ಕೊಡವ ಭಾಷೆಯಲ್ಲಿ ‘ಪುದಿಯ ಅರಿ’ ಎಂದರೆ ಹೊಸ ಅಕ್ಕಿ ಎಂದರ್ಥ. ಪುದಿಯ ಅರಿ ಎನ್ನುವದರ ಸಮಾಸ ಪುತ್ತರಿ. ಕನ್ನಡದಲ್ಲಿ ಹುತ್ತರಿ ಎನ್ನುತ್ತಾರೆ. ಹೊಸ ಅಕ್ಕಿಯನ್ನು, ವಾಸ್ತವವಾಗಿ ಭತ್ತದ ಕದಿರನ್ನು, ಮನೆಗೆ ತರುವ ಸುಗ್ಗಿ ಹಬ್ಬ ಪುತ್ತರಿ.ಇದು ಎರಡು ದಿನಗಳಲ್ಲಿ ನಡೆಯುತ್ತದೆ. ಒಂದು ‘ಪಾಡಿ ಪೊಳ್ದ್’; ಇನ್ನೊಂದು ‘ನಾಡ್ ಪೊಳ್ದ್’. ಮೊದಲನೆಯದು ಪಾಡಿಯ ಇಗ್ಗುತ್ತಪ್ಪ ದೇವಸ್ಥಾನದ ಗದ್ದೆಯಿಂದ ಕದಿರು ತರುವ ಹಬ್ಬ. ಇನ್ನೊಂದು ಇದರ ಮರುದಿನ ಕೊಡಗಿನಲ್ಲೆಲ್ಲಾ ಕೊಡವರು ಕದಿರನ್ನು ಮನೆಗೆ ತರುವ ನಾಡ ಹಬ್ಬ. ರೋಹಿಣಿ ನಕ್ಷತ್ರವಿರುವ ಹುಣ್ಣಿಮೆಯ ರಾತ್ರಿ ‘ಕದಿರು ತೆಗೆಯಲು’ ಅರ್ಥಾತ್, ಈ ಹೊಸ ಬೆಳೆಯನ್ನು ಪ್ರಥಮವಾಗಿ ಮನೆಗೆ ತರಲು ಪ್ರಶಸ್ತವಾದ ಸಮಯವೆಂದು ನಂಬಿಕೆ.ಈ ಮುಹೂರ್ತ ಸಾಮಾನ್ಯವಾಗಿ ನವೆಂಬರ್ ಅಂತ್ಯದಿಂದ ಡಿಸೆಂಬರಿನೊಳಗೆ ಬರುತ್ತದೆ. ಹುಣ್ಣಿಮೆಯಂದು ರೋಹಿಣಿ ನಕ್ಷತ್ರ ಬಾರದಿದ್ದರೆ ಕೃತಿಕೆಯಾದರೂ ಒಳ್ಳೆಯದೆಂದು ಪರಿಗಣಿಸಲಾಗುತ್ತದೆ. ಪುತ್ತರಿ ಹಬ್ಬದ ಅಂಗವಾಗಿ ಕೊಡಗಿನಲ್ಲೆಲ್ಲಾ ಕೋಲಾಟವೇ ಮೊದಲಾದ ಹಲವು ಜಾನಪದ ನೃತ್ಯಗಳ ಪ್ರದರ್ಶನಗಳು ನಡೆಯುತ್ತವೆ. ಕುಟುಂಬದ ಪ್ರತಿ ಸದಸ್ಯನೂ ಪುತ್ತರಿ ಹಬ್ಬದಲ್ಲಿ ಪಾಲ್ಗೊಳ್ಳಲು ಐನ್ ಮನೆಗೆ ಬಂದೇ ಬರಬೇಕು. ಅಷ್ಟೇ ಅಲ್ಲದೆ ಮನೆತನಕ್ಕೆ ಸೇರಿದ ಆಳುಕಾಳುಗಳು, ದೂರ ಮೇಯಲು ಬಿಟ್ಟ ದನಕರುಗಳು ಕೂಡಾ ಪುತ್ತರಿಗೆ ಐನ್ ಮನೆಯಲ್ಲಿ ಬಂದು ಸೇರಬೇಕೆಂಬ ಕಟ್ಟಳೆಯಿದೆ.ಕದಿರು ತೆಗೆಯುವ ದಿನಕ್ಕೆ ಒಂದು ವಾರಕ್ಕೆ ಮೊದಲು ಪುತ್ತರಿ ಹಬ್ಬದ ಪ್ರಯುಕ್ತ ನಡೆಯಲಿರುವ ಕೋಲಾಟ, ‘ಪರಿಯ ಕಳಿ’, ಮೊದಲಾದ ಆಟಗಳ ತಾಲೀಮಿಗೆ ‘ಈಡು’ ತೆಗೆಯುವದು ಎಂದು ಹೆಸರು. ರಾತ್ರಿ ಏಳು-ಏಳೂವರೆಗೆ ಪ್ರತಿ ಕುಟುಂಬ ದಿಂದ ಒಬ್ಬನಂತೆ ಇದರಲ್ಲಿ ಭಾಗವಹಿಸುವರು. ಊರ ‘ತಕ್ಕ’(ಮುಖ್ಯಸ್ಥ)ನ ನೇತೃತ್ವದಲ್ಲಿ ಊರ ‘ಮಂದಿ’ನಲ್ಲಿ (ಮೈದಾನದಲ್ಲಿ) ಈ ಆಟಗಳಲ್ಲಿ ನುರಿತವರು ತರಬೇತು ನೀಡುವರು.ಹುತ್ತರಿ ಮುಗಿದ ಬಳಿಕ ಒಂದು ನಿಶ್ಚಿತ ಸಂಜೆ ಊರಿನ ಪ್ರತಿ ಮನೆಯಿಂದ ಒಬ್ಬನಂತೆ ಕಾಡುಮರಗಳ ತೋಪಿನಲ್ಲಿ ಕುಳಿತು ಸಾಮೂಹಿಕ ಭೋಜನವನ್ನು ಮಾಡುವರು. ಬೇಟೆ ನಿಷಿದ್ಧವಾಗಿಲ್ಲದಿದ್ದ ಕಾಲದಲ್ಲಿ ಬೆಳಿಗ್ಗೆ ಊರು ಬೇಟೆಯನ್ನಾಡಿ, ಸಂಜೆಯ ಔತಣಕ್ಕೆ ಸಿದ್ಧಪಡಿಸುತ್ತಿದ್ದರು. ಊರಿನ ಜನರಲ್ಲಿ ಏನಾದರೂ ವೈಮನಸ್ಯವಿದ್ದರೆ ಹಿರಿಯರು ರಾಜಿ ಮಾಡಿಸುವರು.