ಸಂಕಷ್ಟ ಚತುರ್ಥಿ


ಚೌತಿ ಎಂದ ಕೂಡಲೇ ಎಲ್ಲರ ಮನದಲ್ಲಿ ಮೂಡುವ ಮೊದಲ ಚಿತ್ರವೇ ಗಣಪತಿ.
ಎರಡು ವಿಧದಲ್ಲಿ ಚತುರ್ಥಿ ನೋಡಬಹುದು.
೧.ಶುಕ್ಲ ಚೌತಿ
ಭಾದ್ರಪದ ಈ ಶುಕ್ಲ ಚೌತಿ ವಿನಾಯಕ ಚೌತಿ.

೨.ಕೃಷ್ಣ ಚೌತಿ

ಕೃಷ್ಣ ಪಕ್ಷದಲ್ಲಿ ಬರುವ ಚೌತಿಯನ್ನು ‘ಸಂಕಷ್ಟ ಚತುರ್ಥಿ’ ಅಥವಾ  ‘ಕೃಷ್ಣ ಚೌತಿ’ ಅಥವಾ ‘ಸಂಕಷ್ಟಿ ಚೌತಿ’ ಅಥವಾ ‘ಸಂಕಷ್ಟಹರ ಚತುರ್ಥಿ’ ಎಂತಲೂ ಕರೆಯಲಾಗುತ್ತದೆ. ಮಂಗಳವಾರ ಕೃಷ್ಣ ಚೌತಿ ಬಂದರೆ ಅದಕ್ಕೆ ‘ಅಂಗಾರಕ ಸಂಕಷ್ಟಿ’ ಎಂದು ಕರೆಯುತ್ತಾರೆ.

ಸಂಕಷ್ಟ ಚತುರ್ಥಿ ವ್ರತ:

ಹೆಸರೇ ಹೇಳುವಂತೆ ಸಂಕಷ್ಟಗಳನ್ನು ಹರಣ/ಪರಿಹಾರ ಮಾಡುವಂತಹ ವ್ರತ. ಸಂಕಷ್ಟ ಚೌತಿ ವ್ರತ / ಸಂಕಷ್ಟ ಗಣಪತಿ ವ್ರತ ಎಂದೂ ಕರೆಯುತ್ತಾರೆ. ಈ ವ್ರತದಲ್ಲಿ ಶ್ರೀ ವಿನಾಯಕನಿಗೆ ಪೂಜೆ ನಡೆಯುತ್ತದೆ. ಪ್ರತಿ ತಿಂಗಳು ಬಹುಳ/ಕೃಷ್ಣ ಪಕ್ಷದ ಚತುರ್ಥಿ ದಿನ ಈ ವ್ರತವನ್ನು ಮಾಡುತ್ತಾರೆ. ಈ ವ್ರತವನ್ನು ಶ್ರಾವಣ ಬಹುಳ ಚತುರ್ಥಿ ದಿನ ಪ್ರಾರಂಭ ಮಾಡಬೇಕು ಅಂತ ಇದೆ.

ಈ ದಿನ ಬೆಳಿಗ್ಗೆ ಎಳ್ಳನ್ನು ಅರೆದು ಹಾಲು ಅಥವಾ ಎಣ್ಣೆಯಲ್ಲಿ ಬೆರೆಸಿ ತಲೆಗೆ ಹಚ್ಚಿ ಮಂಗಳ ಸ್ನಾನ ಮಾಡಬೇಕು. ಸಂಕಷ್ಟ ಗಣಪತಿ ವ್ರತ ಮಾಡುತ್ತಿದ್ದೀನಿ ಅಂತ ಸಂಕಲ್ಪ ಮಾಡಬೇಕು. ದಿನವೆಲ್ಲ ಉಪವಾಸ ಇರಬೇಕು. ಇದು ಕಷ್ಟವಾದರೆ ಹಾಲು, ಹಣ್ಣು ಸೇವಿಸಬಹುದು. ಗಣಪತಿ ಪೂಜೆಯನ್ನು ಚಂದ್ರನ ಪ್ರಕಾಶದಲ್ಲಿ ಮಾಡಬೇಕು. ಅದ್ದರಿಂದ ಸಂಜೆ/ರಾತ್ರಿ ಚಂದ್ರೋದಯ ಆದ ಮೇಲೆ ಪೂಜೆ ಶುರು ಮಾಡಬೇಕು.

