ವಿಶ್ವ ಮಧುಮೇಹ ದಿನ

ಮಧುಮೇಹ ಹಾಗೂ ಅದಕ್ಕೆ ಸಂಬಂಸಿದ ವಿಷಯಗಳ ಬಗ್ಗೆ ವಿಶ್ವಾದ್ಯಂತ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಮಧುಮೇಹ ದಿನವನ್ನು ಆಚರಿಸಲಾಗುತ್ತಿದೆ. ಅಂತಾರಾಷ್ಟ್ರೀಯ ಮಧುಮೇಹ ಒಕ್ಕೂಟ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ಸಹಯೋಗದಲ್ಲಿ 1991ರಲ್ಲಿ ವಿಶ್ವ ಮಧುಮೇಹ ದಿನವನ್ನು ಪರಿಚಯಿಸಲಾಯಿತು. ವಿಜ್ಞಾನಿ ಸರ್‌ ಫೆಡ್ರಿಕ್‌ ಬೆಂಟಿಂಗ್‌ ಅವರು ಪ್ರಥಮ ಬಾರಿಗೆ ಮಧುಮೇಹಕ್ಕೆ ನೀಡುವ 'ಇನ್ಸುಲಿನ್‌' ಸಂಶೋಸಿದರು. ಬೆಂಟಿಂಗ್‌ ಅವರು ಜನಿಸಿದ ದಿನ ನವೆಂಬರ್‌ 14. ಅವರ ಸವಿ ನೆನಪಿಗಾಗಿ ನವೆಂಬರ್‌ 14ರಂದು ವಿಶ್ವ ಮಧುಮೇಹ ದಿನವನ್ನು ಆಚರಿಸಲಾಗುತ್ತಿದೆ. 

ಮಧುಮೇಹ ಎನ್ನುವುದು ಸದ್ದಿಲ್ಲದೆ ಕೊಲ್ಲುವಂತ ಕಾಯಿಲೆ. ಇದು ಜೀವ ಹಾಗೂ ಜೀವನ ಎರಡನ್ನೂ ಹಿಂಡಿ ಹಿಪ್ಪೆ ಮಾಡಿ ಬಿಡುತ್ತದೆ. ಮಧುಮೇಹವು ಇಂದು ವಿಶ್ವದಾದ್ಯಂತ ಜನರಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಕಾಯಿಲೆಯಾಗಿದೆ. ಮಧುಮೇಹದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಮಧುಮೇಹ ದಿನವನ್ನು ವಿಶ್ವದ 160 ದೇಶಗಳಲ್ಲಿ ಆಚರಣೆ ಮಾಡಲಾಗುತ್ತದೆ. ಮಧುಮೇಹದ ಬಗ್ಗೆ ಇಲ್ಲಿ ವಿಶ್ವದ ಗಮನ ಸೆಳೆಯುವುದು ಇದರ ಪ್ರಮುಖ ಉದ್ದೇಶವಾಗಿದೆ. ಅದೇ ರೀತಿಯಾಗಿ ಸಾರ್ವಜನಿಕ ಹಾಗೂ ರಾಜಕೀಯವಾಗಿಯೂ ಇದರ ಬಗ್ಗೆ ಗಮನಿಸುವಂತೆ ಆಗಬೇಕು ಎನ್ನುವುದೇ ವಿಶ್ವ ಮಧುಮೇಹ ದಿನದ ಉದ್ದೇಶ.

ಅಂತರರಾಷ್ಟ್ರೀಯ ಭ್ರಷ್ಟಾಚಾರ ದಿನ

ಅಧಿಕಾರಿಗಳು ಹಾಗೂ ರಾಜಕಾರಣಿಗಳು ಸೇರಿ ಸರ್ಕಾರಿ ಖಜಾನೆಯನ್ನೇ ಲೂಟಿ ಹೊಡೆಯುವಂತಹ ಕೆಲಸ ಮಾಡುತ್ತಲಿರುವರು. ಜನರಲ್ಲಿ ಜಾಗೃತಿ ಮೂಡಿ ಭ್ರಷ್ಟಾಚಾರದ ವಿರುದ್ಧ ಹಲವಾರು ಆಂದೋಲನಗಳು ನಡೆಯುತ್ತಲಿದ್ದರೂ ಭ್ರಷ್ಟಾಚಾರ ಮಾತ್ರ ಕಡಿಮೆ ಆಗುತ್ತಿಲ್ಲ.

