ಹೊರನಾಡು ಅನ್ನಪೂರ್ಣೇಶ್ವರೀ ಚಂಡೀ ಹೋಮ

ಶ್ರೀ ಅನ್ನಪೂರ್ಣೇಶ್ವರೀ ದೇವಾಲಯ

ಈ ದೇವಾಲಯವು ಕರ್ನಾಟಕದ ಪಶ್ಚಿಮ ಘಟ್ಟಗಳ ದಟ್ಟ ಕಾಡುಗಳು ಮತ್ತು ಕಣಿವೆಗಳ ನಡುವೆ ಚಿಕ್ಕಮಗಳೂರಿನಿಂದ 100 ಕಿ.ಮೀ ದೂರದಲ್ಲಿರುವ ಹೊರನಾಡು ಎಂಬಲ್ಲಿರುವ ದೇವತೆ ಅನ್ನಪೂರ್ಣೇಶ್ವರೀ (ಅನ್ನಪೂರ್ಣ)ಗೆ ಸಮರ್ಪಿತವಾದ ಹಿಂದೂ ದೇವಾಲಯವಾಗಿದೆ. ಇದು ಭದ್ರಾ ನದಿಯ ದಂಡೆಯ ಮೇಲೆ ಇದೆ.

ಈ ದೇವಾಲಯವನ್ನು ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರೀ ಅಮ್ಮನವರ ದೇವಸ್ಥಾನ ಅಥವಾ ಶ್ರೀ ಕ್ಷೇತ್ರ ಹೊರನಾಡು ದೇವಸ್ಥಾನ ಎಂದೂ ಕರೆಯುತ್ತಾರೆ. 8ನೇ ಶತಮಾನದಲ್ಲಿ ಅಗಸ್ತ್ಯ ಋಷಿ ಇಲ್ಲಿ ದೇವಿಯ ಮೂರ್ತಿ ಪ್ರತಿಷ್ಠಾಪಿಸಿದರೆಂದು ನಂಬಲಾಗಿದೆ.

ಪುರಾಣದ ಪ್ರಕಾರ, ಅನ್ನಪೂರ್ಣೆ ‘ಆಹಾರ ದೇವತೆ.’ ಶಿವನ ಪತ್ನಿ ಪಾರ್ವತಿ. ಒಮ್ಮೆ ಆಹಾರವೂ ಸೇರಿದಂತೆ ಪ್ರಪಂಚದಲ್ಲಿ ಎಲ್ಲವನ್ನೂ ‘ಮಾಯೆ’ ಎಂದು ಶಿವ ಘೋಷಿಸಿದನು. ಆಹಾರವು ಭ್ರಮೆಯಲ್ಲ ಎಂದು ಸಾಬೀತು ಪಡಿಸಲು ಪಾರ್ವತಿಯು ಮಾಯವಾದಳು. ಇದರಿಂದ ಪ್ರಕೃತಿ ಪರಿವರ್ತನೆಯಾಯಿತು. ಇದು ಜಗತ್ತಿನಲ್ಲಿ ಬರವನ್ನು ಉಂಟುಮಾಡಿತು. ದಯಾಮಯಿ ಶಿವನು ಪಾರ್ವತಿಗೆ ಇದನ್ನು ತಿಳಿಸಿದನು. ಆಕೆಯು ಅನ್ನಪೂರ್ಣೆಯಾಗಿ ಲೋಕದಲ್ಲಿ ಉಂಟಾದ ಬರವನ್ನು ನೀಗಿಸಿ ಅನ್ನ ನೀಡಿದಳು.

