ಸದ್ಗುರು ಬ್ರಹ್ಮ ಚೈತನ್ಯರು ಅವಧೂತ ಪರಂಪರೆಯ ಪ್ರಮುಖ ಸಾಧಕರು. ತಾರಕ ರಾಮನಾಮದ ಪ್ರವರ್ತಕರು. ಶಕೆ1766ರ ಮಾಘ ಶುಕ್ಲ ದ್ವಾದಶಿ ಬುಧವಾರ ಬೆಳಗಿನ ಜಾವ (19-02-1845) ಬ್ರಹ್ಮಚೈತನ್ಯರು ಜನಿಸಿದರು. ರಾಮ್ಜಿ ಅವರ ತಂದೆ ಮತ್ತು ಗೀತಾಬಾಯಿ ಅವರ ತಾಯಿ. ಬಾಲಕನಿಗೆ ಗಣಪತಿ ಎಂಬ ಹೆಸರನ್ನು ಇಡಲಾಯಿತು. ತಾತ ಲಿಂಗೋಪಂತರು ಪಂಡರಾಪುರದ ವಿಠಲನ ಪರಮಭಕ್ತರು. ಅವರ ಇಡೀ ಕುಟುಂಬ ಭಕ್ತಿ ಪಥದಲ್ಲಿ ಸಾಗುತ್ತಿತ್ತು. ಬಾಲಕನಿಗೂ ಚಿಕ್ಕಂದಿನಿಂದಲೂ ದೇವರಧ್ಯಾನದಲ್ಲಿ ಅಪರಿಮಿತ ಆಸಕ್ತಿ. ಬ್ರಹ್ಮ ಚೈತನ್ಯರಿಗೆ ಹತ್ತು ವರ್ಷವಾದಾಗ ಸರಸ್ವತಿಯವರೊಡನೆ ವಿವಾಹವಾಯಿತು. ಅವರಿಗೆ ವೈವಾಹಿಕಜೀವನದಲ್ಲಿ ಆಸಕ್ತಿ ಬೆಳೆಯಲೇ ಇಲ್ಲ. ವೈರಾಗ್ಯ ಬೆಳೆಯುತ್ತಾ ಹೋದಂತೆ ಗುರುವನ್ನು ಹುಡುಕಿಕೊಂಡು ಹೋದರು. ಹರಿಪುರದಲ್ಲಿ ರಾಧಾಬಾಯಿ ಅವರಿಗೆ ಮೊದಲಗುರುವಾದರು. ಅಕ್ಕಲಕೋಟೆಮಹಾರಾಜರು ಅವರಿಗೆ ಅಧ್ಯಾತ್ಮಮಾರ್ಗದಲ್ಲಿ ದಾರಿ ತೋರಿದರು. ಏಳಗಾಂವ್ನ ತುಕರಾಂ ಮಹಾರಾಜರು ಅವರಿಗೆ ನಾಮಮಾರ್ಗದ ಮಹತ್ವವನ್ನು ತೋರಿಸಿಕೊಟ್ಟರು.
ದೇಶವನ್ನೆಲ್ಲಾ ಪರ್ಯಟನೆ ಮಾಡಿದ ಬ್ರಹ್ಮಚೈತನ್ಯರು ಅಧ್ಯಾತ್ಮ ಪಥದಲ್ಲಿ ಗಟ್ಟಿಯಾದರು. 1876ರ ಭೀಕರ ಬರಗಾಲದ ಸಂದರ್ಭದಲ್ಲಿ ಅವರು ಗೊಂದಾವಲಿಗೆ ಹಿಂದಿರುಗಿದರು. ಜನಸೇವೆ ಮಾಡಿದರು, ಪತ್ನಿಯೊಡನೆ ಸಂಸಾರ ನಡೆಸಿದರು. ಆದರೆ ಅವರ ಪತ್ನಿ ಮತ್ತು ಅವರ ಪುತ್ರರು ತೀರಿಕೊಂಡರು. ಬ್ರಹ್ಮಚೈತನ್ಯರು ಲೋಕರೂಡಿಗಾಗಿ ಅಯಿಸಾಹೇಬ ಎನ್ನುವ ಕುರುಡಿಯನ್ನು ಮದುವೆಯಾಗಿ ಅವರನ್ನು ಅಧ್ಯಾತ್ಮ ಪಥದ ಕಡೆಗೆ ನಡೆಸಿದರು. ಇಲ್ಲಿಂದ ಮುಂದೆ ಗೊಂದಾವಲಿಯೇ ಅವರ ಕಾರ್ಯಕ್ಷೇತ್ರವಾಯಿತು. 1905ರಲ್ಲಿ ಇನ್ನೊಮ್ಮೆ ದೇಶ ಪರ್ಯಟಣ ನಡೆಸಿದರು. ಮಾರ್ಗಶಿರ ಬಹುಳ ದಶಮಿಯಂದು (1913ರ ಡಿಸಂಬರ್ 22) ಬೆಳಗಿನ ಜಾವ 5.50ಕ್ಕೆ ತಮ್ಮ ದೇಹವನ್ನು ಬಿಟ್ಟರು. ತಾರಕರಾಮಮಂತ್ರವು ಅವರ ಪ್ರಮುಖ ಉಪದೇಶವಾಗಿದ್ದು ನಾಮದ ಮಹತ್ವವನ್ನು ಅವರು ವಿವರಿಸಿದರು. ಮಧ್ಯಕರ್ನಾಟಕದ ಎಲ್ಲಾ ಅವಧೂತರಿಗೂ ಬ್ರಹ್ಮಚೈತನ್ಯರು ಗುರು ಸ್ವರೂಪರು. ಅವರ ಮಹಿಮೆಯನ್ನು ಕರ್ನಾಟಕದಲ್ಲಿ ಬ್ರಹ್ಮಾನಂದ ಮಹಾರಾಜರು, ಚಂದ್ರಶೇಖರ ಭಾರತಿಗಳು, ವರದಹಳ್ಳಿ ಶ್ರೀಧರಸ್ವಾಮಿಗಳು ಮೊದಲಾದ ಮಹಾಮಹಿಮರು ಪ್ರಚಾರ ಮಾಡಿದರು. ಇಂದಿಗೂ ಗೊಂದಾವಲಿ ಪ್ರಮುಖ ದತ್ತಕ್ಷೇತ್ರಗಳಲ್ಲಿ ಒಂದು ಎನ್ನಿಸಿಕೊಂಡಿದೆ.