ಹರಿಹರಪುರ ಸಚ್ಚಿದಾನಂದ ಸರಸ್ವತಿಗಳ ವರ್ಧಂತಿ

ಹರಿಹರಪುರ ಶ್ರೀಮಠದ 25ನೆಯ  ಮತ್ತು ಈಗಿನ  ಪೀಠಾಧಿಪತಿಗಳಾಗಿರುವ   ಸಚ್ಚಿದಾನಂದ ಸರಸ್ವತಿಗಳು  ಶೃಂಗೇರಿಯ ಸಮೀಪದ  ಉಳವೆಯಲ್ಲಿ   ಜ್ಯೇಷ್ಟ ಬಹಳ ದ್ವಾದಶಿಯಂದು  ಜನಿಸಿದರು. ಅವರ ಪೂರ್ವಾಶ್ರಮದ ಹೆಸರು  ನಾಗರಾಜ ಶರ್ಮ. ಬಾಲ್ಯದಿಂದಲೂ ಅವರಿಗೆ ಅಧ್ಯಾತ್ಮದತ್ತ  ಒಲವು.  ಉಳವೆಯಲ್ಲಿದ್ದ ವಲ್ಮಪುರಿ ಗಣಪತಿಯ  ಅರ್ಚನೆಯನ್ನು ಮಾಡುತ್ತಾ ಅವರು  ಮೈಮರೆಯುತ್ತಿದ್ದರು. ಶಾಲಾ ಕಾಲೇಜು ಅಧ್ಯಯನದಲ್ಲಿ ಕೂಡ ಮುಂದಿದ್ದ  ಅವರು ಇಂಜಿನಿಯರಿಂಗ್ ಪದವಿ ಮುಗಿಸಿದ ನಂತರ  ಅಮೆರಿಕಾದ ಕ್ಯಾಲಿಫೋರ್ನಿಯಾದ   ಪ್ರತಿಷ್ಟಿತ ಸಂಸ್ಥೆಯಲ್ಲಿ ಉದ್ಯೋಗಿಯಾದರು. ಆದರೆ ಈ ಲೌಕಿಕದ   ಎತ್ತರ  ಅಧ‍್ಯಾತ್ಮದ ಸೆಳೆತದಿಂದ  ಅವರನ್ನು ಬಿಡುಗಡೆ ಮಾಡಲಿಲ್ಲ. ಅಧ್ಯಾತ್ಮದ ಒತ್ತಡ ತೀವ್ರವಾದ ನಂತರ  ಶೃಂಗೇರಿಯ ಜಗದ್ಗುರುಗಳಾದ  ಶ್ರೀ ಶ್ರೀ ಭಾರತಿ ತೀರ್ಥರಿಗೆ ಪತ್ರ ಬರೆದು ಈ ಕುರಿತು ವಿನಂತಿಸಿ ಕೊಂಡರು., ಅವರು ಕೂಡಲೇ ಸ್ಪಂದಿಸಿ ಅವರನ್ನು ತಮ್ಮ ಬಳಿ ಕರೆಸಿ ಕೊಂಡು ಸೂಕ್ತವಾದ ವೇದ  ಉಪನಿಷತ್‍ಗಳ ಮಾರ್ಗದರ್ಶನವನ್ನು ಮಾಡಿ  ಅಧ್ಯಾತ್ಮದ ಹಾದಿಯಲ್ಲಿ  ಮುನ್ನೆಡೆಸಿದರು.  ನಾಗರಾಜ ಶರ್ಮ ಅವರು ಶೃಂಗೇರಿಯಲ್ಲಿ ವಿದ್ಯಾಭ್ಯಾಸದಲ್ಲಿ ತೊಡಗಿದ್ದಾಗಲೇ  ಹರಿಹರಪುರದ ನಾಗರೀಕರು  ಶ್ರೀ ಶ್ರೀಗಳ ಬಳಿ ವಿನಂತಿಯನ್ನು ತಂದರು. ಹರಿಹರಿಪುರದ ಶ್ರೀ ಶಾರದಾ ಲಕ್ಷ್ಮಿ ನರಸಿಂಹ ಪೀಠದ 24ನೇ ಗುರುಗಳಾಗಿದ್ದ  