ಶಿಕ್ಷಣ, ಆರೋಗ್ಯ, ಕ್ರೀಡೆ, ರಾಜಕೀಯ, ನ್ಯಾಯ, ದೇಶದ ಅಭಿವೃದ್ಧಿ ಎಲ್ಲಾ ಕ್ಷೇತ್ರದಲ್ಲೂ ಭ್ರಷ್ಟಾಚಾರ ಆಳವಾಗಿ ಬೇರೂರಿದೆ. ಇದರಿಂದ ಉಂಟಾಗುವ ಸಮಸ್ಯೆಗಳು ಗಂಭೀರವಾಗಿವೆ. ಪ್ರಜಾಪ್ರಭುತ್ವ, ಸಮಾಜದ ಭದ್ರತೆ, ನೈತಿಕ ಮೌಲ್ಯ, ನ್ಯಾಯ ಸಂಸ್ಥೆಯ ಮೌಲ್ಯಗಳನ್ನು ಭ್ರಷ್ಟಾಚಾರ ಎಂಬ ಪಿಡುಗು ದುರ್ಬಲಗೊಳಿಸುತ್ತಿದೆ.

ಡಿಸೆಂಬರ್‌ 9ರಂದು ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನವನ್ನಾಗಿ ಆಚರಿಸಬೇಕು ಎಂದು ವಿಶ್ವಸಂಸ್ಥೆಯಲ್ಲಿ ಅಕ್ಟೋಬರ್ 31, 2003ರಲ್ಲಿ ಪ್ರಸ್ತಾವ ಮಂಡಿಸಲಾಯಿತು. ಭ್ರಷ್ಟಾಚಾರ ವಿರುದ್ಧ ಜಾಗೃತಿ ಮತ್ತು ಅದರ ವಿರುದ್ಧ ಹೋರಾಟ ಹಾಗೂ ತಡೆ ಇದರ ಪ್ರಮುಖ ಉದ್ದೇಶವಾಗಿದೆ. 2005ರ ಬಳಿಕ ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನವನ್ನು ಆಚರಿಸಲು ಪ್ರಾರಂಭಿಸಲಾಯಿತು.

ಮ್ಲೋಂಡಿ ಕ್ಯಾಲುಜಾ ಅವರ ಜನ್ಮದಿನದಂದು ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನ ಆಚರಿಸಲಾಗುತ್ತಿದೆ. ಭ್ರಷ್ಟಾಚಾರದ ಬಗ್ಗೆ ಜಾಗೃತಿ ಮೂಡಿಸಲು, ಇದನ್ನು ಎದುರಿಸಲು ಮತ್ತು ತಡೆಗಟ್ಟಲು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಅಕ್ಟೋಬರ್ 9, 2003ರಂದು ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನವ ಪ್ರಾರಂಭಿಸಿತು.

ಹಿನ್ನೆಲೆ : ಭ್ರಷ್ಟಾಚಾರವು ಜಗತ್ತಿನ ಎಲ್ಲ ದೇಶಗಳ ಮೇಲೆ ಪರಿಣಾಮ ಬೀರಿರುವ ವಿಷಯವಾಗಿದೆ. ಅಧಿಕಾರ ಅಥವಾ ನಂಬಿಕೆಯ ಸ್ಥಾನವನ್ನು ಅಪ್ರಾಮಾಣಿಕ ಲಾಭಕ್ಕಾಗಿ ಬಳಸುವವರನ್ನು ಇದು ಸೂಚಿಸುತ್ತದೆ. ಭ್ರಷ್ಟಾಚಾರವು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತದೆ. ಅಸ್ಥಿರ ಸರ್ಕಾರಗಳನ್ನು ಸೃಷ್ಟಿಸುತ್ತದೆ ಮತ್ತು ದೇಶಗಳನ್ನು ಆರ್ಥಿಕವಾಗಿ ಹಿಮ್ಮೆಟ್ಟಿಸುತ್ತದೆ.

2019ರ ವರದಿಯ ಪ್ರಕಾರ ಡೆನ್ಮಾರ್ಕ್ ಪ್ರಥಮ ಸ್ಥಾನದಲ್ಲಿದ್ದು, ನ್ಯೂಜಿಲ್ಯಾಂಡ್ ಎರಡನೇ ಸ್ಥಾನ, ಯುಕೆ 12, ಯುಎಸ್ 23, ಭಾರತ 80, ಚೀನಾ 80, ಬ್ರೆಜಿಲ್ 106, ಪಾಕಿಸ್ತಾನ 120, ರಷ್ಯಾ 137, ಬಾಂಗ್ಲಾದೇಶ 146, ಸೋಮಾಲಿಯಾ 180ನೇ ಸ್ಥಾನದಲ್ಲಿದೆ.

