ವಿಜಯದಶಮಿ

ವಿಜಯದಶಮಿ ನವರಾತ್ರಿಯ ಕೊನೆಯ ದಿನ. ನವರಾತ್ರಿಯನ್ನು ಕರ್ನಾಟಕದಲ್ಲಿ ನಾಡ ಹಬ್ಬವಾಗಿ ಆಚರಿಸಲಾಗುತ್ತದೆ. ವಿಜಯನಗರದ ಅರಸರು ಆರಂಭಿಸಿದ್ದ ಈ ಪರಂಪರೆ ಮೈಸೂರು ಒಡೆಯರ ಕಾಲದಲ್ಲಿ ಮುಂದುವರೆದು ಕೊಂಡು ಬಂದಿತ್ತು. ಈಗಲೂ ನವರಾತ್ರಿಯನ್ನು ನಾಡಿನೆಲ್ಲೆಡೆ ಪರಾಂಪರಾಗತವಾದ ನಂಬಿಕೆಗಳೊಂದಿಗೆ ನಡಿಸಿ ಕೊಂಡು ಬರಲಾಗುತ್ತಿದೆ. ನವರಾತ್ರಿ ಎಂದರೆ ಒಂಬತ್ತು ರಾತ್ರಿಗಳು. ಈ ಒಂಬತ್ತು ರಾತ್ರಿಗಳ ಶಕ್ತಿ ದೇವತೆಗಳ ಪೂಜೆಯ ನಂತರ ಬರುವುದೇ ಹತ್ತನೇ ಹಗಲು. ಅದೇ ವಿಜಯ ದಶಮಿ. ಹತ್ತು ಹಗಲುಗಳ ಲೆಕ್ಕವನ್ನು ಹಿಡಿದು ಈ ಆಚರಣೆಯನ್ನು ದಸರಾ ಎಂದು ಕೂಡ ಕರೆಯುತ್ತಾರೆ. ಕ್ರಿಸ್ತಪೂರ್ವದಿಂದಲೂ ಈ ಆಚರಣೆ ಅಸ್ವಿತ್ವದಲ್ಲಿ ಇರುವುದಕ್ಕೆ ಆಧಾರಗಳು ಸಿಕ್ಕುತ್ತವೆ. ಶಕ್ತಿಯನ್ನು ಜಗನ್ಮಾತಾ ಎಂದು ಆರಾಧಿಸುವ ವಿಚಾರ ಋಗ್ವೇದದಲ್ಲಿಯೇ ಬರುತ್ತದೆ. ಇದು ನಿತ್ಯವೂ(ಕಡ್ಡಾಯ) ಕಾಮ್ಯ (ಐಚ್ಚಿಕ) ಎರಡೂ ಆಗಿರುವ ಅಪರೂಪದ ವ್ರತ. ಆಷಾಢ ಶುಕ್ಲ ಅಷ್ಟಮಿಯಂದು ಮಲಗಿದ್ದ ದುರ್ಗಾ ಮಾತೆಯನ್ನು ಅಶ್ವಯುಜ ಶುಕ್ಲ ಅಷ್ಟಮಿಯಂದು ಎಬ್ಬಿಸಲಾಗುತ್ತದೆ ಎನ್ನುವುದು ನಂಬಿಕೆ. ಇಲ್ಲಿಂದ ಮೂರು ದಿನಗಳನ್ನು ತ್ರಿರಾತ್ರಿ ಎಂದು ಆಚರಿಸಲಾಗುತ್ತದೆ. ಮಹಾ ನವಮಿಯಂದು ಆಯುಧ ಪೂಜೆಯನ್ನು ನಡೆಸುವ ಪದ್ದತಿಯೂ ಇದೆ. ವಿಜಯ ದಶಮಿ ಆಚರಣೆಯ ಹಿಂದಿರುವ ಪ್ರಮುಖ ಕಥೆಯೆಂದರೆ ದುರ್ಗಾದೇವಿಯು ದುಷ್ಟನಾದ ಮಹಿಷಾಸುರ ಎನ್ನುವ ರಾಕ್ಷಸನನ್ನು ಸಂಹರಿಸಿರುವುದು. ಮಹಿಷಾಸುರನು ಕಾಡೆಮ್ಮೆಯ ರೂಪದಲ್ಲಿ ಕಾಣಿಸಿಕೊಂಡ ಎನ್ನಲಾಗುತ್ತದೆ. ಈ ರಾಕ್ಷಸನು ಯಾವುದೇ ಮನುಷ್ಯನಿಂದ, ದೇವರಿಂದ ಅಥವಾ ವಿಶಿಷ್ಟ ಶಕ್ತಿಯಿಂದ ತನ್ನನ್ನು ಸಂಹರಿಸಲು ಸಾಧ್ಯವಾಗಬಾರದು ಎನ್ನುವ ವರವನ್ನು ಪಡೆದಿದ್ದನು. ತನ್ನ ಅಮರತ್ವದ ವರವನ್ನು ಹೊಂದಿರುವ ರಾಕ್ಷಸ ಅಹಂಕಾರದಿಂದ ಮೂರು ಲೋಕದ ಜನರಿ ಹಾಗೂ ದೇವತೆಗಳಿಗೆ ತೊಂದರೆ ಕೊಡಲು ಪ್ರಾರಂಭಿಸಿದನು. ಆಗ ಎಲ್ಲರೂ ರಾಕ್ಷಸನ ಕಾಟ ತಪ್ಪಿಸಬೇಕೆಂದು ಬೇಡಿಕೊಳ್ಳುತ್ತಿದ್ದರು.

