ಮಧ್ವನವಮಿ

ಮಧ್ವನವಮಿ. ದ್ವೈತ ಮತ ಸ್ಥಾಪಕ ಮಧ್ವಾಚಾರ್ಯರ ಆರಾಧನೆಯ ಪುಣ್ಯ ದಿನ. ಇಂದಿಗೂ ಬದರಿಯಲ್ಲಿ ಮಧ್ವಾಚಾರ್ಯರು ವೇದವ್ಯಾಸರ ಸೇವೆ ಮಾಡಿಕೊಂಡಿದ್ದಾರೆ ಎಂದು ಮಾಧ್ವ ಜನಾಂಗದವರ ನಂಬಿಕೆ. 'ಪ್ರಥಮೋ ಹನುಮನ್ನಾಮ ದ್ವಿತೀಯೋ ಭೀಮ ಏವಚ ಪೂರ್ಣಪ್ರಜ್ಞ ತೃತೀಯ ಸ್ತು ಭಗವತ್ಕಾರ್ಯ ಸಾಧಕ' ಮೊದಲು ತ್ರೇತಾಯುಗದಲ್ಲಿ ಹನುಮಂತನಾಗಿರಾಮಬಂಟನೆನಿಸಿ ನಂತರ ದ್ವಾಪರ ಯುಗದಲ್ಲಿ ಭೀಮಸೇನರಾಗಿ ಈ ಕಲಿಯುಗದಿ ಪೂರ್ಣಪ್ರಜ್ಞರೆನಿಸಿ ವೇದವ್ಯಾಸರ ಸೇವೆ ಮಾಡಿ ಭಗವತ್ಕಾರ್ಯ ಸಾಧನೆಗಳನ್ನು ಮಾಡಿದವರು  ಶ್ರೀಮಧ್ವಾಚಾರ್ಯರು. ಇದೇ ವಿಚಾರವನ್ನು ಪುರಂದರದಾಸರು ಈ ಕನ್ನಡದಲ್ಲಿ ಹೀಗೆ ಹೇಳಿದ್ದಾರೆ, 'ಹನುಮ ಭೀಮ ಮಧ್ವಮುನಿಯ ನೆನೆದು ಬದುಕಿರೋಹನುಮ ನಮ್ಮ ತಾಯಿ ತಂದೆ ಭೀಮ ನಮ್ಮ ಬಂಧು ಬಳಗ ಆನಂದ ತೀರ್ಥರೇ ನಮ್ಮ ಗತಿ ಗೋತ್ರವಯ್ಯಎಂದು. ಪೂರ್ಣಪ್ರಜ್ಞ ಮಧ್ವಮುನಿ ಹಾಗೂ ಆನಂದ ತೀರ್ಥರು ಎಲ್ಲಾ ಒಂದೇ. ಅವರೇ ಮಧ್ವಾಚಾರ್ಯರು. ಇಂದಿನ  ಉಡುಪಿ ಜಿಲ್ಲೆಯ ಪಾಜಕ ಎಂಬ ಹಳ್ಳಿಯಲ್ಲಿ 13ನೇ ಶತಮಾನದಲ್ಲಿ ಮಧ್ವಾಚಾರ್ಯರು ಜನಿಸಿದರು. ತಂದೆ ನಾರಾಯಣಾಚಾರ್ಯರು ಇವರ ಮನೆ ಈ ಊರಿನ ನಡುವೆ ಇದ್ದುದರಿಂದ ನಡುಂತಿಲ್ಲಾಯರು ಎಂದೇ ಪರಿಚಿತರಾಗಿದ್ದರು.

ಆ ಹಳ್ಳಿಯ ಜನ ಅವರನ್ನು ಮಧ್ಯಗೇಹ ಭಟ್ಟರೆಂದೂ ಕರೆಯುತ್ತಿದ್ದರು. ತಾಯಿ ವೇದಾವತಿ ಬಾಯಿ ಮಧ್ವಾಚಾರ್ಯರ ಬಾಲ್ಯದ ಹೆಸರು ವಾಸುದೇವ. ಮಗು ಬೆಳೆಯುತ್ತಿದ್ದಂತೆ ತಂದೆಯೇ ಪಾಠ ಹೇಳತೊಡಗಿದರು. ಅವನ ಅಸಾಧಾರಣ ಬುದ್ಧಿಮತ್ತೆ ಕಂಡು ಬೆಕ್ಕಸ ಬೆರಗಾದರು. ತೋಟಿಂ ತಿಲ್ಲಾಯರ ಗುರುಕುಲದಲ್ಲಿ ವೇದವಿದ್ಯೆ ಕಲಿಯಲು ಸೇರಿಸಿದರು. ಗುರುಕುಲಾಭ್ಯಾಸ ಪೂರ್ಣಗೊಳಿಸಿ ಬಂದ ಏಳು ವರ್ಷದ ಬಾಲಕ ತಂದೆ ತಾಯಿಯನ್ನು ಒಪ್ಪಿಸಿ ಸನ್ಯಾಸಿಯಾದ. ಉಡುಪಿಯಲ್ಲಿ ಅನಂತೇಶ್ವರನ ಸನ್ನಿಧಿಯಲ್ಲಿ ಅಚ್ಯುತ ಪ್ರೇಕ್ಷಾಚಾರ್ಯರೆಂಬುವರು ವಾಸುದೇವನಿಗೆ ಸನ್ಯಾಸ ದೀಕ್ಷೆ ನೀಡಿದರು. ವೇದಾಂತ ಪೀಠದಲ್ಲಿ ಕೂಡಿಸಿ ಅಭಿಷೇಕ ಮಾಡಿ ಆನಂದ ತೀರ್ಥರೆಂಬ ಆಶ್ರಮ ನಾಮ ಹೆಸರಿಸಿದರು. ನಂತರ ಮಧ್ವಾಚಾರ್ಯರೆಂದು ಪ್ರಸಿದ್ಧರಾದರು. ದ್ವೈತ ಮತವನ್ನು ಪ್ರತಿಷ್ಠಾಪಿಸಿದಾರ್ಶನಿಕರೆನಿಸಿದರು. ದ್ವೈತ ಅಂದರೆ ಎರಡು ಎಂಬುದನ್ನು ತೋರಿಸಿದರು. ಪರಮಾತ್ಮ- ಜೀವಾತ್ಮ ಬೇರೆ ಬೇರೆ ಎಂದು ಸಾರಿದರು.

