ದೇವರ ದಾಸಿಮಯ್ಯ ಜಯಂತಿ


ದೇವರ ದಾಸಿಮಯ್ಯ (ದೇವಲ ಮಹರ್ಷಿ) ಸರಿ ಸುಮಾರು 10ನೇ ಶತಮಾನದವರು. ಸುರಪುರ ಜಿಲ್ಲೆಯ ಮುದನೂರು ಎಂಬ ಹಳ್ಳಿಯಲ್ಲಿ ಜನನ. ಮುದನೂರು ಹಲವಾರು ದೇವಾಲಯಗಳಿಂದ ಕೂಡಿದ್ದು, ಅಲ್ಲಿನ ರಾಮನಾಥ ದೇವಸ್ಥಾನ ದೇವಲ ಮಹರ್ಷಿಯರ ಅಚ್ಚುಮೆಚ್ಚು. ರಾಮನಾಥ ಸ್ವಾಮಿಯ ಆರಾಧಕರು. ರಾಮನಾಥ ಎಂದರೆ ಶಿವ (ರಾಮನು ಪೂಜಿಸುತ್ತಿದ್ದಂತಹ ದೇವರು). ದೇವಲ ಮಹರ್ಷಿಯು ಶಿವನ ಅಪಾರ ಭಕ್ತರಾಗಿದ್ದು 'ರಾಮನಾಥ' ಇವರ ಅಂಕಿತನಾಮವಾಗಿತ್ತು.

ದೇವರ ದಾಸಿಮಯ್ಯ ತಮ್ಮ ಯೌವನಾವಸ್ಥೆಯಲ್ಲಿ ಹೆತ್ತವರ ಇಚ್ಛೆಯಂತೆ, ಶಿವಪುರದ ದುಗ್ಗಳೆಯನ್ನು ವರಿಸತ್ತಾರೆ, ಆಕೆ ಮಹಾನ್ ಸಾಧ್ವಿಮಣಿ. ದಂಪತಿಗಳಿಬ್ಬರೂ ಸಜ್ಜನರು, ದೈವಭಕ್ತರು, ಧಾರಾಳತನವುಳ್ಳವರೂ ಆಗಿದ್ದು, ಯಾರೇ ಕಷ್ಟದಲ್ಲಿದ್ದರೂ ತಮ್ಮ ಶಕ್ತಿ ಮೀರಿ ಸಹಾಯ ಮಾಡುತ್ತಿದ್ದರು. ಸುವರ್ಚಲೆ ಇವರ ಸುಪುತ್ರಿ, ಮಹಾನ್ ಜ್ಞಾನಿ. ಹೀಗಿದ್ದರೂ ದಾಸಿಮಯ್ಯರಿಗೆ ಬದುಕಿನಲ್ಲಿ ಎನೋ ಶೂನ್ಯತೆ ಕಾಡುತ್ತಿತ್ತು. ಹೀಗೊಂದು ದಿನ ಆಲೋಚಿಸುತ್ತಿರುವಾಗ ದೇವರನ್ನು ಒಲಿಸಿಕೊಳ್ಳಲು ಸಂನ್ಯಾಸತ್ವವೇ ಸರಿಯಾದ ಮಾರ್ಗವೆಂದು ಅರಿತು, ಅದನ್ನು ಸಿದ್ಧಿಸಿಕೊಳ್ಳುವ ಸಲುವಾಗಿ ದಟ್ಟ ಕಾಡಿನೆಡೆಗೆ ಹೊರಟುಹೋಗುತ್ತಾರೆ.

ಹಲವಾರು ವರ್ಷ ಸುಧೀರ್ಘ ತಪಸ್ಸನ್ನಾಚರಿಸಿ ಕಡೆಗೂ ಶಿವನ ಕೃಪೆಗೆ ಪಾತ್ರರಾಗುತ್ತಾರೆ. ತಪಸ್ಸಿಗೆ ಮೆಚ್ಚಿದ ಈಶ್ವರ ಪ್ರತ್ಯಕ್ಷನಾಗುತ್ತಾನೆ. ಸದಾಶಿವನು ದಾಸಿಮಯ್ಯರನ್ನು ಕುರಿತು ಹೀಗೆ ಸಂಬೋಧಿಸುತ್ತಾನೆ 'ದಾಸಿಮಯ್ಯ! ನಿನ್ನ ತಪಸ್ಸಿಗೆ ಮೆಚ್ಚಿದ್ದೇನೆ... ನಿನ್ನ ಕೋರಿಕೆಯನ್ನು ತಿಳಿಸು..'ಮಹದಾನಂದದಿಂದ ಋಷಿ ವರ್ಯರು ಹೀಗೆ ತಮ್ಮ ಕೋರಿಕೆ ಸಲ್ಲಿಸುತ್ತಾರೆ: 'ಭಗವನ್! ನಿನ್ನ ದರ್ಶನದಿಂದ ನನ್ನ ಜನ್ಮ ಇಂದಿಗೆ ಸಾರ್ಥಕವಾಯಿತು.. ಕೃಪೆತೋರಿ ನನಗೆ ಮೋಕ್ಷವನ್ನು ದಯಪಾಲಿಸು ಮಹದೇವ...'

