ತುಳು ನಾಡಿನ ಸಪ್ತಕ್ಷೇತ್ರಗಳಲ್ಲಿ ಕೊಲ್ಲೂರು ಮುಖ್ಯವಾದದ್ದು. ಈಶಾನ್ಯ ಗಡಿಯ ಪಶ್ಚಿಮ ಘಟ್ಟಗಳ ತಪ್ಪಲಲ್ಲಿರುವ ಸುಂದರವಾದ ಗ್ರಾಮ ಇದು. ಕೊಲ್ಲೂರಿಗೆ ಮೂಕಾಂಬಿಕಾ ಪುರ ಎನ್ನುವ ಹೆಸರು ಕೂಡ ಇದೆ.ಇಲ್ಲಿರುವ ದೇವಿಯು ಲಕ್ಷ್ಮಿ, ಸರಸ್ವತಿ, ಶಕ್ತಿ ಹೀಗೆ ತ್ರಿಮಾತೆಯರ ಮೂರ್ತರೂಪದ ಎಂದು ಕರೆಸಿಕೊಳ್ಳುವುದರಿಂದ ಇದನ್ನು ಮಹಾಶಕ್ತಿಕ್ಷೇತ್ರ ಎಂದೂ ಕೂಡ ಕರೆಯಲಾಗುತ್ತದೆ. ಕುಂದಾಪುರ ತಾಲ್ಲೋಕಿಗೆ ಸೇರಿದ ಕೊಲ್ಲೂರು ಸೌಪರ್ಣಿಕಾ ನದಿಯ ತೀರದಲ್ಲಿದೆ. ಕೋಲ ಮಹರ್ಷಿಗಳು ತಪಸ್ಸು ಮಾಡಿದ್ದರಿಂದ ಇದಕ್ಕೆ ಹಿಂದೆ ಕೋಲಾಪುರ ಎಂದು ಹೆಸರಿತ್ತು.ದಟ್ಟಾರಣ್ಯದ ನಡುವೆ ಈ ಪ್ರದೇಶವು ಇತ್ತು. ಹಿಂದೆ ಕಂಹಾಹುರ ಎನ್ನುವ ರಾಕ್ಷಸನ ಕಾಟವನ್ನು ತಾಳಲಾರದೆ ಋಷಿಗಳು ಕೋಲ ಮಹರ್ಷಿಗಳ ನೇತೃತ್ವದಲ್ಲಿ ಆದಿಪರ ಶಕ್ತಿಯ ಮೊರೆಯನ್ನು ಹೊಕ್ಕರು. ಕಂಹಾಹಾರನಾದರೂ ಈಶ್ವರನ ಪರಮ ಭಕ್ತನ ಪರಮೇಶ್ವರನನ್ನು ಒಲಿಸಿ ಅನೇಕ ವರಗಳನ್ನು ಪಡೆಯಲು ಸನ್ನದ್ದನಾದನು. ಅದರ ಅಪಾಯವನ್ನು ಅರಿತ ದೇವಿಯು ಅವನನ್ನು ಮೂಕನನ್ನಾಗಿಸಿದಳು. ಮೂಕಾಸುರ ಎಂದು ಹೆಸರಾದ ಅವನು ಕೊಲ್ಲೂರಿನಲ್ಲಿಯೇ ನೆಲೆ ನಿಂತು ಋಷಿಗಳನ್ನು ಹಿಂಸಿಸುವುದನ್ನು ಮುಂದುವರೆಸಿದನು. ಆಗ ದೇವಿಯು ಶಕ್ತಿರೂಪದಲ್ಲಿ ಅವನನ್ನು ವಧಿಸಿ ಕೋಲಾಪುರದಲ್ಲಿಯೇ ನೆಲೆ ನಿಂತಳು. ಆದಿಶಂಕರರು ತಮ್ಮ ದೇಶ ಪರ್ಯಟನೆಯ ಸಂದರ್ಭದಲ್ಲಿ ಇಲ್ಲಿ ತಪಸ್ಸನ್ನು ಆಚರಿಸಿದ್ದರೆಂದೂ ಶ್ರೀಚಕ್ರದ ಮೇಲೆ ದೇವಿಯನ್ನು ಸ್ಥಾಪಿಸಿ ಇದನ್ನು ಶಕ್ತಿಪೀಠವನ್ನಾಗಿಸಿದರೆಂದೂ ನಂಬಿಕೆ ಇದೆ. ಈಗಿರುವ ಶಿಲಾ ದೇವಾಲಯವನ್ನು ಬಂಕಿ ಅರಸರ ವಂಶದ ಸಂಕಣ್ಣ ಸಾಮಂತರ ಅಳಿಯ ವೆಂಕಣ್ಣ ಸಾಮಂತನು ಕಟ್ಟಿಸಿದನು. ಕೆಳದಿಯ ಅರಸರ ಕಾಲದಲ್ಲಿ ದೇಗುಲಕ್ಕೆ ಮಹತ್ವವು ಲಭಿಸಿತು. ಈ ದೇವಿಗಾಗಿ ಅವರು ದೊಡ್ಡ ಪ್ರಮಾಣದ ಉಂಬಳಿನ್ನು ನೀಡಿದ್ದಲ್ಲದೆ ಅನೇಕ ವಜ್ರ, ಬಂಗಾರ ಹಾಗೂ ರತ್ನಾಭರಣಗಳನ್ನು ನೀಡಿದ್ದರು.