ಮಹಾವೀರ ಜಯಂತಿ

ಜೈನ ಧರ್ಮದ ಪ್ರಮುಖ ಆಚರಣೆ ಮಹಾವೀರ ಜಯಂತಿ. ಅದು ಕೊನೆಯ ತೀರ್ಥಂಕರನಾದ ಭಗವಾನ್ ಮಹಾವೀರರ ಜಯಂತಿ. ಇದುವರೆಗೆ ಸಿಕ್ಕಂತಹ ಜೈನರ ಗ್ರಂಥಗಳು ಮತ್ತು ಜೈನ ಧರ್ಮದ ಲಿಪಿಗಳ ಪ್ರಕಾರ, ಭಗವಾನ್ ಮಹಾವೀರರು ಪಾಟ್ನಾದಿಂದ ಸ್ವಲ್ಪ ದೂರವಿರುವ ಬಿಹಾರಿನ ಕುಂದಲಾಪುರದಲ್ಲಿ ಭಾರತೀಯ ಪಂಚಾಂಗದ ಚೈತ್ರ ಮಾಸದ ತ್ರಯೋದಶಿಯಂದು ಜನ್ಮ ತಾಳಿದರು. ಆ ಸಮಯದಲ್ಲಿ ವೈಶಾಲಿ ಎಂಬ ಸ್ಥಳ ಬಿಹಾರ್ ರಾಜ್ಯದ ರಾಜಧಾನಿಯಾಗಿತ್ತು. ವೈಶಾಲಿಯ ರಾಜ ಸಿದ್ದಾರ್ಥ ಮತ್ತು ರಾಣಿ ತ್ರಿಶಲ. ಇವರಿಬ್ಬರಿಗೆ ಹುಟ್ಟಿದ ಮಗುವನ್ನು ವರ್ಧಮಾನ ಎಂದು ನಾಮಕರಣ ಮಾಡಿದರು. ಶ್ವೇತಾಂಬರ ಜೈನರ ಪ್ರಕಾರ ಕ್ರಿಸ್ತ ಪೂರ್ವ 599 ರಲ್ಲಿ ಮಹಾವೀರ ಜನಿಸಿದರು. ಅದರಂತೆ ದಿಗಂಬರ ಪಂಥದವರ ಪ್ರಕಾರ ಕ್ರಿಸ್ತ ಪೂರ್ವ 615 ಭಗವಾನ್ ಮಹಾವೀರರು ಜನಿಸಿದರು.

ರಾಜ ಕುಮಾರರರಾಗಿ ಜನಿಸಿದ ವರ್ಧಮಾನರು ತಮ್ಮ ಮೂವತ್ತನೇ ವರ್ಷದಲ್ಲಿ ಸಿಂಹಾಸನವನ್ನು ತೊರೆದು ವೈರಾಗ್ಯವನ್ನು ತಾಳಿ ಮುಕ್ತಿ ಮಾರ್ಗವನ್ನು ಅರಸಿದರು. 12 ವರ್ಷಗಳ ಕಾಲ ತಪಸ್ಸನ್ನುಆಚರಿಸಿದ ನಂತರ ಅವರಿಗೆ ಕೇವಲ ಜ್ಞಾನವು ಲಭಿಸಿತು.ಅಹಿಂಸಾ ಮಾರ್ಗವನ್ನು ಅವರು ಉಪದೇಶಿಸಿದರು. ಹಲವು ಜೈನ ಧಾರ್ಮಿಕ ಗ್ರಂಥಗಳ ಪ್ರಕಾರ ಮಹಾವೀರನು ತನ್ನ 72ವಯಸ್ಸಿಗೆ ಜ್ಞಾನೋದಯವನ್ನು ಪಡೆದನು. ಜೈನ ಸಾಹಿತ್ಯದಲ್ಲಿ ಇದನ್ನು ‘ನಿರ್ವಾಣ’ ಎಂದು ಕರೆಯುತ್ತಾರೆ.

ಮಹಾವೀರ ಜಯಂತಿ ಜೈನರಿಗೆ ಬಹು ದೊಡ್ಡ ಹಬ್ಬ. ಈ ಸಮಯದಲ್ಲಿ ಅವರು ಹಲವಾರು ಬಗೆಯ ಸಂಭ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ. ದೂರದ ಬಂಧು - ಬಳಗ, ನೆಂಟರು - ಇಷ್ಟರು ಮತ್ತು ಸ್ನೇಹಿತರುಗಳು ಒಟ್ಟಿಗೆ ಕೂಡಿ ಹಬ್ಬ ಆಚರಿಸುತ್ತಾರೆ. ಈ ಸಂದರ್ಭದಲ್ಲಿ ಎಲ್ಲರೂ ಭಗವಾನ್ ಮಹಾವೀರನನ್ನು ಭಕ್ತಿಯಿಂದ ಪೂಜಿಸಿ ಸ್ಮರಿಸುತ್ತಾರೆ. ಪ್ರತಿಯೊಬ್ಬ ಜೈನರ ಮನೆಯಲ್ಲೂ ಕೂಡ ಭಗವಾನ್ ಮಹಾವೀರನ ಪ್ರತಿಮೆ ಇಟ್ಟು, ಅದಕ್ಕೆ ಸುಗಂಧ ಭರಿತವಾದ ತೈಲದಿಂದ ಅಭ್ಯಂಜನ ಸ್ನಾನ ಮಾಡಿಸಿ ತಮ್ಮ ಪರಿಶುದ್ಧವಾದ ಭಕ್ತಿಯನ್ನು ಸಮರ್ಪಿಸಿ ಪೂಜಿಸುತ್ತಾರೆ. ಜೈನರ ಪವಿತ್ರ ಕ್ಷೇತ್ರಗಳಿಗೆ ಭೇಟಿ ನೀಡುತ್ತಾರೆ.