ಚಾಮುಂಡೇಶ್ವರಿ ಜನ್ಮದಿನ

ದೇವಸ್ಥಾನ:ಮೈಸೂರನ್ನು ಆಳಿದವರು ಯದುವಂಶದ ಅರಸರು. ಅವರ ಕಾಲದಲ್ಲಿ ಶಕ್ತಿದೇವತೆಯ ಪೂಜೆಗೆ ಮಹತ್ವ ಬಂದಿದು. ಈ ಪರಂಪರೆಯಲ್ಲಿ ಬಂದ ಬೆಟ್ಟದ ಚಾಮರಾಜ ಒಡೆಯರು ಶಕ್ತಿಪರಂಪರೆಯ ಇತಿಹಾಸವನ್ನೇ ರಚಿಸಿದ್ದಾರೆ. ಹೀಗಾಗಿ ಮೈಸೂರು ಒಡೆಯರ ಕಾಲದಲ್ಲಿ ಶಕ್ತಿಮಾತೆಯಾದ ಚಾಮುಂಡೇಶ್ವರಿಗೆ ಸಹಜವಾಗಿಯೇ ಮಹತ್ವವು ದೊರಕಿದೆ. ಚಾಮುಂಡೇಶ್ವರಿ ಮೈಸೂರು ಒಡೆಯರ ಮನೆ ದೇವತೆಯಾದಂತೆ ಮೈಸೂರು ನಗರದ ಅಧಿದೇವತೆ ಕೂಡ ಹೌದು.

ಚಾಮುಂಡೇಶ್ವರಿಯ ಸನ್ನಿಧಿ: ಚಾಮುಂಡೇಶ್ವರಿಯದು ಚಚ್ಚೌಕ ಶೈಲಿಯ ದ್ರಾವಿಡ ಶೈಲಿಯ ದೇಗುಲ. ಗರ್ಭಗುಡಿಯಲ್ಲಿನ ಚಾಮುಂಡೇಶ್ವರಿ ವಿಗ್ರಹವು ಅತ್ಯಂತ ಸುಂದರವಾಗಿದ್ದು ಶಕ್ತಿ ಪರಂಪರೆಯ ರೂಪಕದಂತಿದೆ. ಹೆಬ್ಬಾಗಿಲು, ಪ್ರವೇಶ ದ್ವಾರ, ನವರಂಗ, ಅಂತರಾಳ, ಗರ್ಭಗೃಹ, ಪ್ರಾಕಾರ ಸೇರಿದ ಸುಂದರ ರಚನೆ ದೇವಸ್ಥಾನದ್ದು. ದೇವಾಲಯದ ಒಂದು ಕಡೆ ಮಹಿಷಾಸುರದನ ಭವ್ಯ ವಿಗ್ರಹವಿದೆ. ಮಹಿಷಾಸುರನೆಂಬ ಅಸುರನನ್ನು ಕೊಲ್ಲಲು ಪಾರ್ವತಿಯು ಆದಿಶಕ್ತಿಯಾಗಿ ಅವತರಿಸಿದಳು ಎನ್ನುವುದು ಪ್ರತೀತಿ. ಚಾಮುಂಡೇಶ್ವರಿ ದೇವಾಲಯದಿಂದ ಕೆಳಕ್ಕೆ ಬೃಹತ್ ನಂದಿಯ ವಿಗ್ರಹವಿದೆ. ಒಂದೇ ಕಲ್ಲಿನಲ್ಲಿ ಕಡೆಯಲಾಗಿರುವ ಈ ವಿಗ್ರಹಕ್ಕೂ ಪೂಜೆ ಸಲ್ಲುತ್ತದೆ. ಚಾಮುಂಡೇಶ್ವರಿ ದೇಗುಲದಲ್ಲಿ ಮುಮ್ಮಡಿ ಕೃಷ್ಣರಾಜ ಪಡೆಯರು ಮತ್ತು ಅವರ ಪತ್ನಿಯರಾದ ದೇವರಾಜಮ್ಮಣ್ಣಿ, ಚೆಲುವರಾಜಮ್ಮಣ್ಣಿ, ಲಿಂಗರಾಜಮ್ಮಣ್ಣಿ ಇವರುಗಳ ಭಕ್ತಿ ವಿಗ್ರಹವನ್ನು ನಿಲ್ಲಿಸಲಾಗಿದೆ. ಮೈಸೂರಿನ ಈಶಾನ್ಯದಲ್ಲಿರುವ ಗ್ರಾಮದೇವತೆ ಹುಲಿಗಮ್ಮನ ದೇಗುಲವನ್ನು ಚಾಮುಂಡೇಶ್ವರಿಯ ಮೂಲ ನೆಲೆ ಎಂದು ಹೇಳುವ ಪ್ರತೀತಿ ಇದೆ.

ನಂಬಿಕೆಗಳು:ಚಾಮುಂಡೇಶ್ವರಿ ಎಂದರೆ ಸಾವಿರ ಮೆಟ್ಟಿಲ ದೇವತೆ. ಸಾವಿರ ಮೆಟ್ಟಿಲುಗಳನ್ನು ಹತ್ತಿ ಕೊಂಡು ಈ ದೇವಸ್ಥಾನವನ್ನು ತಲುಪ ಬೇಕು. ಪ್ರತಿ ಶುಕ್ರವಾರ ಹೀಗೆ ಸಾವಿರ ಮೆಟ್ಟಿಲನ್ನು ಹತ್ತುವ ಹರಕೆ ಹೋರುವವರು ಇದ್ದಾರೆ. ಪ್ರತಿ ಮೆಟ್ಟಿಲಿಗೂ ಅರಿಷಿನ-ಕುಂಕುಮ ಹಚ್ಚಿ ಪೂಜೆ ಮಾಡುವವರು ಇದ್ದಾರೆ. ಪ್ರತಿ ಮೆಟ್ಟಿಲಿಗೂ ಇಡುಗಾಯಿಯನ್ನು ಒಡೆಯುವ ಹರಕೆಯನ್ನು ಹೊತ್ತವರೂ ಕೂಡ ಇದ್ದಾರೆ. ಆಷಾಡ ಮಾಸದ ಶುಕ್ರವಾರಗಳಂದು ಹೀಗೆ ಸಾವಿರ ಮೆಟ್ಟಿಲನ್ನು ಹತ್ತಿ ದೇವಸ್ಥಾನವನ್ನು ತಲಪುವುದು ಶುಭ ಎಂಬ ನಂಬಿಕೆ ಇದೆ. ಇದಕ್ಕಾಗಿ ಕೂಡ ತಮ್ಮ ಕಷ್ಟಗಳನ್ನು ನಿವಾರಿಸಲು ಹರಕೆಯನ್ನು ಹೋರುತ್ತಾರೆ. ಚಾಮುಂಡಿ ದೇಗುಲದಲ್ಲಿ ಸೀರೆಯನ್ನು ಹರಕೆಯಾಗಿ ಕೊಡುವ ನಂಬಿಕೆ ಇದೆ.

ಅಶೂನ್ಯ ಶಯನ ವ್ರತ

ಇದು ಮಾಧ್ವ  ಆಚರಣೆ. ಚಾತುಮಾರ್ಸದ  ಸಂದರ್ಭದಲ್ಲಿ ದಂಪತಿಗಳು ಆಚರಿಸುವ ವ್ರತ  ಇದಾಗಿದೆ. ದಾಂಪತ್ಯದಲ್ಲಿನ ಭಿನ್ನಾಭಿಪ್ರಾಯಗಳನ್ನು ಇದು ನಿವಾರಿಸುತ್ತದೆ. ಚಂದ್ರೋದಯ  ಕಾಲದಲ್ಲಿ  ಆಷಾಢ ಬಹುಳ ಪಾಡ್ಯದ  ತಿಥಿ ಒದಗುವ ದಿನದಂದು ಷೋಡಷೋಪಚಾರಗಳಲ್ಲಿ ಒಂದಾದ  ವಿಷ್ಣು ಶಯನೋತ್ಸವವನ್ನು ಅವರು ಆಚರಿಸುತ್ತಾರೆ.

