ಕ್ರಿಸ್ ಮಸ್

ಕ್ರಿಸ್ ಮಸ್ ಎಂದರೆ ಕ್ರಿಸ್ತ ಜಯಂತಿ ಅಥವಾ ಯೇಸುಕ್ರಿಸ್ತನು ಹುಟ್ಟಿದ ಸಂಭ್ರಮದ ದಿನ. ಜಗತ್ತಿನಾದ್ಯಂತ ಪ್ರತಿ ವರ್ಷದ ಡಿಸೆಂಬರ್ ತಿಂಗಳ ಇಪ್ಪತ್ತೈದನೇ ದಿನವನ್ನು ಯೇಸುಕ್ರಿಸ್ತನ ಹುಟ್ಟುಹಬ್ಬವಾಗಿ ಆಚರಿಸಲಾಗುತ್ತದೆ. ಕ್ರಿಸ್ ಮಸ್ ಹಬ್ಬದ ಹಿಂದಿನ ದಿನವನ್ನು ಕ್ರಿಸ್ ಮಸ್ ಈವ್ ಎಂಬ ಹೆಸರಿನಲ್ಲಿ ಆಚರಿಸಲಾಗುತ್ತದೆ. ಹಲವು ದೇಶಗಳಲ್ಲಿ ಅನೇಕ ಧಾರ್ಮಿಕ, ರಾಷ್ಟ್ರೀಯ ಮತ್ತು ಜಾತ್ಯತೀತ ಸಂಪ್ರದಾಯಗಳು ಹಾಗೂ ಆಚರಣೆಗಳು ಕ್ರಿಸ್ಮಸ್ಸಿನೊಂದಿಗೆ ಸಂಬಂಧ ಹೊಂದಿವೆ. ಕ್ರಿಸ್ ಮಸ್ ಜೊತೆಗೆ ಈ ಕೆಳಕಂಡ ಆಚರಣೆಗಳೂ ರೂಢಿಯಲ್ಲಿವೆ.

ಮನೆಯಲ್ಲಿ ಪುಟ್ಟದಾದ ಕೊಟ್ಟಿಗೆ ಕಟ್ಟಿ ಕ್ರಿಸ್ತಜನನದ ಗೊಂಬೆಗಳನ್ನಿಡುವುದು ಕ್ರಿಸ್ ಮಸ್ ವೃಕ್ಷ ಇಟ್ಟು ಅಲಂಕರಿಸುವುದು ಮಿಸಲ್ಟೋ ಮೊದಲಾದ ಮರಗಳ ಎಲೆಗಳ ತೋರಣ ಕಟ್ಟುವುದು ಕ್ರಿಸ್ಮಸ್ಸಿಗೆಂದೇ ತಯಾರಿಸಿದ ವಿಶಿಷ್ಟ ತಿಂಡಿಗಳನ್ನು ಹಾಗೂ ಉಡುಗೊರೆಗಳನ್ನು ಹಂಚುವುದು ಉಡುಗೊರೆಗಳನ್ನು ಕೊಡುವುದು ಮತ್ತು ಪಡೆಯುವುದು ಕ್ರಿಸ್ಮಸ್ನ ವಿಶೇಷಗಳಲ್ಲೊಂದು. ಮಕ್ಕಳಿಗೆ ಉಡುಗೊರೆಗಳನ್ನು ತಂದುಕೊಡಲು ಸಾಂಟಾ ಕ್ಲಾಸ್ ಬರುತ್ತಾನೆ ಎಂಬುದು ಜನಪ್ರಿಯ ನಂಬುಗೆ.

“ಸಾಂಟಾ ಕ್ಲಾಸ್” ಎಂಬುದು “ಸಂತ ನಿಕೋಲಾಸ್” ಎಂಬುದರ ಅಪಭ್ರಂಶ.ಸಂತ ನಿಕೋಲಾಸ್ ನಾಲ್ಕನೆ ಶತಮಾನದಲ್ಲಿ ಜೀವಿಸಿದ್ದ ಒಬ್ಬ ಕ್ರೈಸ್ತ ಪಾದ್ರಿ. ಮಕ್ಕಳ ಮೇಲಿನ ಪ್ರೀತಿಗೆ ಸಂತ ನಿಕೋಲಾಸ್ ಪ್ರಸಿದ್ಧ. ಹಾಗಾಗಿ ಪ್ರತಿ ವರ್ಷ ಕ್ರಿಸ್ ಮಸ್ ದಿನದಂದು ಆತ ಮಕ್ಕಳಿಗೆ ಉಡುಗೊರೆ ತಂದುಕೊಡುತ್ತಾನೆ ಎನ್ನುವುದು ನಂಬಿಕೆ.

ಈ ದಿನದಂದು ಮನೆಗಳ ಮುಂದೆ ಕ್ರಿಸ್ ಮಸ್ ವೃಕ್ಷವನ್ನು ತಂದು ನಿಲ್ಲಿಸುವುದು ವಾಡಿಕೆ. ಈ ವೃಕ್ಷವನ್ನು ದೀಪಗಳು ಮತ್ತು ಇತರ ವಸ್ತುಗಳಿಂದ ಅಲಂಕೃತಗೊಳಿಸಲಾಗುತ್ತದೆ. ಅನೇಕ ಕಡೆಗಳಲ್ಲಿ ಮನೆಯ ಹೊರಗೂ ದೀಪಗಳ ತೋರಣ ಕಟ್ಟುವುದು ವಾಡಿಕೆ. ಹಾಗೆಯೇ ಕ್ರಿಸ್ ಮಸ್ ಹಬ್ಬದ ಅಂಗವಾಗಿ ಕೆಲವು ಹೂವುಗಳು ಮತ್ತು ಸಸ್ಯಗಳು (ಅಮರಿಲ್ಲಿಸ್, ಕ್ರಿಸ್ ಮಸ್ ಕ್ಯಾಕ್ಟಸ್) ಮೊದಲಾದವುಗಳನ್ನು ತರಲಾಗುತ್ತದೆ.