ಕನ್ನಡ ರಾಜ್ಯೋತ್ಸವ

ಕನ್ನಡ ರಾಜ್ಯೋತ್ಸವದ ಆಚರಣೆಯ ಹಿಂದೆ ಕರ್ನಾಟಕ ಏಕೀಕರಣ ಹೋರಾಟದ ಸುದೀರ್ಘ ಇತಿಹಾಸವಿದೆ. ಏಕೀಕರಣಕ್ಕೆ ಮೊದಲು ಕನ್ನಡ ಮಾತನಾಡುವ ಪ್ರದೇಶಗಳು ಇಪ್ಪತ್ತು ವಿವಿಧ ಭಾಗಗಳಲ್ಲಿ ಹಂಚಿ ಹೋಗಿದ್ದವು. ಇದನ್ನು ಒಂದುಗೂಡಿಸುವ ಪ್ರಯತ್ನಗಳು 1830ರ ಸುಮಾರಿಗೆ ಆರಂಭವಾದವು. 1890ರಲ್ಲಿ ಸ್ಥಾಪನೆಯಾದ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ, 1915ರಲ್ಲಿ ಸ್ಥಾಪನೆಯಾದ ಕನ್ನಡ ಸಾಹಿತ್ಯ ಪರಿಷತ್ತು ಈ ಹೋರಾಟಕ್ಕೆ ಪ್ರಧಾನ ನೆಲೆ ಎನ್ನಿಸಿಕೊಂಡವು. ಅನೇಕ ಕನ್ನಡ ಪತ್ರಿಕೆಗಳೂ ಕೂಡ ಏಕೀಕರಣದ ಕಾವನ್ನು ಹೆಚ್ಚಿಸಿದವು. 1924ರಲ್ಲಿ ಕರ್ನಾಟಕ ಏಕೀಕರಣ ಸಭಾ ಆರಂಭವಾಗಿ ನಾಡಿನ ಅನೇಕ ಕಡೆ ಸಮಾವೇಶಗಳನ್ನು ನಡೆಸಿತು. 1937ರ ಅಕ್ಟೋಬರ್ 10ರಂದು ಕರ್ನಾಟಕ ಏಕೀಕರಣ ದಿವಸವನ್ನು ನಾಡಿನೆಲ್ಲೆಡೆ ಆಚರಿಸಿ ಏಕೀಕರಣಕ್ಕೆ ಸಂಕಲ್ಪ ಮಾಡಲಾಯಿತು.

ಸ್ವಾತಂತ್ರ್ಯಾನಂತರ ಕೂಡ ಏಕೀಕರಣವಾಗದೆ ಹೋದಾಗ ಕನ್ನಡಿಗರ ಆಕ್ರೋಶ ಮೇರೆ ಮೀರಿತು. ಹೋರಾಟ ತೀವ್ರ ಸ್ವರೂಪ ಪಡೆಯಿತು. 1952ರಂದು ಆಂಧ‍್ರ ಪ್ರದೇಶದ ಸ್ಥಾಪನೆಗೆ ಉಪವಾಸ ಮುಷ್ಕರ ಕುಳಿತ ಪೊಟ್ಟಿ ಶ‍್ರೀರಾಮಲು 58 ದಿನಗಳ ಉಪವಾಸದ ನಂತರ ನಿಧನರಾದರು. ಆಗ ಭುಗಿಲೆದ್ದ ಆಕ್ರೋಶದ ಕಾರಣ ಆಂಧ್ರ ಪ್ರದೇಶವು ರೂಪುಗೊಂಡಿತು. ಇದನ್ನು ಅನುಸರಿಸಿ 1953ರಲ್ಲಿ ಅಂದಾನಪ್ಪ ದೊಡ್ಡಮೇಟಿ ಅವರು ತಮ್ಮ ಊರಾದ ಜಕ್ಕಲಿಯಲ್ಲಿ ಉಪವಾಸ ಮುಷ್ಕರವನ್ನು ಆರಂಭಿಸಿದರು. ನಾಡಿನ ಎಲ್ಲೆಡೆ ಅದರ ಕಾವು ಹಬ್ಬಿತು. ದೇಶದೆಲ್ಲೆಡೆ ಇಂತಹ ಸ್ಥಿತಿ ರೂಪುಗೊಂಡಿದ್ದರಿಂದ 1953ರ ಡಿಸಂಬರ್ 23ರಂದು ರಾಜ್ಯ ಪುನರ್ವಿಂಗಡಣಾ ಅಯೋಗ ರಚನೆಯಾಯಿತು. ಈ ಸಮಿತಿಯ ವರದಿಯಂತೆ 1956ರ ನವಂಬರ್ ಒಂದರಂದು ವಿಶಾಲ ಮೈಸೂರು ರಾಜ್ಯ ರೂಪುಗೊಂಡಿತು. ಆದರೆ ಕನ್ನಡಿಗರ ಬಯಕೆಯಂತೆ ಕರ್ನಾಟಕ ಎನ್ನುವ ಹೆಸರು ಬರಲಿಲ್ಲ. ಇದಕ್ಕಾಗಿ ಹೋರಾಟವು ಮುಂದುವರೆಯಿತು. ಕೊನೆಗೆ 1973ರ ನವಂಬರ್ ಒಂದರಂದು ಕರ್ನಾಟಕ ಎಂಬ ಅಧಿಕೃತ ನಾಮಕರಣ ನಡೆಯಿತು.

