ಶ್ರೀಪಂಚಮಿ/ವಸಂತಪಂಚಮಿ

ವಸಂತ ಪಂಚಮಿಯ ಆಚರಣೆಯ ಹಿನ್ನೆಲೆಯನ್ನು ಹುಡುಕಿದರೆ ದ್ವಾಪರ ಯುಗದಲ್ಲಿಯೂ ಸಹ ಈ ಆಚರಣೆ ನಡೆದಿರುವುದು ತಿಳಿಯುತ್ತದೆ. ಭಾಗವತ ಹಾಗೂ ಇನ್ನಿತರ ವೈಷ್ಣವ ಗ್ರಂಥಗಳ ಪ್ರಕಾರ ಗೋವರ್ಧನ ಗಿರಿಯಲ್ಲಿ ಮಾಘ ಶುದ್ಧ ಪಂಚಮಿಯ ದಿನದಂದು ಅದ್ಧೂರಿಯಾಗಿ ವಸಂತ ಪಂಚಮಿ ನಡೆದಿರುವ ಉಲ್ಲೇಖಗಳಿವೆ. ಈ ದಿನದಂದು ಶ್ರೀಕೃಷ್ಣನ ನೃತ್ಯವನ್ನು ನೋಡಲು ಚಂದ್ರನೂ  ಅಸ್ತಮನಾಗದೇ ಬ್ರಹ್ಮನ ಒಂದು ರಾತ್ರಿಯಷ್ಟು ಕಾಲದವರೆಗೆ ಹಾಗೆಯೇ ಇದ್ದ, ಆದ್ದರಿಂದ ಗೋವರ್ಧನ ಗಿರಿಯಲ್ಲಿ ಕೃಷ್ಣ ನೃತ್ಯ ಮಾಡಿದ ಪ್ರದೇಶ ಚಂದ್ರ ಸರೋವರ ಎಂದು ಕರೆಯಲಾಗುತ್ತದೆ.   

ವಸಂತ ಪಂಚಮಿ ಸರಸ್ವತಿ ದೇವಿ ಅವತರಿಸಿದ ದಿನವೂ ಆಗಿದ್ದು, ಪೌರಾಣಿಕ ಉಲ್ಲೇಖಗಳ ಪ್ರಕಾರ ಬ್ರಹ್ಮನ ಮನಸ್ಸಿನಿಂದ ಸರಸ್ವತಿ ಆವಿರ್ಭವಿಸಿದಳು ಎಂದು ಹೇಳಲಾಗುತ್ತದೆ. ಸರಸ್ವತಿ ಆವಿರ್ಭವಿಸಿದ ನಂತರ ಬ್ರಹ್ಮ ತಪಸ್ಸನ್ನಾಚರಿಸಲು ಪ್ರಾರಂಭಿಸಿ ಆಧ್ಯಾತ್ಮಿಕ ಜ್ಞಾನ ಪಡೆದ ಎಂದೂ ಹೇಳಲಾಗುತ್ತದೆ. ಒಟ್ಟಾರೆ ಈ ದಿನದಂದು ಸರಸ್ವತಿ ಪೂಜೆಯನ್ನಾಚರಿಸುವ ಪದ್ಧತಿ ಸಾವಿರಾರು ವರ್ಷಗಳಿಂದ ನಡೆದುಬಂದಿದೆ.