ಪ್ರಖ್ಯಾತ ಸುಬ್ರಹ್ಮಣ್ಯ ದೇವಾಲಯ
ಬೆಂಗಳೂರು ಮಹಾನಗರದ ಅತ್ಯಂತ ಹಳೆಯ ಬಡಾವಣೆಗಳಲ್ಲಿ
ಒಂದಾದ ವಿಶ್ವೇಶ್ವರ ಪುರ ದೇವಾಲಯಗಳ ಬೀಡೂ ಹೌದು. ಇಲ್ಲಿರುವ ಶ್ರೀವಲ್ಲೀ ದೇವಸೇನಾ ಸಹಿತ ಶ್ರೀ ಸುಬ್ರಹ್ಮಣ್ಯ
ದೇವಾಲಯ ಅತ್ಯಂತ ಪ್ರಖ್ಯಾತವಾದ್ದು.
ಮಹಾರಾಷ್ಟ್ರದಿಂದ ವಲಸೆ ಬಂದ ನೂಲು ವ್ಯಾಪಾರಿ
ಹಾಗೂ ಮಹಾನ್ ದಾನಿ ಸಜ್ಜನರಾವ್ ಅವರು 22.6.1934ರಲ್ಲಿ ಈ ದೇವಾಲಯವನ್ನು ದ್ರಾವಿಡ ಶೈಲಿಯಲ್ಲಿ ನಿರ್ವಿುಸಿದರು
ಎಂದು ದೇವಾಲಯದ ಪ್ರಾಕಾರದಲ್ಲಿರುವ ಶಿಲಾಶಾಸನ ಸಾರುತ್ತದೆ.
ಶಿಲಾಮಯವಾದ ದೇವಾಲಯ ವಿಜಯನಗರ ಶೈಲಿಯಲ್ಲಿದ್ದು
ಮಹಾದ್ವಾರಬಂಧ, ರಾಜಗೋಪುರ, ಪ್ರದಕ್ಷಿಣ ಪ್ರಾಕಾರ, ಅಂತರಾಳ, ಸುಖನಾಸಿ ಹಾಗೂ ಮೂರು ಗರ್ಭಗುಡಿಗಳನ್ನು
ಒಳಗೊಂಡಿದೆ. ಈ ದೇವಾಲಯ ತ್ರಿಕೂಟಾಚಲ ಎಂದೂ ಕರೆಸಿಕೊಂಡಿದೆ. ದ್ವಾರದ ಮೂಲಕ ಒಳ ಪ್ರವೇಶಿಸುತ್ತಿದ್ದಂತೆ
ಧ್ವಜಸ್ತಂಭ, ಬಲಿಪೀಠ, ದೇವಾಲಯದ ಒಳ ಪ್ರಾಕಾರ ಮತ್ತು ಮುಖ ಮಂಟಪ ಕಾಣುತ್ತದೆ.
ಇಲ್ಲಿರುವ ಮೂರು ಗರ್ಭಗೃಹಗಳ ಪೈಕಿ ಎಡ ಭಾಗದ
ಮೊದಲ ಗರ್ಭಗೃಹದಲ್ಲಿ ಚಿಂತಾಮಣಿ ಗಣಪತಿಯ ಮೂರ್ತಿ ಪ್ರತಿಷ್ಠಾಪಿಸಿದ್ದರೆ, ಮಧ್ಯದ ಪ್ರಧಾನ ಗರ್ಭಗೃಹದಲ್ಲಿ ವಲ್ಲೀ ದೇವಸೇನಾ ಸಮೇತ ಸುಬ್ರಹ್ಮಣ್ಯನ ಮೂರ್ತಿಯನ್ನೂ,
ಮತ್ತೊಂದರಲ್ಲಿ ರಾಧಾ ರುಕ್ಮಿಣಿ ಸಮೇತ ಕೃಷ್ಣನ ವಿಗ್ರಹವನ್ನೂ ಪ್ರತಿಷ್ಠಾಪಿಸಲಾಗಿದೆ.
ಇನ್ನು ದೇವಾಲಯದ ಪ್ರದಕ್ಷಿಣಾ ಪ್ರಾಕಾರದಲ್ಲಿ ಕಾಲಭೈರವ, ದಕ್ಷಿಣಾಮೂರ್ತಿ, ಚಂಡಿಕೇಶ್ವರ, ತಾಂಡವೇಶ್ವರ, ಆಂಜನೇಯ,
ನಟರಾಜ ಹಾಗೂ ನವಗ್ರಹ ಮಂಟಪಗಳಿವೆ. ದೇವಾಲಯದ ನಿರ್ಮಾತೃ ಸಜ್ಜನರಾವ್ ಪ್ರತಿಮೆಯೂ ಇದೆ.
