ ೧೯೪೭ ಆಗಸ್ಟ್ ೧೫ ರಂದು ಸ್ವತಂತ್ರವಾಯಿತು. ಪ್ರತಿ ವರ್ಷ ಭಾರತದಾದ್ಯಂತ ಈ ದಿನವನ್ನು ಸ್ವಾತಂತ್ರ್ಯ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಈ ದಿನ ಇಡೀ ದೇಶದಲ್ಲಿ ರಾಷ್ಟ್ರೀಯ ರಜಾದಿನವನ್ನಾಗಿ ಆಚರಿಸಲಾಗುತ್ತದೆ. ದೇಶದ ಹಲವೆಡೆ |ತ್ರಿವರ್ಣ ಧ್ವಜವನ್ನು ಹಾರಿಸಿ ಸಿಹಿ ಹಂಚಲಾಗುತ್ತದೆ. ಈ ಆಚರಣೆಯ ಪ್ರಮುಖ ಸಮಾರಂಭ ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯತ್ತದೆ. ಈ ಸಮಾರಂಭದಲ್ಲಿ, ಭಾರತದ ಪ್ರಧಾನ ಮಂತ್ರಿಗಳು ರಾಷ್ಟ್ರೀಯ ಧ್ವಜವನ್ನು ಹಾರಿಸಿ ಭಾರತದ ರಾಷ್ಟ್ರಗೀತೆ "ಜನ ಗಣ ಮನ"ವನ್ನು ಹಾಡಿ ನಂತರ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡುತ್ತಾರೆ. ಈ ಭಾಷಣದಲ್ಲಿ ದೇಶದ ಸಾಧನೆ, ದೇಶದ ಮುಂದಿರುವ ಪ್ರಮುಖ ಸವಾಲುಗಳ ಬಗ್ಗೆ ಮಾತನಾಡಿ, ಕೆಲವು ಪ್ರಗತಿ ಯೋಜನೆಗಳನ್ನು ಪ್ರಕಟಿಸಲಾಗುತ್ತದೆ. ಈ ದಿನದಂದು ದೇಶದ ಸ್ವಾತ್ರಂತ್ರ್ಯಕ್ಕೆ ಮಡಿದ ನಾಯಕರನ್ನು ಸ್ಮರಿಸಲಾಗುತ್ತದೆ

ಸ್ವಾತ್ರಂತ್ರ್ಯದ ಹಾದಿ

ಜೂನ್ ೩,೧೯೪೭ ರಂದು ಅಂದಿನ ಗವರ್ನರ್ ಜನರಲ್ ಆಗಿದ್ದ ಲಾರ್ಡ್ ಮೌಂಟ್‌ಬ್ಯಾಟನ್, ಬ್ರಿಟಿ‍ಶ್ ಭಾರತ ಸಾಮ್ರಾಜ್ಯವನ್ನು ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ರಾಷ್ಟ್ರಗಳಾಗಿ ವಿಭಜಿಸುವುದಾಗಿ ಘೋಷಿಸಿದನು. ಇದರ ನಂತರ ಭಾರತದ ಸ್ವಾತ್ರಂತ್ರ್ಯ ಕಾಯಿದೆ ೧೯೪೭ ರ ಅನ್ವಯ ಆಗಸ್ಟ್ ೧೫, ೧೯೪೭ ರಂದು ಭಾರತವನ್ನು ಸ್ವತಂತ್ರ ರಾಷ್ಟ್ರವನ್ನಾಗಿ ಘೋಷಿಸಲಾಯಿತು. ಅಂದಿನ ಮದ್ಯರಾತ್ರಿ,(12.15ರ) ನಂತರ  ನೆಹರು ರವರು ದೇಶದ ಪ್ರಥಮ ಪ್ರಧಾನ ಮಂತ್ರಿ ಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅಂದು ಅವರು ರಾಷ್ಟ್ರವನ್ನುದ್ದೇಶಿಸಿ, ಟ್ರಿಸ್ಟ್ ವಿಥ್ ಡೆಸ್ಟಿನಿ ಭಾಷಣ ( 'ಭಾಗ್ಯದೊಡನೆ ಒಪ್ಪಂದ' ಭಾಷಣ) ಮಾಡಿದರು.

ಭಾರತದ ಸ್ವಾತಂತ್ರ್ಯ ದಿನಾಚರಣೆ ಮಧ್ಯರಾತ್ರಿಯ ಗಂಟೆ ಹೊಡೆಯುತ್ತಿದ್ದಂತೆ ಜಗತ್ತು ಮಲಗಿರುವಾಗ ಭಾರತವು ಚಲನಶೀಲತೆ ಮತ್ತು ಸ್ವಾತಂತ್ರ್ಯಕ್ಕೆ ಎಚ್ಚರಗೊಳ್ಳುತ್ತದೆ. ಇತಿಹಾಸದಲ್ಲಿ ಅಪರೂಪವಾಗಿ ಬರುವ ಇಂಥ ಈ ಗಳಿಗೆಯಲ್ಲಿ ಹಳತಿನಿಂದ ಹೊಸತಿಗೆ ಕಾಲಿಡುತ್ತಿದ್ದೇವೆ . ಹಳೆಯ ಯುಗ ಮುಗಿದು ಬಹುಕಾಲ ಅದುಮಿಟ್ಟ ದೇಶವೊಂದರ ಚೇತನವು ತನ್ನ ಅಭಿವ್ಯಕ್ತಿಯನ್ನು ಕಂಡುಕೊಳ್ಳುತ್ತಿದೆ..... ಇವತ್ತು ನಾವು ನಮ್ಮ ದುರಾದೃಷ್ಟದ ಕಾಲವನ್ನು ಮುಗಿಸುತ್ತಿದ್ದೇವೆ ಮತ್ತು ಭಾರತವು ತನ್ನನ್ನು ತಾನು ಮತ್ತೆ ಕಂಡುಕೊಳ್ಳುತ್ತಿದೆ.

