ಕನಕ ದಾಸ ಜಯಂತಿ

ಕರ್ನಾಟಕದ ಭಕ್ತಿ ಪಂಥದ ಪ್ರಮುಖರಲ್ಲಿ ಕನಕದಾಸರು ಮುಖ್ಯವಾದವರು. ಅವರ ನಿಜವಾದ ಹೆಸರು -ತಿಮ್ಮಪ್ಪನಾಯಕ] (1508-1606) ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊ೦ದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು. ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಬಣ್ಣಿಸಲಾಗಿದೆ.

ಕನಕದಾಸರು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ 1509ರಲ್ಲಿ ಕುರುಬ ಜನಾಂಗಕ್ಕೆ ಸೇರಿದ ಬಚ್ಚಮ್ಮ ಮತ್ತು ಬೀರಪ್ಪನಾಯಕ ಎಂಬ ದಂಪತಿಗಳ ಮಗನಾಗಿ ಜನಿಸಿದರು. ಕನಕದಾಸರು ಬರಿ ಕುರುಬ ಜಾತಿಗೆ ಸೀಮಿತವಾದ ಭಕ್ತರಲ್ಲ ಎಲ್ಲಾ ಜಾತಿಗಳಿಗೆ ಬೇಕಾದವರು. 15-16 ನೆಯ ಶತಮಾನದಲ್ಲೇ ಜಾತಿ ವ್ಯವಸ್ಥೆಯ ಬಗ್ಗೆ ಸಮರ ಸಾರಿದ ಭಕ್ತ ಎಂದರೆ ಕನಕದಾಸರು ಎಂದರೆ ತಪ್ಪಾಗಲಾರದು. ಕನಕದಾಸರು ಅನೇಕ ಕೀರ್ತನೆಗಳನ್ನು ರಚಿಸಿದ್ದಾರೆ. ಸುಮಾರು ಐದು ನೂರು ವರ್ಷಗಳ ಹಿಂದಿನ ಮಾತು. ವಿಜಯನಗರ ಸಾಮ್ರಾಜ್ಯದಲ್ಲಿದ್ದ ಬಂಕಾಪುರ ಪ್ರಾಂತದ ಮುಖ್ಯಪಟ್ಟಣದ ಹೆಸರು ಬಾಡ ಎಂದು. ವಿಜಯನಗರದಿಂದ ಗೋವಾಕ್ಕೆ ಹೋಗುವ ಹೆದ್ದಾರಿ. ಈ ಬಾಡದಿಂದಲೇ ಹಾಯ್ದು ಹೋಗುತ್ತಿತ್ತು. ಬಾಡ ಒಳ್ಳೇ ಆಯಕಟ್ಟಿನ ಸ್ಥಳ. ಈ ಬಂಕಾಪುರ ಪ್ರಾಂತಕ್ಕೆ ದಂಡನಾಯಕನಾಗಿದ್ದ ಬೀರಪ್ಪನಾಯಕರ ಮಗನೇ ಕನಕ ದಾಸರು. ತಿರುಪತಿ ವೆಂಕಟರಮಣನ ಮೇಲಿನ ಭಕ್ತಿಯಿಂದ ಕೋರಿ ಕೊಂಡಿದ್ದರ ಫಲವಾಗಿ ಕನಕದಾಸರು ಜನಿಸಿದರು ಎನ್ನುವುದು ನಂಬಿಕೆ.

ಕನಕ ದಾಸರಿಗೆ ಬಾಲ್ಯದಲ್ಲಿಯೇ ಅಕ್ಷರಾಭ್ಯಾಸ, ಬಂಕಾಪುರದ ಶ್ರೀನಿವಾಸಾಚಾರ್ಯರ ಬಳಿ ವಿದ್ಯಾಭ್ಯಾಸವಾಗಿ, ವ್ಯಾಕರಣ, ತರ್ಕ, ಮೀಮಾಂಸೆ, ಸಾಹಿತ್ಯಗಳಲ್ಲಿ ಪಾರಂಗತನಾದನು. ಜೊತೆಗೆ ಕತ್ತಿವರಸೆ, ಕುದುರೆ ಸವಾರಿಯನ್ನೂ ಕಲಿತರು ಕೆಲವು ವರ್ಷಗಳಲ್ಲಿ ಹೆತ್ತವರು ತೀರಿ ಕೊಂಡರು. ತಂದೆಯ ಬಳಿಕ ತಿಮ್ಮಪ್ಪ ನಾಯಕ ತನ್ನ ಕಿರಿವಯಸ್ಸಿನಲ್ಲಿಯೇ ಬಂಕಾಪುರ ಪ್ರಾಂತಕ್ಕೆ ದಂಡನಾಯಕರಾದರು. ಯುದ್ಧವೊಂದರಲ್ಲಿ ಗಾಯಗೊಂಡಾಗ ಅವರಿಗೆ ಪರಮಾತ್ಮನ ಪ್ರೇರಣೆಯಾಗಿ ಸಾಮ್ರಾಜ್ಯವನ್ನು ಬಿಟ್ಟು ಭಕ್ತಿ ಪಂಥದ ಕಡೆ ನಡೆದರು. ಕನಕದಾಸರು ವ್ಯಾಸರಾಯರ ಮೆಚ್ಚಿನ ಶಿಷ್ಯರು. ವ್ಯಾಸರಾಯದಿಂದ ಮಧ್ವ ತತ್ವಶಾಸ್ತ್ರವನ್ನು ಕಲಿತು ಒಪ್ಪಿಕೊಂಡ ಕನಕದಾಸರು ಉಡುಪಿ ಶ್ರೀ ಕೃಷ್ಣನ ಅನನ್ಯ ಭಕ್ತರು. ಕಾಗಿನೆಲೆಯ ಆದಿಕೇಶವನ ಭಕ್ತರಾದ ಕನಕದಾಸರು ಜಾತಿಪದ್ಧತಿಯ ತಾರತಮ್ಯಗಳನ್ನು ಅಲ್ಲಗಳೆದರು. ಇವರ ಕೀರ್ತನೆಗಳ ಅಂಕಿತ ಕಾಗಿನೆಲೆಯ ಆದಿಕೇಶವರಾಯ ಎಂಬುದು.

