ದೇವಸ್ಥಾನ:
ಸವದತ್ತಿಯು ಧಾರವಾಡಕ್ಕೆ ನಲವತ್ತು ಕಿಲೋ ಮೀಟರ್ ದೂರದಲ್ಲಿದೆ. ಇಲ್ಲಿನ ಅಧಿದೇವತೆ ಎಲ್ಲಮ್ಮ
ಅಥವಾ ರೇಣುಕಾ ಜಮದಗ್ನಿ ಮಹರ್ಷಿಗಳ ಪತ್ನಿ ಮತ್ತು ಪರಶುರಾಮನ ತಾಯಿ. ರೇಣುಕೆಯು ಎಲ್ಲಮ್ಮನಾಗಿ
ಪರಿವರ್ತನೆ ಹೊಂದಿದಕ್ಕೆ ಪುರಾಣದ ಕಥೆಯೊಂದನ್ನು ಹೇಳುತ್ತಾರೆ. ಈ ಗುಡ್ಡದಲ್ಲಿ ಜಮದಗ್ನಿಯು
ತಪಸ್ಸು ಮಾಡಿದ ತಾಣವೂ ಇದೆ. ಎಲ್ಲಮ್ಮನ ದೇವಾಲಯವು ಎರಡು ಸಾವಿರ ವರ್ಷಗಳಿಗೂ ಹಳೆಯದು ಎನ್ನುವ
ಪ್ರತೀತಿ ಇದೆ.
ಶಕ್ತಿ
ಕೇಂದ್ರಗಳು: ಸವದತ್ತಿಯಿಂದ ಐದು ಕಿಲೋಮೀಟರ್ ದೂರದಲ್ಲಿರುವ ಜೋಗಳ ಬಾವಿ ಎನ್ನುವಲ್ಲಿ ಸ್ನಾನ
ಮಾಡಿ ಭಕ್ತರು ಪೂಜೆಯನ್ನು ಸಲ್ಲಿಸುತ್ತಾರೆ. ಪರಶುರಾಮ ಮಂದಿರ, ಮಾತಂಗಿ, ಭೈರವೇಶ್ವರ
ದೇಗಲಗಳು ಇಲ್ಲಿರುವ ಇನ್ನಿತರ ಶಕ್ತಿಕೇಂದ್ರಗಳು. ಬೆಟ್ಟದ ಮೇಲೆ ಒಂದು ಸಣ್ಣ ಜಮದಗ್ನಿಯ ಗುಡಿ
ಇದೆ. ಅಲ್ಲಿ ಕಂಡು ಬರುವ ಎಣ್ಣೆಹೊಂಡದಲ್ಲಿ ಸ್ನಾನ ಮಾಡಿದ ಬಳಿಕವೇ ದೇವಿಯ ದರ್ಶನ. ಈ ಸ್ನಾನದಿಂದ
ಚರ್ಮರೋಗಗಳು ನಾಶವಾಗುತ್ತವೆ ಎನ್ನುವ ನಂಬಿಕೆ ಇದೆ.
ನಂಬಿಕೆಗಳು: ಏಕ ಕಾಲಕ್ಕೆ ಹತ್ತು ಲಕ್ಷ ಮಂದಿ ದರ್ಶನ ಪಡೆಯುವ ಅವಕಾಶ ಹೊಂದಿರುವ ಸವದತ್ತಿ ಎಲ್ಲಮ್ಮನ ಸನ್ನಿಧಿಯಲ್ಲಿ ಒಂದು ವರ್ಷದಲ್ಲಿ ಏಳು ಜಾತ್ರೆಗಳು ನಡೆಯುವುದು ವಿಶೇಷ. ದವನದ ಹುಣ್ಣಿಮ, ಗೌರಿ ಹುಣ್ಣಿಮೆ, ಬನದ ಹುಣ್ಣಿಮೆ, ಭರತ ಹುಣ್ಣಿಮೆ, ಮಹಾನವಮಿಗಳಂದು ಇಲ್ಲಿ ಪ್ರಮುಖ ಜಾತ್ರೆಗಳು ನಡೆಯುತ್ತವೆ. ಇಲ್ಲಿಗೆ ಭಕ್ತಾದಿಗಳು ಚಕ್ಕಡಿಯಲ್ಲಿ ಬರುವ ಪದ್ದತಿ ಇದೆ. ಬಯಲಿನಲ್ಲಿಯೇ ಅಡುಗೆ ಮಾಡಿ ನೈವೇದ್ಯೆ ಮಾಡುವುದು ಇಲ್ಲಿನ ಪದ್ದತಿ. ಮಕ್ಕಳು ಇಲ್ಲದ ಮಹಿಳೆಯರು ಇಲ್ಲಿನ ಪರಶುರಾಮ ತೊಟ್ಟಿಲನ್ನು ತೂಗಿದರೆ ಮಕ್ಕಳಾಗುತ್ತದೆ ಎನ್ನುವ ನಂಬಿಕೆ ಇದೆ. ಅರಿಷಿಣ ಅಥವಾ ಭಂಡಾರವನ್ನು ಎರಚುವುದು ಇಲ್ಲಿನ ಸೇವೆ. ಭಂಡಾರದಲ್ಲಿ ಮೀಯುವ ಹರಕೆಯನ್ನು ಹೊತ್ತು ಕೊಳ್ಳುವವರು ಕೂಡ ಇದ್ದಾರೆ.