ಶ್ರೀಪಾದರಾಯರು“ಹರಿದಾಸಪಿತಾಮಹ” ರೆಂಬ ಗೌರವಕ್ಕೆ ಪಾತ್ರರಾದವರು.. ಕರ್ಣಾಟಕದಲ್ಲಿ 13ನೇ ಶತಮಾನದಲ್ಲಿ ಶ್ರೀಮಧ್ವಾಚಾರ್ಯರು ಬಿತ್ತಿದ ಭಕ್ತಿ ಪರಂಪರೆನರಹರಿ ತೀರ್ಥರ ಕಾಲದಲ್ಲಿ ಮೊಳಕೆಯೊಡೆಯಿತಾದರೂ ಅದು ಚಿಗುರಿ ಹೆಮ್ಮರವಾಗತೊಡಗಿದ್ದು ಶ್ರೀಪಾದರಾಜರ ಕಾಲದಿಂದಲೇ. ಇಂದು ನಾವು ಬಹುವಾಗಿ ಕೊಂಡಾಡುವ, ಸಾಹಿತ್ಯಕ್ಷೇತ್ರಕ್ಕೆ ಕನ್ನಡ ನೀಡುವ ಕೊಡುಗೆಗಳಲ್ಲೊಂದು ಎಂದು ಹೆಮ್ಮೆಯಿಂದ ಬೀಗುವ ಹರಿದಾಸ ಸಾಹಿತ್ಯ ಲಭ್ಯವಾದುದು ಶ್ರೀಪಾದರಾಜರು ಪಟ್ಟ ಶ್ರಮದಿಂದ ಇಟ್ಟ ದಿಟ್ಟ ಹೆಜ್ಜೆಯಿಂದ. ಶ್ರೀಪಾದರಾಜರ ಶಿಷ್ಯ ಶ್ರೇಷ್ಠರಾದ ವ್ಯಾಸರಾಯರು ತಮ್ಮ ಗುರುಗಳನ್ನು ಕುರಿತು ರಚಿಸಿರುವ ಅನೇಕ ರಚನೆಗಳು, ವಾದಿರಾಜರ ಕೀರ್ತನೆಗಳು ಹಾಗೂ ಸಂಸ್ಕøತದ ಶ್ರೀಪಾದರಾಜ ಗುರುರಾಜ ಸ್ತೋತ್ರ, ಮತ್ತು ವಿಜಯದಾಸರು ರಚಿಸಿರುವ ಶ್ರೀಪಾದರಾಜರ ಸುಳಾದಿ ಮುಂತಾದವುಗಳು ಶ್ರೀ ಪಾದರಾಜರ ಬದುಕಿನ ಮೇಲೆ ನಿಶ್ಚಿತ ಬೆಳಕನ್ನು ಬೀರುತ್ತವೆ. ಅಂತೆಯೇ ಶ್ರೀನಿಧಿತೀರ್ಥರ “ಶ್ರೀಪಾದರಾಜಾಷ್ಟಕ” ಮತ್ತು ಭೀಮಾಚಾರ್ಯರು ರಚಿಸಿರುವ “ಶ್ರೀ ಪೂರ್ಣಬೋಧ ಗುರುವಂಶ ಕಲ್ಪತರು” ಮುಂತಾದ ಸಂಸ್ಕøತ ಕೃತಿಗಳೂ ಸಹ ಅವರ ಯತ್ಯಾಶ್ರಮದ ನಂತರದ ವಿಶೇಷ ಸಂಗತಿಗಳನ್ನು ವರ್ಣಮಯವಾಗಿ ಚಿತ್ರಿಸಿವೆ. ಶ್ರೀಪಾದರಾಜರು ಸನ್ಯಾಸ ಸ್ವೀಕರಿಸುವ ಮುಂಚಿನ ಪ್ರಸಂಗವೊಂದನ್ನು ಬೇಲೂರು ಕೇಶವದಾಸರು ಸುದೀರ್ಘವಾಗಿ, ಆಕರ್ಷಕವಾಗಿ ತಮ್ಮ “ಕರ್ನಾಟಕ ಭಕ್ತಚರಿತೆ”ಯಲ್ಲಿ ಚಿತ್ರಿಸಿದ್ದಾರೆ.