ವಿಶ್ವ ಅಂಗವಿಕಲ ದಿನ

ಅಂಗವಿಕಲರು ಕೂಡಾ ಮನುಷ್ಯರೇ. ಅವರಿಗೂ ಭಾವನೆಗಳಿವೆ, ಜಗತ್ತಿನ ಆಗುಹೋಗುಗಳಿಗೆ ಸ್ಪಂದಿಸುವ ಬೌದ್ಧಿಕ ಸಾಮರ್ಥ್ಯವಿದೆ. ಆದರೆ ಬಹುತೇಕ ಸಂದರ್ಭಗಳಲ್ಲಿ ಅವರನ್ನು ಪ್ರತ್ಯೇಕವಾಗಿ ಪರಿಗಣಿಸುವ ಪರಿಪಾಠವೂ ಕೆಲವೆಡೆ ಕಾಣಿಸುತ್ತಿದೆ. ಅಥವಾ ಕೆಲವೆಡೆ ಅವರಿಗೆ ಇನ್ನಿಲ್ಲದ ಅನುಕಂಪ ತೋರುವುದು ಇದೆ. ಇದು ತಪ್ಪು. ಅಂಗವಿಕಲರಿಗೂ ಸ್ವಾಭಿಮಾನದಿಂದ ಬದುಕುವ ಹಕ್ಕಿದೆ. ಅವರು ಸಮಾಜದ ಮುಖ್ಯವಾಹಿನಿಗಳಲ್ಲಿ ಗುರುತಿಸಿಕೊಳ್ಳಬಲ್ಲರು. ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷ ಣಿಕ, ಮಾಹಿತಿ ತಂತ್ರಜ್ಞಾನ, ಮನೊರಂಜನೆ ಮುಂತಾದ ಕ್ಷೇತ್ರದಲ್ಲಿ ಗುರುತಿಸಬಲ್ಲರು. ವಿಶೇಷವಾದ ಸಾಧನೆಯನ್ನು ಮಾಡಬಲ್ಲರು. ಸಮಾಜದಲ್ಲಿ ಅವರ ಮಹತ್ವ ಜನರಿಗೆ ಗೊತ್ತಾಗಬೇಕು ಎಂಬ ಉದ್ದೇಶದಿಂದಲೇ ವರ್ಷದ ಒಂದು ದಿನವನ್ನು ಅವರಿಗಾಗಿ ಮೀಸಲಾಗಿರಿಸಲಾಗಿದೆ. ಅದುವೇ ಡಿಸೆಂಬರ್‌ 3. ಇದು ಜಗತ್ತಿನೆಲ್ಲೆಡೆ ವಿಶ್ವ ಅಂಗವಿಕಲ ದಿನವನ್ನಾಗಿ ಆಚರಿಸಲಾಗುತ್ತದೆ.ಮೂಲತಃ ಈ ದಿನವನ್ನು ಆರಂಭಿಸಿದ್ದು ವಿಶ್ವಸಂಸ್ಥೆ. 1992 ರಲ್ಲಿ ಆರಂಭಿಸಲಾದ ಈ ದಿನಾಚರಣೆ ಇಂದಿಗೂ ನಡೆದುಕೊಂಡು ಬರುತ್ತಿದೆ. ಈ ದಿನದಂದು ಜಗತ್ತಿನಲ್ಲಿರುವ ಅನೇಕ ಅಂಗವಿಕಲ ಯಶೋಗಾಥೆಗಳನ್ನು ಅರುಹಲಾಗುತ್ತದೆ. ಜೊತೆಗೆ ಅವರ ಸ್ವಾವಲಂಬನೆ ಮತ್ತು ಯೋಗಕ್ಷೇಮವನ್ನು ಹೆಚ್ಚಿಸುವ ಕಾರ್ಯಕ್ರಮಗಳು ನಡೆಯುತ್ತವೆ. ಅವರನ್ನು ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದ ಮುಖ್ಯವಾಹಿನಿಗಳಿಗೆ ಸೇರಿಸುವ ಕುರಿತಂತೆ ಜನಜಾಗೃತಿಯನ್ನು ಮೂಡಿಸಲಾಗುತ್ತದೆ. ಪ್ರತಿ ವರ್ಷ ಈ ದಿನವನ್ನು ವಿವಿಧ ಥೀಮ್‌ಗಳಡಿಯಲ್ಲಿ ಆಚರಿಸಲಾಗುತ್ತದೆ. ಅಂಗವಿಕಲರಿಗೂ ಸಮಾಜದ ಇತರ ವ್ಯಕ್ತಿಗಳಂತೆ ಸಮಾನವಾದ ಅವಕಾಶಗಳು ಸಿಗಬೇಕು, ಅವರಿಗೆ ಯೋಗ್ಯವಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂಬುದೇ ಈ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ.


ವಿಶ್ವ ಏಡ್ಸ್ ದಿನ

ಡಿಸೆಂಬರ್ 1 ವಿಶ್ವ ಏಡ್ಸ್ ದಿನ. ಈ ರೋಗದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ 1988ರಿಂದ ವಿಶ್ವ ಏಡ್ಸ್ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ. ಅಂದ ಹಾಗೆ ಏಡ್ಸ್ ಎಂದರೇನು ಅದು ಹರಡುವುದು ಹೇಗೆ ಎಂಬ ಅರಿವು ಈಗ ಜನರಲ್ಲಿದೆ.ಇನ್ನು ಈ ಮಹಾಮಾರಿ ಏಡ್ಸ್ ಗೆ ಗುರಿಯಾಗುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆ ಆಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿಯಲ್ಲಿ ತಿಳಿಸಿದೆ. ಅಂದ ಹಾಗೆ ಅಕ್ವೈರ್ಡ್ ಇಮ್ಯುನೋ ಡಿಫಿಷಿಯೆನ್ಸಿ ಸಿಂಡ್ರೋಮ್ ಹೃಸ್ವ ರೂಪವೇ ಏಡ್ಸ್ (Acquired immune deficiency syndrome.) ಇದನ್ನು ರೋಗ ಅನ್ನುವಂತಕ್ಕಿಂತ ರೋಗಗಳ ಸರಮಾಲೆ ಎಂದು ಕರೆಯಬಹುದು.