ಶಿವನು: 'ದಾಸಿಮಯ್ಯ.. ಋಷಿಯಾಗಿ ಮೋಕ್ಷವನ್ನು ಪಡೆಯುವುದಷ್ಟೇ ಅಲ್ಲಾ... ನೀನು ಮಾಡಬೇಕಾದ ಮಹತ್ಕಾರ್ಯ ಬಹಳಷ್ಟಿದೆ! ದೇವ-ದೇವತೆಯರು ಹಾಗೂ ಮಾನವರಿಗೆ, ತಮ್ಮ ಮಾನ-ಶರೀರ ಸಂರಕ್ಷಣೆಯನ್ನು ಕಾಪಾಡಲು ವಸ್ತ್ರವನ್ನು ತಯಾರಿಸುವ ಕಾರ್ಯ ನಿನ್ನಿಂದ ಆಗಬೇಕಿದೆ. ಪರಮಾತ್ಮನನ್ನು ಕಾಣಲು ಸಂನ್ಯಾಸಿಯಾಗಿ ತಪಸನ್ನಾಚರಿಸುವ ಅಗತ್ಯವಿಲ್ಲ... ಸಂಸಾರಿಯಾಗಿದ್ದೂ ಆಧ್ಯಾತ್ಮಿಕತೆಯನ್ನು ಆಚರಿಸುವವನು ಅದಕ್ಕಿಂತ ಶ್ರೇಷ್ಠನು. ಜನರು ತಮ್ಮ ಕಾಯಕದಲ್ಲಿ ದೇವರನ್ನು ಕಾಣಬೇಕು. ಶ್ರದ್ಧಾಭಕ್ತಿಯಿಂದ ತಮ್ಮ ದೈನಂದಿನ ಕಾರ್ಯಾಚರಣೆಯಲ್ಲಿ ತೊಡಗಬೇಕು. ಆದೇ ನಿಜವಾದ ಮನುಕುಲದ ಉದ್ದೇಶ. ಈ ಸಂದೇಶವನ್ನು ಮಾನವರಿಗೆ ಅರ್ಥವಾಗುವ ರೀತಿಯಲ್ಲಿ ಮನದಟ್ಟು ಮಾಡು. ಇದೇ ನಿನ್ನ ಜನ್ಮದುದ್ದೇಶ..'

ಶಿವನ ಕೃಪೆಗೆ ಪಾತ್ರನಾದ ದಾಸಿಮಯ್ಯ, ರಾಮನಾಥನ ಇಚ್ಚೆಯಂತೆ ತನ್ನ ಹುಟ್ಟೂರಿಗೆ ಹಿಂದಿರುಗುತ್ತಾನೆ. ವಸ್ತ್ರವು ಜನರ ಮಾನವನ್ನು ಕಾಪಾಡುವ ಮತ್ತು ದೇಹಕ್ಕೆ ರಕ್ಷಣೆಕೊಡುವ ಭಗವಂತನ ಒಂದು ವರಪ್ರದಾನವೆಂದು ತಿಳಿದ ದಾಸಿಮಯ್ಯ ವಸ್ತ್ರ ನಿರ್ಮಸುವ ಕಲೆಯನ್ನು ಪಾರಂಗತಗೊಳಿಸಿಕೊಂಡು ಲೋಕಕ್ಕೆ ಬಟ್ಟೆಯನ್ನು ಅರ್ಪಿಸಿದರು. ದಂಪತಿಗಳಿಬ್ಬರೂ, ಸೀರೆ ನೇಯ್ಗೆ ಉದ್ಯೋಗದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರು, ನೇಯ್ಗೆಯನ್ನು ದೇವರ ಕಾರ‍್ಯದಂತೆ ಆಚರಿಸುತ್ತಾ ಇತರರಿಗೆ ಮಾದರಿಯಾಗಿ ಇನ್ನೂ ಅನೇಕ ಮಂದಿಗೆ ಉದ್ಯೋಗ ಕಲಿಸಿ ಜೀವನೋಪಾಯಕ್ಕೆ ದಾರಿತೋರಿಸುತ್ತಾರೆ. ಹೀಗಾಗಿ ಇವರು 'ಜೇಡರ ದಾಸಿಮಯ್ಯ'ರೆಂದೂ ಪ್ರಸಿದ್ಧರಾದರು.

