ಪಂಢರಾಪುರಕ್ಕೆ ಪಾದಕೆಗಳನ್ನು ಹೊತ್ತು ನಡೆಯುವ ಯಾತ್ರೆಯನ್ನು ವಾರಿ ಅಥವಾ ವಾಕರಿ ಎಂದು ಕರೆಯುತ್ತಾರೆ. ಮರಾಠಿಯಲ್ಲಿ ವಾಕರಿ ಎಂದರೆ ಭಗವಂತನ ಸೇವೆಗೆ ಯಾತ್ರೆ ಎಂದು ಹೆಸರು. ಸಂತ ಧಾರೇಶ್ವರ ಅವರ ಊರು ಆಲಂದಿ ಮತ್ತು ತುಕಾರಂ ಅವರ ವಾಸ ಸ್ಥಾನ ದೇಹುಗಳಿಂದ ಈ ವಾಕರಿ ಆರಂಭವಾಗುತ್ತದೆ. ಉತ್ತರ ಕರ್ನಾಟಕದ ಅನೇಕ ಭಕ್ತರು 250 ಕಿಲೋಮೀಟರ್‍ಗಳ ಈ ವಾಕರಿ ಮಾರ್ಗದಲ್ಲಿ ಸೇರಿ ಕೊಳ್ಳುತ್ತಾರೆ. ವಾಕರಿ ಹೋಗುವವರು ಪಾದಯಾತ್ರೆಯಲ್ಲಿಯೇ ಹೋಗ ಬೇಕು, ಧಾರೇಶ್ವರ ಇಲ್ಲವೆ ತುಕಾರಂ ಅವರ ಪಾದುಕೆಗಳನ್ನು ಹೊತ್ತು ನಿರಂತರ ಭಜನೆ ಮಾಡುತ್ತಾ ಸಾಗ ಬೇಕು. ಈ ಯಾತ್ರೆಗೆ ಸುಮಾರು 800 ವರ್ಷಗಳ ಇತಿಹಾಸವಿದೆ. ಜ್ಯೇಷ್ಟ ಬಹುಳ ಅಷ್ಟಮಿಯಂದು ಆರಂಭವಾಗುವ ಯಾತ್ರೆ ಆಷಾಢ ಏಕಾದಶಿಯಂದು ಪಂಢರಾಪುರದಲ್ಲಿ ಸಮಾರೋಪ ಗೊಳ್ಳಲಿದೆ. ಅಂದು ವಿಶೇಷ ವಾಕರಿ ಆಚರಣೆ ನಡೆಯುತ್ತದೆ. ಅತಿ ಹೆಚ್ಚು ಜನ ಸೇರುವ ಉತ್ಸವ ಎಂಬ ಕಾರಣಕ್ಕೆ ಇದು ಗಿನ್ನಿಸ್ ದಾಖಲೆಯಲ್ಲಿ ಕೂಡ ಸೇರಿ ಕೊಂಡಿದೆ.