ಬಾದಾಮಿ ಬನಶಂಕರಿ ಜಾತ್ರ

ಬನಶಂಕರಿ ಎಂದೇ ಹೆಸರಾಗಿರುವ ವನದೇವತೆ ಬನಶಂಕರಿ ಶಕ್ತಿದೇವತೆ. ಬಾದಾಮಿಗೆ ಮೊದಲೇ ಸಿಗುವ ದೇಗುಲ ದ್ರಾವಿಡ ಮತ್ತು ವಿಜಯನಗರ ವಾಸ್ತು ಶೈಲಿಯ ಮಿಶ್ರಣದಿಂದ ಕೂಡಿದೆ. ಗರ್ಭಗುಡಿ, ಮೂಲ ದೇವಾಲಯ, ಮುಖ ಮಂಟಪ ಚಾಲುಕ್ಯರ ಒಂದನೇ ಜಗದೇಕ ಮಲ್ಲನಿಂದ(ಕ್ರಿ.ಶ 1139) ನಿಂದ ನಿರ್ಮಾಣವಾಗಿದೆ ಎಂಬ ಸಂಗತಿ ಶಾಸನಗಳಿಂದ ತಿಳಿಯುತ್ತದೆ. ದೇವಾಲಯದ ಮುಂದಿನ ಶಿಲಾಸ್ತಂಭವು ರಾಷ್ಟ್ರಕೂಟರ ಭೀಮನ ಕಾಲದಲ್ಲಿ ನಿರ್ಮಾಣವಾಯಿತು. ನಾಲ್ಕು ಪ್ರವೇಶ ದ್ವಾರಗಳಿರುವ ದೇವಾಲಯ ಮುಖಮಂಟಪ, ಸಭಾಮಂಟಪ ಮತ್ತು ಗರ್ಭಗುಡಿಯನ್ನು ಹೊಂದಿದೆ. ಕಪ್ಪುಶಿಲೆಯಲ್ಲಿ ನಿರ್ಮಾಣವಾದ ಬನಶಂಕರಿ ವಿಗ್ರಹವು ಅತ್ಯಂತ ಕಲಾತ್ಮಕವಾಗಿದೆ. ದೇವಾಲಯದ ಎದುರು ಇರುವ ಪುಷ್ಕರಣಿಯಲ್ಲಿ ಸದಾ ನೀರು ತುಂಬಿದ್ದು ಇದನ್ನು ಹರಿದ್ರಾ ತೀರ್ಥ ಎಂದು ಕರೆಯುತ್ತಾರೆ. ರೈತರ ದೊಡ್ಡ ಜಾತ್ರೆ ಇಲ್ಲಿ  ಬನದ ಹುಣ್ಣಿಮೆಯಿಂದ (ಪುಷ್ಯ ಶುದ್ದ ಹುಣ್ಣಿಮೆ) ಒಂದು ತಿಂಗಳ ಕಾಲ ನಡೆಯುತ್ತದೆ.