ಪಂಢರಾಪುರ ಯಾತ್ರೆ

ಪಂಢರಾಪುರಕ್ಕೆ  ಪಾದಕೆಗಳನ್ನು ಹೊತ್ತು  ನಡೆಯುವ  ಯಾತ್ರೆಯನ್ನು ವಾರಿ ಅಥವಾ ವಾಕರಿ ಎಂದು ಕರೆಯುತ್ತಾರೆ. ಮರಾಠಿಯಲ್ಲಿ ವಾಕರಿ ಎಂದರೆ  ಭಗವಂತನ ಸೇವೆಗೆ ಯಾತ್ರೆ ಎಂದು ಹೆಸರು. ಸಂತ ಧಾರೇಶ್ವರ ಅವರ  ಊರು ಆಲಂದಿ ಮತ್ತು ತುಕಾರಂ ಅವರ ವಾಸ ಸ್ಥಾನ ದೇಹುಗಳಿಂದ  ಈ ವಾಕರಿ  ಆರಂಭವಾಗುತ್ತದೆ.  ಉತ್ತರ ಕರ್ನಾಟಕದ  ಅನೇಕ ಭಕ್ತರು 250 ಕಿಲೋಮೀಟರ್‍ಗಳ  ಈ ವಾಕರಿ ಮಾರ್ಗದಲ್ಲಿ ಸೇರಿ ಕೊಳ್ಳುತ್ತಾರೆ. ವಾಕರಿ ಹೋಗುವವರು ಪಾದಯಾತ್ರೆಯಲ್ಲಿಯೇ ಹೋಗ ಬೇಕು, ಧಾರೇಶ್ವರ  ಇಲ್ಲವೆ ತುಕಾರಂ ಅವರ ಪಾದುಕೆಗಳನ್ನು ಹೊತ್ತು  ನಿರಂತರ ಭಜನೆ ಮಾಡುತ್ತಾ ಸಾಗ ಬೇಕು. ಈ ಯಾತ್ರೆಗೆ ಸುಮಾರು 800 ವರ್ಷಗಳ  ಇತಿಹಾಸವಿದೆ. ಜ್ಯೇಷ್ಟ  ಬಹುಳ  ಅಷ್ಟಮಿಯಂದು ಆರಂಭವಾಗುವ ಯಾತ್ರೆ  ಆಷಾಢ  ಏಕಾದಶಿಯಂದು ಪಂಢರಾಪುರದಲ್ಲಿ ಸಮಾರೋಪ ಗೊಳ್ಳಲಿದೆ. ಅಂದು ವಿಶೇಷ ವಾಕರಿ ಆಚರಣೆ ನಡೆಯುತ್ತದೆ. ಅತಿ ಹೆಚ್ಚು ಜನ ಸೇರುವ  ಉತ್ಸವ ಎಂಬ ಕಾರಣಕ್ಕೆ ಇದು ಗಿನ್ನಿಸ್ ದಾಖಲೆಯಲ್ಲಿ ಕೂಡ ಸೇರಿ ಕೊಂಡಿದೆ.

ವೈವಸ್ವತ ಸಪ್ತಮಿ

ವೈವಸ್ವತ ಮನುವಿನ ಪ್ರೀತ್ಯರ್ಥವಾಗಿ ವೈವಸ್ವತ ಸಪ್ತಮಿಯಂದು ಆಷಾಢ ಶುದ್ಧ ಸಪ್ತಮಿಯಂದು ಆಚರಿಸುತ್ತಾರೆ. ಸೂರ್ಯಾರಾಧನೆ ಇಂದಿನ ವಿಶೇಷ. ಆದಿತ್ಯ ಹೃದಯವನ್ನು ಇಂದು ಪಠಿಸಲಾಗುತ್ತದೆ. ಈ ದಿನವನ್ನು ಭಾನು ಸಪ್ತಮಿ ಎಂದೂ ಕೂಡ ಕರೆಯಲಾಗುತ್ತದೆ.

ಸಾಗರ ಕಟ್ಟೆ ಪ್ರದ್ಯುಮ್ನ ತೀರ್ಥರ ಆರಾಧನೆ

ಸಾಗರಕಟ್ಟೆ  ಕಿರಿಯ ಮಧ್ವಮಠಗಳಲ್ಲಿ ಮಖ್ಯವಾದದ್ದು, ಮೈಸೂರಿನ ಸಮೀಪ  ಇರುವ  ಇಲ್ಲಿನ ಪರಂಪರೆ ಶುರುವಾಗಿದ್ದೇ ಪ್ರದ್ಯುಮ್ನ ತೀರ್ಥರಿಂದ. ಧಾರವಾಡದ ಮೇರು ವಿದ್ವಾಂಸರಾದ  ಪಂಡಿತ ವೆಂಕಟಾಚಾರ್ಯ ಪುತ್ರರಾದ  ಅವರು ಮುಳಬಾಗಿಲಿನ ಶ್ರೀ ವೇದನಿಧಿ ತೀರ್ಥರ ಬಳಿ ವೇದ-ಉಪನಿಷತ್‍ಗಳನ್ನು ಕಲಿತರು. ಕುಂದಾಪುರದ ವ್ಯಾಸರಾಯರ ಮಠದ 1008  ಲಕ್ಷ್ಮಿಪ್ರಿಯ ತೀರ್ಥರಿಂದ  ಸಂನ್ಯಾಸ ದೀಕ್ಷೆಯನ್ನು ಪಡೆದ ಅವರು  1008 ಶ್ರೀ ಶ್ರೀ  ಪ್ರದ್ಯುಮ್ನ ತೀರ್ಥ  ಎಂಬ ಅಭಿದಾನದೊಂದಿಗೆ ಸಾಗರಕಟ್ಟೆಯಲ್ಲಿ ಮಧ್ವಮಠವನ್ನು ಸ್ಥಾಪನೆ ಮಾಡಿದರು. ಅನೇಕ ರೀತಿಯಲ್ಲಿ ಮಠವನ್ನು ಪ್ರಗತಿಯ ಕಡೆಗೆ ತೆಗೆದು ಕೊಂಡು ಹೋದ  ಅವರು ತತ್ವಶಾಸ್ತ್ರದಲ್ಲಿ ಮಹಾ ವಿದ್ವಾಂಸರು ಎನ್ನಿಸಿ ಕೊಂಡಿದ್ದರು. ಸುದೀರ್ಘ ಕಾಲ ಪೀಠದಲ್ಲಿ ಇದ್ದ  ಅವರು  ರಾಕ್ಷಸ ಸಂವತ್ಸರದ ಜ್ಯೇಷ್ಠ  ಅಮಾವಾಸ್ಯೆಯಂದು ಬೃಂದಾವನಸ್ಥರಾದರು. ಅವರ  ಆರಾಧನೆಯನ್ನು ಭಕ್ತಿ ಶ್ರದ್ಧೆಗಳಿಂದ  ಆಚರಿಸಿ ಕೊಂಡು ಬರಲಾಗುತ್ತಿದೆ.