ಎಚ್ ಐ ವಿ ಈ ರೀತಿಯಾಗಿ ಹರಡುವುದಿಲ್ಲ

1 ಏಡ್ಸ್ ರೋಗಿ ಜೊತೆ ಹಸ್ತಲಾಘವ ಮಾಡುವ ಮೂಲಕ
2
ಏಡ್ಸ್ ರೋಗಿ ಬಳಸಿದ ತಟ್ಟೆ, ಲೋಟ ಪಾತ್ರೆಗಳನ್ನು ಬಳಸುವುದರಿಂದ
3.
ರೋಗಿಯ ಜೊತೆ ಆಹಾರ ಸೇವಿಸುವುದರಿಂದ
4.
ಸಾರ್ವಜನಿಕ ಶೌಚಾಲಯಗಳನ್ನು, ಪಾರ್ಕ್, ಈಜುಕೊಳಗಳನ್ನು ಬಳಸುವುದರಿಂದ

ಮುನ್ನಚ್ಚರಿಕೆಯ ಕ್ರಮಗಳು
1
ಏಡ್ಸ್ ರೋಗಿ ಬಳಸಿದ ಸೂಜಿ ಸಿರಿಂಜ್ ಗಳನ್ನು ಬಳಸದೇ ಇರುವುದು
2
ಸೋಂಕು ತಗುಲಿದ ವ್ಯಕ್ತಿಯ ಜೊತೆಗೆ ಲೈಂಗಿಕ ಸಂಪರ್ಕ ಹೊಂದುವುದನ್ನು ಸಂಪೂರ್ಣವಾಗಿ ತಡೆಯುವುದು.
3.
ರಕ್ತದಾನ ಮಾಡುವುದಕ್ಕೆ ಇಲ್ಲವೇ ಪಡೆಯುವುದಕ್ಕೆ ಮುಂಚೆ ಹೆಚ್‌ಐವಿ ಸೋಂಕು ಇಲ್ಲದಿರುವುದನ್ನು ಖಚಿತ ಪಡಿಸಿಕೊಳ್ಳುವುದು.
4.
ಹೆಚ್‌ಐವಿ ಸೋಂಕು ತಗುಲಿರುವ ತಾಯಿಯ ತನ್ನ ಮಗುವಿಗೆ ಮೊಲೆಹಾಲು ನೀಡುವುದನ್ನು ತಡೆಯುವುದು.