ಸಿಂಹ ವಾಹಿನಿ ಬನಶಂಕರಿ:  ಈ ಪ್ರದೇಶವು ಸಂಪೂರ್ನ ಬನಗಳಿಂದ ಕೂಡಿದ ಕಾರಣ ಬನಶಂಕರಿ ಎಂಬ ಹೆಸರು ಬಂದಿಎ. ಸ್ಥಳೀಯರು ಈ ದೇವತೆಯನ್ನು ಬಾಳವ್ವ, ಬನದವ್ವ, ಸುಂಕವ್ವ, ಶಾಕಂಬರಿ, ಶಿರವಂತಿ, ಚೌಡಮ್ಮ, ವನದುರ್ಗೆ ಹೀಗೆ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ. ಬನಶಂಕರಿ ನವದುರ್ಗೆಯಲ್ಲಿ 6ನೇ ಅವತಾರ ಎಂಬುದು ಜನರ ನಂಬಿಕೆ. ಶಾಕಾಂಬರಿ ಮಹಾತ್ಮೆಯ ಪ್ರಕಾರ ಇಂದ್ರಾದಿಗಳು ದೇವತೆಯನ್ನು ಇಲ್ಲಿ ಸ್ಥಾಪಿಸಿದರು. ಮಾರ್ಕಾಂಡೇಯ ಪುರಾಣದ ಪ್ರಕಾರ ಬನಶಂಕರಿ ಶಕ್ತಾಂಬರಿಯಾಗಿದ್ದು ಲಕ್ಷ್ಮಿಯ ಅವತಾರವಾಗಿದ್ದಾಳೆ. ಸ್ಕಂದ ಪುರಾಣ, ದೇವಿ ಭಾಗವತ ಮತ್ತು ಭವಿಷ್ಯೋತ್ತರ ಪುರಾಣಗಳು ಬನಶಂಕರಿಯನ್ನು ದುರ್ಗೆಯ ಅಪರಾವತಾರ ಎಂದು ಬಣ್ಣಿಸಿವೆ. ಇಲ್ಲಿ ಬನಶಂಕರಿ ದುರ್ಗೆಯ ರೂಪದಲ್ಲಿ ಇದ್ದು ದುರ್ಗಾಸುರನನ್ನು ಕೊಂದ ಕ್ರೋಧದದಲ್ಲಿ ಸಿಂಹವನ್ನು ಏರಿದ್ದಾಳೆ. ಈ ದೇವತೆಯ ಕೈಯಲ್ಲಿ ಕತ್ತಿ, ಯುದ್ಧಗಂಟೆ, ತ್ರಿಶೂಲ, ತಲೆಯ ಚಿಪ್ಪು, ಮಾನವ ಶಿರ, ಗುರಾಣಿ, ಡಮರುಗಳಿವೆ. ಈ ದೇವಿಗೆ ಎರಡು ಉತ್ಸವ ಮೂರ್ತಿಗಳಿದ್ದು ಒಂದನ್ನು ಪ್ರತಿನಿತ್ಯವೂ ಮೆರವಣಿಗೆ ಮಾಡಿ ರಾತ್ರಿಯ ವೇಳೆಯಲ್ಲಿ ತೊಟ್ಟಿಯಲ್ಲಿಡುವುವು. ಇನ್ನೊಂದನ್ನು ಎರಡು ಕಿಲೋಮೀಟರ್ ದೂರದಲ್ಲಿನ ಚೋಳದ ಗುಡ್ಡದಲ್ಲಿ ಇಡಲಾಗಿದ್ದು ರಥೋತ್ಸವದ ಕಾಲ ಮಾತ್ರ ಇಲ್ಲಿ ತರಲಾಗುವುದು.

ನಂಬಿಕೆಗಳು: ಬನಶಂಕರಿ ಜಾತ್ರೆಗೆ ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ, ಆಂದ್ರಪ್ರದೇಶ, ತೆಲಂಗಾಣ ರಾಜ್ಯಗಳಿಂದ ಕೂಡ ಭಕ್ತಾದಿಗಳು ಬರುತ್ತಾರೆ. ರೈತರು ತಮ್ಮ ಮೊದಲ ಫಸಲಿನ ಮಾವಿನ ಹಣ್ಣನ್ನು ದೇವಿಗೆ ಅರ್ಪಿಸುವುದರಿಂದ ಇದಕ್ಕೆ ಸೀಕರಣೆ ಜಾತ್ರೆ ಎಂದು ಕೂಡ ಹೆಸರಿದೆ. ತೆಪ್ಪೋತ್ಸವ ಇಲ್ಲಿನ ಇನ್ನೊಂದು ವಿಶೇಷ. ಹೆತ್ತವರು ತಮ್ಮ ನವಜಾತ ಶಿಶುಗಳನ್ನು ಬಾಳೆ ಎಲೆಯ ದೋಣಿಗಳ ಮೂಲಕ ದೇಗುಲದ ಸುತ್ತಲೂ ಸಾಗಿಸುತ್ತಾರೆ. ಹೀಗೆ ಮಾಡುವುದರಿಂದ ಶಿಶುವು ಅನಾರೋಗ್ಯದಿಂದ ದೂರವಾಗಿ ದೀರ್ಘ ಆಯಸ್ಸನ್ನು ಪಡೆಯುತ್ತದೆ ಎನ್ನುವುದು ನಂಬಿಕೆ.