ದೈವ ಮತ್ತು ಆಚರಣೆಗಳು

ಅನ್ನ ಎಂದರೆ ‘ಆಹಾರ’ ಮತ್ತು ಪೂರ್ಣ ಎಂದರೆ ‘ಪರಿಪೂರ್ಣ’. ಆದ್ದರಿಂದ ಅನ್ನಪೂರ್ಣ ಎಂದರೆ ‘ಪರಿಪೂರ್ಣತೆ’ ಅಥವಾ ‘ಪರಿಪೂರ್ಣ ಆಹಾರ’. ಇಲ್ಲಿ ದೇವಿಯು ಅನ್ನಪೂರ್ಣೇಶ್ವರೀ ದೇವಿಯು ಪೀಠದ ಮೇಲೆ ನಿಂತಿರುವ ಭಂಗಿಯಲ್ಲಿ ಕಾಣಬಹುದಿದೆ. ಈ ವಿಗ್ರಹವು ತಲೆಯಿಂದ ತುದಿಯವರೆಗೆ ಚಿನ್ನದಿಂದ ಆವೃತವಾಗಿದೆ ಮತ್ತು ದೇವಿ ಅನ್ನಪೂರ್ಣೆಯನ್ನು ಯಾರು ದರ್ಶಿಸುತ್ತಾರೋ, ಅವರ ಜೀವನದಲ್ಲಿ ಆಹಾರವಿಲ್ಲದೆ ಮರಳುವುದಿಲ್ಲ ಎಂಬ ನಂಬಿಕೆ ಇದೆ.

ಅಕ್ಷಯ ತೃತೀಯ ಈ ದೇವಾಲಯದಲ್ಲಿ ನಡೆಯುವ ಪ್ರಮುಖ ಹಬ್ಬ. ಈ ದಿನವು ದೇವಿ ಅನ್ನಪೂರ್ಣೆಯ ಜನ್ಮ ದಿನವೆಂದು ನಂಬಲಾಗಿದೆ. ಈ ದಿನವು ತ್ರೇತಾಯುಗದ ಆರಂಭವನ್ನು ಸೂಚಿಸುತ್ತದೆ. ಈ ದೇವಾಲಯದಲ್ಲಿ 5 ದಿನಗಳ ಕಾಲ ನಡೆಯುವ ರಥೋತ್ಸವ, ಫೆಬ್ರವರಿ ತಿಂಗಳಲ್ಲಿ 9 ದಿನಗಳ ಕಾಲ ನಡೆಯುವ ನವರಾತ್ರಿ, ಸೆಪ್ಟೆಂಬರ್ ನಲ್ಲಿ ದೀಪೋತ್ಸವ ಮತ್ತು ಹವಿ (ಹೋಮ) ಗಳನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ.

ದೇವಾಲಯದ ಛಾವಣಿಗಳ ಮೇಲೆ ಸುಂದರವಾದ ಕೆತ್ತನೆಗಳನ್ನು ಕಾಣಬಹುದು. ಆದಿ ಶೇಷವು ದೇವಾಲಯದ ಮುಖ್ಯ ಗರ್ಭಗುಡಿ ಅಥವಾ ಗರ್ಭಗೃಹವನ್ನು ಸುತ್ತುವರೆದಿದೆ ಮತ್ತು ಪದ್ಮ ಪೀಠವು ಕೂರ್ಮ, ಅಷ್ಟಗಜ ಮತ್ತು ಇತರರನ್ನು ಒಳಗೊಂಡಿದೆ. ಪ್ರಾಚೀನ ಗ್ರಂಥಗಳಲ್ಲಿ ಅನ್ನಪೂರ್ಣಾ ದೇವಿಯನ್ನು ಶ್ಲಾಘಿಸಲಾಗಿದೆ.

ಮೂರ್ತಿಯ ಕೆಳಭಾಗದಲ್ಲಿ ಮೂಲದೇವಿಯಿದ್ದಾಳೆ. ಅನ್ನಪೂರ್ಣೆ ಚತುರ್ಭುಜೆ. ಮೇಲಿನ ಎರಡೂ ಕೈಗಳಲ್ಲಿ ಶಂಖಚಕ್ರ, ಇನ್ನೊಂದು ಕೈಯಲ್ಲಿ ಶ್ರೀಚಕ್ರ ಮತ್ತು ನಾಲ್ಕನೇ ಕೈಯಲ್ಲಿ ಗಾಯತ್ರಿ.