ಹರಿಹರಪುರ ಸಚ್ಚಿದಾನಂದ ಸರಸ್ವತಿಗಳ ವರ್ಧಂತಿ

ಹರಿಹರಪುರ ಶ್ರೀಮಠದ 25ನೆಯ  ಮತ್ತು ಈಗಿನ  ಪೀಠಾಧಿಪತಿಗಳಾಗಿರುವ   ಸಚ್ಚಿದಾನಂದ ಸರಸ್ವತಿಗಳು  ಶೃಂಗೇರಿಯ ಸಮೀಪದ  ಉಳವೆಯಲ್ಲಿ   ಜ್ಯೇಷ್ಟ ಬಹಳ ದ್ವಾದಶಿಯಂದು  ಜನಿಸಿದರು. ಅವರ ಪೂರ್ವಾಶ್ರಮದ ಹೆಸರು  ನಾಗರಾಜ ಶರ್ಮ. ಬಾಲ್ಯದಿಂದಲೂ ಅವರಿಗೆ ಅಧ್ಯಾತ್ಮದತ್ತ  ಒಲವು.  ಉಳವೆಯಲ್ಲಿದ್ದ ವಲ್ಮಪುರಿ ಗಣಪತಿಯ  ಅರ್ಚನೆಯನ್ನು ಮಾಡುತ್ತಾ ಅವರು  ಮೈಮರೆಯುತ್ತಿದ್ದರು. ಶಾಲಾ ಕಾಲೇಜು ಅಧ್ಯಯನದಲ್ಲಿ ಕೂಡ ಮುಂದಿದ್ದ  ಅವರು ಇಂಜಿನಿಯರಿಂಗ್ ಪದವಿ ಮುಗಿಸಿದ ನಂತರ  ಅಮೆರಿಕಾದ ಕ್ಯಾಲಿಫೋರ್ನಿಯಾದ   ಪ್ರತಿಷ್ಟಿತ ಸಂಸ್ಥೆಯಲ್ಲಿ ಉದ್ಯೋಗಿಯಾದರು. ಆದರೆ ಈ ಲೌಕಿಕದ   ಎತ್ತರ  ಅಧ‍್ಯಾತ್ಮದ ಸೆಳೆತದಿಂದ  ಅವರನ್ನು ಬಿಡುಗಡೆ ಮಾಡಲಿಲ್ಲ. ಅಧ್ಯಾತ್ಮದ ಒತ್ತಡ ತೀವ್ರವಾದ ನಂತರ  ಶೃಂಗೇರಿಯ ಜಗದ್ಗುರುಗಳಾದ  ಶ್ರೀ ಶ್ರೀ ಭಾರತಿ ತೀರ್ಥರಿಗೆ ಪತ್ರ ಬರೆದು ಈ ಕುರಿತು ವಿನಂತಿಸಿ ಕೊಂಡರು., ಅವರು ಕೂಡಲೇ ಸ್ಪಂದಿಸಿ ಅವರನ್ನು ತಮ್ಮ ಬಳಿ ಕರೆಸಿ ಕೊಂಡು ಸೂಕ್ತವಾದ ವೇದ  ಉಪನಿಷತ್‍ಗಳ ಮಾರ್ಗದರ್ಶನವನ್ನು ಮಾಡಿ  ಅಧ್ಯಾತ್ಮದ ಹಾದಿಯಲ್ಲಿ  ಮುನ್ನೆಡೆಸಿದರು.  ನಾಗರಾಜ ಶರ್ಮ ಅವರು ಶೃಂಗೇರಿಯಲ್ಲಿ ವಿದ್ಯಾಭ್ಯಾಸದಲ್ಲಿ ತೊಡಗಿದ್ದಾಗಲೇ  ಹರಿಹರಪುರದ ನಾಗರೀಕರು  ಶ್ರೀ ಶ್ರೀಗಳ ಬಳಿ ವಿನಂತಿಯನ್ನು ತಂದರು. ಹರಿಹರಿಪುರದ ಶ್ರೀ ಶಾರದಾ ಲಕ್ಷ್ಮಿ ನರಸಿಂಹ ಪೀಠದ 24ನೇ ಗುರುಗಳಾಗಿದ್ದ  ಶ್ರೀ ಶ್ರೀ  ಅಭಿನವ ರಮಾನಂದ ಸರಸ್ವತಿಗಳು ಉತ್ತರಾಧಿಕಾರಿಗಳನ್ನು  ನೇಮಿಸಿದೆ  ಸಮಾಧಿಸ್ಥರಾಗಿದ್ದರಿಂದ  ಪೀಠವು ಖಾಲಿ ಬಿದ್ದಿತ್ತು. ಅದಕ್ಕೆ ಸೂಕ್ತರನ್ನು  ನೇಮಿಸುವಂತೆ ವಿನಂತಿಸಿ ಕೊಳ್ಳಲು ಅವರು ಬಂದಿದ್ದರು. ಇದನ್ನು ಕೂಡಲೇ ಗಮನಕ್ಕೆ ತೆಗೆದು ಕೊಂಡ  ಶ್ರೀ ಶ್ರೀ ಭಾರತಿ ತೀರ್ಥರು  ನಾಗರಾಜ ಶರ್ಮ ಅವರು ಸೂಕ್ತರು ಎಂದು ಭಾವಿಸಿ ಅವರನ್ನೇ ಈ ಪೀಠಕ್ಕೆ  ನೇಮಿಸಿದರು.  ಹೀಗೆ 2001ರ ಮೇ 21ರಂದು  ನಾಗರಾಜ ಶರ್ಮ  ಅವರು ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಎಂಬ ಅಭಿದಾನದೊಂದಿಗೆ 25ನೇ ಪೀಠಾಧಿಪತಿಗಳಾದರು.

ಶ್ರೀ ಶ್ರೀಗಳು ಪೀಠಕ್ಕೆ ಬಂದ ಮೇಲೆ ಹಲವು ಉತ್ತಮ  ಕಾರ್ಯಕ್ರಮಗಳನ್ನು ರೂಪಿಸಿದರು. ಶ್ರೀಮಠವನ್ನು ಸಂಪೂರ್ಣ ನವೀಕರಿಸಿದರು. ದಕ್ಷಿಣ ಭಾರತಾದ್ಯಂತ ಮಾತ್ರವಲ್ಲದೆ  ಅಮೆರಿಕಾದಲ್ಲಿ ಕೂಡ ಶಾಖೆಯನ್ನು ಸ್ಥಾಪಿಸಿದರು. ಶಿವ ದೀಕ್ಷೆ, ಕೋಟಿ ಪಾರಾಯಣ, ವಿಶ‍್ವಶಾಂತಿ ಉಪಾಸನಾ ಮೊದಲಾದ ವಿನೂತನ ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಸಚ್ಚಿದಾನಂದ ವಚನಾಮೃತಂ ಎನ್ನುವ ಹೆಸರಿನಲ್ಲಿ ಕನ್ನಡ  ಮತ್ತು ಸಂಸ್ಕೃತದಲ್ಲಿ ಶ್ರೀಗಳು ಕೀರ್ತನೆಗಳನ್ನು ರಚಿಸಿದ್ದು. ಬ್ರಹ್ಮಾನುಭವ ಭಾರದಿ ಎನ್ನುವ ಕೃತಿಯನ್ನು ರಚನೆ ಮಾಡಿದ್ದಾರೆ. ಅವರು ಉತ್ತಮ ಗಾಯಕರೂ ಕೂಡ ಶ್ರೀಶ್ರೀಗಳ ವರ್ಧಂತಿ ಉತ್ಸವವನ್ನು ಒಂದು ವಾರದ  ಕಾರ್ಯಕ್ರಮವಾಗಿ ವಿಶೇಷವಾಗಿ ಆಚರಿಸಲಾಗುತ್ತದೆ.

ಬುಧ ಜಯಂತಿ

ಜ್ಯೇಷ್ಠ ಕೃಷ್ಣ ಏಕಾದಶಿಯಾದ ಇಂದು ಬುಧ ಜಯಂತಿಯನ್ನು ಆಚರಿಸಲಾಗುತ್ತದೆ. ಈ ದಿನ ಬುಧ ಗ್ರಹದ ಪ್ರಭಾವದಿಂದ ಪೀಡಿತರಾಗಿರುವವರು ವಿಶೇಷ ಪೂಜೆ, ಶಾಂತಿ ಹೋಮಗಳನ್ನು ನೆರವೇರಿಸುವುದು ಸಾಮಾನ್ಯ. ನವಗ್ರಹಗಳಲ್ಲಿ ಬುಧ ಗ್ರಹವೂ ಒಂದು. ಸೋಮ (ಚಂದ್ರ) ಹಾಗೂ ರೋಹಿಣಿ ಪುತ್ರನೆಂದು ಹೇಳಲಾಗಿರುವ ಬುಧನನ್ನು ಸೌಮ್ಯ, ರೌಹಿಣ್ಯ ಹಾಗೂ ತುಂಗಾ ಎಂಬುದಾಗಿ ಕರೆಯಲ್ಪಡುತ್ತಾನೆ. ಬುಧವಾರಕ್ಕೆ ಅಥಿಪತಿಯಾದ ಬುಧನು, ಬುದ್ಧಿಶಕ್ತಿ ಹಾಗೂ ಜ್ಞಾನದ ಮೇಲೆ ಪ್ರಭಾವ ಬೀರುತ್ತಾನೆ. ಹೀಗಾಗಿ ಈತನ ಪರಿಣಾಮಗಳು ಮನುಷ್ಯನ ಸಕಾರಾತ್ಮಕ ಬೆಳವಣಿಗೆಗೆ ಸಹಕಾರಿ. ಅಲ್ಲದೆ, ಮರೆಗುಳಿತನ, ಓದಿನಲ್ಲಿ ನಿರಾಸಕ್ತಿ, ವ್ಯಾಪಾರದಲ್ಲಿ ನಷ್ಟ, ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ದ್ವಂದ್ವ, ಉಸಿರಾಟದಲ್ಲಿ ತೋದರೆ ಹಾಗೂ ನರದೌರ್ಬಲ್ಯಗಳೇ ಮುಂತಾದ ಆರೋಗ್ಯ ಸಮಸ್ಯೆಗಳು ಬುಧ ಗ್ರಹದ ಪ್ರಭಾವದಿಂದ ಪೀಡಿತರಾಗುವರು.

ತಿಳಿ ಹಳದಿ ಅಥವಾ ಹಸಿರು ಮೈಬಣ್ಣವನ್ನು ಹೊಂದಿರುವ ಬುಧನು, ಹಳದಿ ವಸ್ತ್ರವನ್ನು ಧರಿಸಿರುವಂತೆ ಬಿಂಬಿಸಲಾಗುತ್ತದೆ. ಎಂಟು ಅಶ್ವಗಳನ್ನೊಳಗೊಂಡ ವಾಯು ಮತ್ತು ಅಗ್ನಿಯಿಂದ ರಚಿಸಲ್ಪಟ್ಟ ರಥವನ್ನು ಅಥವಾ ಸಿಂಹವನ್ನು ತನ್ನ ವಾಹನವನ್ನಾಗಿ ಮಾಡಿಕೊಂಡಿರುತ್ತಾನೆ.