ಅದ್ವೈತ ಪದ್ಧತಿಯ ಆಚರಣೆ
2012ರ ಫೆಬ್ರವರಿ 29ರಂದು ಶೃಂಗೇರಿ ಶ್ರೀ
ಶಾರದಾಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಶ್ರೀ. ಶ್ರೀ.ಶ್ರೀ. ಭಾರತೀತೀರ್ಥ ಮಹಾ ಸ್ವಾಮಿಗಳ ಅಮೃತ
ಹಸ್ತದಿಂದ ರಾಜಗೋಪುರದ ಕುಂಭಾಭಿಷೇಕ ಮಹೋತ್ಸವ ನಡೆದಿತ್ತು ಎಂದು ಸಾರುವ ಫಲಕವೂ ಇಲ್ಲಿದೆ.
ದೇವಾಲಯದಲ್ಲಿ ನಿತ್ಯ ಅದ್ವೈತ ಪದ್ಧತಿಯ ರೀತ್ಯ
ಅರ್ಚನೆ, ಸಹಸ್ರನಾಮ, ಕ್ಷೀರಾಭಿಷೇಕ, ವಿಭೂತಿ ಅಭಿಷೇಕ, ಕಲ್ಯಾಣೋತ್ಸವವೇ ಮೊದಲಾದ ಪೂಜಾ ಕೈಂಕರ್ಯಗಳು
ನೆರವೇರುತ್ತವೆ. ಪ್ರತಿ ಮಂಗಳವಾರ ಮತ್ತು ಷಷ್ಠಿಯಂದು ದೇವಾಲಯಕ್ಕೆ ನೂರಾರು ಭಕ್ತರು ಆಗಮಿಸುತ್ತಾರೆ.
ಬೆಳ್ಳಿಯ ತೇರಿನ ರಥೋತ್ಸವ
ಆಷಾಢಮಾಸದಲ್ಲಿ ಆಡಿಕೃತ್ತಿಕೆಯ ಕಾವಡಿ ಉತ್ಸವ
ಇಲ್ಲಿ ನಡೆಯುತ್ತದೆ. ಮಾರ್ಗಶಿರ ಶುದ್ಧ ಬಿದಿಗೆಯಿಂದ ದಶಮಿವರೆಗೆ ಮಹಾರಥೋತ್ಸವ ಪೂಜೆಗಳು ನಡೆದು
ವಾರ್ಷಿಕ ಮಹಾ ರಥೋತ್ಸವ ಜರುಗುತ್ತದೆ. 23 ಅಡಿ ಎತ್ತರದ ಬೆಳ್ಳಿಯ ತೇರಿನಲ್ಲಿ ಸುಬ್ರಹ್ಮಣ್ಯ ದೇವರ
ಮೆರವಣಿಗೆ ನೋಡುವುದೇ ಒಂದು ಸೊಗಸು. ರಥೋತ್ಸವದ ದಿನ ಇಲ್ಲಿ ಸಾವಿರಾರು ಭಕ್ತರು ಸೇರುತ್ತಾರೆ. ರಥೋತ್ಸವಕ್ಕೆ
ಸಾಕ್ಷಿಯಾಗುತ್ತಾರೆ.
ಕ್ಷೀರಾಭಿಷೇಕಪ್ರಿಯ
ಇಲ್ಲಿನ ಸುಬ್ರಹ್ಮಣ್ಯೇಶ್ವರ ಕ್ಷೀರಾಭಿಷೇಕಪ್ರಿಯನಂತೆ. ಹೀಗಾಗಿ ಇಲ್ಲಿ ಗೆ ಬರುವ ಭಕ್ತರು ವಿವಿಧ ಬೇಡಿಕೆಯೊಂದಿಗೆ ಬಂದು ಕ್ಷೀರಾಭಿಷೇಕ ಮಾಡಿಸುತ್ತಾರೆ. ಹರಕೆ ಹೊರುತ್ತಾರೆ. ಹರಕೆ ನೆರವೇರಿದ ಬಳಿಕ ಬಂದು ಪೂಜೆ ಮಾಡಿಸುತ್ತಾರೆ.