ದಾಸಿಮಯ್ಯರ ಚಿತ್ರಗಳನ್ನು ಗಮನಿಸಿ, ಜನಿವಾರ ತೊಟ್ಟ ಮುನಿವರ್ಯರ ಎಡಗೈಯಲ್ಲಿ ಕಮಂಡಲ ಹಾಗೂ ಬಲಗೈಯಲ್ಲಿ ಬಟ್ಟೆ ಕಾಣಬಹುದು. ಪರಶಿವನ ಹಣೆಗಣ್ಣಿನಿಂದ ಮಹರ್ಷಿ ಅವತರಿಸಿದರೆಂಬ ಪ್ರತೀತಿಯೂ ಇದ್ದ ಕಾರಣ 'ದೇವಾಂಗ' (ದೇವರ ಒಂದು ಅಂಗ) ಎಂದು ಕರೆಯಲ್ಪಡುತ್ತಾರೆ. ಇಂದಿನ ದೇವಾಂಗ ಜನಾಂಗದ ಕುಲ ಗುರುವಾದರು ದೇವರ ದಾಸಿಮಯ್ಯ. ಚೌಡೇಶ್ವರಿ ತಾಯಿ ಈ ಸಮೂಹದ ಕುಲ ದೇವತೆ. ಈ ಮಹಾತ್ಮರು ಗಾಯತ್ರೀ ಮಂತ್ರದ ಉಪಾಸಕರಾಗಿ, ಅದರ ಮಹಿಮೆಯನ್ನು ಸಾರಿದರು. ಪ್ರತಿಯೊಬ್ಬ ಮಾನವನು, ಉತ್ತಮ ಸಂಸ್ಕೃತಿ, ಧರ್ಮ, ಆಚಾರವಾಗಿ ನಡೆಸಬೇಕೆಂಬ ಸಂದೇಶವನ್ನು ತಮ್ಮ ವಚನಗಳ ಮೂಲಕ ದಾಸಿಮಯ್ಯ ಪ್ರಪಂಚಕ್ಕೆ ತಿಳಿಸಿ ಹೇಳಿದರು.

ಇನ್ನು ದೇವಾಂಗ ದಾಸಿಮಯ್ಯರ ಕೃತಿ ಪರಿಚಯಕ್ಕೆ ಬಂದರೆ, ರಾಮನಾಥ ಎಂಬ ನಾಮಾಂಕಿತದಿಂದ ಅನೇಕ ವಚನಗಳನ್ನು ರಚಿಸಿದ್ದಾರೆ. ದೇವಲರು, ಶತಮಾನಗಳಿಂದ ಬಂದಂತಹ ದಕ್ಷಿಣ ಭಾರತದಲ್ಲಿ ಹೆಸರಾದ ಶರಣರಿಗಿಂತಲೂ ಮುಂಚಿತವಾಗಿದ್ದಂತಹ ಮೊಟ್ಟ ಮೊದಲ ವಚನಕಾರರು. ದಾಸಿಮಯ್ಯನವರ ವಚನಗಳು ಅರ್ಥೈಸಿಕೊಳ್ಳಲು ಬಹಳ ಸರಳವಾಗಿದ್ದು, ಸಮಾಜಕ್ಕೆ ವಿಶೇಷವಾದ ಧಾರ್ಮಿಕ ಪ್ರಜ್ಞೆಯ ಸ್ಪೂರ್ತಿಯ ಚಿಲುಮೆಯಾಗಿವೆ. ಆದರೆ ವಿಷಾದದ ಸಂಗತಿಯೆಂದರೆ ಇವರ ಬಗ್ಗೆ ಹೆಚ್ಚಿಗೆ ಪ್ರಚಾರಗಳಾಗಲಿಲ್ಲ. ತಡವಾಗಿಯಾದರೂ ಈಗೀಗ ಕೆಲವರು ದೇವಲರ ವಚನಗಳನ್ನು ಹೊರತರುತ್ತಿದ್ದಾರೆ.

