ಮಾರ್ಗಶಿರ ಮಾಸದ ಲಕ್ಷ್ಮೀ ವ್ರತದ ನಿಯಮಗಳು ಮತ್ತು ಆಚರಣೆ
ಈ ವ್ರತವನ್ನು ಮಾರ್ಗಶಿರ ಮಾಸದ ಮೊದಲನೇ ಗುರುವಾರ
ಸಂಕಲ್ಪ ಮಾಡಿ ಅದೇ ಮಾರ್ಗಶಿರ ಮಾಸದ ಕೊನೆಯ ಗುರುವಾರ ಪೂಜೆ ಮಾಡಿ ಮುಕ್ತಾಯ ಮಾಡಬೇಕು. ವ್ರತ ಮಾಡುವವರು
ಉಪವಾಸವಿದ್ದು ರಾತ್ರಿ ಮನೆಯವರೊಂದಿಗೆ ಊಟ ಮಾಡಬೇಕು. ಈ ವ್ರತ ಉದ್ಯಾಪನ ಮಾಡಿದ ಮೇಲೂ ಒಂದು ವರ್ಷ
ಪ್ರತಿ ಗುರುವಾರ ರಾತ್ರಿ ಲಕ್ಷ್ಮೀ ಸ್ತೋತ್ರ ಓದಬೇಕು.
ವ್ರತ ಹಿಡಿದ ಮಹಿಳೆ ಅಶಕ್ತಳಾದರೆ ಬೇರೆ ಹೆಣ್ಣುಮಕ್ಕಳು
ಈ ಪೂಜೆಯನ್ನು ಮಾಡಬಹುದು. ಆದರೆ ವ್ರತ ಹಿಡಿದವರೆ ಉಪವಾಸ ಮಾಡಬೇಕು. ಮಾರ್ಗಶಿರ ಮಾಸದ ಕೊನೆಯ ಗುರುವಾರ
ರಾತ್ರಿ 7 ಜನ ಮುತೈದೆಯರಿಗೆ ಅಥವಾ ಬಾಲಕಿಯರಿಗೆ ಅರಿಷಿಣ ಕುಂಕುಮ ಕೊಟ್ಟು ಊಟ ನೀಡಿ ಎಲೆ ಅಡಿಕೆ ದಕ್ಷಿಣೆ
ಕೊಟ್ಟು ನಮಸ್ಕರಿಸಬೇಕು.
ಮನಃಶುದ್ಧಿಯಿಂದ ಶಾಂತವಾಗಿ ಪೂಜಾಚರಣೆ ಮಾಡಬೇಕು.
ಹೀಗೆ ಲಕ್ಷ್ಮೀ ಸ್ಥಾಪನೆ ಮಾಡಿ ಗುರುವಾರ ದಿವಸ ಮುತ್ತೈದೆ ನಸುಕಿನಲ್ಲಿ ಎದ್ದು ತಲೆಸ್ನಾನ ಮಾಡಿ ಮಡಿ
ಬಟ್ಟೆ ಉಟ್ಟು ಹೂ ಮುಡಿದು ಅರಿಷಿಣ ಕುಂಕುಮ ಹಚ್ಚಿಕೊಂಡು ಲಕ್ಷ್ಮೀ ಪ್ರತಿಷ್ಠಾಪಿಸುವ ಜಾಗವನ್ನು ಗೋಮಯದಿಂದ
ಸಾರಿಸಿ ರಂಗೋಲಿ ಹಾಕಿ ದೇವಿ ಕುರಿಸಲು ಮಣೆ ಅಥವಾ ಮಂಟಪ ಮಾಡಿ ಮಣೆಯ ಮೇಲೆ ಅಕ್ಕಿ ಹಾಕಿ ಅದರಲ್ಲಿ
ಓಂ ಬರೆಯಬೇಕು. ಬೆಳ್ಳಿ ಅಥವಾ ತಾಮ್ರದ ತಂಬಿಗೆಗೆ ಮಡಿಯಿಂದ ನೀರು ತುಂಬಿ ಅದರೊಳಗೆ ಗರಿಕೆ, ಪತ್ರೆ,
ದಕ್ಷಿಣೆ, ಅಡಿಕೆ ಹಾಕಿ ತಂಬಿಗೆಗೆ 5 ವೀಳ್ಯದೆಲೆ ಸಿಕ್ಕಿಸಿ ಅದರ ಮೇಲೆ ಜುಟ್ಟು ಮೇಲೆ ಮಾಡಿ ತೆಂಗಿನ
ಕಾಯಿ ಇಡಬೇಕು. ಇದು ಕಳಶ. ಕಳಶದ ಹಿಂದೆ ಲಕ್ಷ್ಮೀ ಫೋಟೋ ಇಡಬೇಕು. ಕಳಶಕ್ಕೆ ಹೂವಿನ ಮಾಲೆ ಗೆಜ್ಜೆವಸ್ತ್ರ
ಹಾಕಿ ಎರಡು ಕಡೆ ದೀಪ ಹಚ್ಚಬೇಕು. ಕಳಶದ ಮುಂದೆ ನೈವ್ಯೆದ್ಯ, ಹಣ್ಣುಕಾಯಿ, ಎಲೆ, ಅಡಿಕೆ ಹಾಗೂ ದಕ್ಷಿಣೆಯನ್ನು
ಹರಿವಾಣ ಅಥವಾ ತಟ್ಟೆಯಲ್ಲಿ ಇಡಬೇಕು.
ಕಳಶದ ಮುಂದೆ ಎಡಗಡೆ ಮಣೆ ಹಾಕಬೇಕು. ಎದುರುಗಡೆ ಮಣೆ ಮೇಲೆ ವ್ರತ ಮಾಡುವ ಮುತ್ತೈದೆ ಕೂರಬೇಕು. ಬಲಗಡೆ ಮಣೆ ಮೇಲೆ ಪತಿ ಕುಳಿತು ಲಕ್ಷ್ಮೀ ಪುಸ್ತಕದ ಮಂತ್ರಗಳನ್ನು ಹೇಳಬೇಕು. ಹೇ ಜಗಜ್ಜನನಿ ಕರುಣಾಮಯಿ ಅಲ್ಪಳಾದ ನನ್ನ ಎಲ್ಲ ಮನದ ಕಾಮನೆಗಳನ್ನು ಈಡೇರಿಸಿ ಕೊಡು ತಾಯಿ ಎಂದು ಮನಸ್ಸಿನಲ್ಲಿ ಬೇಡಿಕೊಂಡು ನಮಸ್ಕಾರ ಮಾಡಿ ಮಣೆಯ ಮೇಲೆ ಕೂರಬೇಕು. ನಂತರ ಪೂಜೆ ಮಾಡಬೇಕು. ಜೊತೆಗೆ ಮಹಾಗಣಪತಿ ಸ್ಮರಣೆ ಮಾಡಬೇಕು. ನಂತರ ಧೂಪ ಬೆಳಗಿ, ಅಕ್ಷತೆ ಕಾಳು ಹಾಕಿ, ನಿಂತಲ್ಲೇ ಪ್ರದಕ್ಷಿಣೆ ಹಾಕಿ, ಹಣೆ ನೆಲಕ್ಕೆ ಮುಟ್ಟುವಂತೆ ನಮಸ್ಕಾರ ಮಾಡಬೇಕು. ನಂತರ ಲಕ್ಷ್ಮೀ ಪೂಜೆ ಮಹಿಮೆ ಕಥೆ ಓದಬೇಕು.