ಶೃಂಗೇರಿ ಶಾರದಾಂಬಾ ರಥ

 

ಶೃಂಗೇರಿ ಶ್ರೀ ಶಾರದಾಪೀಠ

ಶೃಂಗೇರಿ ಶಾರದಾಪೀಠವು ೮ ನೇ ಶತಮಾನದಲ್ಲಿ ಅದ್ವೈತ ವೇದಾಂತದ ಪ್ರತಿಪಾದಕರಾದ ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಪ್ರಮುಖ ಮಠಗಳಲ್ಲಿ ಮೊದಲನೆಯದು. ಆದಿ ಶಂಕರರು ಸ್ಥಾಪಿಸಿದ ೪ ಪೀಠಗಳಗಳ್ಲಿ ಇದನ್ನು ದಕ್ಷಿಣಾಮ್ನಾಯ ಪೀಠವೆನ್ನುತಾರೆ. ಶೃಂಗೇರಿಯ ಮಠವು ಯಜುರ್ವೇದದ ಉಸ್ತುವಾರಿ ಹೊಂದಿದೆ. ನವರಾತ್ರಿಯ ಸಂದರ್ಭದಲ್ಲಿ ಶಾರದಾ ದೇವಿಗೆ ಚಂಡಿಕಾ ಹವನ, ರಥೋತ್ಸವ, ಕುಂಕುಮಾರ್ಚನೆ, ಚಿನ್ನರಥ ಸೇವೆ ಮುಂತಾದ ಸೇವೆಗಳು ನಡೆಯುತ್ತವೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಹಲವಾರು ಪ್ರಸಿದ್ಧ ದೇವಾಲಯಗಳ ಸಾಲಿನಲ್ಲಿ ‘ವಿದ್ಯಾಧಿದೇವತೆ’ ತುಂಗಾ ತೀರ ನಿವಾಸಿನಿ ಶೃಂಗೇರಿ ಶ್ರೀ ಶಾರದಾಂಬೆಯ ಸನ್ನಿಧಿಯು ಬಹು ವಿಶೇಷತೆಗಳನ್ನೊಳಗೊಂಡ ಕ್ಷೇತ್ರವಾಗಿದೆ. ಶ್ರೀ ಆದಿಶಂಕರರಿಂದ ‘ಶ್ರೀಚಕ್ರ’ದ ಮೇಲೆ ಪ್ರತಿಷ್ಠಾಪನೆಗೊಂಡ ಜ್ಞಾನದೇವತೆ ‘ಶ್ರೀ ವಾಣಿ’ ನೆಲೆಸಿದ ಪುಣ್ಯ ತಾಣವೇ ಶೃಂಗೇರಿ. ಇಲ್ಲಿ ಶ್ರೀ ವಿದ್ಯಾಶಂಕರ ದೇವಾಲಯವಿದ್ದು ಇದು ನಮ್ಮ ಹೆಮ್ಮೆಯ ಭಾರತೀಯ ವಾಸ್ತುಶೈಲಿ ಮತ್ತು ಕಲೆಗೆ ಕನ್ನಡಿ ಹಿಡಿದಂತಿದೆ. ಶಿವಶಕ್ತಿಯ ಜೊತೆಯಲ್ಲಿ ಮಂಗಳ ಸ್ವರೂಪಿಣಿ ಬ್ಮಹ್ಮನ ರಾಣಿ ಶ್ರೀ ಶಾರದೆ ವಿರಾಜಮಾನಳಾಗಿ ನಿಂದಿದ್ದಾಳೆ.

