ಚಂಪಾ / ಸುಬ್ರಮಣ್ಯ ಷಷ್ಠಿ

ಸಿದ್ಧತೆ ಮತ್ತು ಆಚರಣೆ

ಸುಬ್ರಹ್ಮಣ್ಯ ಷಷ್ಠಿ / ಸುಬ್ಬರಾಯ ಷಷ್ಠಿ / ಚಂಪಾ ಷಷ್ಠಿ ಹಬ್ಬವನ್ನು ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಷಷ್ಠಿ ದಿನ ಆಚರಿಸುತ್ತಾರೆ. ಈ ದಿನ ಸುಬ್ರಹ್ಮಣ್ಯ ಸ್ವಾಮಿಗೆ ಪೂಜೆ ನಡೆಯುತ್ತದೆ. ಬೆಳಿಗ್ಗೆ ಮಂಗಳ ಸ್ನಾನ ಮಾಡಬೇಕು. ಮಡಿ ಬಟ್ಟೆಗಳನ್ನು ತೊಟ್ಟು ಪೂಜೆ ಮಾಡಬೇಕು. ದೇವರ ಮನೆಯಲ್ಲಿ ಬೆಳ್ಳಿ ನಾಗಪ್ಪನ ವಿಗ್ರಹ, ಸುಬ್ರಮಣ್ಯ ಸ್ವಾಮಿಯ ಪಟ ಇಟ್ಟು ಪೂಜೆ ಬೇಕು. ಮೊದಲು ಗಣಪತಿಗೆ ಪೂಜೆ ಮಾಡಬೇಕು. ನಂತರ ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ಷೋಡಶೋಪಚಾರದಿಂದ ಪೂಜೆಮಾಡಬೇಕು.

ನೈವೇದ್ಯಕ್ಕೆ ಯಾವುದಾದರು ಸಿಹಿ ತಿಂಡಿ ಮಾಡಿಕೊಳ್ಳಿ. ಪೂಜೆಯ ನಂತರ ಉಪನಯನ ಆಗಿರುವ ವಟುವನ್ನು ಮನೆಗೆ ಕರೆದು ಭಕ್ಷ್ಯ ಭೋಜನ ಹಾಕಿ. ಈ ಬ್ರಹ್ಮಚಾರಿ ಬಾಲಕ ಶ್ರೀ ಸುಬ್ರಮಣ್ಯ ಸ್ವಾಮಿಯ ಸ್ವರೂಪ ಎಂದು ಭಾವಿಸಿ ಅವನಿಗೆ ಉಪಚಾರ ಮಾಡಿ. ಊಟದ ನಂತರ ಅವನಿಗೆ ಯಥೇಚ್ಚವಾಗಿ ಉಡುಗೊರೆ, ದಕ್ಷಿಣೆ, ದಾನ ಕೊಟ್ಟು ಸಂತೃಪ್ತಿ ಪಡಿಸಬೇಕು. ನಂತರ ಮನೆಯವರೆಲ್ಲ ಊಟ ಮಾಡಬೇಕು.

ಈ ದಿನ ಸುಬ್ರಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ದೇವಸ್ಥಾನದಲ್ಲಿರುವ ನಾಗರ ಕಲ್ಲುಗಳಿಗೆ ಪೂಜೆ ಮಾಡುತ್ತಾರೆ. ಮನೆಯ ಹತ್ತಿರ ಹುತ್ತ ಇದ್ದರೆ, ಅದಕ್ಕೆ ಅರಿಶಿನ ಕುಂಕುಮ ಹಾಕಿ, ಹಾಲು ಎರೆಯುತ್ತಾರೆ. ಒಟ್ಟಿನಲ್ಲಿ ನಾಗಪ್ಪನನ್ನು ಸಂತೃಪ್ತಿ ಪಡಿಸಬೇಕೆಂಬ ನಂಬಿಕೆ.

ಪೂಜೆಯ ವಿಧಾನ

ಮೊದಲು ಸಂಕಲ್ಪ ಮಾಡಿ, ನಂತರ ಧ್ಯಾನ ಮಾಡಿ ದೇವರನ್ನು ಆಹ್ವಾನ ಮಾಡುವುದು.

ಸಂಕಲ್ಪ - ಈ ದಿನ ಈ ಪೂಜೆ ಮಾಡುತ್ತ ಇದ್ದೀನಿ ಅಂತ ನಿರ್ಧಾರ ಮಾಡುವುದೇ ಸಂಕಲ್ಪ. ಸಂಕಲ್ಪ ಮಾಡುವಾಗ ಆ ದಿನದ ಸಂವತ್ಸರ, ಋತು , ಮಾಸ, ಪಕ್ಷ, ವಾರ, ತಿಥಿ, ನಕ್ಷತ್ರವನ್ನು ಹೆಸರಿಸಬೇಕು.

