ಶ್ರೀ ಮಂಗಳ ಗೌರಿ ವ್ರತವನ್ನು ಶ್ರವಣ ಮಾಸದಲ್ಲಿ ಪ್ರತಿ
ಮಂಗಳವಾರ ಆಚರಿಸುತ್ತಾರೆ. 4/5 ಮಂಗಳವಾರ ಪೂಜೆ ಮಾಡುತ್ತಾರೆ. ಮದುವೆಯ ನಂತರ 5 ವರ್ಷ ಈ
ವ್ರತ ಮಾಡುವ ಪದ್ಧತಿ ಇದೆ. ಈ ದಿನ ಮಂಗಳ ಸ್ನಾನ ಮಾಡಿ, ಪೂಜಗೃಹ
ಅಥವಾ ದೇವರು ಇಡುವ ಜಾಗವನ್ನು ರಂಗೋಲಿಯಿಂದ ಅಲಂಕರಿಸಬೇಕು. ಒಂದು ಮಣೆ ಇಟ್ಟು, ಅದರ
ಮೇಲೆ ರವಿಕೆ ಬಟ್ಟೆ ಹಾಸಿ, ಅದರ ಮೇಲೆ ಒಂದು ತಟ್ಟೆಯಲ್ಲಿ ದೇವರನ್ನು ಇಡಬೇಕು.ಗಣಪತಿ, ಗೌರಿ
ವಿಗ್ರಹ, ಅರಿಶಿನದ ಗೌರಮ್ಮ(ಸ್ವಲ್ಪ ಅರಿಶಿನಕ್ಕೆ ಚೂರು ಹಾಲು ಹಾಕಿ
ಕಲೆಸಿ ಗೋಪುರದ ಆಕರ ಕೊಡಿ), ಕನ್ನಡಿ, ಕಲಶ, ಇವುಗಳನ್ನು
ಇಟ್ಟುಕೊಳ್ಳಬೇಕು. 3 ರವಿಕೆ ಬಟ್ಟೆಯನ್ನು ತ್ರಿಕೋಣಾಕಾರದಲ್ಲಿ (triangle) ಮಡಿಸಿ ಹಿಂದೆ ಇಡಬೇಕು.
ಒಂದು ಸಣ್ಣ ಚೊಂಬಿನ ಒಳಗೆ ಸ್ವಲ್ಪ ಅಕ್ಕಿ, ಮಂತ್ರಾಕ್ಷತೆ
ಹಾಕಿ, ಇದರ ಮೇಲೆ ರವಿಕೆ ಬಟ್ಟೆ ಇಟ್ಟು, ಒಂದು
ಕೊಬ್ಬರಿ ಗಿಟುಕನ್ನು ಇಡಬೇಕು. ಇದಕ್ಕೆ ಕಪ್ಪಿನಿಂದ ಕಣ್ಣು, ಮುಗು
ಬರೆದು, ಅಲಂಕರಿಸಿ. ಇದೇ ಮಂಗಳಗೌರಿ ಮೂರ್ತಿ,ಇದಕ್ಕೆ
ಪೂಜೆ ಮಾಡಬೇಕು. ಕೆಲವುಮನೆಗಳಲ್ಲಿ ಮಣೆಗೆ ರವಿಕೆ ಬಟ್ಟೆಯ ಬದಲು ಶಲ್ಯ ಹಾಸುತ್ತಾರೆ, ಕೆಲವರು
ದೇವಿಯ ಎರಡು ಬದಿಯಲ್ಲಿ 16 ವೀಳ್ಯದ ಎಲೆ, ಅಡಿಕೆಯನ್ನು
ಇಡುತ್ತಾರೆ. ಇದರೊಂದಿಗೆ ದೇವಿಗೆ ನಿಮ್ಮ ಇಷ್ಟದಂತೆ ಅಲಂಕಾರ ಮಾಡಬಹುದು.