ಅಮ್ಮನವರ ದೇವಾಲಯವು ವಿಶಾಲವಾಗಿದ್ದು ದೇವಾಲಯದ ಒಳಗಡೆ ಕರಿಶಿಲೆಯಲ್ಲಿ ನಿರ್ಮಿಸಿದ ಅಮ್ಮನವರ ಗರ್ಭಗುಡಿ ಅತೀ ಸುಂದರವಾಗಿದೆ. ದೇವಿಯ ಮೂಲಬಿಂಬವು ಪಂಚಲೋಹದ ವಿಗ್ರಹವಾಗಿದ್ದು ನಾಲ್ಕು ಕರದಲ್ಲಿ ಪುಸ್ತಕ, ಕುಂಭ, ಜಪಮಾಲೆ ಹಾಗೂ ಅಭಯ ಹಸ್ತಳಾಗಿ, ಪದ್ಮಾಸನ ಸ್ಥಿತಳಾಗಿ ಕುಳಿತ ಭಂಗಿಯಲ್ಲಿರುವ ದೇವಿಯ ಬಿಂಬವು ನೋಡಲು ಸುಂದರವಾಗಿದೆ. ದೇವಿಗೆ ನವರಾತ್ರಿಯಲ್ಲಿ ನವವಿಧವಾದ ಅಲಂಕಾರವನ್ನು ಮಾಡಲಾಗುತ್ತದೆ. ಶ್ರೀ ಶಾರದಾಂಬೆಯ ಚಿನ್ನದ ವೀಣೆಯು ಅತ್ಯಂತ ಸೂಕ್ಷ್ಮ ಕೆತ್ತನೆಯನ್ನು ಹೊಂದಿದ್ದು ಚಿನ್ನದ ವೀಣೆಯನ್ನು ಪಿಡಿದ ಅಮ್ಮನವರನ್ನು ಇಲ್ಲಿ ಕಾಣಬಹುದು.

ಇತರ ಗುಡಿಗಳು ಹಾಗೂ ಆಕರ್ಷಣೆಗಳು

ಶ್ರೀ ಕ್ಷೇತ್ರದಲ್ಲಿ ಶ್ರೀ ವಿದ್ಯಾಶಂಕರ ಮತ್ತು ಶ್ರೀ ಶಾರದಾಂಬೆ ಗುಡಿಗಳೊಂದಿಗೆ ಹಲವಾರು ದೇವರುಗಳ ಸಾನ್ನಿಧ್ಯವಿದೆ. ಶಕ್ತಿಗಣಪತಿ, ತೋರಣಗಣಪತಿ, ಕಾಲಭೈರವ, ಆಂಜನೇಯ, ದುರ್ಗಾಂಬಾ, ಕಾಳಿಕಾಂಬಾ, ರತ್ನಗರ್ಭಗಣಪತಿ ಇನ್ನೂ ಹಲವಾರು ಗುಡಿಗಳಿವೆ.

ಇಲ್ಲಿನ ಇನ್ನೊಂದು ಆಕರ್ಷಣೆ ಎಂದರೆ ಇಲ್ಲಿನ ಝುಳು-ಝಳು ಹರಿಯುವ ತುಂಗೆಯ ಒಡಲಲ್ಲಿ ದೊಡ್ಡ-ದೊಡ್ಡ ಕಪ್ಪು ಬಣ್ಣದ ಸುಂದರ ಮೀನುಗಳು. ಇಲ್ಲಿಂದ ನಾವು ‘ಗುರುನಿವಾಸ’ಕ್ಕೆ ತೆರಳಬಹುದು. ಇಲ್ಲಿ ಗೋಶಾಲೆ, ಗುರುಮಠ, ವೇದಪಾಠ ಶಾಲೆ ಮುಂತಾದವುಗಳನ್ನು ನಾವು ಕಾಣಬಹುದು.

ದೇವಾಲಯದಲ್ಲಿ ನಾವು ನಿತ್ಯ ಪೂಜೆಯೊಂದಿಗೆ ಅನ್ನಪ್ರಸಾದವನ್ನು ಉಂಡು ತೃಪ್ತರಾಗಲು ಅನ್ನಪ್ರಸಾದ ವ್ಯವಸ್ಥೆ ಕೂಡಾ ಇದೆ. ಅಲ್ಲದೆ ಇಲ್ಲಿ ‘ಯಾತ್ರಿ ನಿವಾಸ’ ಕೂಡಾ ಇದ್ದು, ಬರುವ ಭಕ್ತಾಧಿಗಳಿಗೆ ಎಲ್ಲಾ ರೀತಿಯ ವ್ಯವಸ್ಥೆ ಕೂಡಾ ಇದೆ. ಇಲ್ಲಿ ಮಕ್ಕಳಿಗೆ ವಿದ್ಯಾಸರಸ್ವತೀ ಪೂಜೆ ಮಾಡಿಸಿದರೆ ಮಕ್ಕಳು ಜ್ಞಾನವಂತರಾಗುತ್ತಾರೆ ಎಂಬುದು ನಂಬಿಕೆ. ಹಿಂದೆ ಆದಿಶಂಕರರಿಂದ ನಿರ್ಮಾಣವಾದ ಈ ಸುಂದರ ದೇವಾಯಲ ಇಂದು ಜಗದಗಲ ತಮ್ಮ ಭಕ್ತರನ್ನು ಹೊಂದಿದೆ.