ದಾಸಸಾಹಿತ್ಯ ಸಾಮ್ರಾಜ್ಯ ಸ್ಥಾಪಕರಾದ ಶ್ರೀಪಾದರಾಜರ ಪೂರ್ವಾಶ್ರಮದ ಹೆಸರು “ಲಕ್ಷ್ಮೀನಾರಾಯಣ” ಎಂಬುದಾಗಿತ್ತು. ತಂದೆ ಶೇಷಗಿರಿಯಪ್ಪ ಹಾಗೂ ತಾಯಿ ಗಿರಿಯಮ್ಮ. ಇವರ ಪುತ್ರನಾಗಿ ಚನ್ನಪಟ್ಟಣ ತಾಲೂಕಿನ ಅಬ್ಬೂರಿನಲ್ಲಿ ಕ್ರಿ.ಶ.1404ರಲ್ಲಿ ಜನಿಸಿದರು. ಸುವರ್ಣತೀರ್ಥಸ್ವಾಮಿಗಳು ಇವರ
ಪ್ರತಿಭೆಯನ್ನು ಗುರುತಿಸಿದರು.ಮುಂದೆ ಸ್ವರ್ಣವರ್ಣತೀರ್ಥರ ಆಶ್ರಯದಲ್ಲಿ ಲಕ್ಷ್ಮೀನಾರಾಯಣರ ಬ್ರಹ್ಮೋಪನಯನ, ವಿದ್ಯಾಭ್ಯಾಸ ಇವುಗಳ ನಂತರ ಸಂನ್ಯಾಸ ದೀಕ್ಷೆಯನ್ನು ಕೊಟ್ಟು ಪೀಠಾಧಿಕಾರಕ್ಕೆ ತಕ್ಕ ವೇದಾಂತ ವ್ಯಾಸಂಗಕ್ಕಾಗಿಲಕ್ಷ್ಮೀನಾರಾಯಣ ತೀರ್ಥರನ್ನು ಸುಪ್ರಸಿದ್ಧರಾದ ರಾಘವೇಂದ್ರ ಮಠದ ಪೂರ್ವಪೀಳಿಗೆಯ ವಿಬುಧೇಂದ್ರ ತೀರ್ಥರಲ್ಲಿಗೆ ಕಳುಹಿಸಿಕೊಟ್ಟರು.
ಇಬ್ಬರೂ ಸಂಚಾರ ಮಾಡುತ್ತ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಕೊಪ್ಪರ ಶ್ರೀಲಕ್ಷ್ಮೀನರಸಿಂಹಸ್ವಾಮಿ ಕ್ಷೇತ್ರಕ್ಕೆ ಬರುತ್ತಾರೆ. ಅದೇ ಸಮಯದಲ್ಲಿ ಶ್ರೀ ಉತ್ತರಾದಿ ಮಠದ ರಘುನಾಥತೀರ್ಥರು ಆಗಮಿಸಿದ್ದರು. ಶ್ರೀ ವಿಭುಧೇಂದ್ರರು ವಿದ್ಯಾಪಾರಂಗತರೆನಿಸಿದ್ದ ಶ್ರೀರಘುನಾಥರಿಗೆ ತಮ್ಮ ಶಿಷ್ಯನ ಪರಿಚಯ ಮಾಡಿಕೊಟ್ಟು ಅವನ ವಿದ್ಯಾಪರಿಶ್ರಮವನ್ನು ಅವಲೋಕಿಸಿ ಆಶಿರ್ವದಿಸಬೇಕೆಂದು ಕೋರಿದಾಗ, ಶ್ರೀ ಟೀಕಾಚಾರ್ಯರ “ನ್ಯಾಯಸುಧೆ”ಎಂಬ ಗ್ರಂಥದ ವಾಕ್ಯವೊಂದನ್ನು ವಿಮರ್ಶಿಸಲು ಹೇಳಲು, ಆ ಒಂದು ವಾಕ್ಯವನ್ನು ಆಧರಿಸಿ ಇಡೀ ಗ್ರಂಥವನ್ನೇ ವಿಶ್ಲೇಸಿದ ಇವರ ಪಾಂಡಿತ್ಯಕ್ಕೆ ಬೆರಗಾಗಿ ಶ್ರೀ ರಘುನಾಥರು ಮೆಚ್ಚುಗೆಯಿಂದ "ನಾವೂ ಬರೇ ಪಾದಂಗಳು, ತಾವಾದರೋ ಶ್ರೀ ಪಾದರಾಜರು. ಎಂದು ಮನಃಪೂರ್ವಕವಾಗಿ ನುಡಿಯುತ್ತಾರೆ. ಅಂದಿನಿಂದ ಶ್ರೀಲಕ್ಷ್ಮೀನಾರಾಯಣತೀರ್ಥರು “ಶ್ರೀಪಾದರಾಜ”ರಾದರು.
