ರಂಜಾನ್ ಅಥವಾ ಈದ್-ಉಲ್-ಫಿತರ್

ರಂಜಾನ್ ಅಥವ ರಮದಾನ್ ಇಸ್ಲಾಮಿಕ್ ಕ್ಯಾಲೆಂಡರ್‍ನಲ್ಲಿ ಒಂಬತ್ತನೇ ತಿಂಗಳು. ರಮ್‌ದ್‌ ಎಂದರೆ ಅರಬ್‌ ಭಾಷೆಯಲ್ಲಿ ‘ಅತಿಯಾದ ಶಾಖ’ ಎಂದರ್ಥ. ಈ ಪದದಿಂದ ಹುಟ್ಟಿದ ರಮ್‌ದಾನ್‌ ನ ಅರ್ಥವೂ ಕೂಡ ಭಿನ್ನವಾಗಿದೆ. ರಮ್‌ದಾನ್‌ ಎಂದರೆ ‘ಬಿಸಿಲಿಗೆ ಕಾದ ಮರಳು’ ಎಂಬರ್ಥವನ್ನು ಹೊಂದಿದೆ. ಬಿಸಿಲಿನ ಶಾಖ ನೆಲವನ್ನು ಸುಡುವಂತೆ ಮನುಷ್ಯನಲ್ಲಿ ಉದ್ಭವಿಸುವ ಹಸುವಿನ ಶಾಖ ಮಾನವನಲ್ಲಿನ ಕೆಟ್ಟ ಆಲೋಚನೆಗಳನ್ನು ಸುಟ್ಟು ಹಾಕುತ್ತದೆ ಎಂಬ ನಂಬಿಕೆ ಮುಸ್ಲೀಂರದ್ದು. ಮುಸ್ಲಿಂ ಬಾಂಧವರು ರಂಜಾನ್ ಸಮಯದಲ್ಲಿ ಒಂದು ತಿಂಗಳುಗಳ ಕಾಲ ಉಪವಾಸ ವ್ರತವನ್ನು ಆಚರಿಸುತ್ತಾರೆ. ಈ ಉಪವಾಸ ಮಾಡುವುದರಿಂದ ಅಲ್ಲಾ ನು ಪ್ರಸನ್ನನಾಗಿ ನಮಗೆ ಶುಭ ಫಲವನ್ನೇ ನೀಡುತ್ತಾನೆಂಬೂದು ಅವರ ನಂಬಿಕೆ. ಈ ಪವಿತ್ರ ಮಾಸದಲ್ಲಿ ಅವರು ಸೂರ್ಯೋದಯಕ್ಕೂ ಮುನ್ನ ಎದ್ದು, ಆಹಾರವನ್ನು ಸೇವಿಸಿದರೆ ಇನ್ನು ಅವರು ಆಹಾರವನ್ನು ಸೇವಿಸುವುದು ಸೂರ್ಯಾಸ್ತದ ನಂತರವೇ. ಅಲ್ಲಿಯವರೆಗೆ ಅವರು ಏನನ್ನೂ ಕೂಡ ಸೇವಿಸಲಾರರು. ಸತತ ಒಂದು ತಿಂಗಳ ಕಾಲ ಮುಸ್ಲಿಂ ರು ಹಗಲಿನಲ್ಲಿ ಅನ್ನ, ಅಹಾರ, ಆಸೆ, ಲೈಂಗಿಕ ಕಾಮನೆಗಳನ್ನು ತೊರೆದು, ಭಕ್ತಿಯಿಂದ ಪ್ರತಿದಿನವೂ 5 ಬಾರಿ ನಮಾಜ್‌ ಮಾಡುತ್ತಾರೆ.

