ಶಮೀಪೂಜೆ

ಈ ದಿನ ಶಮಿವೃಕ್ಷಕ್ಕೆ ಪೂಜೆಯನ್ನು ಸಲ್ಲಿಸಿ ಶಮಿ (ಬನ್ನಿ)ಯನ್ನು ವಿನಿಯೋಗ ಮಾಡುವದು ಕರ್ನಾಟಕದ ಆಚರಣೆಯ ಪದ್ಧತಿ. ಹಿಂದಿನ ಕಾಲದಲ್ಲಿ ನಮ್ಮ ಋಷಿ ಮುನಿಗಳು ಹವನ-ಹೋಮಗಳ ಆರ೦ಭ ಮಾಡುವಾಗ ಶಮೀ ವೃಕ್ಷದ ಕಾ೦ಡಗಳನ್ನು ಒ೦ದಕ್ಕೊ೦ದು ತಿಕ್ಕುವುದರ ಮೂಲಕ ಅಗ್ನಿಪ್ರಜ್ವಲಿಸುವ೦ತೆ ಮಾಡುತ್ತಿದ್ದರು. ಈಗಲೂ ಭಾರತದ ಅನೇಕ ಭಾಗಗಳಲ್ಲಿ ಈ ಪರ೦ಪರೆಯ೦ತೆಯೇ ಅಗ್ನಿಕು೦ಡವನ್ನು ಹಚ್ಚಲಾಗುತ್ತದೆ. ಇದನ್ನು ಅರಣೀ ಮ೦ಥನವೆ೦ದು ಹೇಳಲಾಗುತ್ತದೆ. ಇದಕ್ಕೆ ಕಾರಣವೇನೆ೦ದರೆ ಶಮೀವೃಕ್ಷವು ಅಗ್ನಿಯ ಅವಾಸಸ್ಥಾನ ಹಾಗೂ ಸುರ್ವಣವು ಅಗ್ನಿಯ ವೀರ್ಯವೆ೦ದು ಹೇಳಲಾಗಿದೆ. ಆದ್ದರಿ೦ದಲೇ ಶಮೀವೃಕ್ಷವು ಸುವರ್ಣ ಸಮಾನವಾದ ದೈವೀ ವೃಕ್ಷವೆ೦ಬ ಭಾವನೆ ಇದೆ.

ಶಮೀಪೂಜೆ : ಮುಂದಿನ ಶ್ಲೋಕದೊಂದಿಗೆ ಶಮೀಪೂಜೆಗಾಗಿ ಪ್ರಾರ್ಥನೆಯನ್ನು ಮಾಡುತ್ತಾರೆ.

ಶಮೀ ಶಮಯತೇ ಪಾಪಂ ಶಮೀ ಲೋಹಿತಕಂಟಕಾ|

ಧಾರಿಣ್ಯರ್ಜುನಬಾಣಾನಾಂ ರಾಮಸ್ಯ ಪ್ರಿಯವಾದಿನೀ||

ಕರಿಷ್ಯಮಾಣಯಾತ್ರಾಯಾಂ ಯಥಾಕಾಲ ಸುಖಂ ಮಯಾ|

ತತ್ರ ನಿರ್ವಿಘ್ನಕರ್ತ್ರೀ ತ್ವಂ ಭವ ಶ್ರೀರಾಮಪೂಜಿತೇ||

ಅರ್ಥ : ಶಮಿಯು ಪಾಪಶಮನ ಮಾಡುತ್ತದೆ. ಶಮಿಯ ಮುಳ್ಳುಗಳು ನಸುಗೆಂಪಾಗಿರುತ್ತವೆ. ಶಮಿಯು ರಾಮನಿಗೆ ಪ್ರಿಯವಾದುದನ್ನು ನುಡಿಯುವಂತಹದ್ದು, ಅರ್ಜುನನ ಬಾಣಗಳನ್ನು ಧಾರಣೆ ಮಾಡುವಂತಹದ್ದಾಗಿದೆ. ಎಲೈ ಶಮಿಯೇ, ರಾಮನು ನಿನ್ನನ್ನು ಪೂಜಿಸಿದ್ದನು. ನಾನು ಎಂದಿನಂತೆ ವಿಜಯಯಾತ್ರೆಗೆ ಹೊರಡುವವನಿದ್ದೇನೆ. ನನ್ನ ಈ ಯಾತ್ರೆಯು ನಿರ್ವಿಘ್ನ, ಸುಖಕರವಾಗುವಂತೆ ಮಾಡು.