ಹುತ್ತರಿ

ಕೊಡವ ಭಾಷೆಯಲ್ಲಿ ಪುದಿಯ ಅರಿಎಂದರೆ ಹೊಸ ಅಕ್ಕಿ ಎಂದರ್ಥ. ಪುದಿಯ ಅರಿ ಎನ್ನುವದರ ಸಮಾಸ ಪುತ್ತರಿ. ಕನ್ನಡದಲ್ಲಿ ಹುತ್ತರಿ ಎನ್ನುತ್ತಾರೆ. ಹೊಸ ಅಕ್ಕಿಯನ್ನು, ವಾಸ್ತವವಾಗಿ ಭತ್ತದ ಕದಿರನ್ನು, ಮನೆಗೆ ತರುವ ಸುಗ್ಗಿ ಹಬ್ಬ ಪುತ್ತರಿ.ಇದು ಎರಡು ದಿನಗಳಲ್ಲಿ ನಡೆಯುತ್ತದೆ. ಒಂದು ಪಾಡಿ ಪೊಳ್ದ್’; ಇನ್ನೊಂದು ನಾಡ್ ಪೊಳ್ದ್’. ಮೊದಲನೆಯದು ಪಾಡಿಯ ಇಗ್ಗುತ್ತಪ್ಪ ದೇವಸ್ಥಾನದ ಗದ್ದೆಯಿಂದ ಕದಿರು ತರುವ ಹಬ್ಬ. ಇನ್ನೊಂದು ಇದರ ಮರುದಿನ ಕೊಡಗಿನಲ್ಲೆಲ್ಲಾ ಕೊಡವರು ಕದಿರನ್ನು ಮನೆಗೆ ತರುವ ನಾಡ ಹಬ್ಬ. ರೋಹಿಣಿ ನಕ್ಷತ್ರವಿರುವ ಹುಣ್ಣಿಮೆಯ ರಾತ್ರಿ ಕದಿರು ತೆಗೆಯಲುಅರ್ಥಾತ್, ಈ ಹೊಸ ಬೆಳೆಯನ್ನು ಪ್ರಥಮವಾಗಿ ಮನೆಗೆ ತರಲು ಪ್ರಶಸ್ತವಾದ ಸಮಯವೆಂದು ನಂಬಿಕೆ.ಈ ಮುಹೂರ್ತ ಸಾಮಾನ್ಯವಾಗಿ ನವೆಂಬರ್ ಅಂತ್ಯದಿಂದ ಡಿಸೆಂಬರಿನೊಳಗೆ ಬರುತ್ತದೆ. ಹುಣ್ಣಿಮೆಯಂದು ರೋಹಿಣಿ ನಕ್ಷತ್ರ ಬಾರದಿದ್ದರೆ ಕೃತಿಕೆಯಾದರೂ ಒಳ್ಳೆಯದೆಂದು ಪರಿಗಣಿಸಲಾಗುತ್ತದೆ. ಪುತ್ತರಿ ಹಬ್ಬದ ಅಂಗವಾಗಿ ಕೊಡಗಿನಲ್ಲೆಲ್ಲಾ ಕೋಲಾಟವೇ ಮೊದಲಾದ ಹಲವು ಜಾನಪದ ನೃತ್ಯಗಳ ಪ್ರದರ್ಶನಗಳು ನಡೆಯುತ್ತವೆ. ಕುಟುಂಬದ ಪ್ರತಿ ಸದಸ್ಯನೂ ಪುತ್ತರಿ ಹಬ್ಬದಲ್ಲಿ ಪಾಲ್ಗೊಳ್ಳಲು ಐನ್ ಮನೆಗೆ ಬಂದೇ ಬರಬೇಕು. ಅಷ್ಟೇ ಅಲ್ಲದೆ ಮನೆತನಕ್ಕೆ ಸೇರಿದ ಆಳುಕಾಳುಗಳು, ದೂರ ಮೇಯಲು ಬಿಟ್ಟ ದನಕರುಗಳು ಕೂಡಾ ಪುತ್ತರಿಗೆ ಐನ್ ಮನೆಯಲ್ಲಿ ಬಂದು ಸೇರಬೇಕೆಂಬ ಕಟ್ಟಳೆಯಿದೆ.ಕದಿರು ತೆಗೆಯುವ ದಿನಕ್ಕೆ ಒಂದು ವಾರಕ್ಕೆ ಮೊದಲು ಪುತ್ತರಿ ಹಬ್ಬದ ಪ್ರಯುಕ್ತ ನಡೆಯಲಿರುವ ಕೋಲಾಟ, ‘ಪರಿಯ ಕಳಿ’, ಮೊದಲಾದ ಆಟಗಳ ತಾಲೀಮಿಗೆ ಈಡುತೆಗೆಯುವದು ಎಂದು ಹೆಸರು. ರಾತ್ರಿ ಏಳು-ಏಳೂವರೆಗೆ ಪ್ರತಿ ಕುಟುಂಬ ದಿಂದ ಒಬ್ಬನಂತೆ ಇದರಲ್ಲಿ ಭಾಗವಹಿಸುವರು. ಊರ ತಕ್ಕ’(ಮುಖ್ಯಸ್ಥ)ನ ನೇತೃತ್ವದಲ್ಲಿ ಊರ ಮಂದಿನಲ್ಲಿ (ಮೈದಾನದಲ್ಲಿ) ಈ ಆಟಗಳಲ್ಲಿ ನುರಿತವರು ತರಬೇತು ನೀಡುವರು.ಹುತ್ತರಿ ಮುಗಿದ ಬಳಿಕ ಒಂದು ನಿಶ್ಚಿತ ಸಂಜೆ ಊರಿನ ಪ್ರತಿ ಮನೆಯಿಂದ ಒಬ್ಬನಂತೆ ಕಾಡುಮರಗಳ ತೋಪಿನಲ್ಲಿ ಕುಳಿತು ಸಾಮೂಹಿಕ ಭೋಜನವನ್ನು ಮಾಡುವರು. ಬೇಟೆ ನಿಷಿದ್ಧವಾಗಿಲ್ಲದಿದ್ದ ಕಾಲದಲ್ಲಿ ಬೆಳಿಗ್ಗೆ ಊರು ಬೇಟೆಯನ್ನಾಡಿ, ಸಂಜೆಯ ಔತಣಕ್ಕೆ ಸಿದ್ಧಪಡಿಸುತ್ತಿದ್ದರು. ಊರಿನ ಜನರಲ್ಲಿ ಏನಾದರೂ ವೈಮನಸ್ಯವಿದ್ದರೆ ಹಿರಿಯರು ರಾಜಿ ಮಾಡಿಸುವರು.