ದೇವರ ದಾಸಿಮಯ್ಯನವರ ಪತ್ನಿ ದುಗ್ಗಳೆಯೂ ಸಹ ಸತಿ ಶಿರೋಮಣಿಯಾಗಿ ಮಹಾ ಪ್ರತಿವ್ರತೆಯಾಗಿದ್ದು ತಮ್ಮ ಗಂಡನ ಜೊತೆಯಲ್ಲಿ ಆಕೆ ಕೂಡ ಭಕ್ತಿಯಲ್ಲಿ,ಸಂಸಾರದಲ್ಲಿ ಹೆಸರು ಮಾಡಿದವರು. ಇವರುಗಳ ಬಗ್ಗೆ ಹೆಚ್ಚಿಗೆ ಎಲ್ಲೂ ಪ್ರಚಾರಗಳಾಗಲಿ, ಪುಸ್ತಕಗಳಾಗಲಿ ಜಾಸ್ತಿ ಪ್ರಚಲಿತದಲ್ಲಿ ಇಲ್ಲದಿರುವುದೇ ನಮ್ಮ ದುರಾದೃಷ್ಠ. ಆಗಾಗಿ ಹೆಚ್ಚು ಬೆಳಕೆಗೆ ಬರಲಿಲ್ಲ, ಇವರ ಬಗ್ಗೆ ತಿಳಿದುಕೊಳ್ಳಲು. ಮುಂದಾದರು ಇಂತಹ ಮಹಾಸಾಧ್ವಿಗಳು ನಮ್ಮ ನಾಡಲ್ಲಿ ಇದ್ದರು ಎನ್ನುವುದಕ್ಕೆ ಕುರುಹುಗಳನ್ನು ಉಳಿಸುವುದು ನಮ್ಮ ಕರ್ತವ್ಯವಾಗಿದೆ. ಇತಿಹಾಸದಲ್ಲಿ, ಪುರಾಣದಲ್ಲಿ ಇವರ ಬಗ್ಗೆ ತಿಳಿಯಲು ಎಲ್ಲರು ಶ್ರಮಿಸಬೇಕು. ದೇವರ ದಾಸಿಮಯ್ಯನವರು ಶತ-ಶತ ಮಾನಗಳಿಂದ ಬಂದಂತಹ ದಕ್ಷಿಣ ಭಾರತದಲ್ಲಿ ಹೆಸರಾದ ಪ್ರಸಿದ್ಧ ಶರಣರಿಗಿಂತಲೂ, ಮೊದಲು ಬಂದಂತಹ ಮೊಟ್ಟ ಮೊದಲ ಆದ್ಯ ವಚನಕಾರರಾಗಿದ್ದಾರೆ. ಇವರೇ ವಚನಗಳಿಗೆ ತಳಹದಿ ನೀಡಿದವರು. ವಚನಗಳನ್ನು ತಮ್ಮ ಸಾಮಾಜಿಕ ಜೀವನದಲ್ಲಿಯೇ ಕಂಡುಕೊಂಡು ರಚಿಸಿದರು.

ಸೀರೆ ನೇಯುತ್ತಾ ತಮ್ಮ ಪ್ರಾಪಂಚಿಕ ಜೀವನದಲ್ಲಿ ಸಂಸಾರ ಸಾಗಿಸುತ್ತಾ, ಭಕ್ತಿ ಮಾರ್ಗವೇ ಉನ್ನತ ಎಂದು ಸಾರಿದವರು.ಸೀರೆ ನೇಯುವ ಕೆಲಸದಿಂದ ಜೀವನ ಸಾಗಿಸುತ್ತಿದ್ದ ಇವರು "ರಾಮನಾಥ "ಎನ್ನುವ ನಾಮಂಕಿತವನ್ನು ಕೊಟ್ಟು ಅನೇಕ ವಚನಗಳನ್ನು ರಚಿಸಿದ್ದಾರೆ.ದೇವರ ದಾಸಿಮಯ್ಯನವರ ವಚನಗಳನ್ನು ರಚಿಸಿರುವವರಲ್ಲಿ ಮೊದಲಿಗರಾದರೂ ಸಹ ಅವರ ವಚನಗಳು ಯಾರಿಗೂ ತಿಳಿದಿಲ್ಲ. ನಂತರ ಬಂದ ಎಲ್ಲಾ ಶರಣರೂ, ಸಾಧು ಸಂತರೂ ರಚಿಸಿದ ವಚನಗಳು ಬಳಕೆಗೆ ಮತ್ತು ಬೆಳಕಿಗೂ ಬ೦ದವು. ದಾಸಿಮಯ್ಯ, ದೇವರ ದಾಸಿಮಯ್ಯ, ದೇವಲ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಮುದನೂರು ದಾಸಿಮಯ್ಯ, ತವನಿಧಿಯ ದಾಸಿಮಯ್ಯ ಎಂಬ ಹೆಸರಿನಿಂದ ಕರೆಯಲ್ಪಡುತ್ತಾರೆ. ಅವರು ರಾಮನಾಥ ಎಂಬ ದೇವರಲ್ಲಿ ಅಪಾರವಾದ ಭಕ್ತಿಯನ್ನು ಇಟ್ಟು ಕೊಂಡಿದ್ದರು. "ರಾಮನಾಥ" ಎನ್ನುವ ತುಂಬಾ ಉಪಯುಕ್ತ ಮತ್ತು ತಮ್ಮ ದಿನನಿತ್ಯದ ಜೀವನಕ್ಕೆ ಸಂಭಂದಿಸಿದ ವಿಷಯಗಳ ಬಗ್ಗೆಯೆ ರಚಿಸಿದ ದೇವರ ದಾಸಿಮಯ್ಯ ಅವರ ವಚನಗಳು ತುಂಬಾ ಸರಳವಾಗಿ ಮನೆಸೂರೆಗೊಳ್ಳುತ್ತವೆ.

ಶಿವನಿಗೆ ಬಟ್ಟೆಯಿತ್ತ ನೇಯ್ಗೆಕಾರ

ಇವರನ್ನು ದೇವರ ದಾಸಿಮಯ್ಯ, ಜೇಡರ ದಾಸಿಮಯ್ಯ ಎಂದು ಎರಡು ರೀತಿಯಲ್ಲಿ ಆದ್ಯಪ್ರವರ್ತಕನೆಂದು ಗುರುತಿಸಲಾಗುತ್ತದೆ. ಈ ಇಬ್ಬರು ಬೇರೆಯೇ ಎಂಬ ಅಭಿಪ್ರಾಯ, ಚರ್ಚೆಯನ್ನು ಸಾಕಷ್ಟು ವಿದ್ವಾಂಸರು ವ್ಯಕ್ತಪಡಿ ಸಿರುವರು. ಆದರೆ ಇಬ್ಬರನ್ನು ಇನ್ನು ಬೇರೆ, ಬೇರೆಯಾಗಿ ನೋಡಲು ಸಾಧ್ಯವಾಗಿಲ್ಲ ಎನ್ನುತ್ತಾರೆ. ವೃತ್ತಿಯಲ್ಲಿ ನೇಯ್ಗೆಕಾರನಾದ ದಾಸಿಮಯ್ಯನವರು ಶಿವನಿಗೆ ಬಟ್ಟೆಯನ್ನು ಕೊಟ್ಟು ಅಪೂರ್ವಭಕ್ತಿ ಮೆರೆದಂತೆ ಐತಿಹ್ಯ ಪುರಾಣಗಳಲ್ಲಿ ಉಲ್ಲೇಖಗಳು ಸಿಗುತ್ತವೆ.

ವಚನಕಾರ

ದುಗ್ಗಲೆಯೆಂಬ ಶರಣೆಯೊಂದಿಗೆ ಸಂಸಾರಿಯೂ ಆಗಿದ್ದ ಜೇಡರ ದಾಸಿಮಯ್ಯರನ್ನೇ ಮೊದಲ ವಚನಕಾರರೆಂದು ಗುರುತಿಸಲಾಗುತ್ತದೆ. ಸುರಪುರ ತಾಲೂಕಿನ ಮುದನೂರು ಗ್ರಾಮದವರಾದ ನೇಕಾರ ದಾಸಿಮಯ್ಯ ತನ್ನ ಸತಿ ದುಗ್ಗಲೆಯೊಂದಿಗೆ ಕಾಯಕವನ್ನೇ ಕೈಲಾಸವಾಗಿಸಿಕೊಂಡ ಸಾಧಕ.

ದಾಸಿಮಯ್ಯನವರು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮುದನೂರು ಬಿ ಗ್ರಾಮದಲ್ಲಿ ರಾಮಯ್ಯ-ಶಂಕರಿ ದಂಪತಿಯ ಪುತ್ರನಾಗಿ, ಚೈತ್ರ ಶುದ್ಧ ಪಂಚಮಿಯಂದು ನೇಕಾರ ಕುಟುಂಬದಲ್ಲಿ ಜನಿಸಿದರು.

ರಾಮನಾಥ ಎಂಬ ಅಂಕಿತದಲ್ಲಿ ಬರೆಯಲಾದ ಇವರ ೧೫೦ ವಚನಗಳು ದೊರೆತಿವೆಯೆನ್ನಲಾಗಿದೆ.