ಶ್ರೀ ಮಂಗಳಗೌರಿ ವ್ರತ
ಕಲಶ,ಕೊಬ್ಬರಿಯಲ್ಲಿ ಮೂಡಿರುವ ಗೌರಿ ದೇವಿ
ಸಾಮನ್ಯವಾಗಿ ಉಪಯೋಗಿಸುವ ಪೂಜಾ ಸಾಮಗ್ರಿಗಳ ಜೊತೆಗೆ ಕೊಬ್ಬರಿ
ಗಿಟುಕು, ರವಿಕೆ ಬಟ್ಟೆಗಳು, ಕಲಶ, ಕನ್ನಡಿ, ಮರದ
ಜೊತೆ ಬಾಗಿನ, ಹತ್ತಿ ಎಳೆ, ಬಳೆ, ಬಿಚ್ಚೂಲೆ, ತಂಬಿಟ್ಟಿನ
ಆರತಿ ಬೇಕಾಗುತ್ತೆ.ಮೊದಲು ಗಣಪತಿ ಪೂಜೆ ಮಾಡಿ ನಂತರ ಮಂಗಳಗೌರಿ ಪೂಜೆ ಮಾಡಬೇಕು. ಗೌರಿಗೆ 16 ಹಿಡಿ 16 ಎಳೆಗಳ
ಹತ್ತಿ ಹಾರ ಹಾಕಬೇಕು.ನೈವೇದ್ಯಕ್ಕೆ ಸಾಮಾನ್ಯವಾಗಿ ಹೆಸರುಬೇಳೆ ಪಾಯಸ, ಹುಗ್ಗಿ
ಮಾಡುತ್ತಾರೆ. ಕೊನೆಯಲ್ಲಿ ತಂಬಿಟ್ಟಿನಲ್ಲಿ 16 ದೀಪದ
ಆರತಿ ಮಾಡಬೇಕು. ತಂಬಿಟ್ಟು ಮಾಡುವ ವಿಧಾನ ಇಲ್ಲಿದೆ.ಈ ದೀಪದಲ್ಲಿ ವಿಳ್ಯದ ಎಲೆಯನ್ನು ಹಿಡಿದು, ಕಪ್ಪು(ಕಾಡಿಗೆ)
ಹಿಡಿಯಬೇಕು. ಇದನ್ನು ಮಂಗಳಗೌರಿಗೆ ಹಚ್ಚಿ, ನೀವು
ಕಣ್ಣಿಗೆ ಹಚ್ಚಿಕೊಳ್ಳಬೇಕು. ಪೂಜೆಯ ನಂತರ ಕಥಾ ಶ್ರವಣ ಮಾಡಬೇಕು. ಪೂಜೆ ಆದ ಮೇಲೆ ಕೊಬ್ಬರಿಯಲ್ಲಿ
ಮಾಡಿರುವ ದೇವಿಯನ್ನು ಹಾಗೆ ಇಟ್ಟುಕೊಳ್ಳಿ. ಅದೇ ಕೊಬ್ಬರಿಯನ್ನು ನಾಲ್ಕು ವಾರವೂ ಇಟ್ಟು ಪೂಜೆ
ಮಾಡಿ, ಕೊನೆಯ ವಾರ ಇದನ್ನು ಬಾಗಿನದಲ್ಲಿ ಇಟ್ಟು ಕೊಡಿ.
ತಂಬಿಟ್ಟಿನ ಆರತಿ
ಪೂಜೆ ಮಂತ್ರಗಳನ್ನು ಪುಸ್ತಕದಿಂದ ಓದಿಕೊಳ್ಳಬಹುದು. ಈಗ ಪೂಜಾ
ವಿಧಾನದ ಕ್ಯಾಸೆಟ್ /ಸಿಡಿ ಸಿಗುವುದರಿಂದ ಪೂಜೆ ಮಾಡುವುದು ಇನ್ನು ಸರಳಗೊಂಡಿದೆ. ಪೂಜಾ ವಿಧಾನದ
ಕ್ಯಾಸೆಟ್ ಅಂದ ಕೂಡಲೇ ಮನ್ನಸ್ಸಿಗೆ ಬರುವ ಹೆಸರು ವೇದ ಬ್ರಹ್ಮ ಶ್ರೀ ಗಣಪತಿ ಶಾಸ್ತ್ರಿಗಳು.
ಇವರು ದೊಡ್ಡ ಧ್ವನಿಯಲ್ಲಿ ಸ್ಪಷ್ಟವಾಗಿ ಮಂತ್ರಗಳನ್ನು ಹೇಳಿದ್ದಾರೆ. ಇವರ ಕ್ಯಾಸೆಟ್ ಗಳು ಬಹಳ
ಜನಪ್ರಿಯವಾಗಿರುವುದು ಆಶ್ಚರ್ಯವೇನಿಲ್ಲ.
ಪ್ರತಿ ವರ್ಷ ಕೊನೆಯ ವಾರದ ಪೂಜೆಗೆ ಮರದ ಜೊತೆ ಬಾಗಿನ
ಇಟ್ಟುಕೊಳ್ಳಬೇಕು. ಮರದ ಒಳಗೆ 4 ತರಹ ಬೇಳೆಗಳು,ಅಕ್ಕಿ,ಉಪ್ಪು, ರವೆ, ಬೆಲ್ಲ, ತೆಂಗಿನಕಾಯಿ, ಜೊತೆಗೆ
ಪೂಜೆ ಮಾಡಿದ ಕೊಬ್ಬರಿ ಗಿಟುಕು, 16 ಎಳೆ ಹತ್ತಿ ಹಾರವನ್ನು ಇಡಬೇಕು. ಇದನ್ನು ನಿಮ್ಮ ತಾಯಿಗೆ
ಬಾಗಿನ ಕೊಡಬೇಕು. ಹೀಗೆ 5 ವರ್ಷ ವ್ರತ ಮಾಡಿ ಉದ್ಯಪನೆ ಮಾಡಬೇಕು. ಐದನೇ ವರ್ಷ ಪೂಜೆಗೆ
ಉಪಯೋಗಿಸಿದ ಕಳಶದ ಪಾತ್ರೆಯನ್ನು ಮರದ ಬಾಗಿನದ ಜೊತೆ ತಾಯಿಗೆ ಕೊಡಬೇಕು.