ರಮ್‌ದಾನ್‌ ನ ಒಮದು ತಿಂಗಳ ಆಚರಣೆಗೆ ತೆರೆ ಎಳೆಯುವ ಹಬ್ಬವೇ ಈ ಈದ್‌ ಉಲ್‌ ಫಿತರ್‌. ತಮ್ಮ ಒಂದು ತಿಂಗಳ ಉಪವಾಸಕ್ಕೆ ನಾಂದಿ ಹಾಡುತ್ತಿದ್ದೇವೆಂದು ಮುಸ್ಲಿಂ ಬಾಂಧವರು ಈ ಹಬ್ಬದ ಆಚರಣೆಯ ಮೂಲಕ ತೋರಿಸಿಕೊಡುತ್ತಾರೆ. ಈದ್‌ ಎಂದರೆ ಅರಬ್‌ ಭಾಷೆಯಲ್ಲಿ ಸಂತೋಷ, ಆನಂದ ಮತ್ತೆ ಮರಳಿ ಬರುವುದು ಎಂದರ್ಥ. ಹಾಗೂ ಫಿತರ್‌ ಎಂದರೆ ಕೈಲಾಗದಿರುವವರಿಗೆ ದಾನ ಮಾಡುವುದು ಎಂದರ್ಥ.

ಈ ಹಬ್ಬದಲ್ಲಿ ಶ್ರೀಮಂತ, ಬಡವ, ಬಲ್ಲಿದ ಎನ್ನದೇ ಎಲ್ಲರೂ ಕೂಡ ತಮ್ಮ ಕೈಲಾದಷ್ಟು ದಾನವನ್ನನು ಮಾಡುತ್ತಾರೆ. ಅದರಲ್ಲೂ ಮುಖ್ಯವಾಗಿ ನಿರಾಶ್ರಿತರಿಗೆ, ತುಂಬಾ ಬಡವರಿಗೆ ಈ ಸಮಯದಲ್ಲಿ ದಾನವನ್ನು ಮಾಡಲಾಗುತ್ತದೆ. ಇದಕ್ಕೆ ಜಕಾತ್‌ ಎಂದೂ ಹೇಳುತ್ತಾರೆ. ಈ ದಾನದಲ್ಲಿ 2 ರಿಂದ 5 ಕೆ.ಜಿಯಷ್ಟು ಅಕ್ಕಿ ಅಥವಾ ಗೋಧಿಯನ್ನು ಬಡವರಿಗೆ ಹಂಚಲಾಗುತ್ತದೆ. ಹಬ್ಬದ ದಿನ ಮಾಡುವ ವಿಶೇಷ ಪ್ರಾರ್ಥನೆ ಅಥವಾ ನಮಾಜ್‌ ಗೂ ಮುನ್ನವೇ ಈ ದಾನವನ್ನು ನೀಡಬೇಕು. ಈ ಈದ್‌ ಹಬ್ಬವು ಚಂದ್ರನನ್ನು ಆಧರಿಸಿರುತ್ತದೆ.

ಈ ಮೇಲೆ ಹೇಳಿರುವ ಹಾಗೇ ಉಪವಾಸದ ತಿಂಗಳ ಕೊನೆಯಲ್ಲಿ ಯಾವಾಗ ಚಂದ್ರ ಕಾಣಿಸಿಕೊಳ್ಳುತ್ತಾನೋ ಅಂದು ಉಪವಾಸವನ್ನು ತೆಗೆದು ಹಾಕಿ, ಮರುದಿನ ಈ ಹಬ್ಬವನ್ನು ಆಚರಿಸಲಾಗುತ್ತದೆ. ಒಂದು ತಿಂಗಳ ರಮ್‌ದಾನ್‌ ಉಪವಾಸದಲ್ಲಿದ್ದ ಮುಸ್ಲಿಂರಿಗೆ ಈದ್‌ ಉಲ್‌ ಫಿತರ್‌ ಹಬ್ಬದಲ್ಲೇನೋ ಹೊಸ ಚೈತನ್ಯ, ಸಂಭ್ರಮ, ಸಡಗರ. ಈದ್‌ ಉಲ್‌ ಫಿತರ್‌ ನಂದು ಅಲ್ಲಾಹುವಿಗೆ ವಿಶೇಷ ನಮಾಜ್‌ ಸಲ್ಲಿಸಿ, ವಿವಿಧ ಬಗೆಯ ಖಾದ್ಯಗಳನ್ನು, ಬಿರ್ಯಾನಿಗಳನ್ನು ತಯಾರಿಸಿ ಮನೆಯವರೆಲ್ಲರೂ ಕೂಡ ಜೊತೆಯಾಗಿ ಸೇರಿ ಊಟ ಮಾಡುತ್ತಾರೆ.