ಕರ್ನಾಟಕ ಏಕೀಕರಣಕ್ಕೆ ಹಲವು ಮಹನೀಯರು ದುಡಿದಿದ್ದಾರೆ. ಅಲೂರು ವೆಂಕಟರಾಯರಂತೂ ಇಡೀ ತಮ್ಮ ಜೀವನವನ್ನೇ ಅದಕ್ಕಾಗಿ ಮುಡಿಪಾಗಿಟ್ಟಿದ್ದರು. ಇದಕ್ಕಾಗಿ ಅವರನ್ನು ‘ಕನ್ನಡ ಕುಲಪುರೋಹಿತ’ ಎಂದೂ ಕೂಡ ಕರೆಯಲಾಗುತ್ತದೆ. ಅವರ ಜೊತೆಗೆ ಕಡಪಾ ರಾಘವೇಂದ್ರ ರಾಯರು, ಮುದವೀಡ ಕೃಷ್ಣರಾಯರು, ಫ.ಗ.ಹಳಕಟ್ಟಿ, ಬೆನಗಲ್ ರಾಮರಾವ್, ಮಂಗಳವಾಡ ಶ್ರೀನಿವಾಸ ರಾವ್, ಅಂದಾನಪ್ಪ ದೊಡ್ಡಮೇಟಿ ಮೊದಲಾದ ಅನೇಕರು ತೀವ್ರ ಹೋರಾ ಟವನ್ನು ನಡೆಸಿದರು. ಕರ್ನಾಟಕ ಪತ್ರ, ರಾಜಹಂಸ, ವಾಗ್ಭೂಷಣ, ವಾಗ್ಧೇವಿ, ವಿಜಯ, ಕನ್ನಡ ನುಡಿ, ವಿಶ್ವ ಕರ್ನಾಟಕ, ಸ್ವತಂತ್ರ ಕರ್ನಾಟಕ, ಕಂಠೀರವ, ನವಭಾರತ, ಸಾಧ್ವಿ ಮೊದಲಾದ ಪತ್ರಿಕೆಗಳು ಏಕೀಕರಣ ಹೋರಾಟವನ್ನು ಜೀವಂತವಾಗಿಟ್ಟವು. ಹುಯಿಲುಗೋಳ ನಾರಾಯಣ ರಾಯರ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಮತ್ತು ಕುವೆಂಪು ಅವರ ‘ಜೈ ಭಾರತ ಜನನಿಯ ತನುಜಾತೆ’ ಗೀತೆಗಳು ಹೋರಾಟದ ತಾರಕ ಮಂತ್ರಗಳಾಗಿದ್ದವು.

ಹೀಗೆ ಶತಮಾನದ ಹೋರಾಟದ ಫಲವಾಗಿ ಒಂದುಗೂಡಿರುವ ನಾಡು-ನುಡಿಯ ಹಿರಿಯಮೆಯನ್ನು ಸಾರುವ ಮತ್ತು ಅದಕ್ಕಾಗಿ ಮತ್ತೆ ನಮ್ಮ ಸಮರ್ಪಿಸಿ ಕೊಳ್ಳುವ ಆಚರಣೆಯೇ ‘ಕನ್ನಡ ರಾಜ್ಯೋತ್ಸವ.