ಸುತ್ತೂರು ಶಿವರಾತ್ರಿ ರಾಜೇಂದ್ರ ಸ್ವಾಮಿಗಳ ಸಂಸ್ಮರಣಾ ದಿನ

ಚಕ್ರವರ್ತಿಯ ಆಶ್ರಯ ಮತ್ತು ಶ್ರೀಮಠ ಸ್ಥಾಪನೆ

ಕರ್ನಾಟಕದ ಸಾಂಸ್ಕೃತಿಕ ಹಾಗೂ ಧಾರ್ಮಿಕ ಇತಿಹಾಸದಲ್ಲಿ ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ ಪ್ರಾಚೀನತೆ ಒಂದು ಸಾವಿರ ವರ್ಷಗಳಷ್ಟು ಹಳೆಯದು. ಕ್ರಿ.ಶ. ಹತ್ತನೆಯ ಶತಮಾನದಲ್ಲಿ ಸಿದ್ಧಗಿರಿಯಲ್ಲಿ ಸುದೀರ್ಘ ತಪಗೈದಿದ್ದ ಶ್ರೀ ಶಿವರಾತ್ರೀಶ್ವರರು ಅಲ್ಲಿಂದ ದಕ್ಷಿಣಕ್ಕೆ ಬಂದು ಸುತ್ತೂರಿನಲ್ಲಿ ತಪೋನಿರತರಾದರು. ಆಗ ತಲಕಾಡು ಪ್ರಾಂತ್ಯವನ್ನಾಳುತ್ತಿದ್ದ ಗಂಗರ ಮೇಲೆ ಚೋಳ ಚಕ್ರವರ್ತಿ ರಾಜೇಂದ್ರ ಚೋಳನಿಗೆ ಪೂಜ್ಯರು ಆತನಿಗೆ ಯುದ್ಧದ ನಿರರ್ಥಕತೆಯನ್ನು ಹಾಗೂ ಅದರಿಂದುಂಟಾಗುವ ವಿಪತ್ತುಗಳನ್ನು ವಿವರಿಸಿದರು. ಇದರಿಂದ ಮನಃಪರಿವರ್ತಿತನಾದ ಚರ್ಕವರ್ತಿಯು ಯುದ್ಧವನ್ನು ಕೈಬಿಟ್ಟು ಗಂಗರೊಡನೆ ಸಂಧಾನ ಮಾಡಿಕೊಂಡನು. ಶ್ರೀ ಶಿವರಾತ್ರೀಶ್ವರರ ಮೇಲಿನ ಭಕ್ತಿ ಹಾಗೂ ಶ್ರದ್ಧೆಯಿಂದ ಇಲ್ಲೇ ನೆಲೆಸಬೇಕೆಂದು ಪ್ರಾರ್ಥಿಸಿದನು. ಅದರಂತೆ ಪೂಜ್ಯರು ಶ್ರೀಮಠವನ್ನು ಸಂಸ್ಥಾಪಿಸಿ, ಕನ್ನಡ ನಾಡಿನ ಆಧ್ಯಾತ್ಮಿಕ, ಧಾರ್ಮಿಕ, ಸಾಂಸ್ಕೃತಿಕ ಚರಿತ್ರೆಗೆ ಭದ್ರ ಬುನಾದಿಯನ್ನು ಹಾಕಿದರು.

22ನೆಯ ಜಗದ್ಗುರು ಶ್ರೀ ಶಿವರಾತ್ರೀಶ್ವರರ ಕಾಲಕ್ಕೆ ಶ್ರೀಮಠದ ಕಾರ್ಯವ್ಯಾಪ್ತಿ ಹೆಚ್ಚುಹೆಚ್ಚಾಗಿ ಸಮಾಜಮುಖಿಯಾಗತೊಡಗಿತು.

