ಸ್ವಾತಂತ್ರ್ಯ ದಿನಾಚರಣೆ

15 ಆಗಸ್ಟ್ 1947 ರಂದು ನಮ್ಮ ಭಾರತ ದೇಶವು ಸ್ವತಂತ್ರವಾಯಿತು. ಪರಕೀಯ ಆಳ್ವಿಕೆಯಿಂದ ದೇಶ ಮುಕ್ತಿಯನ್ನು ಪಡೆದು ಕೊಂಡಿತು. ಆ ನೆನಪಿಗಾಗಿ ನಾವು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತೇವೆ. ಈ ದಿನದಂದು ಇಡೀ ದೇಶದಲ್ಲಿ ಸ್ವಾತಂತ್ರ್ಯದ ಮಹತ್ವವನ್ನು ಸಾರುವ ಆಚರಣೆಗಳು ನಡೆಯುತ್ತವೆ. ತ್ರಿವರ್ಣ ಧ್ವಜವನ್ನು ಹಾರಿಸಿ ಸಿಹಿ ಹಂಚಲಾಗುತ್ತದೆ. ಈ ಆಚರಣೆಯ ಪ್ರಮುಖ ಸಮಾರಂಭ ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯತ್ತದೆ. ಈ ಸಮಾರಂಭದಲ್ಲಿ, ಭಾರತದ ಪ್ರಧಾನ ಮಂತ್ರಿಗಳು ರಾಷ್ಟ್ರೀಯ ಧ್ವಜವನ್ನು ಹಾರಿಸಿ ಭಾರತದ ರಾಷ್ಟ್ರಗೀತೆ ಜನ ಗಣ ಮನ ವನ್ನು ಹಾಡಿ ನಂತರ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡುತ್ತಾರೆ. ಈ ಭಾಷಣದಲ್ಲಿ ದೇಶದ ಸಾಧನೆ, ದೇಶದ ಮುಂದಿರುವ ಪ್ರಮುಖ ಸವಾಲುಗಳ ಬಗ್ಗೆ ಮಾತನಾಡಿ, ಕೆಲವು ಪ್ರಗತಿ ಯೋಜನೆಗಳನ್ನು ಪ್ರಕಟಿಸಲಾಗುತ್ತದೆ. ಈ ದಿನದಂದು ದೇಶದ ಸ್ವಾತ್ರಂತ್ರ್ಯಕ್ಕೆ ಮಡಿದ ನಾಯಕರನ್ನು ಸ್ಮರಿಸಲಾಗುತ್ತದೆ.

ಭಾರತವು ಸ್ವತಂತ್ರವಾಗುವ ಮೊದಲು ಮೊಗಲರು, ಪೋರ್ತುಗೀಜರು, ಆದಿಲಶಾಹ, ಕುತುಬಶಾಹ ಮತ್ತು ಆಂಗ್ಲರಂತಹ ಅನೇಕರು ಭಾರತವನ್ನು ಆಳಿದರು. ಇವರೆಲ್ಲರೂ ಭಾರತದಲ್ಲಿದ್ದ ಸ್ವಾರ್ಥಿ ಮತ್ತು ಭ್ರಷ್ಟ ಜನರನ್ನು ತಮ್ಮ ಪಕ್ಷದಲ್ಲಿ ಸೇರಿಸಿಕೊಂಡು ಸ್ವಾತಂತ್ರ್ಯಕ್ಕಾಗಿ ಹೋರಾಡುವ ಸೈನಿಕರ ಮೇಲೆ ದೌರ್ಜನ್ಯ ನಡೆಸಿ ರಾಜ್ಯವಾಳಿದರು. ವ್ಯಾಪಾರ ಮಾಡುವ ನಿಮಿತ್ತ ಆಂಗ್ಲರು ಭಾರತಕ್ಕೆ ಬಂದರು. ಹೀಗೆ ಬೆರಳೆಣಿಕೆಯಷ್ಟು ಸಂಖ್ಯೆಯಲ್ಲಿದ್ದ ಆಂಗ್ಲರು ನಮ್ಮ ದೇಶವನ್ನು 150 ವರ್ಷಗಳ ಕಾಲ ಆಳಿದರು.