ಧ್ಯಾನ - ನೀವು ಪೂಜೆ ಮಾಡುತ್ತಿರುವ ದೇವರನ್ನು ಭಕ್ತಿಯಿಂದ ಧ್ಯಾನ ಮಾಡಿ ಆವಾಹನೆ ಮಾಡುವುದು.

ಸಾಮಾನ್ಯವಾಗಿ ಷೋಡಶೋಪಚಾರದಿಂದ ಹದಿನಾರು ಬಗೆಯಿಂದ ದೇವರಿಗೆ ಉಪಚಾರ ಮಾಡುವುದು. ಇವುಗಳ ವಿವರ ಕೆಳಗಿದೆ:

1. ಆವಾಹನೆ - ದೇವರನ್ನು ನಿಮ್ಮ ಮನೆಗೆ ಅಥವಾ ಪೂಜೆ ಮಾಡುತ್ತಿರುವ ಜಾಗಕ್ಕೆ ಆಹ್ವಾನ ಮಾಡುವುದು.

2. ಆಸನ - ಅಂದರೆ ದೇವರ ಪ್ರತಿಮೆಯನ್ನು ಇಡುವ ವೇದಿಕೆ/ ಮಣೆ ಮೇಲೆ ಆಸೀನ ಮಾಡಿಸುವುದು.

3. ಪಾದ್ಯ - ಕಾಲು ತೊಳೆದುಕೊಳ್ಳುವುದಕ್ಕೆ ನೀರು ಕೊಡುವುದು.

4. ಅರ್ಘ್ಯ - ಕೈ ತೊಳೆದುಕೊಳ್ಳುವುದಕ್ಕೆ ನೀರು ಕೊಡುವುದು.

5. ಆಚಮನ - ಕುಡಿಯುವುದಕ್ಕೆ ನೀರು ಕೊಡುವುದು.

6. ಸ್ನಾನ - ಶುದ್ಧೋದಕ (ನೀರು) ಮತ್ತು ಪಂಚಾಮೃತದಿಂದ ಸ್ನಾನ ಮಾಡಿಸುವುದು.

7. ವಸ್ತ್ರ – ಗೆಜ್ಜೆವಸ್ತ್ರ (ಧರಿಸಲು ಉಡುಪು) ದೇವರಿಗೆ ಇಡುವುದು. ಜೊತೆಗೆ ಉಪವೀತ (ಜನಿವಾರ), ಆಭರಣವನ್ನು ಸಮರ್ಪಿಸುವುದು.

8. ಅರಿಶಿನ, ಕುಂಕುಮ, ಶ್ರೀಗಂಧ, ಮಂತ್ರಾಕ್ಷತೆಯನ್ನು ದೇವರಿಗೆ ಅರ್ಪಿಸುವುದು.

9. ಪುಷ್ಪ ಮಾಲೆ, ಹೂವು, ಪತ್ರೆಗಳಿಂದ ದೇವರಿಗೆ ಅಲಂಕಾರ ಮಾಡುವುದು.

10. ಅರ್ಚನೆ/ಅಷ್ಟೋತ್ತರ - ನೂರೆಂಟು ನಾಮಗಳಿಂದ ದೇವರನ್ನು ಸ್ಮರಣೆ ಮಾಡುವುದು.

11. ಪರಿಮಳಯುಕ್ತವಾದ ಧೂಪವನ್ನು ಅರ್ಪಿಸುವುದು.

12. ದೀಪ ಸಮರ್ಪಣೆ ಮಾಡುವುದು.

13. ನೈವೇದ್ಯ, ತಾಂಬೂಲ - ದೇವರಿಗೆ ವಿಧ ವಿಧ ಭಕ್ಷ್ಯಗಳ ಭೋಜನ ಅರ್ಪಿಸುವುದು. ಊಟದ ನಂತರ ವೀಳೆಯ, ಅಡಿಕೆ, ತೆಂಗಿನಕಾಯಿ ತಾಂಬೂಲ ಕೊಡುವುದು.

14. ಕರ್ಪೂರದಿಂದ ಮಂಗಳಾರತಿ ಮಾಡುವುದು.

15. ಪ್ರದಕ್ಷಿಣೆ ಮಾಡಿ ದೇವರಿಗೆ ಸಾಷ್ಟಾಂಗ ನಮಸ್ಕಾರ ಮಾಡುವುದು.

16. ದೇವರಲ್ಲಿ ಅರಿಕೆ / ಪ್ರಾರ್ಥನೆ ಮಾಡುವುದು. ಪೂಜೆಯ ನಂತರದೇವರು ಅನುಗ್ರಹಿಸಿರುವ ಅರಿಶಿನ, ಕುಂಕುಮ, ನೈವೇದ್ಯವನ್ನು ಪ್ರಸಾದ ರೂಪವಾಗಿ ಸ್ವೀಕಾರ ಮಾಡುವುದು.

ಈ ವಿಧಾನಗಳು ಸಂಪ್ರದಾಯ ಹಾಗೂ ಪ್ರದೇಶಗಳಿಗೆ ತಕ್ಕಂತೆ ಬದಲಾಗಿದೆ.