ಗುರುನಾನಕ್ ಜಯಂತಿ

ಸಂತ ಗುರು ನಾನಕ್‌ರವರ ಜನ್ಮದಿನ. ಗುರು ನಾನಕ್  ಪ್ರಕಾಶ್ ಉತ್ಸವ್  ಮತ್ತು ಗುರು ನಾನಕ್ ಜಯಂತಿ ಎಂದು ಸಹ ಕರೆಯಲ್ಪಡುವ ಗುರು ನಾನಕ್ ಮೊದಲ ಸಿಖ್ ಗುರು, ಗುರು ನಾನಕ್ ಹುಟ್ಟನ್ನು ಆಚರಿಸುತ್ತಾರೆ. ಇದು ಸಿಖ್ ಧರ್ಮದ ಅತ್ಯಂತ ಪವಿತ್ರ ಉತ್ಸವಗಳಲ್ಲಿ ಒಂದಾಗಿದೆ.ಸಿಖ್ ಧರ್ಮದ ಹಬ್ಬಗಳು 10 ಸಿಖ್ಖರ ಗುರುಗಳ ವಾರ್ಷಿಕೋತ್ಸವದ ಸುತ್ತ ಸುತ್ತುತ್ತವೆ. ಈ ಗುರುಗಳು ಸಿಖ್ಖರ ನಂಬಿಕೆಗಳನ್ನು ರೂಪಿಸಲು ಕಾರಣರಾಗಿದ್ದರು. ಗುರುಪುಬ್ (ಅಥವಾ ಗುರ್ಪುರ್ಬ್) ಎಂದು ಕರೆಯಲ್ಪಡುವ ಅವರ ಹುಟ್ಟುಹಬ್ಬಗಳು ಸಿಖ್ಖರ ನಡುವೆ ಆಚರಣೆಯನ್ನು ಮತ್ತು ಪ್ರಾರ್ಥನೆಗೆ ಸಂಬಂಧಿಸಿದ ಸಂದರ್ಭಗಳಾಗಿವೆ .ಸಿಖ್ ಧರ್ಮದ ಸಂಸ್ಥಾಪಕ ಗುರು ನಾನಕ್, ಪಾಕಿಸ್ತಾನದ ಪ್ರಸ್ತುತ ಶೇಖುಪುರಾ ಜಿಲ್ಲೆಯ ರೈ-ಭೋಯಿ-ಡಿ ತಲ್ವಾಂಡಿಯಲ್ಲಿ ನವೆಂಬರ್ 15, 1469 ರಂದು ಜನಿಸಿದರು, ಈಗ ನಾನ್ಕಾನಾ ಸಾಹಿಬ್. ಕಾರ್ತಿಕ್ ತಿಂಗಳಲ್ಲಿ ಹುಣ್ಣಿಮೆಯ ದಿನವಾದ ಕಾರ್ತಿಕ ಪೂರ್ಣಿಮಾದಲ್ಲಿ ಅವರ ಜನ್ಮವನ್ನು ಆಚರಿಸಲಾಗುತ್ತದೆ.

ಕೂಷ್ಮಾಂಡ ನವಮಿ

ಕೂಷ್ಮಾಂಡ  ಎನ್ನುವುದು ದುರ್ಗಾ ಮಾತೆಯ  ನಾಲ್ಕನೆಯ ಪೂಜಾ ವಿಧಿ, ಈ ಅವತಾರದಲ್ಲಿ  ಅವಳು ಕೂಷ್ಮಾಂಡ ದೇವಿಯಾಗಿ ಕಾಣಿಸಿಕೊಳ್ಳುತ್ತಾಳೆ. ಅಷ್ಟ ಭುಜೆ ಎಂದು ಕರೆಸಿಕೊಳ್ಳುವ ಅವಳು ಎಂಟು ತೋಳುಗಳನ್ನು ಉಳ್ಳವಳಾಗಿದ್ದು ಹುಲಿಯ ಮೇಲೆ ಕುಳಿತು ಕೊಂಡು ಇರುತ್ತಾಳೆ. ಈ ರೂಪದಲ್ಲಿ  ತ್ರಿಮೂರ್ತಿಗಳೂ ಕೂಡ  ಅವಳಲ್ಲಿ  ನೆಲೆಗೊಂಡಿರುತ್ತಾಳೆ ಎನ್ನುವುದು ನಂಬಿಕೆ. ಭಕ್ತರು ಈ ಪೂಜೆಯ ಮೂಲಕ ತಮ್ಮ ಅನಹತ ಚಕ್ರದ ಅರಿವನ್ನು ಪಡೆದು ಕೊಳ್ಳುತ್ತಾರೆ.