ನವಗ್ರಹದ ಅಧಿಪತಿಯಾಗಿರುವ ಬುಧ, ಸೂರ್ಯ ಮತ್ತು ಶುಕ್ರ ಗ್ರಹಗಳೊಂದಿಗೆ ಸ್ನೇಹ ಪರವಾಗಿದ್ದು, ಚಂದ್ರನೊಂದಿಗೆ ದ್ವೇಷವನ್ನು ಕಾಪಾಡಿಕೊಳ್ಳುತ್ತದೆ. ಸಮಿತ್ತುಗಳಲ್ಲಿ ಅಪಾಮಾರ್ಗ ಅಂದರೆ ಉತ್ತರಾಣಿಯನ್ನು ಬುಧನಿಗೆ ಸಮರ್ಪಿಸಲಾಗುತ್ತದೆ. ಬುಧನ ಪ್ರತಿಮೆಯು ಸುವರ್ಣ ಅಂದರೆ ಚಿನ್ನದಿಂದ ಮಾಡಲ್ಪಟ್ಟಿರುವುದು ಪೂಜೆಗೆ ವಿಹಿತ. ಕನ್ಯಾ ಹಾಗೂ ಮಿಥುನ ರಾಶಿಗಳಿಗೆ ಅಧಿಪತಿಯಾಗಿರುವ ಬುಧನಿಗೆ ಹಾಲಿನಿಂದ ತಯಾರಿಸಿದ ಖೋವಾ ಅಥವಾ ಹೆಸರುಕಾಳಿನಿಂದ ತಯಾರಿಸಿದ ಪದಾರ್ಥವನ್ನು ನೈವೇದ್ಯವನ್ನಾಗಿ ಸಮರ್ಪಿಸುವುದು ಉತ್ತಮ.

ಬುಧಗ್ರಹ ಪೀಡಾಪರಿಹಾರ ಸ್ತೋತ್ರ
ಉತ್ಪಾತರೂಪೀ ಜಗತಾಂ ಚಂದ್ರಪುತ್ರೋ ಮಹಾದ್ಯುತಿಃ 
|
ಸೂರ್ಯಪ್ರಿಯಕರೋ ವಿದ್ವಾನ್ಪೀಡಾಂ ಹರತು ಮೇ ಬುಧಃ 
||

ಅಂತರರಾಷ್ಟ್ರೀಯ ಮಾದಕ ಸೇವನೆ ಮತ್ತು ಕಳ್ಳ ಸಾಗಾಣಿಕಾ ವಿರೋಧಿ ದಿನ

ವಿಶ್ವಸಂಸ್ಥೆಯು ತನ್ನ 42/112 ನೇ  ನಿರ್ಣಯದ  ಅನ್ವಯ 1987  ಡಿಸಂಬರ್‍ ನಲ್ಲಿ ಮಾದಕ ಸೇವನೆಯನ್ನು ಜಾಗತಿಕ ಪಿಡುಗು ಎಂದು ಕರೆದು ಜೂನ್ 25ರಂದು ಅಂತರ ರಾಷ್ಟ್ರೀಯ ಮಾದಕ ಸೇವನೆ ಮತ್ತು ಕಳ್ಳ ಸಾಗಾಣಿಕಾ ವಿರೋಧಿ ದಿನವನ್ನು ಆಚರಿಸಲು ನಿರ್ಧರಿಸಿತು. ಪ್ರತಿ ವರ್ಷವೂ ಏರುತ್ತಿರುವ  ಮಾದಕ ವಸ್ತು ಸೇವನೆಯ   ಅಂಕಿ-ಅಂಶಗಳನ್ನು ಗಮನಿಸಿ ವರ್ಷದ ವಿಷಯವನ್ನು ನಿರ್ಧರಿಸಿ ಯುವ ಜನರಲ್ಲಿ ಜಾಗೃತಿ ಮೂಡಿಸಲು ಈ ದಿವಸದ  ಮೂಲಕ ಪ್ರಯತ್ನವನ್ನು ಮಾಡಲಾಗುತ್ತದೆ.

ಕಾರ ಹುಣ್ಣಿಮೆ


ಜ್ಯೇಷ್ಠ ಮಾಸದ ಹುಣ್ಣಿಮೆ. ಅಚಲವಾದ ಪತಿನಿಷ್ಟೆಯಿಂದ ಕಾಲಮೃತ್ಯುವನ್ನು ಗೆದ್ದ ಮಹೋತ್ಸವದ ದಿನ. ಹೆಣ್ಣು ಮಕ್ಕಳಿಗೆ ಇದು ಮುಖ್ಯವಾದ ಹಬ್ಬ. ಸಾವಿತ್ರಿ ಸೌಭಾಗ್ಯವನ್ನು ಪಡೆದ ದಿನ. ಇಂದು ಆಲದ ಮರಕ್ಕೆ ಪೂಜೆ ಸಲ್ಲಿಸಬೇಕೆಂದು ವಿಧಿ. ಕೆಲವರು ಉಪವಾಸವನ್ನು ಮಾಡಿ ಮಾರನೆಯ ದಿನ ಪಾರಣೆ ಮಾಡುತ್ತಾರೆ.. ಮೃಗಶಿರ ಮಾಸ ಪ್ರವೇಶಿಸುತ್ತಿದ್ದಂತೆ ಬರುವ ರೈತರ ಪ್ರಥಮ ಹಬ್ಬ ಕಾರ ಹುಣ್ಣಿಮೆ ಮೂಲಕ, ಅನ್ನದಾತರು ಕೃಷಿ ಚಟುವಟಿಕೆಗಳಿಗೆ ಚಾಲನೆ ನೀಡುವುದಕ್ಕೆ ಮುನ್ನ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುವ ಮೂಲಕ ತಮ್ಮ ರಾಸುಗಳಿಗೆ ಅದ್ಧೂರಿಯಾಗಿ ಸಿಂಗರಿಸಿ ಎಂದು ನೀಡದ ಭೋೕಜನವನ್ನು,ಫಲ ತಾಂಬೂಲವನ್ನು ನೀಡುತ್ತಾರೆ.

ಅಷ್ಟೇ ಅಲ್ಲದೆ ಈ ದಿನದ ಅತ್ಯಂತ ಶಾಖಾಹಾರಿಯಾದ ಬಸವಣ್ಣ(ಎತ್ತುಗಳು)ನಿಗೆ ಹಸಿ ಮೊಟ್ಟೆಯನ್ನು ಇನ್ನಿತರ ವಸ್ತುಗಳಿರುವ ಗೊಟ್ಟವನ್ನು ಬಿದಿರುವ ಕೊಂಚಿನ ಮೂಲಕ ಎತ್ತುಗಳಿಗೆ ಗೊಟ್ಟ ಹಾಕುತ್ತಾರೆ. ಇದರಿಂದ ಮೃಗಶಿರ ಮಾಸದಿಂದ ಬದಲಾಗುವ ವಾತಾವರಣದಿಂದ ತಮ್ಮ ರಾಸುಗಳಿಗೆ ಎನೂ ತೊಂದರೆಯಾಗದಿರಲಿ ಎನ್ನುವ ನಂಬಿಕೆ ರೈತರಲ್ಲಿದೆ.