15ನೇ ಶತಮಾನದಲ್ಲಿ ವ್ಯಾಸರಾಜರೆಂಬ ಯತಿಗಳು ಮಧ್ವಮತ ತತ್ತ್ವಗಳನ್ನೆಲ್ಲಾ ಕ್ರೋಢೀಕರಿಸಿ ನಾಲ್ಕೇ ವಾಕ್ಯಗಳಲ್ಲಿ ಹೇಳಿದರು. ಶ್ರೀಮನ್ ಮಧ್ವಯತೇ ಹರಿಃ ಪರತರಃ ಸತ್ಯಂ ಜಗತ್ ತತ್ತ್ವತೋಭಿನ್ನಾ ಜೀವಗಣಾ ಹರೇರನುಚರ ನೀಚೋಚ್ಛ ಭಾವಂಗತಾಃ! ಮುಕ್ತಿ ರ್ನೈಜಸುಖಾನುಭೂತಿ ರಮಲಾ ಭಕ್ತಿಶ್ಚ ತತ್ಸಾಧನಂ ಹ್ಯಕ್ಷಾದಿ ತ್ರಿತಯಂ ಪ್ರಮಾಣ ಮಖಿಲಾಮ್ನಾಯೈಕ ವೇದ್ಯೋಹರಿಃ. ಈ ಶ್ಲೋಕ ಮಧ್ವ ಸಿದ್ಧಾಂತದ ಸಂಸ್ಕೃತದ ನವರತ್ನ ಮಾಲಿಕೆ ಎಂದು ಪ್ರಸಿದ್ಧವಾಗಿದೆ.

ಮಧ್ವಾಚಾರ್ಯರು 37 ಗ್ರಂಥಗಳನ್ನು ರಚಿಸಿರುವರು. ಅವರು ಬಾಲ್ಯದಲ್ಲಿ ಚೆಂಡಾಡುತ್ತಾ ರಚಿಸಿದ ಕಂದುಕ ಸ್ತುತಿಯನ್ನೂ ಸೇರಿಸಿದರೆ ಒಟ್ಟು 38 ಆಗುತ್ತದೆ. ವೇದಉಪನಿಷತ್ಸೂತ್ರ ಇತಿಹಾಸಪುರಾಣತಂತ್ರಪ್ರಕರಣಆಚಾರ ಮುಂತಾದ ಶಾಸ್ತ್ರದ ಸರ್ವವಿ ಬಾಗಗಳನ್ನು ಉಪಯೋಗಿಸಿಕೊಂಡ ಗ್ರಂಥಗಳನ್ನು ರಚಿಸಿದ್ದಾರೆ. ಈ 37 ಗ್ರಂಥಗಳು ಸರ್ವಮೂಲ ಗ್ರಂಥಗಳೆಂದು ಪ್ರಸಿದ್ಧಿಯಾಗಿದೆ.

ಮಧ್ವಾಚಾರ್ಯರು 79 ವರ್ಷಗಳ ಕಾಲ ಗೋಚರರಾಗಿದ್ದರು. ಅಂದು ಪಿಂಗಳ ಸಂವತ್ಸರ ಮಾಘ ಶುದ್ಧ ನವಮಿ ಉಡುಪಿಯ ಅನಂತೇಶ್ವರ ಗುಡಿಯಲ್ಲಿ ಬೆಳಗ್ಗೆ ಶಿಷ್ಯರಿಗೆ ಪಾಠ ಹೇಳುತ್ತಿದ್ದರು. ಪಾಠ ಮುಗಿಯುತ್ತಿದ್ದಂತೆ ಮುಸಲಧಾರೆಯಂತೆ ಪುಷ್ಪ ವೃಷ್ಟಿಯಾಯಿತು. ಅದು ನಿಂತ ಮೇಲೆ. ಶಿಷ್ಯರು ಆ ಹೂಗಳನ್ನು ಸರಿಸಿ ನೋಡಿದಾಗ ಮಧ್ವ ಗುರುಗಳು ಅಲ್ಲಿ ಕಾಣಿಸಲಿಲ್ಲ, ಅದೃಶ್ಯರಾಗಿದ್ದರು.