ವಿದ್ಯಾಭ್ಯಾಸ

29.8.1916ರಂದು ಜನಿಸಿದ ಪೂಜ್ಯರು ಸುತ್ತೂರಿನಲ್ಲಿಯೇ ಬಾಲ್ಯ ವಿದ್ಯಾಭ್ಯಾಸವನ್ನು ಪೂರೈಸಿದರು. ಪೂರ್ವಾಶ್ರಮದ ನಾಮಧೇಯ ಶ್ರೀ ಪುಟ್ಟಸ್ವಾಮಿಗೆ ಶ್ರೀ ಶಿವರಾತ್ರಿಶ್ವರರು ತಮ್ಮ ಕರಕಮಲ ಸಂಜಾತರನ್ನಾಗಿಸಿಕೊಂಡು ಶ್ರೀ ಶಿವರಾತ್ರಿ ರಾಜೇಂದ್ರಸ್ವಾಮಿ ಎಂದು ಅಧಿಕೃತ ನಾಮಕರಣ ಮಾಡಿದರು. ಪೂಜ್ಯರಿಗೆ 8 ವರ್ಷ ವಯಸ್ಸಾದಾಗಲೇ ಮೈಸೂರಿನಲ್ಲಿ ಶ್ರೇಷ್ಠ ಸಂಸ್ಕೃತ ಪಂಡಿತರಾದ ಬಸವರಾಜ ಶಾಸ್ತ್ರಿಗಳಿಂದ ಸಂಸ್ಕೃತಾಭ್ಯಾಸವಾಯಿತು. ಆ ಅವಧಿಯಲ್ಲಿ ಅರಮನೆ ಪಂಚಗವಿ ಮಠದ ಶ್ರೀ ಗೌರೀಶಂಕರಸ್ವಾಮಿಗಳವರ ಸಾನ್ನಿಧ್ಯದಲ್ಲಿ ವ್ಯಾಸಂಗ ಮಾಡಬೇಕೆಂಬ ಹಂಬಲದಿಂದ ಕಾಶಿಗೆ ಹೋಗಿ ಶ್ರೀ ಗೌರೀಶಂಕರಸ್ವಾಮಿಗಳವರ ಭೇಟಿ ಮಾಡಿದರು. ಅವರು ‘ನೀವೊಬ್ಬರೇ ವಿದ್ಯಾವಂತರಾದರೆ ಸಾಲದು, ನೀವು ಹಿಂದಿರುಗಿ ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಆಸರೆಯಾಗಿ’ಎಂದರು.

ಶ್ರೀಮಠದ ಹೊಣೆಗಾರಿಕೆ

24.2.1928ರಲ್ಲಿ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮಿಗಳವರಿಗೆ ಹನ್ನೆರಡು ವರ್ಷ ವಯಸ್ಸಾಗಿದ್ದಾಗಲೇ ಶ್ರೀಮಠದ ಅಧಿಕಾರವನ್ನು ವಹಿಸಿಕೊಡಲಾಯಿತು.

ಶ್ರೀಮಠದ ಹೊಣೆಗಾರಿಕೆಯನ್ನು ವಹಿಸಿಕೊಂಡ ಮೇಲೆ ಸಮಾಜ ಸೇವೆಯ ಕಾಯಕ, ಬಿಡುವಿಲ್ಲದ ಚಿಂತನೆಯಲ್ಲಿ ತೊಡಗಿದರು. ಬಡತನದ ಕಾರಣದಿಂದ ವಿದ್ಯಾಭ್ಯಾಸವನ್ನು ಮುಂದುವರೆಸಲು ಸಾಧ್ಯವಾಗದೆ ಇರುವ ವಿದ್ಯಾರ್ಥಿಗಳಿಗೆ ನೆರವಾಗಬೇಕೆಂಬ ಉದ್ದೇಶದಿಂದ ಉಚಿತ ಪ್ರಸಾದನಿಲಯವನ್ನು ಶ್ರೀಗಳು 1936ರಷ್ಟರಲ್ಲೇ ಪ್ರಾರಂಭಿಸಿದರು. ಹಿರಿಯ ಶ್ರೀಗಳವರ ಉತ್ತೇಜನದಿಂದ ಪ್ರಥಮತಃ ವಾಣೀವಿಲಾಸ ರಸ್ತೆಯಲ್ಲಿದ್ದ ಕಟ್ಟಡವೊಂದನ್ನು ಖರೀದಿಸಿ ಉಚಿತ ವಿದ್ಯಾರ್ಥಿನಿಲಯ ಪ್ರಾರಂಭಿಸಿದರು.