ವಟಸಾವಿತ್ರಿ ವ್ರತಾರಂಭ

ಪತ್ನಿಯು ತನ್ನ ಪತಿಯ ಆಯುಷ್ಯ ವೃದ್ಧಿಗಾಗಿ ಆಚರಿಸುವ ವೃತವೇ ಈ 'ವಟ ಸಾವಿತ್ರಿ ವ್ರತ'. ಈ ವ್ರತವನ್ನು ಗುಜರಾತ್‌, ಮಹಾರಾಷ್ಟ್ರ ಹಾಗೂ ಕರ್ನಾಟಕ ಸೇರಿದಂತೆ ಇನ್ನೂ ಹೆಚ್ಚಿನ ರಾಜ್ಯಗಳಲ್ಲಿ ಆಚರಿಸಲಾಗುತ್ತದೆ. ಪೌರಾಣಿಕ ಹಿನ್ನೆಲೆಯನ್ನು ಹೊಂದಿರುವ ಈ ವ್ರತವು ಸತ್ಯವಾನ್‌ ಸಾವಿತ್ರಿಯನ್ನು ನೆನೆದು ಆಚರಿಸಲಾಗುತ್ತದೆ. ಒಮ್ಮೆ ಸಾವಿತ್ರಿಯು ತನ್ನ ಪತಿ ಸತ್ಯವಾನ್‌ನ್ನು ಯಮನಿಂದ ಉಳಿಸಿಕೊಳ್ಳಲು ಈ ವ್ರತವನ್ನು ಆಚರಿಸುತ್ತಾಳೆ. ಇದರಿಂದ ಯಮನು ಸಂತಸಗೊಂಡು ಸತ್ಯವಾನ್‌ನ್ನು ಆಕೆಗೆ ಒಪ್ಪಿಸಿದ್ದಾನೆಂಬ ನಂಬಿಕೆಯಿದೆ. ಈ ದಿನ ಮಹಿಳೆಯರು ಆಲದ ಮರವನ್ನು ಪೂಜಿಸಿ, ಆಲದ ಮರಕ್ಕೆ ಪ್ರದಕ್ಷಿಣೆಯನ್ನು ಹಾಕುತ್ತಾರೆ. ವಟ ಸಾವಿತ್ರಿ ವ್ರತವು ಮೇ 22 ರ ಶುಕ್ರವಾರದಂದು ಆಚರಿಸಲಾಗುತ್ತಿದ್ದು, ಈ ಬಾರಿಯ ಶನಿ ಜಯಂತಿಯನ್ನು ಕೂಡ ಇದೇ ದಿನ ಆಚರಿಸಲಾಗುತ್ತದೆ. ಅಲದ ಮರದ ಸುತ್ತ ದಾರವನ್ನು ಕಟ್ಟಿ, ತಾಮ್ರ ಅಥವಾ ಯಾವುದೇ ನಾಣ್ಯಗಳನ್ನಿಟ್ಟು ಪತಿಯ ಆಯುಷ್ಯ ವೃದ್ಧಿಗೆ ಪಾರ್ಥಿಸುತ್ತಾರೆ.ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ, ಸೂರ್ಯದೇವನಿಗೆ ಅರ್ಘ್ಯವನ್ನು ಒಪ್ಪಿಸಬೇಕು ಮತ್ತು ಉಪವಾಸ ಮಾಡುವುದಾಗಿ ನಿರ್ಧರಿಸಬೇಕು. ನಂತರ ಹೊಸ ಬಟ್ಟೆಯನ್ನು ತೊಟ್ಟು, ಹಣೆಗೆ ಕುಂಕುಮ, ಕೆನ್ನೆಗೆ ಅರಶಿಣ, ಮುಡಿಗೆ ಹೂ ಮುಡಿದು ಮದುವೆಯಾದ ಮಹಿಳೆ ಹೇಗಿರಬೇಕೋ ಹಾಗೇ ಅಲಂಕಾರ ಮಾಡಿಕೊಳ್ಳಬೇಕು. ನಂತರ ಪೂಜೆಗೆ ಬೇಕಾದ ಎಲ್ಲಾ ವಸ್ತುಗಳನ್ನು ಬುಟ್ಟಿಯಲ್ಲಿಟ್ಟುಕೊಂಡು ವಟ ಮರ ಅಥವಾ ಆಲದ ಮರದ ಕೆಳಗೆ ಇಡಬೇಕು. ಆದರೆ ಪೂಜೆಯ ವಸ್ತುಗಳನ್ನು ಆಲದ ಮರದ ಕೆಳಗೆ ಇಡುವ ಮುನ್ನ ಮರದ ಸುತ್ತಮುತ್ತಲೂ ಶುದ್ಧ ಮಾಡಬೇಕು. ಶುದ್ಧವಾದ ನಂತರ ಪೂಜೆಯ ಸಾಮಾಗ್ರಿಗಳನ್ನು ಆ ಸ್ಥಳದಲ್ಲಿಟ್ಟು ಸತ್ಯವಾನ್‌ ಸಾವಿತ್ರಿಯ ವಿಗ್ರಹವನ್ನು ಸ್ಥಾಪಿಸಿ ಆ ವಿಗ್ರಹಕ್ಕೆ, ಧೂಪ, ದೀಪ, ಅರಶಿಣ - ಕುಂಕುಮ, ನೆನೆಸಿದ ಕಡಲೆಕಾಳು, ಮಾಂಗಲ್ಯ ಸೂತ್ರ,  ಹೂವುಗಳನ್ನು ಅರ್ಪಿಸಿ ಪೂಜಿಸಬೇಕು. ಪೂಜೆ ಮುಗಿದ ನಂತರ ಆಲದ ಮರಕ್ಕೆ ದಾರದಿಂದ 5, 11, 21, 51 ಅಥವಾ 108 ಬಾರಿ ಸುತ್ತಬೇಕು. ಇದರೊಂದಿಗೆ ತಾಮ್ರದ ನಾಣ್ಯ ಅಥವಾ ಯಾವುದೇ ರೀತಿಯ ನಾಣ್ಯವನ್ನು ಇಡಬೇಕು.ಪ್ರಾಚೀನ ಕಾಲದಲ್ಲಿ ಮದ್ರಾ ರಾಜನಾದ ಅಶ್ವಪತಿಯು ಮಕ್ಕಳಿಲ್ಲದ ಸಮಸ್ಯೆಯಿಂದ ಬೇಸರಕ್ಕೆ ಒಳಗಾಗಿದ್ದನು. ರಾಜ ತಾನು ಮಕ್ಕಳನ್ನು ಹೇಗಾದರೂ ಪಡೆಯಲೇಬೇಕೆಂದು ಸಾವಿತ್ರಿ ದೇವಿಯ ಕಠಿಣ ಯಜ್ಞ ಮತ್ತು ಪೂಜೆಯನ್ನು ಮಾಡುವಲ್ಲಿ ತೊಡಗಿದನು. ಈತನ ಕಠಿಣ ಪೂಜೆಯಿಂದ ಈತನಿಗೆ ಹೆಣ್ಣು ಮಗುವೊಂದು ಪ್ರಾಪ್ತಿಯಾಗುತ್ತದೆ. ಆ ಮಗು ತುಂಬಾನೇ ರೂಪವತಿಯಾಗಿತ್ತು. ಸಾವಿತ್ರಿ ದೇವಿಯ ಪೂಜೆಯಿಂದ ಹುಟ್ಟಿದ ಮಗುವಾದ್ದರಿಂದ ರಾಜನು ಆ ಮಗುವಿಗೆ ಸಾವಿತ್ರಿ ಎಂದು ನಾಮಕರಣ ಮಾಡುತ್ತಾನೆ.ಸಾವಿತ್ರಿಯು ಚಿಕ್ಕ ವಯಸ್ಸಿನವಳಿದ್ದಾಗಲೇ ಸಾಲ್ವ ದೇಶದ ರಾಜನ ಮಗನಾದ ಸತ್ಯವಾನ್‌ನ್ನು ಪ್ರೀತಿಸುತ್ತಾಳೆ. ಅದೇ ಸಮಯದಲ್ಲಿ ಸತ್ಯವಾನ್‌ಗೂ ಕೂಡ ಸಾವಿತ್ರಿಯ ಮೇಲೆ ಮನಸಾಗಿರುತ್ತದೆ. ಸಾವಿತ್ರಿ ಚಿಕ್ಕವಳಿದ್ದಾಗಲೇ ಒಂದು ದಿನ ಅಶ್ವಪತಿಯು ತನ್ನ ಮಂತ್ರಿಗಳಲ್ಲಿ ಮಗಳಿಗೊಂದು ವರನನ್ನು ಹುಡುಕಿ ತರುವಂತೆ ಆದೇಶಿಸುತ್ತಾನೆ. ಆ ಸಂದರ್ಭದಲ್ಲಿ ಸಾವಿತ್ರಿಯು ಸತ್ಯವಾನ್‌ನ್ನೇ ವರನನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಾಳೆ. ಆಗ ನಾರದ ಮಹರ್ಷಿಗಳು ಈತನನ್ನು ಮದುವೆಯಾದರೆ ಕೇವಲ 12 ವರ್ಷಗಳ ನಂತರ ಈತ ಮರಣ ಹೊಂದುತ್ತಾನೆಂದು ಹೇಳುತ್ತಾರೆ. ಆ ಸಂದರ್ಭದಲ್ಲಿ ಸತ್ಯವಾನ್‌ ತನ್ನ ಮಗಳಿಗೆ ಬೇರೊಂದು ವರನನ್ನು ಆಯ್ಕೆ ಮಾಡಿಕೊಳ್ಳುವಂತೆ ಹೇಳುತ್ತಾನೆ. ಆದರೆ ಸಾವಿತ್ರಿ ತಂದೆಯ ಮಾತನ್ನು ನಿರಾಕರಿಸಿ ಸತ್ಯವಾನ್‌ ನ್ನೇ ವಿವಾಹವಾಗಿ ತನ್ನ ಪತಿ ಮತ್ತು ಅತ್ತೆಯೊಂದಿಗೆ ಕಾಡಿನಲ್ಲೇ ವಾಸಿಸಲು ಪ್ರಾರಂಭಿಸಿದಳು.ನಾರದರಿಂದ ಸತ್ಯವಾನ್‌ ನ ಸಾವಿನ ವಿಷಯ ತಿಳಿದಾಗಿನಿಂದ ಸಾವಿತ್ರಿಯು ಉಪವಾಸ ವ್ರತವನ್ನು ಆಚರಿಸುತ್ತಲೇ ಬರುತ್ತಾಳೆ. ತನ್ನ ಪತಿ ಸತ್ಯವಾನ್‌ ನ್ನು ಯಮರಾಜ ಕರೆದುಕೊಂಡು ಹೋಗಲು ಬಂದಾಗಲೇ ಸಾವಿತ್ರಿ ಕೂಡ ಯಮನನ್ನು ಹಿಂಬಾಲಿಸಿಕೊಂಡೇ ಹೋಗಿದ್ದಳು. ಆಕೆಯ ಪತಿ ಧರ್ಮವನ್ನು ಮೆಚ್ಚಿದ ಯಮನು ಆಕೆಯಲ್ಲಿ ನಿನಗೆ ಯಾವ ವರಬೇಕು ಕೇಳಿಕೋ ಎನ್ನುತ್ತಾನೆ. ಆಗ ಸಾವಿತ್ರಿಯು ಮೊದಲು ತನ್ನ ಅತ್ತೆಗೆ ಕಣ್ಣುಗಳನ್ನು ಕರುಣಿಸು ತದನಂತರ ತನ್ನ ಗಂಡನಿಗೆ ದೀರ್ಘಾಯುಷ್ಯವನ್ನು ನೀಡೆಂದು ಕೇಳಿಕೊಳ್ಳುತ್ತಾಳೆ.ಸಾವಿತ್ರಿ ತನ್ನ ಜಾಣ್ಮೆಯಿಂದ ಯಮನಲ್ಲಿ ಕೇಳಿದ ವರವನ್ನು ಯಮನು ಕರುಣಿಸಲೇ ಬೇಕಾಗಿತ್ತು. ಹಾಗಾಗಿ ಸಾವಿತ್ರಿಯ ವರದ ಬಲೆಗೆ ಸಿಕ್ಕಿ ಹಾಕಿಕೊಂಡಿದ್ದ ಯಮರಾಜನು ಸಾವಿತ್ರಿಯ ಪತಿ ಸತ್ಯವಾನ್‌ನ ಜೀವವನ್ನು ಕಡಲೆಕಾಳಿನ ರೂಪದಲ್ಲಿ ಪುನಃ ಆಕೆಗೆ ನೀಡುತ್ತಾನೆ. ಆದ್ದರಿಂದ ವಟ ಸಾವಿತ್ರಿ ಪೂಜೆಯನ್ನು ಮಾಡುವಾಗ ನೆನೆಸಿದ ಕಡಲೆಕಾಳನ್ನು ಅರ್ಪಿಸಲಾಗುತ್ತದೆ.

