ಈದ್ ಮಿಲಾದ್

ಈದ್ ಮಿಲಾದ್ ಇಸ್ಲಾಂ ಧರ್ಮದ ಪ್ರಮುಖ ಆಚರಣೆಗಳಲ್ಲಿ ಒಂದು. ಇಸ್ಲಾಂ ಧರ್ಮದ ಕೊನೆಯ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲಮರ ಜನ್ಮ ದಿನಾಚರಣೆಯನ್ನು ಪ್ರತೀವರ್ಷ ಈದ್ ಮಿಲಾದ್ ಎಂಬ ಹೆಸರಿನಲ್ಲಿ ಜಗತ್ತಿನಾದ್ಯಂತ ಮುಸಲ್ಮಾನರು ಆಚರಿಸುತ್ತಾರೆ. ಇಸ್ಲಾಂ ಧರ್ಮದಲ್ಲಿ ಈದ್ ಮಿಲಾದ್ ಆಚರಣೆಗೆ ಅತ್ಯಂತ ದೊಡ್ಡ ಪ್ರಾಮುಖ್ಯತೆಯಿದೆ. ಈದ್ ಮಿಲಾದ್ ಆಚರಣೆಯನ್ನು ಜಗತ್ತಿನ ವಿವಿಧ ಕಡೆಗಳಲ್ಲಿ ವಿವಿಧ ರೀತಿಯಾಗಿ ಆಚರಿಸಲಾಗುತ್ತದೆ. ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲಮ್ ಹುಟ್ಟಿದ ರಬ್ಬಿ-ಉಲ್-ಅವಲ್ ತಿಂಗಳ ಆರಂಭದಿಂದ ತಿಂಗಳ ಕೊನೆಯವರೆಗೂ ಒಂದು ತಿಂಗಳ ಕಾಲ ವಿಶ್ವದಾದ್ಯಂತ ಈದ್ ಮೀಲಾದ್ ಆಚರಣೆಗಳು ನಡೆಯುತ್ತವೆ. ಭಾರತದಲ್ಲಿ ಈದ್ ಮೀಲಾದ್ ಆಚರಣೆಯನ್ನು ಎಲ್ಲಾ ಪಂಗಡದ ಮುಸಲ್ಮಾನರು ಆಚರಿಸುತ್ತಾರೆ.

ಈದ್ ಮೀಲಾದ್ ಆಚರಣೆಯ ಪ್ರಮುಖ ಕಾರ್ಯಕ್ರಮಗಳಲ್ಲಿ ಮೆರವಣಿಗೆಯೂ ಒಂದು. ರಬೀವುಲ್ ಅವ್ವಲ್ ತಿಂಗಳ ಹನ್ನೆರಡನೆಯ ದಿನ ಅಂದರೆ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲಮ್ ಜನಿಸಿದ ದಿನದಂದು ಜಗತ್ತಿನ ಎಲ್ಲಾ ಕಡೆಗಳಲ್ಲೂ ಆಯ ಪ್ರದೇಶದ ಸಮಯಕ್ಕೆ ಹೊಂದಿಕೊಂಡು ಮೆರವಣಿಗೆಯನ್ನು ಆಯೋಜಿಸಲಾಗುತ್ತದೆ. ಪ್ರವಾದಿಯ ಮುಹಮ್ಮದರ ಜನ್ಮ ದಿನದ ಖುಷಿಗಾಗಿ ಮೆರವಣಿಗೆಯನ್ನು ಆಯೋಜಿಸಲಾಗುತ್ತದೆ. ಇಸ್ಲಾಂ ಧರ್ಮದಲ್ಲಿ ಮೆರವಣಿಗೆ ಮಾಡಿ ಆಚರಿಸುವ ಪ್ರಮುಖ ಹಬ್ಬವಾಗಿದೆ ಈದ್ ಮಿಲಾದ್. ಮೆರವಣಿಗೆಯಲ್ಲಿ ವಿವಿಧ ಇಸ್ಲಾಮಿಕ್ ಕಲಾ ತಂಡಗಳು ಭಾಗವಹಿಸುತ್ತವೆ. ವಾಹನ ಮೆರವಣಿಗೆ, ಕಾಲ್ನಡಿಗೆ ಜಾಥ ಇವುಗಳಲ್ಲಿ ಪ್ರಮುಖವಾದವು. ಈದ್ ಮೀಲಾದ್ ಮೆರವಣಿಗೆಯ ದಾರಿಯುದ್ದಕ್ಕೂ ಸಿಹಿ ತಿಂಡಿಗಳನ್ನು ವಿತರಿಸಿವುದು ಮೆರವಣಿಗೆಯ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ಈದ್ ಮಿಲಾದ್ ಮೆರವಣಿಗೆಯಲ್ಲಿ ಕೇವಲ ಮುಸಲ್ಮಾನರಲ್ಲದೆ ಇತರ ಧರ್ಮೀಯರು ಪಾಲ್ಗೊಳ್ಳೊತ್ತಾರೆ.