ಸಾಂಪ್ರದಾಯಿಕ ನಾಡಹಬ್ಬದ ವಿಶೇಷ
ನಾಡಹಬ್ಬ
ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿ. ರಾಜ್ಯ, ಹೊರ ರಾಜ್ಯ ಹಾಗೂ ವಿದೇಶಗಳಿಂದಲೂ
ಜನರು ಜಂಬೂಸವಾರಿ ವೀಕ್ಷಣೆಗಾಗಿ ಆಗಮಿಸುತ್ತಾರೆ. ಇಡೀ ಮೈಸೂರು ನಗರವೇ ಸಿಂಗರಿಸಿಕೊಳ್ಳುತ್ತದೆ. ಜಂಬೂಸವಾರಿ
ಸಾಗುವ ರಾಜಮಾರ್ಗ ಅಲ್ಲದೇ ನಗರದ ಪ್ರಮುಖ ರಸ್ತೆಗಳು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿವೆ.
ಮಧ್ಯಾಹ್ನ
ಶುಭ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದಲ್ಲಿ ನಂದಿಧ್ವಜಕ್ಕೆ ಪೂಜೆ, ಚಿನ್ನದ ಅಂಬಾರಿಯಲ್ಲಿ ವಿರಾಜಮಾನರಾಗಿರುವ
ತಾಯಿ ಚಾಮುಂಡೇಶ್ವರೀ ದೇವಿಗೆ ಪುಷ್ಪಾರ್ಚನೆ, ಕುಶಾಲ ತೋಪುಗಳ ಗೌರವ ಇರುತ್ತದೆ. ನಂತರದಲ್ಲಿ ಅರಮನೆ
ಒಳಾವರಣದಲ್ಲಿ ವಿಜಯದಶಮಿಯ ಅತ್ಯಾಕರ್ಷಕ ಮೆರವಣಿಗೆಗೆ ಚಾಲನೆ. ಜಂಬೂಸವಾರಿ ಅರಮನೆ ಆವರಣದಿಂದ ಬನ್ನಿ
ಮಂಟಪದವರೆಗೆ ನಡೆಯುತ್ತದೆ.
ಪೊಲೀಸ್
ಬ್ಯಾಂಡ್‌ನ ಆಕರ್ಷಕ ತಾಳವಾದ್ಯ, ಕಂಸಾಳೆ ಕುಣಿತದ ಮೈನವಿರೇಳಿಸುವ ದೃಶ್ಯ ಹಾಗೂ ಕಲಾತಂಡಗಳ ಮನಮೋಹಕ
ನೃತ್ಯ, ಮನಮೋಹಕ ಸ್ತಬ್ಧ ಚಿತ್ರಗಳು, ದಸರಾ ಜಂಬೂಸವಾರಿ ಮೆರವಣಿಗೆಯ ಆಕರ್ಷಣೆ. ೭೫೦ ಕೆಜಿ ಚಿನ್ನದ
ಅಂಬಾರಿಯಲ್ಲಿ ವಿರಾಜಮಾನರಾಗಿರುವ ತಾಯಿ ಚಾಮುಂಡೇಶ್ವರೀ ದೇವಿ ಮೆರವಣಿಗೆಗೆ ಪ್ರಮುಖ ಆಕರ್ಷಣೆ. ರಸ್ತೆಯ
ಇಕ್ಕೆಲಗಳಲ್ಲೂ ಪ್ರವಾಹದೋಪಾದಿ ಜನಸಾಗರದ ನಡುವೆ ತಾಯಿ ಚಾಮುಂಡೇಶ್ವರೀ ಅಂಬಾರಿಯನ್ನು ಹೊತ್ತ ಆನೆ
ಗಂಭೀರವದನನಾಗಿ ಹೆಜ್ಜೆಗಳನ್ನು ಇಡುತ್ತ ಸಾಗುತ್ತದೆ. ೨೪ ಕುಶಾಲ ತೋಪುಗಳ ಸದ್ದಿನ ಹಿನ್ನೆಲೆಯಲ್ಲಿ
ಕೆ.ಆರ್ ವೃತ್ತ, ಸಯ್ಯಾಜಿ ರಾವ್ ರಸ್ತೆ ಮೂಲಕ ಬನ್ನಿಮಂಟಪದತ್ತ ಗಜರಾಜನು ಚಿನ್ನದ ಅಂಬಾರಿ ಹೊತ್ತು
ನಡೆವ ದೃಶ್ಯ ಮನಸೂರೆಗೊಳಿಸುತ್ತದೆ.
