ಬುಧ ಜಯಂತಿ

ಜ್ಯೇಷ್ಠ ಕೃಷ್ಣ ಏಕಾದಶಿಯಾದ ಇಂದು ಬುಧ ಜಯಂತಿಯನ್ನು ಆಚರಿಸಲಾಗುತ್ತದೆ. ಈ ದಿನ ಬುಧ ಗ್ರಹದ ಪ್ರಭಾವದಿಂದ ಪೀಡಿತರಾಗಿರುವವರು ವಿಶೇಷ ಪೂಜೆ, ಶಾಂತಿ ಹೋಮಗಳನ್ನು ನೆರವೇರಿಸುವುದು ಸಾಮಾನ್ಯ. ನವಗ್ರಹಗಳಲ್ಲಿ ಬುಧ ಗ್ರಹವೂ ಒಂದು. ಸೋಮ (ಚಂದ್ರ) ಹಾಗೂ ರೋಹಿಣಿ ಪುತ್ರನೆಂದು ಹೇಳಲಾಗಿರುವ ಬುಧನನ್ನು ಸೌಮ್ಯ, ರೌಹಿಣ್ಯ ಹಾಗೂ ತುಂಗಾ ಎಂಬುದಾಗಿ ಕರೆಯಲ್ಪಡುತ್ತಾನೆ. ಬುಧವಾರಕ್ಕೆ ಅಥಿಪತಿಯಾದ ಬುಧನು, ಬುದ್ಧಿಶಕ್ತಿ ಹಾಗೂ ಜ್ಞಾನದ ಮೇಲೆ ಪ್ರಭಾವ ಬೀರುತ್ತಾನೆ. ಹೀಗಾಗಿ ಈತನ ಪರಿಣಾಮಗಳು ಮನುಷ್ಯನ ಸಕಾರಾತ್ಮಕ ಬೆಳವಣಿಗೆಗೆ ಸಹಕಾರಿ. ಅಲ್ಲದೆ, ಮರೆಗುಳಿತನ, ಓದಿನಲ್ಲಿ ನಿರಾಸಕ್ತಿ, ವ್ಯಾಪಾರದಲ್ಲಿ ನಷ್ಟ, ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ದ್ವಂದ್ವ, ಉಸಿರಾಟದಲ್ಲಿ ತೋದರೆ ಹಾಗೂ ನರದೌರ್ಬಲ್ಯಗಳೇ ಮುಂತಾದ ಆರೋಗ್ಯ ಸಮಸ್ಯೆಗಳು ಬುಧ ಗ್ರಹದ ಪ್ರಭಾವದಿಂದ ಪೀಡಿತರಾಗುವರು.

ತಿಳಿ ಹಳದಿ ಅಥವಾ ಹಸಿರು ಮೈಬಣ್ಣವನ್ನು ಹೊಂದಿರುವ ಬುಧನು, ಹಳದಿ ವಸ್ತ್ರವನ್ನು ಧರಿಸಿರುವಂತೆ ಬಿಂಬಿಸಲಾಗುತ್ತದೆ. ಎಂಟು ಅಶ್ವಗಳನ್ನೊಳಗೊಂಡ ವಾಯು ಮತ್ತು ಅಗ್ನಿಯಿಂದ ರಚಿಸಲ್ಪಟ್ಟ ರಥವನ್ನು ಅಥವಾ ಸಿಂಹವನ್ನು ತನ್ನ ವಾಹನವನ್ನಾಗಿ ಮಾಡಿಕೊಂಡಿರುತ್ತಾನೆ.

ನವಗ್ರಹದ ಅಧಿಪತಿಯಾಗಿರುವ ಬುಧ, ಸೂರ್ಯ ಮತ್ತು ಶುಕ್ರ ಗ್ರಹಗಳೊಂದಿಗೆ ಸ್ನೇಹ ಪರವಾಗಿದ್ದು, ಚಂದ್ರನೊಂದಿಗೆ ದ್ವೇಷವನ್ನು ಕಾಪಾಡಿಕೊಳ್ಳುತ್ತದೆ. ಸಮಿತ್ತುಗಳಲ್ಲಿ ಅಪಾಮಾರ್ಗ ಅಂದರೆ ಉತ್ತರಾಣಿಯನ್ನು ಬುಧನಿಗೆ ಸಮರ್ಪಿಸಲಾಗುತ್ತದೆ. ಬುಧನ ಪ್ರತಿಮೆಯು ಸುವರ್ಣ ಅಂದರೆ ಚಿನ್ನದಿಂದ ಮಾಡಲ್ಪಟ್ಟಿರುವುದು ಪೂಜೆಗೆ ವಿಹಿತ. ಕನ್ಯಾ ಹಾಗೂ ಮಿಥುನ ರಾಶಿಗಳಿಗೆ ಅಧಿಪತಿಯಾಗಿರುವ ಬುಧನಿಗೆ ಹಾಲಿನಿಂದ ತಯಾರಿಸಿದ ಖೋವಾ ಅಥವಾ ಹೆಸರುಕಾಳಿನಿಂದ ತಯಾರಿಸಿದ ಪದಾರ್ಥವನ್ನು ನೈವೇದ್ಯವನ್ನಾಗಿ ಸಮರ್ಪಿಸುವುದು ಉತ್ತಮ.

ಬುಧಗ್ರಹ ಪೀಡಾಪರಿಹಾರ ಸ್ತೋತ್ರ
ಉತ್ಪಾತರೂಪೀ ಜಗತಾಂ ಚಂದ್ರಪುತ್ರೋ ಮಹಾದ್ಯುತಿಃ 
|
ಸೂರ್ಯಪ್ರಿಯಕರೋ ವಿದ್ವಾನ್ಪೀಡಾಂ ಹರತು ಮೇ ಬುಧಃ 
||