ಪೂಜೆ ಮಾಡುವ ಸ್ಥಳವನ್ನು ಸ್ವಚ್ಚಗೊಳಿಸಿ, ‘ಅಷ್ಟದಳ ಪದ್ಮದ ರಂಗವಲ್ಲಿ’ ಹಾಕಬೇಕು. ಇದರ ಮೇಲೆ ಕಲಶ ಸ್ಥಾಪಿಸಬೇಕು. ಒಂದು ಚೊಂಬಿನಲ್ಲಿ ಸ್ವಲ್ಪ ನೀರು ಹಾಕಿ, ಅದರ ಮೇಲೆ ತೆಂಗಿನಕಾಯಿ ಇಟ್ಟು, ಪಕ್ಕದಲ್ಲಿ ವೀಳ್ಯದ ಎಲೆ ಇಡಬೇಕು. ಈ ಕಳಶವನ್ನು ಅಕ್ಕಿ ಹರಡಿರುವ ತಟ್ಟೆಯ ಮೇಲೆ ಇಡಬೇಕು. ಈ ತಟ್ಟೆಯನ್ನು ಅಷ್ಟದಳ ರಂಗೋಲಿಯ ಮೇಲೆ ಇಡಬೇಕು. ಈ ಕಲಶಕ್ಕೆ ಗಣಪತಿಯನ್ನು ಆವಾಹನೆ ಮಾಡಿ ಕಲಶವನ್ನು ಪೂಜೆ ಮಾಡಬೇಕು.

ಕಲಶ ಸ್ಥಾಪನೆ

ನೈವೇದ್ಯಕ್ಕೆ ಕರಿಗಡುಬು, ಮೋದಕ ಮಾಡಬೇಕು. ಮೈದಾ ಹಿಟ್ಟು ,ರವೆಯನ್ನು ಕಲಸಿ ಕಣಕ (dough) ಮಾಡಿ, ಒಳಗೆ ಹೂರಣ ಸೇರಿಸಿ ಎಣ್ಣೆಯಲ್ಲಿ ಕರಿಯುತ್ತಾರೆ. ಹೂರಣ 2 ತರಹ ಮಾಡುತ್ತಾರೆ - dry (ಕೊಬ್ಬರಿ ತುರಿ, ಸಕ್ಕರೆ, ಏಲಕ್ಕಿ) ಅಥವಾ wet (ಬೆಲ್ಲ, ಕಾಯಿ ತುರಿ, ಏಲಕ್ಕಿ).  ಹೂರಣಕ್ಕೆ ಎಳ್ಳನ್ನು ಸೇರಿಸಬೇಕು. ನೈವೇದ್ಯಕ್ಕೆ ಕನಿಷ್ಠ 10 ಕರಿಗಡುಬು ಹಾಗೂ 10 ಮೋದಕಗಳನ್ನು ಮಾಡಿಕೊಳ್ಳಬೇಕು. ಪೂಜೆಯ ನಂತರ 5 ಕಡುಬು ಹಾಗೂ 5 ಮೋದಕ ದಾನ ಮಾಡಿ, ಉಳಿದ 5 ಕಡುಬು ಮತ್ತು ಮೋದಕಗಳನ್ನು ನೀವು ಪ್ರಸಾದವಾಗಿ ಸ್ವೀಕರಿಸಿ. ಹತ್ತಕ್ಕಿಂತ ಜಾಸ್ತಿ, ಎಷ್ಟು ಬೇಕೋ ಅಷ್ಟು ಕರಿಗಡುಬು ಮತ್ತು ಮೋದಕಗಳನ್ನು ಮಾಡಿಕೊಳ್ಳಬಹುದು.

ಸಂಜೆ/ರಾತ್ರಿ ಚಂದ್ರೋದಯ ಆದ ಮೇಲೆ ಪೂಜೆ ಶುರು ಮಾಡಬೇಕು. ಕಲಶ ಸ್ಥಾಪಿಸಿ, ಜೊತೆಗೆ ಗಣಪತಿ ಪಟ (photo), ವಿಗ್ರಹವನ್ನು ಇಟ್ಟು ವಿನಾಯಕನಿಗೆ ಷೋಡಶೋಪಚಾರದಿಂದ ಪೂಜೆ ಮಾಡಬೇಕು. ಕರಿಗಡುಬು ಮತ್ತು ಮೋದಕವನ್ನು ನೈವೇದ್ಯ ಮಾಡಬೇಕು. ಪೂಜೆಯ ನಂತರ ಕಥಾಶ್ರವಣ ಮಾಡಬೇಕು. ಪೂಜೆಯ ನಂತರ ಊಟ ಮಾಡಬಹುದು.

ಜೊತೆಗೆ ಗಣೇಶನ 21 ಹೆಸರುಗಳನ್ನು ಜಪಿಸಿ ಮತ್ತು ಅದರ ಜೊತೆ ಈ ಶ್ಲೋಕ ಪಠನೆ ಮಾಡುವಂಥದ್ದು.