.ಇಂಗ್ಲೀಷ್ ಈಸ್ಟ್ ಇಂಡಿಯಾ ಕಂಪನಿಯ ವ್ಯಾಪಾರಿಗಳಾಗಿ ಭಾರತಕ್ಕೆ ಬಂದ ಬ್ರಿಟಿಷರು ಇಲ್ಲಿ ಅಧಿಕೃತವಾಗಿ ಅಧಿಪತ್ಯ ಸ್ಥಾಪಿಸಿದ್ದು 1757ರಲ್ಲಿ. ಪ್ಲಾಸಿ (ಪಲಾಶಿ) ಕದನದಲ್ಲಿ ಬಂಗಾಳ ನವಾಬ ಸಿರಾಜ್-ಉದ್-ದೌಲಾ ಮತ್ತವರ ಫ್ರೆಂಚ್ ಮೈತ್ರಿ ಸೇನೆಯನ್ನು ಬ್ರಿಟಿಷರು ಸೋಲಿಸಿದರು. ಅದಾದ ಬಳಿಕ ಆಫ್ಘಾನಿಸ್ತಾನದಿಂದ ಹಿಡಿದು ಮಯನ್ಮಾರ್​ವರೆಗೆ ಬಹುತೇಕ ಎಲ್ಲಾ ಪ್ರದೇಶಗಳು ಬ್ರಿಟಿಷರ ಕೈವಶವಾದವು. ಇದಕ್ಕೆ ನಿರ್ಣಾಯಕವಾಗಿದ್ದು 1757ರ ಪ್ಲಾಸಿ ಕದನವೇ. ಆದರೆ, ಬ್ರಿಟಿಷರ 190 ವರ್ಷಗಳ ಆಡಳಿತ ಸುಗಮವಾಗಿಯೇನೂ ಇರಲಿಲ್ಲ. ಅಲ್ಲಲ್ಲಿ ಪ್ರತಿರೋಧಗಳು ವ್ಯಕ್ತವಾಗುತ್ತಲೇ ಹೋದವು. 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಅವರಿಗೆ ಎದುರಾದ ಮೊದಲ ಸವಾಲು. ಮಹಾತ್ಮ ಗಾಂಧಿ ಅವರಂಥವರ ಅಹಿಂಸಾತ್ಮಕ ಹೋರಾಟಗಳು; ಸುಭಾಷ್ ಚಂದ್ರ ಬೋಸ್ ಅವರ ಮಿಲಿಟರಿ ಹೋರಾಟ; ಭಗತ್ ಸಿಂಗ್ ಅವರಂಥವರ ಕ್ರಾಂತಿಕಾರಿ ಹೋರಾಟಗಳು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪಥವನ್ನು ಸುಗಮಗೊಳಿಸಿದವು. ಅಂತಿಮವಾಗಿ 1947, ಆಗಸ್ಟ್ 15ರಂದು ಭಾರತಕ್ಕೆ ಸ್ವಾತಂತ್ರ್ಯ ದಕ್ಕಿತು. ಆದರೆ, ಅದಕ್ಕೆ ಮುಂಚೆ ಭಾರತ ಮತ್ತು ಪಾಕಿಸ್ತಾನವನ್ನು ಧರ್ಮದ ಆಧಾರವಾಗಿ ಪ್ರತ್ಯೇಕಗೊಳಿಸಿದರು. ಮುಸ್ಲಿಮ್ ಬಾಹುಳ್ಯ ಇದ್ದ ಭಾರತದ ಪಶ್ಚಿಮ ಭಾಗವನ್ನು ಹಾಗೂ ಪೂರ್ವ ಬಂಗಾಳ ಇರುವ ಪ್ರದೇಶಗಳನ್ನು ಭಾರತದಿಂದ ಪ್ರತ್ಯೇಕಿಸಿ ಪಾಕಿಸ್ತಾನ ನಿರ್ಮಾಣ ಮಾಡಲಾಯಿತು.

ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ 1947 ಆಗಸ್ಟ್ 15ರಂದು ಕೆಂಪುಕೋಟೆಯಲ್ಲಿ ಭಾರತದ ನೂತನ ರಾಷ್ಟ್ರಧ್ವಜವನ್ನು ಹಾರಿಸಿ, ನಂತರ ದೇಶವನ್ನುದ್ದೇಶಿಸಿ ಮಾತನಾಡಿದರು. ಆ ಬಳಿಕ ಭಾರತೀಯ ಸೇನಾ ಪಡೆಗಳ ಪಥ ಸಂಚಲನ ಇತ್ಯಾದಿ ನಡೆದವು. ಈ ಪರಂಪರೆಯು ವರ್ಷದಿಂದ ವರ್ಷಕ್ಕೆ ಪಾಲನೆಯಾಗುತ್ತಲೇ ಬಂದಿದೆ.