ಕೆಲದಿನಗಳಲ್ಲೆ ಸ್ವರ್ಣವರ್ಣತೀರ್ಥರು ವೃಂದಾವನಸ್ಥರಾಗುತ್ತಾರೆ. ಪದ್ಮನಾಭತೀರ್ಥರ ಮಠದ ಸರ್ವಾಧಿಪತ್ಯವೂ ಶ್ರೀಪಾದರಾಜರದಾಯಿತು. ಶ್ರೀರಂಗದಲ್ಲಿ ಹಲವು ವರ್ಷಗಳಿದ್ದು, ಸಂಚಾರ ಹೊರಟು ಮುಳುಬಾಗಿಲಿಗೆ ಬಂದು ಅಲ್ಲಿನ ಮಹತ್ವವರಿತು ಅಲ್ಲಿಯೇ ಮಠವನ್ನು ಸ್ಥಿರವಾಗಿ ಸ್ಥಾಪಿಸಿದರು. ಮುಳುಬಾಗಿಲು ವಿಜಯನಗರದ ಅರಸರ ಅಧಿಪತ್ಯಕ್ಕೆ ಒಳಪಟ್ಟು ತುಂಬಾ ಪ್ರಸಿದ್ಧವಾಗಿತ್ತು. ಕನ್ನಡದಲ್ಲಿ ಸಾಮಾನ್ಯ ಜನರಿಗೆ ತಿಳಿಯುವಂತೆ ಭಾಗವತದ ಕಥೆಗಳು, ಮಹಾಭಾರತ, ರಾಮಾಯಣಗಳು ಇವೇ ಮೊದಲಾದವನ್ನು ಕನ್ನಡೀಕರಿಸಿ ಹಾಡುಗಳನ್ನಾಗಿ ಪರಿವರ್ತಿಸಿ ಪೂಜಾ ಸಮಯದಲ್ಲಿ ಭಾಗವತರ ಮುಖೇನ ಹಾಡಿಸುವ ಪದ್ಧತಿಯನ್ನು ಜಾರಿಗೆ ತಂದರು.
“ರಂಗ ವಿಠಲ” ಅಂಕಿತದೊಂದಿಗೆ ಅನೇಕ ಕೀರ್ತನೆಗಳನ್ನು ರಚಿಸಿದರು. ಸ್ವತಃ ಭ್ರಮರಗೀತೆ, ವೇಣುಗೀತೆ, ಗೋಪಿಗೀತೆಗಳಂಥ ಭಕ್ತಿಗೀತೆಗಳನ್ನು ಹಾಗೂ ಶ್ರೀ ವಾಯುದೇವರ ಮೂರು ಅವತಾರಗಳನ್ನು ವರ್ಣಿಸುವ “ಶ್ರೀಮಧ್ವನಾಮ” ವನ್ನು ರಚಿಸಿದ್ದಾರೆ. ಕ್ರಿ.ಶ 1502ರ ಫಾಲ್ಗುಣ ಬಹುಳ ಪಂಚಮಿಯಂದು ಶ್ರೀಪಾದರಾಯರು ವೃಂದಾವಸ್ಥರಾದರು.