ಭಾರತೀಯ
ಸಂಸ್ಕೃತಿಯ ತಾಯಿ ಬೇರು ಎಂದು ಕರೆಸಿ ಕೊಂಡಿರುವ ರಾಮಾಯಣ ಕೃತಿಯನ್ನು ರಚಿಸಿದವರೇ ವಾಲ್ಮೀಕಿ. ವಾಲ್ಮೀಕಿಯ
ಜೀವನದ ಕುರಿತಾಗಿ ಅನೇಕ ದಂತಕಥೆಗಳಿವೆ. ಅದರಲ್ಲಿ ಒಂದು ಕಥೆಯ ಪ್ರಕಾರ, ವಾಲ್ಮೀಕಿ ಋಷಿಯಾಗುವ ಮೊದಲು
ರತ್ನಾಕರ. ನಾರದನ ಉಪದೇಶದಿಂದ ರತ್ನಾಕರನಿಗೆ ಜ್ಞಾನೋದಯವಾಯಿತೆಂದು ಹೇಳಲಾಗುತ್ತದೆ. ವಾಲ್ಮೀಕಿ ಮಹರ್ಷಿಗಳು
ಪ್ರಚೇತಸ ಮುನಿಯ ಮಗ. ಹೀಗಾಗಿ ಅವರಿಗೆ ‘ಪ್ರಾಚೇತಸ’ ಎಂಬ ಹೆಸರಿದೆ. ಪರಮಾತ್ಮನನ್ನು ಕುರಿತು ಬಹಳ
ವರ್ಷಗಳ ಕಾಲ ತಪಸ್ಸು ಮಾಡುತ್ತಿದ್ದಾಗ ಅವರ ಸುತ್ತ ಹುತ್ತ ಬೆಳೆದಿತ್ತು. ಹುತ್ತ(ಸಂಸ್ಕೃತದಲ್ಲಿ-ವಲ್ಮೀಕ)ವನ್ನು
ಭೇದಿಸಿಕೊಂಡು ಹೊರಗೆ ಬಂದಿದ್ದರಿಂದ ‘ವಾಲ್ಮೀಕಿ’ ಎಂಬ ಹೆಸರು ಬಂತು.
ವಾಲ್ಮೀಕಿ
ಮಹರ್ಷಿಗಳು ತಮಸಾ ನದೀತೀರದಲ್ಲಿ ಸಂತೋಷವಾಗಿ ಹಾರಾಡುತ್ತಿದ್ದ ಕ್ರೌಂಚಪಕ್ಷಿ ಜೋಡಿಯನ್ನು ನೋಡುತ್ತಿದ್ದಾಗ,
ಬೇಡನೊಬ್ಬನು ಬಂದು ಬಾಣ ಹೂಡಿ ಅವುಗಳಲ್ಲಿ ಗಂಡು ಹಕ್ಕಿಯನ್ನು ಕೊಂದು ಬಿಡುತ್ತಾನೆ. ಅದರ ಸಂಗಾತಿ
ಹೆಣ್ಣು ಹಕ್ಕಿಯು ಸಂಕಟದಿಂದ ಕೂಗಲಾರಂಭಿಸುತ್ತದೆ. ಈ ಹೃದಯ ವಿದ್ರಾವಕ ಸನ್ನಿವೇಶವನ್ನು ನೋಡಿ, ಕರುಣೆ,
ದುಃಖ,ಕೋಪದಿಂದ ಮಹರ್ಷಿಗಳು ಬೇಡನನ್ನು ಶಪಿಸುವಾಗ, ಶೋಕದಿಂದ ಕೆಳಕಂಡ ವಾಕ್ಯವನ್ನು ಶ್ಲೋಕ ರೂಪದಲ್ಲಿ
ಉದ್ಗರಿಸುತ್ತಾರೆ.
ಈ ಶ್ಲೋಕವು
ಗದ್ಯರೂಪದಲ್ಲಿರದೆ, ಪ್ರಾಸಬದ್ಧವಾಗಿ,ಲಯ-ಛಂದಸ್ಸುಗಳಿಂದ ಕೂಡಿತ್ತು.
ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ
|
ಯತ್ಕ್ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮ್ ||
ಆ ವೇಳೆಗೆ
ಬ್ರಹ್ಮದೇವ ಮಹರ್ಷಿಗಳ ಆಶ್ರಮಕ್ಕೆ ಬಂದು ಇದೇ ಶ್ಲೋಕರೂಪದಲ್ಲಿ ರಾಮಾಯಣ ಕಾವ್ಯ ರಚಿಸಲು ಹೇಳುತ್ತಾರೆ.
ನಾರದರು ತಮಗೆ ಸಂಗ್ರಹವಾಗಿ ಹೇಳಿದ್ದ ರಾಮನ ಕಥೆಯನ್ನು ವಾಲ್ಮೀಕಿ ಮಹರ್ಷಿಗಳು ೨೪,೦೦೦ ಶ್ಲೋಕಗಳನ್ನೊಳಗೊಂಡ
ಮಹಾಕಾವ್ಯವಾಗಿ ಬರೆದರು.
ವಾಲ್ಮೀಕಿ ಮಹರ್ಷಿಯು ರಚಿಸಿದ ರಾಮಾಯಣವು ಅನೇಕ ಸಾಧಕರಿಗೆ ಮಾರ್ಗಸೂಚಿಯಾಗಿದೆ ವಾಲ್ಮೀಕಿ ರಾಮಾಯಣವನ್ನು ಆಧರಿಸಿಕೊಂಡು ಹೋರಬಂದಿರುವ ಅನೇಕ ಪದ್ಯ, ಪ್ರಬಂಧಗಳು, ಕಾವ್ಯಗಳು, ನಾಟಕಗಳು, ಗ್ರಂಥಗಳು, ಹಾಗೂ ಮುಂತಾದ ನಾನಾ ವಿಧದ ಕಾವ್ಯ ಕೃತಿಗಳಿಗೆ ವಾಲ್ಮೀಕಿ ರಾಮಾಯಣ ಜನ್ಮದಾತೆಯಾಗಿದೆ. ಹಾಗೂ ವಾಲ್ಮೀಕಿ ರಚಿಸಿದ ರಾಮಾಯಣ ಮಹಾಕಾವ್ಯವು “ಧರ್ಮ ಮಾರ್ಗದಲ್ಲಿ ಧಾರ್ಮಿಕ, ಸಾಮಾಜೀಕ ಸದ್ಗುಣಗಳನ್ನು ಪ್ರತಿಪಾದಿಸುವ ದಾರಿ ದೀಪವಾಗಿ, ಜ್ಞಾನದ ದಾರಿ ತೋರಿಸುತ್ತಿದೆ” ಎಂಬುದು ನಿತ್ಯ ಸತ್ಯ. ವಾಲ್ಮೀಕಿ ಜಯಂತಿ ಆ ದ್ರಷ್ಟಾರರನ್ನು ಸ್ಮರಣೆ ಮಾಡುವಂತಹ ದಿನ.