ಕೊಲ್ಲೂರು ಮೂಕಾಂಬಿಕಾ ಜಯಂತಿ

ತುಳು ನಾಡಿನ ಸಪ್ತಕ್ಷೇತ್ರಗಳಲ್ಲಿ ಕೊಲ್ಲೂರು ಮುಖ್ಯವಾದದ್ದು. ಈಶಾನ್ಯ ಗಡಿಯ ಪಶ್ಚಿಮ ಘಟ್ಟಗಳ ತಪ್ಪಲಲ್ಲಿರುವ ಸುಂದರವಾದ ಗ್ರಾಮ ಇದು. ಕೊಲ್ಲೂರಿಗೆ ಮೂಕಾಂಬಿಕಾ ಪುರ ಎನ್ನುವ ಹೆಸರು ಕೂಡ ಇದೆ.ಇಲ್ಲಿರುವ ದೇವಿಯು ಲಕ್ಷ್ಮಿ, ಸರಸ್ವತಿ, ಶಕ್ತಿ ಹೀಗೆ ತ್ರಿಮಾತೆಯರ ಮೂರ್ತರೂಪದ ಎಂದು ಕರೆಸಿಕೊಳ್ಳುವುದರಿಂದ ಇದನ್ನು ಮಹಾಶಕ್ತಿಕ್ಷೇತ್ರ ಎಂದೂ ಕೂಡ ಕರೆಯಲಾಗುತ್ತದೆ. ಕುಂದಾಪುರ ತಾಲ್ಲೋಕಿಗೆ ಸೇರಿದ ಕೊಲ್ಲೂರು ಸೌಪರ್ಣಿಕಾ ನದಿಯ ತೀರದಲ್ಲಿದೆ. ಕೋಲ ಮಹರ್ಷಿಗಳು ತಪಸ್ಸು ಮಾಡಿದ್ದರಿಂದ ಇದಕ್ಕೆ ಹಿಂದೆ ಕೋಲಾಪುರ ಎಂದು ಹೆಸರಿತ್ತು.ದಟ್ಟಾರಣ್ಯದ ನಡುವೆ ಈ ಪ್ರದೇಶವು ಇತ್ತು.  ಹಿಂದೆ ಕಂಹಾಹುರ ಎನ್ನುವ ರಾಕ್ಷಸನ ಕಾಟವನ್ನು ತಾಳಲಾರದೆ ಋಷಿಗಳು ಕೋಲ ಮಹರ್ಷಿಗಳ ನೇತೃತ್ವದಲ್ಲಿ ಆದಿಪರ ಶಕ್ತಿಯ ಮೊರೆಯನ್ನು ಹೊಕ್ಕರು. ಕಂಹಾಹಾರನಾದರೂ ಈಶ್ವರನ ಪರಮ ಭಕ್ತನ ಪರಮೇಶ್ವರನನ್ನು ಒಲಿಸಿ ಅನೇಕ ವರಗಳನ್ನು ಪಡೆಯಲು ಸನ್ನದ್ದನಾದನು. ಅದರ ಅಪಾಯವನ್ನು ಅರಿತ ದೇವಿಯು ಅವನನ್ನು ಮೂಕನನ್ನಾಗಿಸಿದಳು. ಮೂಕಾಸುರ ಎಂದು ಹೆಸರಾದ ಅವನು ಕೊಲ್ಲೂರಿನಲ್ಲಿಯೇ ನೆಲೆ ನಿಂತು ಋಷಿಗಳನ್ನು ಹಿಂಸಿಸುವುದನ್ನು ಮುಂದುವರೆಸಿದನು. ಆಗ ದೇವಿಯು ಶಕ್ತಿರೂಪದಲ್ಲಿ ಅವನನ್ನು ವಧಿಸಿ ಕೋಲಾಪುರದಲ್ಲಿಯೇ ನೆಲೆ ನಿಂತಳು. ಆದಿಶಂಕರರು ತಮ್ಮ ದೇಶ ಪರ್ಯಟನೆಯ ಸಂದರ್ಭದಲ್ಲಿ ಇಲ್ಲಿ ತಪಸ್ಸನ್ನು ಆಚರಿಸಿದ್ದರೆಂದೂ ಶ್ರೀಚಕ್ರದ ಮೇಲೆ ದೇವಿಯನ್ನು ಸ್ಥಾಪಿಸಿ ಇದನ್ನು ಶಕ್ತಿಪೀಠವನ್ನಾಗಿಸಿದರೆಂದೂ ನಂಬಿಕೆ ಇದೆ. ಈಗಿರುವ ಶಿಲಾ ದೇವಾಲಯವನ್ನು ಬಂಕಿ ಅರಸರ ವಂಶದ ಸಂಕಣ್ಣ ಸಾಮಂತರ ಅಳಿಯ ವೆಂಕಣ್ಣ ಸಾಮಂತನು ಕಟ್ಟಿಸಿದನು. ಕೆಳದಿಯ ಅರಸರ ಕಾಲದಲ್ಲಿ ದೇಗುಲಕ್ಕೆ ಮಹತ್ವವು ಲಭಿಸಿತು. ಈ ದೇವಿಗಾಗಿ ಅವರು ದೊಡ್ಡ ಪ್ರಮಾಣದ ಉಂಬಳಿನ್ನು ನೀಡಿದ್ದಲ್ಲದೆ ಅನೇಕ ವಜ್ರ, ಬಂಗಾರ ಹಾಗೂ ರತ್ನಾಭರಣಗಳನ್ನು ನೀಡಿದ್ದರು.