ಮೂರುಲೋಕದ ಜನರ ಪ್ರಾರ್ಥನೆ ಕೇಳಿದ ದೇವಿ ದುರ್ಗೆಯಾಗಿ ಅವತರಿಸಿದಳು. ಭವ್ಯವಾದ ಮತ್ತು ಭಯವನ್ನುಂಟುಮಾಡುವಂತಹ ಶಕ್ತಿ ರೂಪಳಾಗಿ, ಸಿಂಹದ ಮೇಲೆ ಕುಳಿತು, ಹತ್ತು ಕೈಗಳಲ್ಲಿ ಹತ್ತು ಬಗೆಯ ಆಯುಧಗಳನ್ನು ಹಿಡಿದು ಬಂದಳು. ರಾಕ್ಷಸನಾದ ಮಹಿಷಾಸುರನನ್ನು ವಿಜಯ ದಶಮಿಯ ದಿನ ಸಂಹಾರ ಮಾಡಿದಳು. ಅಂದಿನಿಂದ ವಿಜಯ ದಶಮಿಯನ್ನು ಭಕ್ತರು ಬಹಳ ಅದ್ದೂರಿಯಿಂದ ಹಬ್ಬವನ್ನಾಗಿ ಆಚರಿಸಿದರು ಎನ್ನುವ ಪ್ರತೀತಿ ಇದೆ.

ವಿಜಯ ದಶಮಿ ನವರಾತ್ರಿಯ ಕಡೆಯ ದಿನ, ತ್ರಿರಾತ್ರಿ ಆಚರಣೆಯ ಕೊನೆಯ ದಿನ ಕೂಡ ಹೌದು. ಈ ದಿನವನ್ನು ಪಾಂಡವರು ಕೌರವರ ಮೇಲೆ ವಿಜಯ ಸಾಧಿಸಿದ ದಿನ, ರಾವಣನನ್ನು ಶ‍್ರೀರಾಮನು ಸಂಹರಿಸಿದ ದಿನ ಎಂದೂ ನಂಬಲಾಗಿದೆ. ಉತ್ತರ ಭಾರತದ ಕೆಲವು ಕಡೆ ಈ ದಿನವನ್ನು ಹೊಸ ವರ್ಷದ ದಿನ ಎಂದೂ ಕೂಡ ಆಚರಿಸುವ ಪದ್ದತಿ ಇದೆ. ಮಹಾ ಭಾರತದಲ್ಲಿ ಪಾಂಡವರು ವಿರಾಟನ ರಾಜ್ಯದಲ್ಲಿ ತಮ್ಮ ಅಜ್ಞಾತ ವಾಸವನ್ನು ಯಶಸ್ವಿಯಾಗಿ ಪೂರೈಸಿದರು. ಈ ಸಂದರ್ಭದಲ್ಲಿ ತಮ್ಮ ಶಸ್ತ್ರಾಸ್ತ್ರಗಳನ್ನು ಶಮಿ ವೃಕ್ಷದಲ್ಲಿ ಅಡಗಿಸಿ ಇಟ್ಟಿದ್ದರು. ಶಮಿ ವೃಕ್ಷವನ್ನು ದುರ್ಗಾಮಾತೆಯನ್ನು ಸ್ಮರಿಸಿ ಮಹಾಭಾರತದ ಯುದ್ಧದಲ್ಲಿ ಜಯಶಾಲಿಯಾದರು. ವಿಜಯ ದಶಮಿ ಎಂದು ಹೆಸರು ಬರಲು ಇದೂ ಒಂದು ಕಾರಣ ಎನ್ನುವ ನಂಬಿಕೆ ಕೂಡ ಇದೆ. ಇದನ್ನು ಗಮನದಲ್ಲಿರಿಸಿ ವಿಜಯದಶಮಿಯಂದು ಇಂದಿಗೂ ಗುರುಹಿರಿಯರಿಗೆ ಶಮೀ ವೃಕ್ಷದ ಎಲೆಗಳನ್ನು ನೀಡಿ ನಮಿಸುತ್ತಾ ಈ ಕೆಳಗಿನ ಶ್ಲೋಕವನ್ನು ಹೇಳುವುದು ರೂಢಿಯಲ್ಲಿದೆ.

ಶಮೀ ಶಮಯತೇ ಪಾಪಂ ಶಮೀ ಶತ್ರುವಿನಾಶಿನೀ |

ಅರ್ಜುನಸ್ಯ ಧನುರ್ಧಾರೀ ರಾಮಸ್ಯ ಪ್ರಿಯದರ್ಶಿನೀ ||

ಕರಿಷ್ಯಮಾಣಯಾತ್ರಾಯಾ ಯಥಾಕಾಲಂ ಸುಖಂ ಮಯಾ |

ತತ್ರ ನಿರ್ವಿಘ್ನಕರ್ತ್ರೀ ತ್ವಂ ಭವ ಶ್ರೀರಾಮಪೂಜಿತಾ ||

ಈ ವಿಜಯ ದಶಮಿ ದಿನದ೦ದೇ, ‘ದ್ವೈತ ವೇದಾ೦ತ’ ಅಥವ ‘ತತ್ವ ಸಿದ್ಧಾ೦ತ’ದ ಪ್ರತಿಷ್ಠಾಪನಾಚಾರ್ಯರಾದ ಶ್ರೀ ಶ್ರೀ ವಿಶ್ವ ಗುರು ಶ್ರೀ ಮಧ್ವಾಚಾರ್ಯರು, ಉಡುಪಿಯ ಬಳಿ ಇರುವ ‘ಪಾಜಕ’ ಎ೦ಬ ಸ್ಥಳದಲ್ಲಿ ಕ್ರಿ.ಶ. ೧೨೩೮ರಲ್ಲಿ ಅವತರಿಸಿದರು.