ಕನಕ ದಾಸರು ಸ್ವಾತಂತ್ರ ಕಾಂತಿವುಳ್ಳವರೂ, ಸಮಾಜ ಸುಧಾರಕರೂ, ವೈಚಾರಿಕ ಮನೋಧರ್ಮದವರಾಗಿದ್ದರು. ಇವರು ಕೀರ್ತನೆಗಳಲ್ಲದೆ ಅನೇಕ ಕಾವ್ಯಗಳಾದ “ಮೋಹನ ತರಂಗಿಣಿ” ಹರಿಭಕ್ತಸಾರ, ನಳಚರಿತ್ರೆ, ರಾಮಧ್ಯಾನ ಚರಿತ್ರೆ, ಮುಂತಾದವುಗಳನ್ನು ಅಲ್ಲದೇ ಅಲ್ಲಮನ ಬೆಡಗಿನ ವಚನಗಳಂತೆ ಮುಡಿಗೆಗಳನ್ನು ರಚಿಸಿ ದಾಸ ಸಾಹಿತ್ಯಕ್ಕೆ ಅಪಾರವಾದ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಇವರ ಕೀರ್ತನೆ ಕಾವ್ಯಾಂಶ ಪ್ರಧಾನವಾಗಿರುವುದರಿಂದ ಹಲವು ವಿಮರ್ಶಕರು ಗುರುತಿಸಿರುವುದನ್ನು ತಿಳಿದಿದ್ದೇವೆ. ಅವರು ಬಳಸಿರುವಂಥ ಪದ ಪ್ರಯೋಗಗಳು, ಅಲಂಕಾರಗಳು, ಛಂದಸ್ಸು ಚಮತ್ಕಾರ ವರ್ಣನೆಗಳಲ್ಲಿ ಕಾವ್ಯದ ಪ್ರಜ್ಞೆಯೆ ಎದ್ದು ಕಾಣಿಸುತ್ತಿದೆ. ಅನೇಕರ ನಂಬಿಕೆಯಂತೆ ಕನಕರು ಕೂಡ ಶ್ರೀಕೃಷ್ಣನ ಭಕ್ತರು. ಉಡುಪಿಯ ದೇವಾಲಯದಲ್ಲಿ ಅವರಿಗೆ ಪ್ರವೇಶ ದೊರೆಯದೆ ಹೋದಾಗ ದೇವಸ್ಥಾನದ ಹಿಂಭಾಗದ ಸ್ಥಳದಲ್ಲಿ ನಿಂತು “ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇ” ಎಂದೂ ಹಾಡತೊಡಗಿದರು. ಆಗ ಹಿಂಬಾಗದ ಗೋಡೆ ಬಿರುಕು ಒಡೆದು ಕೃಷ್ಣನ ವಿಗ್ರಹ ತಿರುಗಿತಂತೆ ಅವರ ಭಕ್ತಿಗೆ ಶ್ರೀಕೃಷ್ಣ ಪರಮಾತ್ಮನ ದರ್ಶನ ನೀಡಿರುವ ಕಿಂಡಿಯನ್ನು ಇಂದಿಗೂ “ಕನಕನ ಕಿಂಡಿ” ಎಂದೆ ಪ್ರಸಿದ್ದಿ ಪಡೆದಿದೆ. ಅಂದು ಕಂಡಂತಹ ಉಡುಪಿಯ ಶ್ರೀಕೃಷ್ಣನ ದರ್ಶನವನ್ನು ಇಂದಿಗೂ ಕಾಣಬಹುದು.