ವಿಶ್ವಸಂಸ್ಥೆ ದಿನ

ವಿಶ್ವಸಂಸ್ಥೆ ಅಂತಾರಾಷ್ಟ್ರೀಯ ಸಂಸ್ಥೆ(ಯುನೈಟೆಡ್ ನೇಷನ್ಸ್ ಆರ್ಗನೈಸೇಷನ್ಸ್). 1945 ಅಕ್ಟೋಬರ್ 24 ರಂದು ಅಧಿಕೃತವಾಗಿ ಸ್ಥಾಪಿತವಾಯಿತು. ಒಂದನೆಯ ಮಹಾಯುದ್ಧದ ಅನಂತರ ಸ್ಥಾಪಿಸಲಾಗಿದ್ದ ಲೀಗ್ ಆಫ್ ನೇಷನ್(ರಾಷ್ಟ್ರ ಸಂಘ) ವಿಫಲತೆ ಹಾಗೂ ಎರಡನೆಯ ಮಹಾಯುದ್ಧದ ಘೋರ ಪರಿಣಾಮಗಳನ್ನರಿತು ಮುಂದೆ ಯುದ್ಧಗಳಾಗುವುದನ್ನು ತಡೆಯಲು ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ಮತ್ತು ಸುಭದ್ರತೆ ಕಾಪಾಡಿ ಮಾನವ ಜನಾಂಗದ ಜೀವನಮಟ್ಟ ಸುಧಾರಿಸುವ ಧ್ಯೇಯದೊಂದಿಗೆ ಇದನ್ನು ಸ್ಥಾಪಿಸಲಾಯಿತು. ಇಂಗ್ಲೆಂಡಿನ ಆಗಿನ ಪ್ರಧಾನಿ ಚರ್ಚಿಲ್, ಅಮೆರಿಕದ ಅಧ್ಯಕ್ಷ ರೂಸ್‍ವೆಲ್ಟ್ ಹಾಗೂ ರಷ್ಯಾದ ಅಧ್ಯಕ್ಷ ಸ್ಟಾಲಿನ್ ಇದರ ಪ್ರಮುಖ ರೂವಾರಿಗಳು.

ಇದರ ತಾತ್ಕಾಲಿಕ ಕೇಂದ್ರ ಕಚೇರಿ ಲೇಕ್‍ಸಕ್ಸಸ್ ಪ್ರದೇಶದಲ್ಲಿತ್ತು, ಅನಂತರ ಜಾನ್ ಡಿ.ರಾಕ್‍ಫೆಲ್ಲರ್ ಎಂಬ ಶ್ರೀಮಂತ ವಿಶಾಲ ನಿವೇಶನವನ್ನು ನ್ಯೂಯಾರ್ಕಿನ ಮ್ಯಾನ್‍ಹಟನ್‍ನಲ್ಲಿ ನೀಡಿದಾಗ 1951 ರಲ್ಲಿ ಕಚೇರಿಯನ್ನು ಇಲ್ಲಿಗೆ ವರ್ಗಾಯಿಸಲಾಯಿತು. ಇಂಗ್ಲಿಷ್, ಅರೇಬಿಕ್, ಫ್ರೆಂಚ್, ಸ್ಪ್ಯಾನಿಷ್, ರಷ್ಯನ್ ಹಾಗೂ ಚೀನಿ ಇದರ ಅಧಿಕೃತ ಭಾಷೆಗಳು. ಪ್ರಸ್ತುತ 188 ಸದಸ್ಯ ರಾಷ್ಟ್ರಗಳಿವೆ.

ಸದಸ್ಯ ರಾಷ್ಟ್ರಗಳ ನಡುವೆ ಪರಸ್ಪರ ಸಮಾನತೆ, ಸೌಹಾರ್ದತೆ; ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಮಾನವೀಯ ಸಮಸ್ಯೆಗಳನ್ನು ಸಹಕಾರತತ್ತ್ವದ ಮೇಲೆ ಬಗೆಹರಿಸಿ ವಸಾಹತುಶಾಹಿ ಹಾಗೂ ಸಾಮ್ರಾಜ್ಯಶಾಹಿ ಧೋರಣೆಯನ್ನು ನಿಯಂತ್ರಿಸುವ ಧ್ಯೇಯೋದ್ದೇಶಗಳನ್ನು ಹೊಂದಿದೆ ಈ ಸಂಸ್ಥೆ. ಎಲ್ಲ ಜನಾಂಗಗಳ ಮೂಲಭೂತ ಹಕ್ಕುಗಳನ್ನು ಕಾಪಾಡಿ, ಸಾಮಾಜಿಕ ಪ್ರಗತಿ ಮತ್ತು ಜನತೆಯ ಜೀವನ ಮಟ್ಟವನ್ನು ಸುಧಾರಿಸುವ ಉದ್ದೇಶವನ್ನು ಹೊಂದಿದೆ. ಇದು ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ ಹಾಗೂ ಸಾರ್ವಭೌಮತ್ವದ ಆಧಾರದ ಮೇಲೆ ತನ್ನ ಸದಸ್ಯ ರಾಷ್ಟ್ರಗಳ ಹಲವು ಕರ್ತವ್ಯಗಳನ್ನು ಪಾಲಿಸಬೇಕಾಗುತ್ತದೆ.