ಭಾರತದ ಸ್ವಾತಂತ್ರ್ಯ ದಿನಾಚರಣೆ

ಪ್ರಧಾನಮಂತ್ರಿ ನೆಹರು ಮತ್ತು ಉಪಪ್ರಧಾನಮಂತ್ರಿ ಸರ್ದಾರ್ ವಲ್ಲಭಭಾಯ್ ಪಟೇಲ್ ರು ಲಾರ್ಡ್ ಮೌಂಟ್ ಬ್ಯಾಟನ್ನರನ್ನು ಭಾರತದ ಗವರ್ನರ್ ಜನರಲ್ ಆಗಿ ಮುಂದುವರೆಯಲು ಕೋರಿದರು. ಜೂನ್ ೧೯೪೮ ರಲ್ಲಿ ಅವರ ಸ್ಥಾನಕ್ಕೆ ಚಕ್ರವರ್ತಿ ರಾಜಗೋಪಾಲಾಚಾರಿ ಅವರು ಬಂದರು. ಪಟೇಲರು ೫೬೫ ರಾಜಸಂಸ್ಥಾನಗಳ ಭಾರತದ ರಾಜಕೀಯ ಏಕೀಕರಣ ದ ಜವಾಬ್ದಾರಿಯನ್ನು ವಹಿಸಿಕೊಂಡರು, ಜುನಾಗಢ, ಜಮ್ಮು ಮತ್ತು ಕಾಶ್ಮೀರ, ಮತ್ತು ಹೈದರಾಬಾದ್ ಸಂಸ್ಥಾನ ಗಳನ್ನು ಭಾರತಕ್ಕೆ ಸೇರ್ಪಡೆ ಮಾಡುವಲ್ಲಿ ಸೈನಿಕ ಬಲವನ್ನು ಉಪಯೋಗಿಸಿ "ರೇಷ್ಮೆ ಕೈಗವಸಿನಲ್ಲಿ ಉಕ್ಕಿನ ಮುಷ್ಠಿ" ತಂತ್ರವನ್ನು ಉಪಯೋಗಿಸಿದರು.

ಸಂವಿಧಾನ ರಚನಾಸಭೆಯು ಸಂವಿಧಾನದ ಕರಡ ಸಭೆಯನ್ನು 26 ನವೆಂಬರ್ 1949; ರಂದು ಸಿದ್ಧಗೊಳಿಸುವ ಕಾರ್ಯವನ್ನು ಸಂಪೂರ್ಣಗೊಳಿಸಿತು . 26 ಜನವರಿ 1950 ರಂದು ಭಾರತೀಯ ಗಣರಾಜ್ಯ ವನ್ನು ಅಧಿಕೃತವಾಗಿ ಘೋಷಿಸಲಾಯಿತು. ಸಂವಿಧಾನ ರಚನಾಸಭೆಯು ಡಾ. ರಾಜೇಂದ್ರಪ್ರಸಾದರನ್ನು ದೇಶದ ಪ್ರಥಮ ರಾಷ್ಟ್ರಪತಿ ಯನ್ನಾಗಿ ಚುನಾಯಿಸಿತು . ಅವರು ಗವರ್ನರ್ ಜನರಲ್ ರಾಜಗೋಪಾಲಾಚಾರಿಯವರಿಂದ ಅಧಿಕಾರವನ್ನು ಸ್ವೀಕರಿಸಿದರು .ನಂತರ ಸ್ವತಂತ್ರ ಸಾರ್ವಭೌಮ ಭಾರತವು ಇನ್ನೆರಡು ಪ್ರದೇಶಗಳನ್ನು ತನ್ನಲ್ಲಿ ಸೇರಿಸಿಕೊಂಡಿತು . ಅವು 1961ರಲ್ಲಿ ಪೋರ್ಚುಗೀಸ್ ನಿಯಂತ್ರಣದಿಂದ ವಿಮೋಚನೆಗೊಳಿಸಿದ ಗೋವಾ ಮತ್ತು ಫ್ರೆಂಚರು ೧೯೫೪ರಲ್ಲಿ ಒಪ್ಪಿಸಿದ ಪಾಂಡಿಚೇರಿ . ೧೯೫೨ ರಲ್ಲಿ ಭಾರತವು ತನ್ನ ಮೊದಲ ಸಾರ್ವತ್ರಿಕ ಚುನಾವಣೆಗಳನ್ನು ನಡೆಸಿತು . ಶೇ. ೬೨ ಕ್ಕೂ ಹೆಚ್ಚು ಮತದಾರರು ಅದರಲ್ಲಿ ಭಾಗವಹಿಸಿದರು. ಅದರಿಂದಾಗಿ ಭಾರತವು ವಾಸ್ತವದಲ್ಲಿ ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವವಾಯಿತು.

