ಗುರುಗೋವಿಂದಸಿಂಗರು ಸಿಖ್ರ ಹತ್ತನೇಯ ಮತ್ತು ಕೊನೆಯ ಗುರುಗಳು. 1666ರ ಡಿಸಂಬರ್ 22 ರಂದು ಜನಿಸಿದ ಅವರು ಒಂಬತ್ತನೇ ವಯಸ್ಸಿನಲ್ಲಿಯೇ ತಮ್ಮ ತಂದೆ
ಗುರುತೇಜ್ಬಹದ್ದೂರ್ಸಿಂಗ್ ಅವರ ನಂತರ ಗುರುಗಳಾದರು. ಮೊಗಲರ ವಿರುದ್ಧ ನಿರಂತರವಾಗಿ ಸೆಣೆಸಿದ ಅವರು ಸಿಖ್ರನ್ನು ಆತ್ಮರಕ್ಷಣೆ ಕಲೆಯಲ್ಲಿ ನಿಷ್ಣಾತರನ್ನಾಗಿಸಿದರು. ಕಠಾರಿವಿದ್ಯೆ, ಬಿಲ್ಲುವಿದ್ಯೆಗಳಲ್ಲಿ ಪರಿಣಿತರಾಗಿದ್ದ ಅವರು ಉತ್ತಮ ಕವಿಗಳೂ
ಅಗಿದ್ದರೂ ಅದುವರೆಗೂ ಸಿಖ್ಧರ್ಮದ ಗುರುಗಳು ಮಾಡಿದ್ದ ಉಪದೇಶವನ್ನು ಸಂಗ್ರಹಿಸಿ ‘ಗ್ರಂಥ್ಸಾಹೆಬ್’ ರೂಪಿಸಿದರು. ಆಕ್ರಮಣದ ವಿರುದ್ಧ ಸದಾಸನ್ನದ್ಧರಾಗಿರಲು ‘ಖಾಲ್ಸಾ’ ಎನ್ನುವ ಪಂಥವನ್ನು ಸ್ಥಾಪಿಸಿದರು. ಉದ್ದನೆಯ ಕೂದಲು, ಮುಂಡಾಸು, ಕೃಪಾಣ-ಕಚ್ಚೆ, ಬಾಚಣಿಗೆ, ಖಡ್ಗ ಈ ಗುಂಪಿನ ಐದು ಅಗತ್ಯ ಗುರುತುಗಳು ಇವೆಲ್ಲವನ್ನೂ ಗೋವಿಂದಸಿಂಗರು ಆತ್ಮರಕ್ಷಣೆಗಾಗಿಯೇ
ರೂಪಿಸಿದ್ದರು. ‘ಸಿಂಗ್’ ಎಂಬ ಅಭಿದಾನವನ್ನೂ
ಕೂಡ ಅವರೇ ರೂಪಿಸಿದ್ದರು. ತಮ್ಮ ನಂತರ ಯಾವುದೇ ಗುರುಗಳು ಇರುವುದಿಲ್ಲ. ಗ್ರಂಥಸಾಹೇಬವನ್ನೇ ಗುರುಸ್ಥಾನದಲ್ಲಿ ಇಟ್ಟು ಪೂಜಿಸಬೇಕು ಎಂದು ಅವರು ತಮ್ಮ ಅನುಯಾಯಿಗಳಿಗೆ
ಮೊದಲೇ ತಿಳಿಸಿದ್ದರು. 1708ರ ಅಕ್ಟೋಬರ್ 7 ರಂದು ಹೋರಾಟದಲ್ಲಿ ಗಾಯಗೊಂಡಿದ್ದ ಅವರು ನಾದೆಂಡ್ನಲ್ಲಿ ಮುಕ್ತರಾದರು (ಅವರ ಸಾವಿನ ಕುರಿತು
ಭಿನ್ನಾಭಿಪ್ರಾಯಗಳಿದ್ದು ಹೆಚ್ಚಿನವರು ಈ ದಿನವನ್ನು ಒಪ್ಪಿಕೊಂಡಿದ್ದಾರೆ.) ಅವರ ನಂತರ ಗುರುಪರಂಪರೆ ಮುಕ್ತಾಯವಾಯಿತು.