ಚಾಮುಂಡೇಶ್ವರಿ ಜನ್ಮದಿನ

ದೇವಸ್ಥಾನ:ಮೈಸೂರನ್ನು ಆಳಿದವರು ಯದುವಂಶದ ಅರಸರು. ಅವರ ಕಾಲದಲ್ಲಿ ಶಕ್ತಿದೇವತೆಯ ಪೂಜೆಗೆ ಮಹತ್ವ ಬಂದಿದು. ಈ ಪರಂಪರೆಯಲ್ಲಿ ಬಂದ ಬೆಟ್ಟದ ಚಾಮರಾಜ ಒಡೆಯರು ಶಕ್ತಿಪರಂಪರೆಯ ಇತಿಹಾಸವನ್ನೇ ರಚಿಸಿದ್ದಾರೆ. ಹೀಗಾಗಿ ಮೈಸೂರು ಒಡೆಯರ ಕಾಲದಲ್ಲಿ ಶಕ್ತಿಮಾತೆಯಾದ ಚಾಮುಂಡೇಶ್ವರಿಗೆ ಸಹಜವಾಗಿಯೇ ಮಹತ್ವವು ದೊರಕಿದೆ. ಚಾಮುಂಡೇಶ್ವರಿ ಮೈಸೂರು ಒಡೆಯರ ಮನೆ ದೇವತೆಯಾದಂತೆ ಮೈಸೂರು ನಗರದ ಅಧಿದೇವತೆ ಕೂಡ ಹೌದು.

ಚಾಮುಂಡೇಶ್ವರಿಯ ಸನ್ನಿಧಿ: ಚಾಮುಂಡೇಶ್ವರಿಯದು ಚಚ್ಚೌಕ ಶೈಲಿಯ ದ್ರಾವಿಡ ಶೈಲಿಯ ದೇಗುಲ. ಗರ್ಭಗುಡಿಯಲ್ಲಿನ ಚಾಮುಂಡೇಶ್ವರಿ ವಿಗ್ರಹವು ಅತ್ಯಂತ ಸುಂದರವಾಗಿದ್ದು ಶಕ್ತಿ ಪರಂಪರೆಯ ರೂಪಕದಂತಿದೆ. ಹೆಬ್ಬಾಗಿಲು, ಪ್ರವೇಶ ದ್ವಾರ, ನವರಂಗ, ಅಂತರಾಳ, ಗರ್ಭಗೃಹ, ಪ್ರಾಕಾರ ಸೇರಿದ ಸುಂದರ ರಚನೆ ದೇವಸ್ಥಾನದ್ದು. ದೇವಾಲಯದ ಒಂದು ಕಡೆ ಮಹಿಷಾಸುರದನ ಭವ್ಯ ವಿಗ್ರಹವಿದೆ. ಮಹಿಷಾಸುರನೆಂಬ ಅಸುರನನ್ನು ಕೊಲ್ಲಲು ಪಾರ್ವತಿಯು ಆದಿಶಕ್ತಿಯಾಗಿ ಅವತರಿಸಿದಳು ಎನ್ನುವುದು ಪ್ರತೀತಿ. ಚಾಮುಂಡೇಶ್ವರಿ ದೇವಾಲಯದಿಂದ ಕೆಳಕ್ಕೆ ಬೃಹತ್ ನಂದಿಯ ವಿಗ್ರಹವಿದೆ. ಒಂದೇ ಕಲ್ಲಿನಲ್ಲಿ ಕಡೆಯಲಾಗಿರುವ ಈ ವಿಗ್ರಹಕ್ಕೂ ಪೂಜೆ ಸಲ್ಲುತ್ತದೆ. ಚಾಮುಂಡೇಶ್ವರಿ ದೇಗುಲದಲ್ಲಿ ಮುಮ್ಮಡಿ ಕೃಷ್ಣರಾಜ ಪಡೆಯರು ಮತ್ತು ಅವರ ಪತ್ನಿಯರಾದ ದೇವರಾಜಮ್ಮಣ್ಣಿ, ಚೆಲುವರಾಜಮ್ಮಣ್ಣಿ, ಲಿಂಗರಾಜಮ್ಮಣ್ಣಿ ಇವರುಗಳ ಭಕ್ತಿ ವಿಗ್ರಹವನ್ನು ನಿಲ್ಲಿಸಲಾಗಿದೆ. ಮೈಸೂರಿನ ಈಶಾನ್ಯದಲ್ಲಿರುವ ಗ್ರಾಮದೇವತೆ ಹುಲಿಗಮ್ಮನ ದೇಗುಲವನ್ನು ಚಾಮುಂಡೇಶ್ವರಿಯ ಮೂಲ ನೆಲೆ ಎಂದು ಹೇಳುವ ಪ್ರತೀತಿ ಇದೆ.

ನಂಬಿಕೆಗಳು:ಚಾಮುಂಡೇಶ್ವರಿ ಎಂದರೆ ಸಾವಿರ ಮೆಟ್ಟಿಲ ದೇವತೆ. ಸಾವಿರ ಮೆಟ್ಟಿಲುಗಳನ್ನು ಹತ್ತಿ ಕೊಂಡು ಈ ದೇವಸ್ಥಾನವನ್ನು ತಲುಪ ಬೇಕು. ಪ್ರತಿ ಶುಕ್ರವಾರ ಹೀಗೆ ಸಾವಿರ ಮೆಟ್ಟಿಲನ್ನು ಹತ್ತುವ ಹರಕೆ ಹೋರುವವರು ಇದ್ದಾರೆ. ಪ್ರತಿ ಮೆಟ್ಟಿಲಿಗೂ ಅರಿಷಿನ-ಕುಂಕುಮ ಹಚ್ಚಿ ಪೂಜೆ ಮಾಡುವವರು ಇದ್ದಾರೆ. ಪ್ರತಿ ಮೆಟ್ಟಿಲಿಗೂ ಇಡುಗಾಯಿಯನ್ನು ಒಡೆಯುವ ಹರಕೆಯನ್ನು ಹೊತ್ತವರೂ ಕೂಡ ಇದ್ದಾರೆ. ಆಷಾಡ ಮಾಸದ ಶುಕ್ರವಾರಗಳಂದು ಹೀಗೆ ಸಾವಿರ ಮೆಟ್ಟಿಲನ್ನು ಹತ್ತಿ ದೇವಸ್ಥಾನವನ್ನು ತಲಪುವುದು ಶುಭ ಎಂಬ ನಂಬಿಕೆ ಇದೆ. ಇದಕ್ಕಾಗಿ ಕೂಡ ತಮ್ಮ ಕಷ್ಟಗಳನ್ನು ನಿವಾರಿಸಲು ಹರಕೆಯನ್ನು ಹೋರುತ್ತಾರೆ. ಚಾಮುಂಡಿ ದೇಗುಲದಲ್ಲಿ ಸೀರೆಯನ್ನು ಹರಕೆಯಾಗಿ ಕೊಡುವ ನಂಬಿಕೆ ಇದೆ.