ಮೊಹರಂ ಕೊನೆ ದಿನ

ಮೊಹರಂ ಎಂದರೆ ಮರೆತು ಬಿಡುವುದು ಅಥವಾ ನಿಷಿದ್ದ ಅಥವಾ ನಿಷೇಧಿತ ಎಂದು ಅರ್ಥ. ಇಸ್ಲಾಮಿಕ್ ಕ್ಯಾಲೆಂಡರ್‍ನ ಮೊದಲ ತಿಂಗಳಾದ ಮೊಹರಂನ ಹತ್ತನೇ ದಿನವನ್ನು ಮೊಹರಂ ಹಬ್ಬವಾಗಿ ಆಚರಿಸಲಾಗುತ್ತದೆ. ಇದು ಸಂಭ್ರಮದ ಆಚರಣೆ ಅಲ್ಲ.ಪ್ರವಾದಿ ಮೊಹಮ್ಮದ್ ಪೈಗಂಬರರ ಮಗಳು ಬೀಬಿ ಫಾತಿಮಾರ ಪತಿ ಹಜರತ್ ಅಲಿ(ನಾಲ್ಕನೇ ಖಲೀಫ) ಅವರ ಪುತ್ರ ಇಮಾನ್ ಹುಸೇನ್ ಇಬ್ನ್ ಅಲಿ. ಕ್ರಿ.ಶ 620ರಲ್ಲಿ ಜನಿಸಿದರು. ಪ್ರವಾದಿ ಮೊಹಮ್ಮದರು ತೋರಿಸಿಕೊಟ್ಟ ಸನ್ಮಾರ್ಗದಲ್ಲಿ ಹುಸೇನ್ ಸಾಗುತ್ತಾರೆ. ಪ್ರವಾದಿ ಮೊಹಮ್ಮದರಂತೆ ಮೆಕ್ಕಾದಿಂದ ಮದೀನಾಕ್ಕೆ ಯಾತ್ರೆ ಕೈಗೊಳ್ಳುವಂತೆ ಹುಸೇನರು ಕರ್ಬಲಾದ ದಾರಿ ಹಿಡಿಯುತ್ತಾರೆ. ಹುಸೇನರ ಜೊತೆಗೆ 72 ಮಂದಿ ಇಸ್ಲಾಂ ಧರ್ಮನಿಷ್ಠರಿರುತ್ತಾರೆ. ಹುಸೇನರ ಸೋದರ ಹಸನ್ ರನ್ನು ವಿಷಾಹಾರ ಮೂಲಕ ಕೊಲ್ಲಲಾಗುತ್ತದೆ. ಕರ್ಬಲಾ ಮರುಭೂಮಿಯಲ್ಲಿ ಯಜೀದ್ ಗಳು ಹುಸೇನ್ ಹಾಗೂ ಪರಿವಾರವನ್ನು ಅಡ್ಡಗಟ್ಟಿ ನೀರು, ಆಹಾರ ಕೊಡದಂತೆ ಹಿಂಸಿಸುತ್ತಾರೆ. ಕೊನೆಗೆ 10 ದಿನದಂದು ನಮಾಜ್ ಮಾಡುವಾಗ ಹುಸೇನರನ್ನು ಮೋಸದಿಂದ ಕೊಲ್ಲಲಾಗುತ್ತದೆ. ಈ ಬಲಿದಾನದ ಸ್ಮರಣೆಯೇ ಮೊಹರಂ ಆಚರಣೆಯ ಉದ್ದೇಶ. ಈ ದಿನದಂದು ಸಂಭ್ರಮಾಚರಣೆಗಳು ನಡೆಯುವುದಿಲ್ಲ. ಕರ್ಬಾಲಾ ಯುದ್ಧದ ಘಟನೆಗಳನ್ನು ಗೀತದ, ನಾಟಕದ ರೂಪಕದಲ್ಲಿ ಪ್ರದರ್ಶಿಸಿ ಹುಸೇನರ ಬಲಿದಾನವನ್ನು ಸ್ಮರಿಸಲಾಗುತ್ತದೆ. ಯುದ್ಧವು ಹತ್ತು ದಿನಗಳ ಕಾಲ ನಡೆದು ಹತ್ತನೇ ದಿನದಂದು ಇಮಾಮರ ಬಲಿದಾನವಾಗುತ್ತದೆ. ಈ ಕಾರಣದಿಂದ ಈ ಆಚರಣೆಯನ್ನು ಮೊಹರಂ ಕೊನೆಯ ದಿನ ಎಂದೂ ಕೂಡ ಕರೆಯಲಾಗುತ್ತದೆ. ಇಸ್ಲಾಂನ ನಾಲ್ಕು ಪವಿತ್ರ ಮಾಸಗಳಲ್ಲಿ ಮೊಹರಂ ಕೂಡ ಒಂದು. ಇದು ಆತ್ಮ ನಿರೀಕ್ಷಣೆಯ ತಿಂಗಳು. ಸಾಂಕೇತಿಕವಾಗಿ ಇದನ್ನು ಸೂಚಿಸಲು ಸ್ವಯಂ ಶಿಕ್ಷೆಯನ್ನು ವಿಧಿಸಿ ಕೊಳ್ಳುವ ಆಚರಣೆ ಕೂಡ ಇದೆ.ಈ ತಿಂಗಳ 9.10 ಮತ್ತು 11ನೇ ದಿನಗಳಂದು ರೋಜ್ ಎ ಆಷುರಾ ಎಂಬ ಹೆಸರಿನಲ್ಲಿ ಉಪವಾಸವನ್ನು ನಡೆಸಲಾಗುತ್ತದೆ. ಈ ಮೂರು ದಿನಗಳಲ್ಲಿ ನಡೆಸುವ ಉಪವಾಸ ಮೂವತ್ತು ದಿನಗಳ ಉಪವಾಸಕ್ಕೆ ಸಮ ಎಂದು ನಂಬಲಾಗಿದೆ. ಈ ದಿನದಂದು ವಿಶೇಷ ಪ್ರಾರ್ಥನೆಗಳು ಅಯೋಜಿತವಾಗಿರುತ್ತವೆ. ಶಿಯಾ ಪಂಗಡಕ್ಕೆ ಸೇರಿದ ಮುಸ್ಲೀಮರು ಮೆರವಣಿಗೆ ನಡೆಸುತ್ತಾರೆ. ಕರ್ನಾಟಕದ ಹಲವೆಡೆ ಹುಲಿವೇಷನ್ನು ಹಾಕುವ ಪದ್ದತಿ ಕೂಡ ಇದೆ,