ವಿಶ್ವಿ ಧೂಮಪಾನ ನಿಷೇಧ ದಿನ

ವಿಶ್ವ ಧೂಮಪಾನ ನಿಷೇಧ ದಿನವು ವಿಶ್ವ ಪರ್ಯಂತ ಪ್ರತಿ ವರ್ಷ ೩೧ ಮೆ ಯಂದು ಆಚರಿಸಲಾಗುತ್ತದೆ ವಿಶ್ವ ಆರೋಗ್ಯ ಸಂಘಟನೆಯ ಸದಸ್ಯ ರಾಷ್ಟ್ರಗಳು ೧೯೮೭ರ ಇಸವಿಯಲ್ಲಿ ಧೂಮಪಾನ ಸೇವನೆಯಿಂದ ಉಂಟಾಗುವ ರೋಗ ಮತ್ತು ಸಾವು ನೋವುಗಳನ್ನು ಸರ್ವರ ಗಮನಕ್ಕೆ ತರಲು ವಿಶ್ವ ಧೂಮಪಾನ ನಿಷೇಧ ದಿನವನ್ನು ಆಯೋಜಿಸಿದರು..೧೯೮೭ರಲ್ಲಿ ಮೊದಲ ಬಾರಿಗೆ ವಿಶ್ವ ಆರೋಗ್ಯ ಸ೦ಸ್ಥೆಯು ಧೂಮಪಾನ  ರಹಿತ ದಿನದ ಆಚರಗೆಯ ಬಗ್ಗೆ ಅದಿನೂಚನೆ ಹೊರಡಿಸಿತು.ವಿಶ್ವ ಆರೋಗ್ಯ ಸ೦ಸ್ಥೆಯು ಆರೋಗ್ಯದ ದೃಷ್ಟಿಯಿ೦ದ ಧೂಮಪಾನ ನಿಷೇಧ ಬಗ್ಗೆ ಚಿ೦ತನೆಯನ್ನು ಕೈಗೊ೦ಡಿತು. ಧೂಮಪಾನದಿಂದ   ಪ್ರತಿ ವರ್ಷ ಪ್ರಪ೦ಚದಾದ್ಯ೦ತ ಆರು ಮಿಲಿಯ೦ನ್ ಅಷ್ಟು ಜನರು ಮರಣ ಹೊ೦ದುತಿದ್ದಾರೆ.

ಧೂಮಪಾನ ಕೆಟ್ಟದ್ದು ಆದರೆ ಧೂಮಪಾನಿಗಳು ಕೆಟ್ಟವರಲ್ಲ.ಆದುದರಿ೦ದ ಸರ್ಕಾರ ಮನುಷ್ಯನ ಭವಿಶ್ಯದ ಬಗ್ಗೆ ಚಿ೦ತಿಸಿ ಧೂಮಪಾನ ನಿಷೇಧವನ್ನು ಮಾಡುತ್ತಾರೆ.ಭಾರತ ದೇಶದಲ್ಲಿ ಕ್ಯಾನ್ಸರ್ ಹೆತ್ತ ಸೊಸೈಟಿ ರೆಡ್ ಕ್ರಾಸ್ ಸ೦ಸ್ಥೆ,ಯೆನ್ ಜಿ ಒ,ಮು೦ತಾದ ಸ೦ಸ್ಥೆಗಳು ಧೂಮಪಾನದ ದುಷ್ಪರಿಣಾಮಗಳ ಬಗ್ಗೆ ಹಲವು ಉಪನ್ಯಾಸ ಗಳನ್ನು,ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯ ಕ್ರಮಗಳನ್ನುಮೂಡುತ್ತಿವೆ.ಹಾಗೆಯೇ ಧೂಮಪಾನದ  ಯಾವುದೇ ರೀತಿಯ ಜಾಹಿರಾತಿಗೂ ಅವಕಾಶ ಕೊಡುತಿಲ್ಲ.ತಮಿಳುನಾಡಿನಲ್ಲಿ ಕ್ಯಾನ್ಸರ್ ಸ೦ಸ್ಥೆ ತ೦ಬಾಕು ನಿಯ೦ತ್ರಣ ತೆರೆದಿದೆ.

ಇತ್ತೀಚಿನ ದಿನಗಳಲ್ಲಿ ವಯಸ್ಸಾದವರಿ೦ದ ಅ೦ದರೆ ೩೦-೪೦ ಹರೆಯದವರಿಗಿ೦ತ ಹೆಚ್ಚಾಗಿ ಯುವಕರೆ ಹೆಚ್ಚಾಗಿಧೂಮಪಾನ ಸೇವನೆ ಮಾಡುತ್ತಿದ್ದಾರೆ. ಆ ಯವಕರಿಗೆ ಅದರಿ೦ದ ಹಾಗುವ ಹಾನಿ,ತೊ೦ದರೆಗಳನ್ನು ಅರ್ಥಮಾಡಿಸಲು ಈ ದಿನ ಒ೦ದು ಪ್ರಯತ್ನ ಇದನ್ನು ವಿಶ್ವದಾದ್ಯ೦ತೆ ಆಚರಿಸುತ್ತಾರೆ.ಈ ದಿನವನ್ನು ಬೂದಿ ಟ್ರೇ ಗಳಲ್ಲಿ ಧೂಮವನ್ನು ಇಟ್ಟು ಆಚರಿಸುತ್ತಾರೆ.

ಶಿರಹಟ್ಟಿ ಫಕೀರೇಶ್ವರ ರಥ

ದ್ವೇಷ ಬಿಡು ಪ್ರೀತಿ ಮಾಡು ಎಂಬ ಸಂದೇಶ ಸಾರಿ, ನೂರಾರು ಪವಾಡ ಮಾಡಿ ಹಿಂದೂ-ಮುಸ್ಲಿಮರಲ್ಲಿ ಸಹೋದರತೆ, ಸಹಬಾಳ್ವೆಯ ಬೀಜ ಬಿತ್ತಿದ ಶಿರಹಟ್ಟಿ ಫಕೀರೇಶ್ವರ (ಚನ್ನವೀರ)ರು ಐಕ್ಯತೆ ತಾಣ ಸದ್ಯ ಇಷ್ಟಾರ್ಥ ಸಿದ್ಧಿಯ ಧಾರ್ಮಿಕ ಸುಕ್ಷೇತ್ರವಾಗಿ ನಾಡಿನ ಭಕ್ತರನ್ನು ಕೈ ಬೀಸಿ ಕರೆಯುತ್ತಿದೆ. ವಿಜಯಪುರದ ವೀರಶೈವ ಕುಟುಂಬದಲ್ಲಿ ಚನ್ನವೀರರು 16ನೇ ಶತಮಾನದಲ್ಲಿ ಜನಿಸಿದರು. ತಂದೆ ಶಿವಯ್ಯ, ತಾಯಿ ಗೌರಮ್ಮ. ಚನ್ನವೀರರು ಮುಸ್ಲಿಂ ತತ್ತ್ವಜ್ಞಾನಿ ಖಾಜಾ ಅಮೀನುದ್ಧೀನ್‌ ಅವರ ಮಾರ್ಗದರ್ಶನದಲ್ಲಿ ಬೆಳೆದು ದರ್ಗಾ ಸೇರಿದರು.ವೀರಶೈವ ಬಾಲಕ ದರ್ಗಾ ಸೇರುವುದೆಂದರೆ ಮುಸ್ಲಿಂ ಧರ್ಮಕ್ಕೆ ಅಪಚಾರ, ಸೇರಿಸಿಕೊಳ್ಳಲು ಅಸಾಧ್ಯ ಎಂದು ಆಗಿನ ಕೆಲ ಮುಖಂಡರು ವಿರೋಧ ವ್ಯಕ್ತಪಡಿಸಿದರು. ಆದರೆ ಖಾಜಾ ಗುರುಗಳು ಎದೆಗುಂದದೆ ಚನ್ನವೀರನಿಗೆ ಫಕೀರ ದೀಕ್ಷೆ ನೀಡಿ ಫಕೀರೇಶ್ವರ ಎಂದು ಮರುನಾಮಕರಣ ಮಾಡುತ್ತಾರೆ. ಅಂದಿನಿಂದ ಅವರು ಸಮಾಜದಲ್ಲಿ ಶಾಂತಿ, ಸಾಮರಸ್ಯ ಮೂಡಿಸುತ್ತ ಹಿಂದೂ- ಮುಸ್ಲಿಮರಲ್ಲಿ ಭಾವೈಕ್ಯತೆ ಮಂತ್ರ ಬಿತ್ತಿದರು.

ದೇಶದ ನಾನಾ ಭಾಗಗಳನ್ನು ಸುತ್ತಿ ಸಮಾಜದಲ್ಲಿ ನೆಲೆಯೂರಿದ ಮೂಢನಂಬಿಕೆ, ಜಾತಿ, ಮತ, ಪಂಥ ಎಂಬ ಭೇದ ಭಾವ ತೊರೆಯುವಂತೆ ಮಾಡಿ ಸಹೋದರತೆ, ಸಹಬಾಳ್ವೆಯಿಂದ ಬಾಳಲು ಸೂಚಿಸದರು. ಜೀವಿತದ ಕೊನೆ ಅವಧಿಧಿಯಲ್ಲಿ ಶಿರಹಟ್ಟಿಯಲ್ಲಿ ನೆಲೆಸಿ ಡೊಂಬರ್‌ ಪಂಗಡದ ಬಾಲಕನಿಗೆ ಸಂಸ್ಕಾರ ನೀಡಿ, ತಮ್ಮ ಉತ್ತರಾಧಿಧಿಕಾರಿಯಾಗಿ ನೇಮಕ ಮಾಡಿ ಸಜೀವ ದಪನ್‌ ಆದರು. ನಂತರ ಭಕ್ತರ ಬೇಡಿಕೆ ಈಡೇರಿಕೆ ಸರ್ಪ ರೂಪದಲ್ಲಿ ಪ್ರತ್ಯಕ್ಷವಾಗಿ ದರ್ಶನ ನೀಡಿದರು. ಆ ಜಾಗದಲ್ಲಿ ಗದ್ದುಗೆ ನಿರ್ಮಾಣ ಮಾಡಲಾಗಿದೆ. ಅಲ್ಲಿ ನಿತ್ಯ ಹಿಂದೂ-ಮುಸ್ಲಿಮರು ಸಾಮರಸ್ಯದಿಂದ ಪೂಜೆ ಮಾಡುತ್ತಾರೆ.ಚನ್ನವೀರರು ಶಿರಹಟ್ಟಿ ಫಕೀರೇಶ್ವರರು ಎಂದು ನಾಡಿನಲ್ಲಿ ಖ್ಯಾತಿ ಪಡೆದ ಮಠವನ್ನು ಹಿಂದೂ- ಮುಸ್ಲಿಂ ಶೈಲಿಯಲ್ಲಿ ಕೆತ್ತುವ ಮೂಲಕ ಸಾಮರಸ್ಯ ಮೆರೆಯಲಾಗಿದೆ. ಮಠದ ಉತ್ತರ ದ್ವಾರ ಇಸ್ಲಾಂ ಶೈಲಿ ಹಾಗೂ ದಕ್ಷಿಣ ದ್ವಾರ ಹಿಂದೂ ಶೈಲಿಯಲ್ಲಿದೆ. ಮುಖ್ಯ ಗದ್ದುಗೆ ಮೇಲಿನ ಮಂಟಪವು ಹಿಂದೂ, ಮುಸ್ಲಿಂ ಭಾವೈಕ್ಯತೆಯನ್ನು ಬಿಂಬಿಸುತ್ತದೆ. ಕೆಳಗೆ ಗವಿ ರೀತಿಯಲ್ಲಿ ಚಿಕ್ಕ ಪ್ರವೇಶ ಬಾಗಿಲುಯಿದೆ. ತಾಮ್ರದಿಂದ ಫಕೀರೇಶ್ವರ ಪುತ್ಥಳಿಯಿದೆ. ಅವರ ತಲೆ ಮೇಲೆ ಎಡೆ ಎತ್ತಿದ ಸರ್ಪಯಿದೆ. ಮಠದಲ್ಲಿ ನಿತ್ಯ ಸಂಜೆ, ಬೆಳಗ್ಗೆ ಪೂಜೆ ನಡೆಯುತ್ತದೆ. ಹಿಂದೂ- ಮುಸ್ಲಿಂ ಇಬ್ಬರೂ ಭಕ್ತರು ಆಗಮಿಸಿ ತಮ್ಮ ಪೂಜಾ ವಿಧಾನದಂತೆ ಪೂಜೆ ಸಲ್ಲಿಸುತ್ತಾರೆ.

ಮಠದ ಮುಂಭಾಗದಲ್ಲಿ ಪ್ರಾರ್ಥನಾ ಮಂದಿರವಿದೆ ಅಲ್ಲಿ ಸುಮಾರು 200-300 ವರ್ಷದ ನಗಾರಿ, ಡೊಳ್ಳು, ಹೋಮದ ಕುಂಡವಿದೆ. ನೂರಾರು ವರ್ಷದ ಬೃಹತ್‌ ರಥವಿದೆ. ಆಗಿನ ಕಾಲದಲ್ಲಿ ಮಠಕ್ಕೆ ದಾನಿಗಳು ಕೊಟ್ಟಿರುವ ನೂರಾರು ಎಕರೆ ಹೊಲದಲ್ಲಿ ಜೋಳ, ಗೋಧಿಧಿ, ಕಡಲೆ, ಶೇಂಗಾ, ತೊಗರಿ ಸೇರಿದಂತೆ ಇನ್ನಿತ ಬೆಳೆ ಬೆಳೆದು ಅದರಿಂದ ಬಂದ ಕಾಳುಗಳಿಂದ ನಿತ್ಯ ಅನ್ನದಾಸೋಹ ನಡೆಯುತ್ತದೆ. ಜೋಳದ ನುಚ್ಚು, ಹುಣಸೆ ಹಣ್ಣಿನ ತಂಬುಳಿ ಇಲ್ಲಿನ ವಿಶೇಷ ಪ್ರಸಾದ.

16 ನೇ ಶತಮಾನದಿಂದ ಇಲ್ಲಿ ತನಕ 12 ಜನ ಫಕೀರರು ಐಕ್ಯರಾಗಿದ್ದಾರೆ. ಇವರೆಲ್ಲ ಸ್ವಾಮೀಜಿಗಳು ವಯೋ ಸಹಜ ಸಾವಿನ ನಂತರ ಐಕ್ಯವಾಗಿದ್ದಾರೆ. ಮಠದ ಸುತ್ತಲೂ ಇವರ ಗದ್ದುಗೆ, ಗುಡಿಗಳಿವೆ. ಆದರೆ ಫಕೀರೇಶ್ವರರು ಮಾತ್ರ ಸಜೀವ ಸಮಾಧಿಯಾಗಿದ್ದಾರೆ. ಅಷ್ಟೇ ಭಕ್ತರ ಬೇಡಿಕೆ ಈಡೇರಿಕೆಗೆ ಹಾಗೂ ಧರ್ಮರಕ್ಷಣೆಗೆ ನಾನು ಸರ್ಪದ ಮೂಲಕ ನಿಮಗೆ ದರ್ಶನ ನೀಡುತ್ತೇನೆ ಹೇಳಿ ಸರ್ಪರೂಪದಲ್ಲಿ ಬಂದು ದರ್ಶನ ನೀಡಿದ್ದಾರೆ. ಪ್ರತಿವರ್ಷ ಮೇ ತಿಂಗಳಲ್ಲಿ ನಡೆಯುವ ಜಾತ್ರೆ ಸಮಯದಲ್ಲಿ ಕೆಲ ಪುಣ್ಯಪುರುಷರಿಗೆ ಈ ಹಾವು ದರ್ಶನ ನೀಡುತ್ತದೆ ಎನ್ನುತ್ತಾರೆ ಊರಿನ ಹಿರಿಯರು.

ಶ್ರೀಗಳ ಆಶಯದಂತೆ ಈಗಲೂ ಮಠದಲ್ಲಿ ಆನೆ, ಜಿಂಕೆ, ಎತ್ತುಗಳು, ಆಕಳು, ಮೊಲ ಸೇರಿದಂತೆ ಇನ್ನಿತರ ಪ್ರಾಣಿಗಳಿಗೆ ಮತ್ತು ಅನಾಥರಿಗೆ, ಅಂಗವಿಕಲರಿಗೆ ಆಶ್ರಯ ನೀಡಿದ್ದಾರೆ. ಕಂಕಣ ಭಾಗ್ಯ, ಮಕ್ಕಳ ಭಾಗ್ಯ, ಆರ್ಥಿಕ, ಆರೋಗ್ಯ ಸಮಸ್ಯೆ ಸೇರಿದಂತೆ ಇನ್ನಿತರ ಸಮಸ್ಯೆ, ಫಲ ನೀಡುವಂತೆ ಗದ್ದುಗೆ ಮುಂದೆ ನಿಂತು ಶ್ರದ್ಧಾ ಭಕ್ತಿಯಿಂದ ಬೇಡಿಕೊಂಡು ಹರಕೆ ಕಟ್ಟಿಕೊಂಡರೆ ವರ್ಷದೊಳಗೆ ಆ ಬೇಡಿಕೆ ಈಡೇರುತ್ತದೆ ಎಂಬ ನಂಬಿಕೆ ಆ ಭಾಗದ ಜನರಲ್ಲಿ ಬೇರೂರಿದೆ.