ಓಂ ಪ್ರಣಮ್ಯ ಶಿರಸಾ ದೇವಂ ಗೌರೀ ಪುತ್ರಂ ವಿನಾಯಕಂ

ಭಕ್ತವಾಸಂ ಸ್ಮರೇನ್ನಿತ್ಯಂ ಆಯುಃ ಕಾಮಾರ್ಥ ಸಿದ್ಧಯೇ

ಪ್ರಥಮಂ ವಕ್ರತುಂಡಂ ಚ ಏಕದಂತಂ ದ್ವಿತೀಯಕಂ

ತೃತೀಯಂ ಕೃಷ್ಣ ಪಿಂಗಾಕ್ಷಂ ಗಜವಕ್ತ್ರಂ ಚತುರ್ಥಕಂ

ಲಂಬೋದರಂ ಪಂಚಮಂ ಚ ಷಷ್ಠಂ ವಿಕಟಮೇವಚ

ಸಪ್ತಮಂ ವಿಘ್ನರಾಜಂ ಚ ಧೂಮ್ರವರ್ಣಂ ತಥಾಷ್ಠಕಂ

ನವಮಂ ಬಾಲಚಂದ್ರಂ ಚ ದಶಮಂತು ವಿನಾಯಕಂ

ಏಕಾದಶಂ ಗಣಪತಿಂ ದ್ವಾದಶಂತು ಗಜಾನನಂ

ದ್ವಾದಶೈತಾನಿ ನಾಮಾನಿ ತ್ರಿಸಂಧ್ಯಂ ಯಃ ಪಠೇನ್ನರಃ

ನ ಚ ವಿಘ್ನ ಭಯಂ ತಸ್ಯ ಸರ್ವಸಿದ್ಧಿ ಕರಂ ಪ್ರಭೋ

ವಿದ್ಯಾರ್ಥಿ ಲಭತೇ ವಿದ್ಯಾಂ ಧನಾರ್ಥಿ ಲಭತೇ ಧನಂ

ಪುತ್ರಾರ್ಥಿ ಲಭತೇ ಪುತ್ರಂ ಮೋಕ್ಷಾರ್ಥಿ ಲಭತೇ ಗತಿಂ

ಜಪೇತ್ ಗಣಪತಿ ಸ್ತೋತ್ರಂ ಷಡ್ಭೀರ್ಮಾಸೈರ್ ಫಲಂ ಲಭೇತ್

ಸಂವತ್ಸರೇಣ ಸಿದ್ಧಿಂ ಚ ಲಭತೇ ನಾತ್ರ ಸಂಶಯಃ

ಅಷ್ಟೇಭ್ಯೋ ಬ್ರಾಹ್ಮಣೇಭ್ಯಶ್ಚ ಲಿಖಿತ್ವ ಯಃ ಸಮರ್ಪಯೇತ್

ತಸ್ಯ ವಿದ್ಯಾ ಭವೇತ್ಸರ್ವ ಗಣೇಶಸ್ಯ ಪ್ರಸಾದತಃ

ಇತಿ ಶ್ರೀ ನಾರದ ಪುರಾಣೇ ಸಂಕಷ್ಟ ನಾಶನ ಗಣಪತಿ ಸ್ತೋತ್ರಂ ಸಂಪೂರ್ಣಂ ||

ಪೂಜೆಯ ನಂತರ -  5 ಕರಿಗಡುಬು, 5 ಮೋದಕ ಮತ್ತು ಉಪಾಯಿನ ದಾನ, ದಕ್ಷಿಣೆಯನ್ನು ಸತ್ಪಾತ್ರರಿಗೆ ದಾನ ಕೊಟ್ಟು ಆಶೀರ್ವಾದ ಪಡೆಯುವರು. ಹೀಗೆ ೨೧ ಸಾರಿ ವ್ರತಗಳನ್ನು ಆಚರಿಸಿ ನಂತರ ‘ಉದ್ಯಾಪನ’ ಮಾಡುತ್ತಾರೆ. ನಿಮ್ಮ ಇಚ್ಛೆ, ಶಕ್ತಿ ಸಾಮರ್ಥ್ಯಗಳಿಗೆ ಅನುಸಾರವಾಗಿ ಎಷ್ಟು ಸಾರಿ ಬೇಕಾದರೂ ಈ ವ್ರತವನ್ನು ಆಚರಿಸಬಹುದು. 

ಸಂಕಷ್ಟ ಗಣಪತಿ ವ್ರತ ಮಾಡುವ ಪೂಜಾ ವಿಧಾನಕ್ಕಾಗಿ ಈ ಲಿಂಕನ್ನು(ಕೊಂಡಿ)ಕ್ಲಿಕ್ಕ್ಕಿಸಿ: