ಬೆಲಗೂರು ವೀರಪ್ರತಾಪ ಆಂಜನೇಯ ರಥೋತ್ಸವ

ಅರಸಿಕೆರೆ ಮತ್ತು ಹೊಸದುರ್ಗಾ ನಡುವೆ ಕೇಂದ್ರೀಕೃತವಾಗಿರುವ ಬೆಲಗೂರು ಒಂದು ಸಣ್ಣ ಗ್ರಾಮ. ಈ ಗ್ರಾಮದಲ್ಲಿ ಲಕ್ಷ್ಮೀ ನಾರಾಯಣ ಸ್ವಾಮಿ ಹಾಗೂ ವೀರ ಪ್ರತಾಪ ಆಂಜನೇಯ ಸ್ವಾಮಿ ದೇವಸ್ಥಾನವಿದೆ. ಇಲ್ಲಿನ ದೇವಾಲಯವನ್ನು ಅಚ್ಯುತರಾಯನ ಕಾಲದಲ್ಲಿ ಆದ ಮಣ್ಣಿನ ದೇವಸ್ಥಾನವನ್ನು ಕೆಡವಿ ಭಕ್ತರೆಲ್ಲಾ ಸೇರಿ ಈ ದೇವಾಲಯವನ್ನು ನಿರ್ಮಿಸಿದ್ದಾರೆ. ಇಲ್ಲಿನ ಅವಧೂತ ಸದ್ಗುರು ಬಿಂದು ಮಾಧವ ಸ್ವಾಮೀಜಿಯ ಮಾರ್ಗದರ್ಶನದಲ್ಲಿ ಎಲ್ಲಾ ವಿಧಿ ವಿಧಾನಗಳು ವಿಜೃಂಭಣೆಯಿಂದ ನಡೆಯುತ್ತವೆ.

​​ಬೆಳಗುತ್ತಿರುವ ಊರು

ಈ ಸ್ಥಳದ ಮುಖ್ಯ ದೇವತೆ "ವೀರ ಪ್ರತಾಪ ಅಂಜನೇಯ". ಇದನ್ನು ಸುಮಾರು 750 ವರ್ಷಗಳ ಹಿಂದೆ ಋಷಿ ವ್ಯಾಸರಾಯರು ಸ್ಥಾಪಿಸಿದರು. ಈ ಪಟ್ಟಣದ ಹನುಮಾನ್ ದೇವಾಲಯದ ಪೂರ್ವಜರ ಪುರೋಹಿತರ ಕುಟುಂಬದ ಸದಸ್ಯರಾದ ಶ್ರೀ ಬಿಂದು ಮಾಧವ್ ಶರ್ಮಾ 30 ವರ್ಷಗಳ ಹಿಂದೆಯೇ ಆತ್ಮಸಾಕ್ಷಾತ್ಕಾರದ ಔನ್ನತ್ಯಕ್ಕೇರಿದರು. ಅಂದಿನಿಂದ, ತನ್ನ ಸ್ವಯಂ ಪರಿವರ್ತನೆಯ ಮೂಲಕ ಈ ಪಟ್ಟಣವನ್ನು ಬೆಲಗೂರು ಅಂದರೆ ಬೆಳಗುತ್ತಿರುವ ಊರಾಗಿ ಪರಿವರ್ತಿಸಿದರು.

ಭಾರತ ಮಾತ ರಥ ಸಮರ್ಪಣೆ

ಈ ದೇವಾಲಯದ ವಿಶೇಷತೆ ಏನೆಂದರೆ ಭಾರತ ಮಾತ ರಥ. ಇಲ್ಲಿನ ರಥದಲ್ಲಿ 210 ಸಾಧಕರ ಉಬ್ಬು ಚಿತ್ರಗಳ ಮೂಲಕ ಕೆತ್ತಲಾಗಿದೆ. ಇದರಲ್ಲಿ ದೇಶಕ್ಕಾಗಿ ಹೋರಾಡಿದ ಹೋರಾಟಗಾರರು, ಸಿನಿಮಾ ಸಾಧಕರು, ಕವಿಗಳು, ವಿಜ್ಞಾನಿಗಳು, ಋಷಿ ಮುನಿಗಳ ಚಿತ್ರಗಳನ್ನು ಕೆತ್ತಲಾಗಿದೆ. ಈ ಮೂಲಕ ಭಾರತಾಂಬೆಗೆ ಗೌರವ ಸಲ್ಲಿಸಲು ಅವಧೂತರ ನಿರ್ಧಾರವಾಗಿತ್ತು ಎನ್ನುತ್ತಾರೆ.

​ಇಲ್ಲಿನ ಲಕ್ಷ್ಮೀ ನಾರಾಯಣ ದೇವಸ್ಥಾನವೂ ಬಹಳ ಪ್ರಾಚೀನವಾದದ್ದುಲಕ್ಷ್ಮೀ ನಾರಾಯಣ ದೇವಾಲಯ ಹಾಗೂ ವೀರ ಪ್ರತಾಪ ಆಂಜನೇಯ ದೇವಾಲಯದಲ್ಲಿ ಒಟ್ಟಾಗಿ ಈ ಶುಭ ದಿನದಂದು ಉತ್ಸವವನ್ನು ನಡೆಸಲಾಗುತ್ತದೆ.

ಭಕ್ತಾದಿಗಳಿಗೆ ಅನ್ನದಾಸೋಹ

ದೇವಾಲಯದಲ್ಲಿ ಪ್ರತಿನಿತ್ಯ ಪೂಜೆಯ ಜೊತೆಗೆ ಅನ್ನಸಂತರ್ಪಣೆಯೂ ನಡೆಯುತ್ತದೆ. ಹನುಮದ್ವ್ರತ 5 ದಿನಗಳ ಕಾಲ ನಡೆಯಲಿದ್ದು, ಈ ಸಂದರ್ಭದಲ್ಲಿ ಆಗಮಿಸುವ ಭಕ್ತಾದಿಗಳಿಗೆ ಉಚಿತ ಟೀ, ಕಾಫಿ, ತಿಂಡಿ ವ್ಯವಸ್ಥೆ ಮಾಡಲಾಗುತ್ತದೆ. ಹನುಮದ್ವ್ರತದ ಆಚರಣೆಗೆ ಹಿಮಾಲಯದಿಂದ ಸನ್ಯಾಸಿಗಳು ಆಗಮಿಸುತ್ತಾರೆ. ಈ ೫ ದಿನಗಳಲ್ಲಿ ಒಂದು ದಿನವನ್ನು ಈ ಸ್ವಾಮಿಗಳ ಸೇವೆಗಾಗಿ ಮೀಸಲಿಡಲಾಗುತ್ತದೆ.

ರಾಮ ಸೇತುವೆ ಕಲ್ಲು

ಈ ದೇವಾಲಯದ ಇನ್ನೊಂದು ವಿಶೇಷವೆಂದರೆ ರಾಮ ಸೇತುವೆ ಕಲ್ಲು. ಒಂದು ಅಗಲವಾದ ಪಾತ್ರೆಯಲ್ಲಿ ನೀರಿನಲ್ಲಿ ಒಂದು ಕಲ್ಲು ಇದೆ. ಈ ಕಲ್ಲು ನೀರಿನಲ್ಲಿ ಮುಳುಗುವುದಿಲ್ಲ, ಸದಾ ತೇಲುತ್ತಾ ಇರುತ್ತದೆ. ಈ ಕಲ್ಲನ್ನು ಮುಟ್ಟುವ ಭಾಗ್ಯವನ್ನೂ ಕೂಡಾ ಭಕ್ತರಿಗೆ ಒದಗಿಸಲಾಗುತ್ತದೆ.

ಪೌರ್ಣಮಿ ದಿನ ವಿಶೇಷ

ಪೌರ್ಣಮಿ ದಿನ ವಿಶೇಷವಾಗಿ ಹೋಮ, ಹವನ, ತೀರ್ಥ ಸ್ನಾನ ನಡೆಯುತ್ತದೆ. 5 ದಿನ ಅಖಂಡ ರಾಮ ಭಜನೆ ಅಂದರೆ ಅಹೋರಾತ್ರಿ ಭಜನೆ ನಡೆಯುತ್ತದೆ. ಬ್ರಹೋತ್ಸವ, ಸೀತಾ ಕಲ್ಯಾಣ ಹಾಗೂ ಲಕ್ಷ್ಮೀ ಕಲ್ಯಾಣೋತ್ಸವ ನಡೆಯುತ್ತದೆ. ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಈ ಕ್ಷೇತ್ರಕ್ಕೆ ಆಗಮಿಸುತ್ತಾರೆ.

​​ತಲುಪುವುದು ಹೇಗೆ?

ದೇವಾಲಯದಿಂದ 48.5 ಕಿ.ಮೀ ದೂರದಲ್ಲಿರುವ ಅರಸಿಕೆರೆ ರೈಲ್ವೆ ಜಂಕ್ಷನ್ ಕರ್ನಾಟಕದ ಎಲ್ಲಾ ಪ್ರಮುಖ ನಗರಗಳಿಗೆ ಸಂಪರ್ಕ ಹೊಂದಿದೆ ಮತ್ತು ಹೊಸದುರ್ಗ ರಸ್ತೆ ರೈಲ್ವೆ ನಿಲ್ದಾಣವು ದೇವಾಲಯದಿಂದ 42.1 ಕಿ.ಮೀ ದೂರದಲ್ಲಿದೆ.

ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇಲ್ಲಿಂದ 215 ಕಿ.ಮೀ ದೂರದಲ್ಲಿದೆ.