ಗುಡ್
ಪ್ರೈಡೇ ಕ್ರೈಸ್ತರಿಗೆ ಪವಿತ್ರವಾದ ದಿನ. ಕ್ರಿಸ್‍ಮಸ್ ಯೇಸು ಕ್ರಿಸ್ತನ ಜನನವನ್ನು ಸೂಚಿಸಿದರೆ ಗುಡ್
ಪ್ರೈಡೇ ಕ್ರಿಸ್ತನ ಬಲಿದಾನವನ್ನು ಸಂಕೇತಿಸುತ್ತದೆ. ಇದನ್ನು ಶುಭ ಶುಕ್ರವಾರ, ಪವಿತ್ರ ಶುಕ್ರವಾರ
ಅಥವಾ ದೊಡ್ಡ ಶುಕ್ರವಾರ ಎಂಬ ಹೆಸರುಗಳಿಂದಲೂ ಕರೆಯಲಾಗುತ್ತದೆ.
ಮನುಕುಲದ
ಒಳಿತಿಗಾಗಿ ಕ್ರಿಸ್ತನು ತಾನೇ ಶಿಲುಬೆಗೆ ಏರಿದನು. ತನ್ನನ್ನ ಶಿಲುಬೆ ಏರಿಸಿದವರನ್ನೂ ದೂಷಿಸದೆ ‘ಕ್ಷಮಿಸವರನೆಲೆ
ತಂದೆ ತಾವೆಸಗಿದ ಅಪರಾಧ ಏನೆಂದರಿಯದವರನು’ ಎಂದು ಕರ್ತನನ್ನು ಕೋರಿದನು. ಶಾಂತಿಗೆ ತಾನೇ ಸ್ವತ: ರೂಪಕವಾಗಿ
ನಿಂತನು. ಯೇಸು ಕ್ರಿಸ್ತ ಬಂಧನಕ್ಕೆ ಒಳಗಾಗುವ ಘಟನೆಯಿಂದ ಹಿಡಿದು ಶಿಲುಬೆಗೆ ಏರುವುರದರವರೆಗಿನ ಘಟನೆಗಳನ್ನು
14 ಭಾಗಗಳಾಗಿ ವಿಂಗಡಿಸಿ ಪ್ರತಿಯೊಂದು ಭಾಗವನ್ನೂ ಗುಡ್ ಪ್ರೈಡೇಯಲ್ಲಿ ಅವಲೋಕಿಸುತ್ತಾ ಸಾಗಲಾಗುತ್ತದೆ.
ಕೆಲವು ಚರ್ಚುಗಳಲ್ಲಿ ಇದನ್ನು ರಂಗರೂಪದಲ್ಲಿ ಕೂಡ ಅಭಿನಯಿಸುವುದು ಉಂಟು. ಈ ದಿನವನ್ನು ಕ್ರೈಸ್ತರು
ಉಪವಾಸದ ದಿನವಾಗಿ ಆಚರಿಸುತ್ತಾರೆ.
ಗುಡ್ ಪ್ರೈಡೇ
ಈಸ್ಟರ್ ಹಬ್ಬಕ್ಕೂ ಮುಂಚೆ ಬರುವ ಗುಡ್ ಪ್ರೈಡೇ ಯೇಸು ಕ್ರಿಸ್ತನಲ್ಲಿ ನಂಬಿಕೆ ಇಡುವ ಪ್ರತಿಯೊಬ್ಬರಿಗೂ ಅನ್ವಯಿಸುವಂಥದ್ದು. ಕಾರಣ ಹಿಂದಿನಿಂದಲೂ ಪಾಪ ಪ್ರಾಯಶ್ಚಿತ್ತಕ್ಕಾಗಿ ಒಂದು ಪ್ರಾಣಿಯನ್ನು ಬಲಿ ಕೊಡುವ ಪದ್ಧತಿ ಇಸ್ರೇಲ್ ಜನಾಂಗದಲ್ಲಿ ರೂಢಿಯಲ್ಲಿತ್ತು. ಆದರೆ ಮಾನವನ ಪಾಪಗಳಿಗೆ ಕೇವಲ ಒಂದು ಪ್ರಾಣಿಯ ರಕ್ತ ಮಾತ್ರ ಸಾಲದು. ಅದಕ್ಕೆ ಪರಿಶುದ್ಧವಾದ ರಕ್ತ ಸುರಿಯಬೇಕಿತ್ತು. ಅದೇ ತಂದೆಯಾದ ದೇವರ ಚಿತ್ತವಾಗಿತ್ತು. ಹಾಗೆ ತಂದೆಯ ಚಿತ್ತವನ್ನು ನೆರವೇರಿಸಲೆಂದೇ ದೇವರ ಒಬ್ಬನೇ ಮಗನಾದ ಯೇಸುಕ್ರಿಸ್ತನು ಭೂಮಿಗೆ ಮನುಷ್ಯನಾಗಿ ಬಂದನು. ತಂದೆಯಾದ ದೇವರ ಚಿತ್ತವನ್ನು ನೆರವೇರಿಸಲೆಂದೇ ತನ್ನ ಪರಿಶುದ್ಧವಾದ ರಕ್ತವನ್ನು ಕಲ್ವಾರಿ ಶಿಲುಬೆಯಲ್ಲಿ ಸುರಿಸಿ ತನ್ನನ್ನು ಮರಣಕ್ಕೆ ಒಪ್ಪಿಸಿದನು. ಅಂದು ನಡೆದ ಈ ಕಾರ್ಯದಿಂದ ಮನುಷ್ಯ ಪಾಪದಿಂದ ವಿಮೋಚನೆ ಹೊಂದಿದ್ದಾನೆ. ಅಂದರೆ ಯಾರ್ಯಾರು ಯೇಸು ಮಾಡಿದ ಈ ವಿಶೇಷ ಕಾರ್ಯವನ್ನು ನಂಬುತ್ತಾರೋ ಅವರೆಲ್ಲರೂ ಪಾಪಗಳಿಂದ ವಿಮೋಚಿಸಲ್ಪಟ್ಟು ದೇವರಿಗೆ ಮಕ್ಕಳಾಗುವ ಅಧಿಕಾರವನ್ನು ಯೇಸುಕ್ರಿಸ್ತನು ಕೊಟ್ಟಿದ್ದಾನೆ. ನಿಜವಾಗಿ ಆತನು ಶಿಲುಬೆಗೆ ಏರಿಸಲ್ಪಟ್ಟಿದ್ದರಿಂದಲೇ ಮನುಷ್ಯರ ಪಾಪವಿಮೋಚನೆಯಾಯಿತು. ಆದ್ದರಿಂದಲೇ ಈ ದಿನವನ್ನು ಗುಡ್ ಪ್ರೈಡೇ (ಶುಭ ಶುಕ್ರವಾರ) ಎನ್ನಲಾಗಿದೆ.
ಮರುದಿನ ಹೋಲಿ ಸಾಟರ್ ಡೇ. ಕ್ರಿಸ್ತನು ಶಿಲುಬೆ ಏರಿದ ನಂತರ ಇಡೀ ಜಗತ್ತನ್ನು ಕತ್ತಲೆ ಆವರಿಸಿಕೊಳ್ಳುತ್ತದೆ. ಇದನ್ನು ವಿಷಾದ ಭಾವದಿಂದ ಆಚರಿಸುತ್ತಾರೆ. ಕೆಲವೆಡೆ ಇದನ್ನು ವ್ರತದಂತೆ, ಹರಕೆಯಂತೆ ಕೂಡ ಆಚರಿಸಲಾಗುತ್ತದೆ. ಮೂರನೇ ದಿನ ಈಸ್ಟರ್ ಸಂಡೇ ಈ ದಿನದಂದು ಕ್ರಿಸ್ತನು ಪುನರುತ್ಥಾನಗೊಂಡನು ಎನ್ನುವುದು ನಂಬಿಕೆ. ಎರಡು ದಿನಗಳ ಶೋಕದ ಆಚರಣೆ ಮುಗಿದು ಈ ದಿನದಂದು ಸಂಭ್ರಮದ ಆಚರಣೆಗಳು ನಡೆಯುತ್ತವೆ. ಇಡೀ ಗುಡ್ ಪ್ರೈಡೇಯ ಆಚರಣೆ ಕತ್ತಲಿನಿಂದ ಬೆಳಕಿನ ಕಡೆಗೆ ಸಾಗುವ ಉನ್ನತ ಆಶಯವನ್ನು ಹೊಂದಿದೆ.