ಶ್ರೀ ಶ್ರೀ  ಅಭಿನವ ರಮಾನಂದ ಸರಸ್ವತಿಗಳು ಉತ್ತರಾಧಿಕಾರಿಗಳನ್ನು  ನೇಮಿಸಿದೆ  ಸಮಾಧಿಸ್ಥರಾಗಿದ್ದರಿಂದ  ಪೀಠವು ಖಾಲಿ ಬಿದ್ದಿತ್ತು. ಅದಕ್ಕೆ ಸೂಕ್ತರನ್ನು  ನೇಮಿಸುವಂತೆ ವಿನಂತಿಸಿ ಕೊಳ್ಳಲು ಅವರು ಬಂದಿದ್ದರು. ಇದನ್ನು ಕೂಡಲೇ ಗಮನಕ್ಕೆ ತೆಗೆದು ಕೊಂಡ  ಶ್ರೀ ಶ್ರೀ ಭಾರತಿ ತೀರ್ಥರು  ನಾಗರಾಜ ಶರ್ಮ ಅವರು ಸೂಕ್ತರು ಎಂದು ಭಾವಿಸಿ ಅವರನ್ನೇ ಈ ಪೀಠಕ್ಕೆ  ನೇಮಿಸಿದರು.  ಹೀಗೆ 2001ರ ಮೇ 21ರಂದು  ನಾಗರಾಜ ಶರ್ಮ  ಅವರು ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಎಂಬ ಅಭಿದಾನದೊಂದಿಗೆ 25ನೇ ಪೀಠಾಧಿಪತಿಗಳಾದರು.

ಶ್ರೀ ಶ್ರೀಗಳು ಪೀಠಕ್ಕೆ ಬಂದ ಮೇಲೆ ಹಲವು ಉತ್ತಮ  ಕಾರ್ಯಕ್ರಮಗಳನ್ನು ರೂಪಿಸಿದರು. ಶ್ರೀಮಠವನ್ನು ಸಂಪೂರ್ಣ ನವೀಕರಿಸಿದರು. ದಕ್ಷಿಣ ಭಾರತಾದ್ಯಂತ ಮಾತ್ರವಲ್ಲದೆ  ಅಮೆರಿಕಾದಲ್ಲಿ ಕೂಡ ಶಾಖೆಯನ್ನು ಸ್ಥಾಪಿಸಿದರು. ಶಿವ ದೀಕ್ಷೆ, ಕೋಟಿ ಪಾರಾಯಣ, ವಿಶ‍್ವಶಾಂತಿ ಉಪಾಸನಾ ಮೊದಲಾದ ವಿನೂತನ ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಸಚ್ಚಿದಾನಂದ ವಚನಾಮೃತಂ ಎನ್ನುವ ಹೆಸರಿನಲ್ಲಿ ಕನ್ನಡ  ಮತ್ತು ಸಂಸ್ಕೃತದಲ್ಲಿ ಶ್ರೀಗಳು ಕೀರ್ತನೆಗಳನ್ನು ರಚಿಸಿದ್ದು. ಬ್ರಹ್ಮಾನುಭವ ಭಾರದಿ ಎನ್ನುವ ಕೃತಿಯನ್ನು ರಚನೆ ಮಾಡಿದ್ದಾರೆ. ಅವರು ಉತ್ತಮ ಗಾಯಕರೂ ಕೂಡ ಶ್ರೀಶ್ರೀಗಳ ವರ್ಧಂತಿ ಉತ್ಸವವನ್ನು ಒಂದು ವಾರದ  ಕಾರ್ಯಕ್ರಮವಾಗಿ ವಿಶೇಷವಾಗಿ ಆಚರಿಸಲಾಗುತ್ತದೆ.