ಕುರುಕ್ಷೇತ್ರ ಸಮರದ ನಂತರ ಪಾಂಡವರು
ಸ್ವರ್ಗಾರೋಹಣ ಮಾಡುವ ಸಂದರ್ಭದಲ್ಲಿ ದ್ರೌಪದಿ ಮಾರ್ಛಿತಳಾಗಿ ಬಿದ್ದಳಂತೆ. ದ್ರೌಪದಿ
ಮೂರ್ಛಿತಳಾಗಿ ಬಿದ್ದದ್ದು ಪಾಂಡವರಿಗೆ ತಿಳಿಯದೆ ಮುಂದೆ ನಡೆಯುತ್ತಾರೆ. ಆಕೆಗೆ ಎಚ್ಚರ ಬಂದು
ನೋಡಿದಾಗ ತಿಮಿರಾಸುರ ಎಂಬ ರಾಕ್ಷಸ ದೂರದಲ್ಲಿ ನಿಂತಿದ್ದ. ಆಗ ದ್ರೌಪದಿ ಆದಿಶಕ್ತಿಯ ರೂಪವನ್ನು
ತೋರುತ್ತಾ ತಿಮರಾಸುರನನ್ನು ಸದೆ ಬಡಿಯಲು, ತನ್ನ
ತಲೆಯಿಂದ ‘ಯಜಮಾನ’ರನ್ನು, ಹಣೆಯಿಂದ ‘ಗಣಾಚಾರಿ’ಗಳನ್ನು, ಕಿವಿಗಳಿಂದ ‘ಗೌಡ’ರನ್ನು, ಬಾಯಿಯಿಂದ ‘ಗಂಟೆಪೂಜಾರಿ’ಗಳನ್ನು ಮತ್ತು ಹೆಗಲಿನಿಂದ ‘ವೀರಕುಮಾರ’ರನ್ನು ಸೃಷ್ಥಿ ಮಾಡುತ್ತಾಳೆ. ಹೀಗೆ
ಹುಟ್ಟಿದ ಇವರೆಲ್ಲರೂ ಸೇರಿ ಆ ರಕ್ಕಸನ ಎದಿರು ಹೋರಾಡಿ ಗೆಲ್ಲುತ್ತಾರೆ. ಹೀಗೆ ಮಕ್ಕಳನ್ನು
ಹುಟ್ಟಿಸಿದ ದ್ರೌಪದಿ ಆದಿಶಕ್ತಿಯಾಗಿ, ಮತ್ತೆ
ಭೂಮಿಗೆ ಮರಳಿ ಬಾರದಂತೆ ಕೈಲಾಸಕ್ಕೆ ಹೋಗುವುದು ಮಕ್ಕಳಿಗೆ ದುಗುಡ ಉಂಟು
ಮಾಡುತ್ತದೆ. ಅವಳು ಹೋಗದಂತೆ ಬೇಡಿಕೊಳ್ಳಲು ಕೃಷ್ಣನು ಅವರಿಗೆ, ತಾಯಿಯನ್ನು ಹೋಗದಂತೆ ತಡೆಯಲು ತಮ್ಮ
ಕೈಯಲ್ಲಿರುವ ಕತ್ತಿಯಿಂದ ತಮ್ಮ ಎದೆಗೆ ತಿವಿದುಕೊಳ್ಳುತ್ತಾ (ಇದನ್ನು ಕರಗ ಹಬ್ಬದಲ್ಲಿ ‘ಅಲಗುಸೇವೆ’ ಎನ್ನುತ್ತಾರೆ) “ನಮಗೆ ನೀನಲ್ಲದೆ ಇನ್ಯಾರು ದಿಕ್ಕು, ಹೋಗದಿರು” ಎಂದು ಅಲವತ್ತು ಕೊಳ್ಳಲು ಹೇಳುವನು.
ಇದನ್ನು ನೋಡಿ ದ್ರೌಪದಿಗೆ ಮರುಕವಾಗಿ ಪ್ರತಿ ವರುಷವೂ ಮೂರು ದಿನ ಭೂಮಿಗೆ ಬಂದು ಮಕ್ಕಳೊಂದಿಗೆ
ಇರುವ ಮಾತು ನೀಡುತ್ತಾಳೆ. ದ್ರೌಪದಿಯ
ಅವತಾರದ ಈ ದಿನವನ್ನು ದ್ರೌಪದಿ ಜಯಂತಿ
ಎಂದು ಅಚರಿಸಲಾಗುತ್ತದೆ. ಇದನ್ನು
ಆಚರಿಸುವ ವಹ್ನಿ ಕುಲದವರು ಮೂಲತಃ ತಮಿಳುನಾಡಿನವರು. ಹದಿನೈದನೆಯ ಶತಮಾನದಲ್ಲಿಯೇ
ಮೈಸೂರು ಸಂಸ್ಥಾನಕ್ಕೆ ಬಂದು ನೆಲೆಸಿದರೆಂದು ತಿಳಿದು ಬರುತ್ತದೆ. ಹೈದರಾಲಿಯು ದಕ್ಷಿಣ ಭಾರತದ
ಮೇಲೆ ದಂಡಯಾತ್ರೆ ಮಾಡಿದಾಗ ವೀರಾವೇಶದಿಂದ ಹೈದರಾಲಿಯ ವಿರುದ್ಧ ಹೋರಾಡುತ್ತಾರೆ. ಈ ವಹ್ನಿಕುಲ
ಕ್ಷತ್ರಿಯರಲ್ಲಿನ ಧೈರ್ಯ ಹಾಗೂ ಇವರ ಕುಲ ಪ್ರವೃತ್ತಿ ತೋಟಗಾರಿಕೆಯನ್ನು ಮೆಚ್ಚಿ ತಾನು ಮೈಸೂರಿಗೆ ಹಿಂತಿರುಗುವಾಗ ಈ
ಮನೆತನದ ಕೆಲವರನ್ನು ತನ್ನೊಡನೆ ಕರೆತಂದು ಶ್ರೀರಂಗಪಟ್ಟಣದ ಗಂಜಾಂನಲ್ಲೂ, ಬೆಂಗಳೂರಿನಲ್ಲೂ ಬದುಕಲು ಆಶ್ರಯ
ನೀಡಿದನೆಂದು ಇತಿಹಾಸ ಹೇಳುತ್ತದೆ. ಆನಂತರ ಈ ಜನಾಂಗ ಬೆಂಗಳೂರು, ತುಮಕೂರು, ಕೋಲಾರ ಜಿಲ್ಲೆಗಳಲ್ಲಿ
ವಿಸ್ತರಿಸಿದಂತೆ ಕಾಣುತ್ತದೆ. ಇವರು ಪ್ರಾರಂಭದಿಂದಲೂ ಪಾಂಡವರ ಆರಾಧಕರು. ಇವರ ಮೂಲ ಪುರುಷ ಬೆಂಕಿಯಲ್ಲಿ ಜನಿಸಿದನೆಂಬ ಪ್ರತೀತಿ ಇದೆ.
ಆದ್ದರಿಂದಲೇ ಅಗ್ನಿ ಸಂಭವೆಯೂ ಪಾಂಡವರ ಪತ್ನಿಯೂ ಆದ ದ್ರೌಪದಿಯ ಹೆಸರಿನಲ್ಲೇ ಕರಗದ ಆಚರಣೆಯನ್ನು
ಇವರು ನಡೆಸುತ್ತಾ ಬಂದಿದ್ದಾರೆ.