ತ್ರಿಲೋಚನ ಗೌರಿ ವ್ರತ

ಕಾರ್ತಿಕ ಮಾಸದ ಶುಕ್ಲ ಪಕ್ಷದ ತೃತಿಯದಂದು ಆಚರಿಸಲ್ಪಡುವ ಈ ವ್ರತವು ಮೂರು ದಿನಗಳ ಆಚರಣೆಯಾಗಿದ್ದು ಪಂಚಮಿಯಂದು ಕೊನೆಯಾಗಲಿದೆ. ಇದನ್ನು ವಿಷ್ಣು ತೃತೀಯ ವ್ರತ ಎಂದು ಕೂಡ ಕರೆಯುತ್ತಾರೆ.

ವಿಶ್ವಸಂಸ್ಥೆ ದಿನ

ವಿಶ್ವಸಂಸ್ಥೆ ಅಂತಾರಾಷ್ಟ್ರೀಯ ಸಂಸ್ಥೆ(ಯುನೈಟೆಡ್ ನೇಷನ್ಸ್ ಆರ್ಗನೈಸೇಷನ್ಸ್). 1945 ಅಕ್ಟೋಬರ್ 24 ರಂದು ಅಧಿಕೃತವಾಗಿ ಸ್ಥಾಪಿತವಾಯಿತು. ಒಂದನೆಯ ಮಹಾಯುದ್ಧದ ಅನಂತರ ಸ್ಥಾಪಿಸಲಾಗಿದ್ದ ಲೀಗ್ ಆಫ್ ನೇಷನ್(ರಾಷ್ಟ್ರ ಸಂಘ) ವಿಫಲತೆ ಹಾಗೂ ಎರಡನೆಯ ಮಹಾಯುದ್ಧದ ಘೋರ ಪರಿಣಾಮಗಳನ್ನರಿತು ಮುಂದೆ ಯುದ್ಧಗಳಾಗುವುದನ್ನು ತಡೆಯಲು ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ಮತ್ತು ಸುಭದ್ರತೆ ಕಾಪಾಡಿ ಮಾನವ ಜನಾಂಗದ ಜೀವನಮಟ್ಟ ಸುಧಾರಿಸುವ ಧ್ಯೇಯದೊಂದಿಗೆ ಇದನ್ನು ಸ್ಥಾಪಿಸಲಾಯಿತು. ಇಂಗ್ಲೆಂಡಿನ ಆಗಿನ ಪ್ರಧಾನಿ ಚರ್ಚಿಲ್, ಅಮೆರಿಕದ ಅಧ್ಯಕ್ಷ ರೂಸ್‍ವೆಲ್ಟ್ ಹಾಗೂ ರಷ್ಯಾದ ಅಧ್ಯಕ್ಷ ಸ್ಟಾಲಿನ್ ಇದರ ಪ್ರಮುಖ ರೂವಾರಿಗಳು.

ಇದರ ತಾತ್ಕಾಲಿಕ ಕೇಂದ್ರ ಕಚೇರಿ ಲೇಕ್‍ಸಕ್ಸಸ್ ಪ್ರದೇಶದಲ್ಲಿತ್ತು, ಅನಂತರ ಜಾನ್ ಡಿ.ರಾಕ್‍ಫೆಲ್ಲರ್ ಎಂಬ ಶ್ರೀಮಂತ ವಿಶಾಲ ನಿವೇಶನವನ್ನು ನ್ಯೂಯಾರ್ಕಿನ ಮ್ಯಾನ್‍ಹಟನ್‍ನಲ್ಲಿ ನೀಡಿದಾಗ 1951 ರಲ್ಲಿ ಕಚೇರಿಯನ್ನು ಇಲ್ಲಿಗೆ ವರ್ಗಾಯಿಸಲಾಯಿತು. ಇಂಗ್ಲಿಷ್, ಅರೇಬಿಕ್, ಫ್ರೆಂಚ್, ಸ್ಪ್ಯಾನಿಷ್, ರಷ್ಯನ್ ಹಾಗೂ ಚೀನಿ ಇದರ ಅಧಿಕೃತ ಭಾಷೆಗಳು. ಪ್ರಸ್ತುತ 188 ಸದಸ್ಯ ರಾಷ್ಟ್ರಗಳಿವೆ.

ಸದಸ್ಯ ರಾಷ್ಟ್ರಗಳ ನಡುವೆ ಪರಸ್ಪರ ಸಮಾನತೆ, ಸೌಹಾರ್ದತೆ; ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಮಾನವೀಯ ಸಮಸ್ಯೆಗಳನ್ನು ಸಹಕಾರತತ್ತ್ವದ ಮೇಲೆ ಬಗೆಹರಿಸಿ ವಸಾಹತುಶಾಹಿ ಹಾಗೂ ಸಾಮ್ರಾಜ್ಯಶಾಹಿ ಧೋರಣೆಯನ್ನು ನಿಯಂತ್ರಿಸುವ ಧ್ಯೇಯೋದ್ದೇಶಗಳನ್ನು ಹೊಂದಿದೆ ಈ ಸಂಸ್ಥೆ. ಎಲ್ಲ ಜನಾಂಗಗಳ ಮೂಲಭೂತ ಹಕ್ಕುಗಳನ್ನು ಕಾಪಾಡಿ, ಸಾಮಾಜಿಕ ಪ್ರಗತಿ ಮತ್ತು ಜನತೆಯ ಜೀವನ ಮಟ್ಟವನ್ನು ಸುಧಾರಿಸುವ ಉದ್ದೇಶವನ್ನು ಹೊಂದಿದೆ. ಇದು ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ ಹಾಗೂ ಸಾರ್ವಭೌಮತ್ವದ ಆಧಾರದ ಮೇಲೆ ತನ್ನ ಸದಸ್ಯ ರಾಷ್ಟ್ರಗಳ ಹಲವು ಕರ್ತವ್ಯಗಳನ್ನು ಪಾಲಿಸಬೇಕಾಗುತ್ತದೆ.