ನಾವು ಮಾಡುವ ಪೂಜೆ, ವ್ರತಗಳಲ್ಲಿ
ಬಾಗಿನ ಕೊಡುವ ಪದ್ಧತಿ ಇದೆ. ದೇವಿಗೆ ಮಾಡುವ ಪೂಜೆಗಳಲ್ಲಿ ಇದು ಸಾಮಾನ್ಯ. ಬಾಗಿನವನ್ನು ಮರದ
ಜೊತೆಯಲ್ಲಿ ಇಟ್ಟು ಕೊಡುತ್ತಾರೆ.
ಬಾಗಿನದ ಸಾಮಾನುಗಳ ಪಟ್ಟಿ ಇಲ್ಲಿದೆ:
1 ಜೊತೆ
ಮೊರ - ಮೊರಕ್ಕೆ ಅರಿಶಿನ , ಕುಂಕುಮ ಹಚ್ಚಿ
ಧಾನ್ಯಗಳು - ಅಕ್ಕಿ, ಕಡಲೆಬೇಳೆ, ತೊಗರಿಬೇಳೆ, ಹೆಸರುಬೇಳೆ, ಉದ್ದಿನಬೇಳೆ, ರವೆ
ಬೆಲ್ಲದ ಅಚ್ಚು,ಉಪ್ಪು,ತೆಂಗಿನಕಾಯಿ,ಹಣ್ಣು
ಬಳೆ, ಬಿಚ್ಚೋಲೆ, ಕನ್ನಡಿ, ಕಪ್ಪು, ಬಾಚಣಿಗೆ
ವೀಳ್ಯದ ಎಲೆ , ಅಡಿಕೆ, ದಕ್ಷಿಣೆ, ಅರಿಶಿನ
, ಕುಂಕುಮ, ರವಿಕೆ
ಬಟ್ಟೆ
ದೇವಿಗೆ ಕೊಡುವ ಬಾಗಿನದಲ್ಲಿ ಮೇಲೆ ಹೇಳಿರುವ ಸಾಮಾನುಗಳ
ಜೊತೆಗೆ ಪೂಜಾ ಸಾಮಗ್ರಿಗಳನ್ನು - ಗೆಜ್ಜೆವಸ್ತ್ರ, ಶ್ರೀಗಂಧ, ಊದಿನ
ಕಡ್ಡಿ, ಇತ್ಯಾದಿ ಇಡುತ್ತಾರೆ. ಸ್ವರ್ಣ ಗೌರಿ ವ್ರತ, ಮಂಗಳ
ಗೌರಿ ವ್ರತ, ಮಾರ್ಗಶಿರಮಹಾಲಕ್ಷ್ಮಿ ವ್ರತ, ಸಿರಿಯಾಳ
ಷಷ್ಠಿ ಮುಂತಾದ ಪೂಜೆಗಳಲ್ಲಿ ಬಾಗಿನ ಕೊಡುತ್ತಾರೆ. ಮೊರದ ಜೊತೆ ಬಾಗಿನವನ್ನು ಸುಮಂಗಲಿಯರಿಗೆ
ಕೊಟ್ಟು ಆಶೀರ್ವಾದ ಪಡೆದುಕೊಳ್ಳುವ ಪದ್ಧತಿ ಇದೆ.
ನಮ್ಮ ಮನೆ ಮೊರದ ಜೊತೆ ಬಾಗಿನ
ಸಾಮಾನ್ಯವಾಗಿ ಎಲ್ಲ ಸಾಮಾನುಗಳನ್ನೂ ದೊಡ್ಡ ಮೊರದ ಒಳಗೆ ಇಟ್ಟು ಕೊಡುತ್ತಾರೆ. ಚಿಕ್ಕ ಮೊರಗಳು ಬೆಂಗಳೂರಿನಲ್ಲಿ ಸಿಗುತ್ತದೆ. ಈ ಚಿಕ್ಕಮೊರದಲ್ಲಿ ಎಲ್ಲ ಸಾಮಾನು ಹಿಡಿಸುವುದಿಲ್ಲ . ಹೀಗಾಗಿ ಒಂದು ದೊಡ್ಡ ಡಬ್ಬಿ ಯಲ್ಲಿ ಎಲ್ಲ ಸಾಮಾನು ಇಟ್ಟು ಬಾಗಿನ ಕೊಡಬಹುದು.