ಮಹಾಲಯ ಅಮಾವಾಸ್ಯೆ

ಭಾದ್ರಪದ ಮಾಸದ ಕೃಷ್ಣ ಪಕ್ಷದ ಹದಿನೈದು ದಿನಗಳನ್ನು ಪಿತೃಪಕ್ಷ ಎಂದು ಕರೆಯಲಾಗುತ್ತದೆ. ಇದರಲ್ಲಿನ ಪ್ರತಿ ದಿನದಂದು ಅಗಲಿದವರನ್ನು ಸ್ಮರಿಸುವ ಕ್ರಮವಿದೆ. ಇದರ ಕೊನೆಯ ದಿನ ಅಮಾವಾಸ್ಯೆಯಂದು ಸರ್ವಪಿತೃ ಅಮಾವಾಸ್ಯೆಯನ್ನು ಆಚರಿಸಲಾಗುತ್ತದೆ. ಇದನ್ನು ಸರ್ವಪಿತ್ರಿ ಅಮಾವಾಸ್ಯೆ ಎಂದೂ ಕರೆಯಲಾಗುತ್ತದೆ. ಮಹಾಲಯ ಅಮಾವಾಸ್ಯೆಂದು ಪಿತೃಗಳಿಗೆ ತರ್ಪಣ ನೀಡುವುದರೊಂದಿಗೆ, ಸದ್ಗತಿಯನ್ನು ಕೋರಿ ಪ್ರಾರ್ಥನೆಯನ್ನು ಮಾಡಲಾಗುತ್ತದೆ. ಮಹಾಲಯ ಅಮಾವಾಸ್ಯೆಯ ಹಿಂದೆ ಪೌರಾಣಿಕ ಹಿನ್ನಲೆಯೂ ಇದೆ.

ನಮಗಾಗಿ ಜೀವ ಸವೆದು ಸ್ವರ್ಗ ಸೇರಿದ ಪೂರ್ವಜರಿಗೆ ತರ್ಪಣ ಬಿಡಲು ಇರುವ ಅವಧಿಯೇ ಮಹಾಲಯ ಅಮವಾಸ್ಯೆ. ವರ್ಷಕ್ಕೊಮ್ಮೆ ಬರುವ ಈ ಸಮಯವನ್ನು ಹಿಂದೂ ಧರ್ಮದಲ್ಲಿ ಪಿತೃಗಳಿಗೆ ಮೀಸಲಾದ ಅವಧಿ ಎನ್ನಲಾಗುತ್ತದೆ. ಅಗಲಿದ ಪೂರ್ವಜರನ್ನು ಭಕ್ತಿಯಿಂದ ನೆನೆಯುವ ಪರ್ವ ಕಾಲಕ್ಕೆ ಪಿತೃಪಕ್ಷ ಎಂದು ಕರೆಯಲಾಗುವುದು. ಹಿರಿಯರಿಗೆ ತರ್ಪಣವನ್ನು ತಂದೆ-ತಾಯಿ ಇರುವವರು ನೀಡುವಂತಿಲ್ಲ. ಮೂರು ತಲೆಮಾರಿನ ಪೂರ್ವಜರು ವಸುರೂಪ, ವಿಶ್ವೇದೇವರು ಮತ್ತು ಆದಿತ್ಯ ರೂಪದಲ್ಲಿ ತರ್ಪಣವನ್ನು ಸ್ವೀಕರಿಸುತ್ತಾರೆ ಎನ್ನುವುದು ನಂಬಿಕೆ. ಮಹಾಲಯ ಅಮಾವಾಸ್ಯೆಯಂದು ಪೂರ್ವಜರಲ್ಲದೆ ಮಾರ್ಗದರ್ಶಕರಾದ ಹಿರಿಯರಿಗೂ ಕೂಡ ತರ್ಪಣ ಬಿಡ ಬಹುದಾಗಿದೆ. ವಾರಣಾಸಿ, ಬದರಿ, ಗಯಾ, ಕಾಶಿ, ಶೇಷಂಬಾಡಿ, ರಾಮೇಶ್ವರ ಸೇರಿದಂತೆ 108 ಕ್ಷೇತ್ರಗಳನ್ನು ಪಿತೃ ಮೋಕ್ಷ ಕ್ಷೇತ್ರವೆಂದು ಪರಿಗಣಿಸಲಾಗುತ್ತದೆ. ಇಲ್ಲಿ ನೀಡುವ ತರ್ಪಣವನ್ನು ಶ್ರೇಷ್ಟವೆಂದೂ ಕರೆಯಲಾಗುತ್ತದೆ. ಮಹಾಭಾರತದಲ್ಲಿ ಕರ್ಣನು ಮಹಾದಾನಿ ಆಗಿದ್ದರೂ ಅನ್ನದಾನ ಮಾಡದೆ ಇದ್ದಿದ್ದರಿಂದ ಪಿತೃಋಣವನ್ನು ತೀರಿಸಿರಲಿಲ್ಲವೆಂದೂ ಅದಕ್ಕಾಗಿ ಅವನಿಗೆ ಯಮನು ಮಹಾಲಯ ಅಮಾವಾಸ್ಯೆಯಂದು ಭೂಮಿಗೆ ಬಂದು ಪಿತೃ ಋಣ ತೀರಿಸುವ ಅವಕಾಶ ನೀಡಿದ ಎಂಬ ಕಥೆ ಕೂಡ ಪ್ರಚಲಿತವಾಗಿದೆ.