ವಿಶ್ವ ಆಹಾರ ದಿನ

ಅಕ್ಟೋಬರ್‌ 16 ಹಸಿವಿನ ವಿರುದ್ಧ ಹೋರಾಡಲು ಇರುವ ದಿನ. 1945 ರಲ್ಲಿ ವಿಶ್ವಸಂಸ್ಥೆಯು ಈ ದಿನವನ್ನು ಕೃಷಿ ಸಂಸ್ಥೆಯ ಸ್ಥಾಪನೆಯ ದಿನಾಂಕದ ಗೌರವಾರ್ಥವಾಗಿ ಆಹಾರ ದಿನವನ್ನಾಗಿ ಆಚರಿಸಲು ನಿರ್ಧರಿಸಿತು.

ಪ್ರಪಂಚದ ಜನರು ಒಂದಾಗಿ ಹಸಿವಿನ ವಿರುದ್ಧ ಕೆಲಸ ಮಾಡಲು ಮತ್ತು ನಿರ್ಮೂಲನೆಗಾಗಿ ಕೆಲಸ ಮಾಡುವ ಸಲುವಾಗಿ ಈ ದಿನವನ್ನು ಆಚರಣೆಗೆ ತರತಲಾಗಿತ್ತು.

ಆಹಾರ ಸೇವಿಸುವುದು ಮಾನವನ ಮೂಲಭೂತ ಹಕ್ಕುಗಳಲ್ಲಿ ಒಂದು. ಭೂಮಿಯ ಮೇಲಿನ ಪ್ರತಿಯೊಬ್ಬರಿಗೂ ಸಾಕಷ್ಟು ಆಹಾರ ಸೇವಿಸುವ ಹಕ್ಕು ಇದೆ. ಸಮೀಕ್ಷೆಯೊಂದರ ಪ್ರಕಾರ ಜಗತ್ತಿನಲ್ಲಿ ಪ್ರತಿ ವರ್ಷ 5 ದಶಲಕ್ಷ ಮಕ್ಕಳು ಹಸಿವಿನಿಂದ ಸಾವಿಗೀಡಾಗುತ್ತಿದ್ದಾರೆ. ಈ ಪೈಕಿ 5 ವರ್ಷದ ಒಳಗಿನ ಮಕ್ಕಳೇ ಹೆಚ್ಚು. ಬಡ ರಾಷ್ಟ್ರಗಳಲ್ಲಿ ಶೇ.50 ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ವಿಶ್ವ ಆಹಾರ ದಿನದಡಿಯಲ್ಲಿ 40 ದೇಶಗಳಲ್ಲಿ ಹಸಿವಿನಿಂದ ಬಳಲುವವರ ಸಂಖ್ಯೆಯನ್ನು ಕಡಿಮೆ ಮಾಡಲು ಪಣ ತೊಡಲಾಗಿದೆ.

ಒಂದೆಡೆ ಆಹಾರೋದ್ಯಮ ಬೆಳೆಯುತ್ತಿದ್ದರೆ ಇನ್ನೊಂದೆಡೆ ಜನರು ಹಸಿವಿನಿಂದ ಸಾಯುತ್ತಿರುವ ಘಟನೆಗಳೂ ಹೆಚ್ಚುತ್ತಿದೆ. ಇದರ ಜೊತೆಗೆ ಆಹಾರವನ್ನು ರಕ್ಷಣೆ ಮಾಡುವ ಒಂದು ವ್ಯವಸ್ಥೆ ನಮ್ಮಲ್ಲಿ ಸಾಕಷ್ಟಿಲ್ಲ. ಹಸಿವು ಮತ್ತು ಬಡತನದಿಂದ ನರಳುತ್ತಿರುವ ಜನರಿಗೆ ಸೂಕ್ತ ಆಹಾರ ನೀಡಬೇಕು. ನಮ್ಮಲ್ಲಿ ಯಾರೂ ಹಸಿವಿನಿಂದ ಸಾಯಬಾರದು ಎಂಬ ಉದ್ದೇಶದಿಂದ ಕೂಡ ವಿಶ್ವ ಆಹಾರ ದಿನವನ್ನು ಆಚರಿಸಲಾಗುತ್ತದೆ.