ಸಮಾಜ ಸೇವೆ

ಪೀಠದ ಸೇವಾಕಾರ್ಯಗಳನ್ನು ಸಮಾಜವಲಯಕ್ಕೆ ಸಮರ್ಥವಾಗಿ ವಿಸ್ತಿರಿಸಿದರು. ದೇಶಕ್ಕೆ ಸ್ವಾತಂತ್ರ್ಯ ಬರುವ ಮುನ್ನವೇ ಪೂಜ್ಯರು ಜನಸಮುದಾಯದ ಸಮಸ್ಯೆಗಳಿಗೆ ಅವಿದ್ಯೆಯೇ ಕಾರಣವೆಂದು ಮನಗಂಡು, ವಿದ್ಯಾಪ್ರಸಾರಕ್ಕಾಗಿ 1954ರಲ್ಲಿ ಜೆಎಸ್‍ಎಸ್ ಮಹಾವಿದ್ಯಾಪೀಠವನ್ನು ಸಂಸ್ಥಾಪಿಸಿದರು. ಅದರ ಆಶ್ರಯದಲ್ಲಿ ಅಕ್ಷರದಾಸೋಹಕ್ಕಾಗಿ ಶಾಲಾಕಾಲೇಜುಗಳನ್ನು ಅನ್ನದಾಸೋಹಕ್ಕಾಗಿ ವಸತಿನಿಲಯಗಳನ್ನು, ಆರೋಗ್ಯಸೇವೆಗಾಗಿ ಆಸ್ಪತ್ರೆಗಳನ್ನು ತೆರೆದು ಸಮಾಜದ ಅಭಿವೃದ್ಧಿಗೆ ಕಾರಣೀಭೂತರಾದರು. ದೀನದಲಿತರ ಕುರಿತು ಅಪಾರ ಅನುಕಂಪ ಹೊಂದಿದ್ದ ಪೂಜ್ಯರು, ಸಹಸ್ರಾರು ಅವಕಾಶವಂಚಿತರಿಗೆ ಆಶ್ರಯ ನೀಡಿದರು.

ಕರ್ನಾಟಕದಲ್ಲಷ್ಟೇ ಅಲ್ಲದೆ ತಮಿಳುನಾಡು, ದೆಹಲಿ, ಉತ್ತರಪ್ರದೇಶ ಮುಂತಾದೆಡೆಗಳಲ್ಲಿ ಹಾಗೂ ಸಾಗರದಾಚೆಗೆ ದುಬೈ, ಮಾರಿಷಸ್ ಹಾಗೂ ಅಮೆರಿಕ ದೇಶಗಳಲ್ಲಿ ಶ್ರೀಮಠವು ತನ್ನ ಸೇವಾಕ್ಷೇತ್ರವನ್ನು ವಿಸ್ತರಿಸಿ ಸೇವೆ ಸಲ್ಲಿಸುತ್ತಿದೆ.

ರಾಜಗುರುತಿಲಕ

ಶ್ರೀಗಳವರ ಸೇವೆಯನ್ನು ಕಂಡ ಅಂದಿನ ಮೈಸೂರು ಸಂಸ್ಥಾನದ ಶ್ರೀ ಜಯಚಾಮರಾಜೇಂದ್ರ ಒಡೆಯರ್‍ರವರು ಅವರಿಗೆ ರಾಜಗುರುತಿಲಕ ಎಂಬ ಬಿರುದನ್ನಿತ್ತು ಗೌರವಿಸಿದರು. ರಾಷ್ಟ್ರದ ಹೆಮ್ಮೆಯ ವಿದ್ಯಾಕೇಂದ್ರಗಳಲ್ಲೊಂದಾದ ಮೈಸೂರು ವಿಶ್ವವಿದ್ಯಾನಿಲಯವು ಪರಮಪೂಜ್ಯರು ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಮರಣೋತ್ತರವಾಗಿ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ.

ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಪುಣ್ಯ ಸಂಸ್ಮರಾಣಾ ದಿನವನ್ನು ಶ್ರದ್ಧಾ ಭಕ್ತಿಗಳಿಂದ ಇಂದು ಎಲ್ಲೆಡೆ ಆಚರಿಸಲಾಗುತ್ತದೆ.