ಸಂಭ್ರಮದಲ್ಲಿ ಆಚರಣೆ

ಭಾರತದ ಪ್ರಧಾನಮಂತ್ರಿ ದೆಹಲಿಯ ಕೆಂಪು ಕೋಟೆ ಯ ಐತಿಹಾಸಿಕ ಸ್ಥಳದಲ್ಲಿ ಆಗಸ್ಟ್ ೧೫ರಂದು ಭಾರತದ ಧ್ವಜದ ಆರೋಹಣವನ್ನು ನೆರವೇರಿಸುವರು

ಆಗಸ್ಟ್ 15 ಭಾರತದ ರಾಷ್ಟೀಯ ರಜಾದಿನವಾಗಿದೆ. ರಾಜಧಾನಿ ನವದೆಹಲಿ ಯಲ್ಲಿ ಬಹ್ವಂಶ ಸರಕಾರಿ ಕಚೇರಿಗಳು ವಿದ್ಯುದ್ದೀಪಗಳಿಂದ ಬೆಳಗುತ್ತವೆ ಎಲ್ಲಾ ರಾಜ್ಯ ರಾಜಧಾನಿಗಳಲ್ಲಿ ಧ್ವಜಾರೋಹಣ ಮತ್ತು ಸಾಂಸ್ಕೃತಿಕ ಸಮಾರಂಭಗಳು ಜರುಗುತ್ತವೆ. ದೇಶದಾದ್ಯಂತ ನಗರಗಳಲ್ಲಿ ಧ್ವಜಾರೋಹಣವನ್ನು ಆಯಾ ಕ್ಷೇತ್ರಗಳ ರಾಜಕೀಯ ಧುರೀಣರು ನೆರವೇರಿಸುತ್ತಾರೆ . ಖಾಸಗಿ ಸಂಸ್ಥೆಗಳಲ್ಲಿ ಧ್ವಜಾರೋಹಣವನ್ನು ಆಯಾ ಸಂಸ್ಥೆಯ ಹಿರಿಯ ಅಧಿಕಾರಿಗಳು ಮಾಡುತ್ತಾರೆ . ಶಾಲೆಕಾಲೇಜುಗಳು ತಮ್ಮ ಆವರಣದಲ್ಲಿ ಧ್ವಜಾರೋಹಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಬಂಧುಮಿತ್ರರು ಭೋಜನಕೂಟ ಮತ್ತು ಪ್ರವಾಸಗಳಿಗೆಂದು ಸೇರುತ್ತಾರೆ. ಹೌಸಿಂಗ್ ಕಾಲನಿಗಳು , ಸಾಂಸ್ಕೃತಿಕ ಸಂಘ-ಸಂಸ್ಥೆಗಳು ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಮನರಂಜನಾ ಕಾರ್ಯಕ್ರಮಗಳನ್ನೂ, ಸ್ಪರ್ಧೆಗಳನ್ನೂ ಏರ್ಪಡಿಸುತ್ತಾರೆ.

ಗಾಳಿಪಟಗಳ ಹಾರಾಟ

ಭಾರತದ ಅನೇಕ ಪ್ರದೇಶಗಳಲ್ಲಿ ಸ್ವಾತಂತ್ರ್ಯದಿನದಂದು ಗಾಳಿಪಟಗಳನ್ನು ಹಾರಿಸುವ ಪದ್ದತಿ ಜನಪ್ರಿಯವಾಗಿದೆ . ಅಕಾಶವು ನೂರಾರು ಬಣ್ಣ ಬಣ್ಣದ ಪಟಗಳಿಂದ ಕಂಗೊಳಿಸುವುದು. ಜನರು ಗಾಳಿಪಟಗಳನ್ನು ಹಾರಿಸುವ ಸ್ಪರ್ಧೆಗಳಲ್ಲಿ ತೊಡಗುವರು ಕಟ್ಟಡಗಳ ಬಾಲ್ಕನಿಗಳು ಮತ್ತು ಮನೆಗಳ ಮಾಳಿಗೆಗಳಿಂದ ಜನರು ಗಾಳಿಪಟಗಳನ್ನು ಬಾನಿಗೆ ಹಾರಬಿಡುವರು.ಸಂಜೆಯ ವೇಳೆ ಗಾಳಿಪಟಗಳು ಮುಗಿಲ ಮುಟ್ಟುವಂತೆ ಮೇಲೇರುತ್ತಿದ್ದಂತೆ ಮಕ್ಕಳ ಹರ್ಷೋಲ್ಲಾಸದ ಧ್ವನಿಗಳು ಎಲ್ಲೆಲ್ಲೂ ಕೇಳಬರುತ್ತವೆ.