ಸಂಪರ್ಕ

ಬೆಂಗಳೂರಿನಿಂದ ಹೊರನಾಡು 330 ಕಿಮೀ ದೂರ. ಶೃಂಗೇರಿಯಿಂದಾದರೆ 75 ಕಿಮೀ. ಚಿಕ್ಕಮಗಳೂರಿನಿಂದ 100 ಕಿಮೀ. ರೈಲು ಸಂಪರ್ಕವಿಲ್ಲ. ಬಸ್ಸಲ್ಲೇ ಹಾದಿ ಸವೆಸಬೇಕು. ಉಳಿದುಕೊಳ್ಳಲು ಹಾಗೂ ಉಣಲು ದೇವಸ್ಥಾನದ ಆಡಳಿತ ಮಂಡಳಿ ಅಚ್ಚುಕಟ್ಟಿನ ವ್ಯವಸ್ಥೆ ಮಾಡಿದೆ.

ದರ್ಶನ ಸಮಯ, ಭೋಜನ ಮತ್ತು ವಸತಿ

ಬೆಳಗ್ಗೆ ಏಳರಿಂದ ರಾತ್ರಿ ಒಂಭತ್ತರವರೆಗೂ ದೇವಿಯ ದರುಶನ ಭಾಗ್ಯ ಲಭ್ಯ. ದಿನಕ್ಕೆ ಮೂರು ಸಲ ಮಹಾ ಮಂಗಳಾರತಿ.

ಅವಲಕ್ಕಿ, ಮಜ್ಜಿಗೆ, ಕಾಫಿ ಬೆಳಗಿನ ಉಪಾಹಾರಕ್ಕಾದರೆ, ಮಧ್ಯಾಹ್ನದ ಭೋಜನಕ್ಕೆ ಅನ್ನ, ಸಾರು, ಚಿತ್ರಾನ್ನ ಹಾಗೂ ಪಾಯಸ. ಊಟದ ಕೊನೆಗೆ ಹೊಟ್ಟೆ ತಂಪೆನಿಸಲು ಮಜ್ಜಿಗೆ. ರಾತ್ರಿಯೂ ಸ್ವಾದಿಷ್ಟ ಭೋಜನ. ಅಡುಗೆ ಕೋಣೆ ಆಧುನಿಕ ಸೌಲಭ್ಯಗಳಿಂದ ಸಜ್ಜುಗೊಂಡಿದೆ.

ಮಲೆನಾಡಿನ ಜನಕ್ಕೆ ಅನ್ನಪೂರ್ಣೇಶ್ವರೀ ‘ಕಾಯುವ ದೇವತೆ’. ಸುಖ, ದುಃಖ ಎಲ್ಲವೂ ಅವಳಿಗೇ ಸೇರಿದ್ದು . ಆ ಕಾರಣದಿಂದಲೇ ಮೊದಲ ಕೊಯ್ಲನ್ನು ದೇವಿಗೆ ಅರ್ಪಿಸುತ್ತಾರೆ. ಭತ್ತ, ಅಡಿಕೆ, ಕಾಫಿ, ಟೀ ಇತ್ಯಾದಿ ದೇವಿಯ ಸನ್ನಿಧಿಗೆ ಬಂದ ನಂತರವೇ ಮಾರುಕಟ್ಟೆಗೆ- ಮನೆ ಮಂದಿಗೆ. ಹೊರನಾಡನ್ನು ‘ದಕ್ಷಿಣ ಕಾಶಿ’ ಎಂತಲೂ ಕರೆಯುತ್ತಾರೆ.

ಪ್ರತಿ ವರ್ಷ ಬಡ ಕುಟುಂಬದ ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡು ಅವರ ಶಿಕ್ಷಣದ ಜವಾಬ್ದಾರಿಯನ್ನು ದೇಗುಲ ಹೊರುತ್ತದೆ. ಶಾಲೆಗಳ ವಿದ್ಯಾರ್ಥಿಗಳಿಗೆ ಅನ್ನದಾನ, ಸಪ್ತಪದಿ ಯೋಜನೆಯಡಿ ಪ್ರತಿವರ್ಷ ಉಚಿತ ವಿವಾಹ ದೇವಿಯ ಸನ್ನಿಧಿಯಲ್ಲಿ ನಡೆಯುತ್ತವೆ. ಧನ್ವಂತರಿ ಯೋಜನೆಯಡಿ ಬಡ ರೋಗಿಗಳಿಗೆ ದುಬಾರಿಯಾದ ಕಾಯಿಲೆಗಳ ಚಿಕಿತ್ಸೆಗೆ ಆರ್ಥಿಕ ನೆರವು ನೀಡಲಾಗುವುದು.