ಗಜಪಡೆ
ಆನೆಗಳು
ಮೈಸೂರು ದಸರಾದ ಪ್ರಮುಖ ಆಕರ್ಷಣೆ. ಸುಮಾರು ಒಂದೂವರೆ ತಿಂಗಳಿಗೂ ಹೆಚ್ಚು ಕಾಲ ದಿನನಿತ್ಯ ಕಠಿಣ ತಾಲೀಮು
ನಡೆಸಿ ದಸರಾ ದಿನದಂದು ಕಣ್ಣು ಕುಕ್ಕಿಸುವಂತಹ ವೇಷಭೂಷಣಗಳಿಂದ ಕಂಗೊಳಿಸುತ್ತಾ ಗಾಂಭೀರ್ಯದ ಹೆಜ್ಜೆಯನ್ನಿಡುತ್ತಾ
ಮೆರವಣಿಗೆಯಲ್ಲಿ ಗಜಪಡೆಗಳ ಸಾಗುತ್ತವೆ. ವಿಗ್ರಹವನ್ನು ಹೊರುವ ಗಜರಾಜ ಚಿತ್ತಾರ ಬಿಡಿಸಿಕೊಂಡು ಆಕರ್ಷಕವಾಗಿ
ಕಾಣುತ್ತಿರುತ್ತಾನೆ.
ಸಾಂಸ್ಕೃತಿಕ ಹಬ್ಬ
ಈ ಮೆರವಣಿಗೆಯಲ್ಲಿ
ಕಲಾ ತಂಡಗಳು, ಸ್ತಬ್ಧಚಿತ್ರಗಳು, ಅರಮನೆ ಆನೆ, ಕುದುರೆ, ಸಾರೋಟ್, ಅಶ್ವಾರೋಹಿದಳ ಭಾಗವಹಿಸುತ್ತವೆ.
ರಾಜ್ಯದ ಮೂಲೆ, ಮೂಲೆಗಳಿಂದ ಜನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ತಮ್ಮ ಕಲಾನೈಪುಣ್ಯವನ್ನು ಪ್ರದರ್ಶಿಸುತ್ತವೆ.
ಕುದುರೆ ಕುಣಿತ, ಡೊಳ್ಳು ಕುಣಿತ, ಬೇಡರ ಕುಣಿತ, ಹುಲಿ ವೇಷ, ಗಾರುಡಿ ಗೊಂಬೆ ಹೀಗೆ ವೈವಿಧ್ಯಮಯ ಜನಪದ
ಕಲಾತಂಡಗಳು ಪ್ರೇಕ್ಷಕರ ಕಣ್ಮನ ತಣಿ ಸುತ್ತವೆ. ಜೊತೆ ಫಿರಂಗಿ ಗಾಡಿ ವಿಶೇಷವಾಗಿ ಗಮನ ಸೆಳೆಯುತ್ತವೆ.
ಪಂಜಿನ ಕವಾಯಿತು
ಬನ್ನಿ ಮಂಟಪದಲ್ಲಿ ಸಂಜೆ ರಾಜ್ಯಪಾಲರು ಕವಾಯಿತು ವೀಕ್ಷಿಸಿ ಗೌರವ ವಂದನೆ ಸ್ವೀಕರಿಸುವರು. ಇಲ್ಲಿ ಅಶ್ವಾರೋಹಿ ದಳದಿಂದ ಟೆಂಟ್ ಪೆಗ್ಗಿಂಗ್, ಮೋಟಾರ್ ಸೈಕಲ್ ಚಮತ್ಕಾರ, ಲೇಸರ್ ಶೋ ಹಾಗೂ ಕರ್ನಾಟಕ ಪೊಲಿಸರ ಪಂಜಿನ ಕವಾಯಿತು ನಡೆಯುತ್ತದೆ.