ಮೇಷ ಸಂಕ್ರಮಣ

ಸೌರಚಕ್ರ ಮತ್ತು ವಿವಿಧ ಅಭ್ಯಾಸಗಳು

ಮೇಷ ಸಂಕ್ರಾಂತಿ, ಸೌರಚಕ್ರದ ವರ್ಷದ ಮೊದಲ ದಿನವನ್ನು ಸೂಚಿಸುತ್ತದೆ, ಅಂದರೆ ಹಿಂದೂ ಚಾಂದ್ರ-ಸೌರ ಪಂಚಾಂಗದಲ್ಲಿ ಸೌರ ಹೊಸ ವರ್ಷ. ಹಿಂದೂ ಕ್ಯಾಲೆಂಡರ್ ಚಾಂದ್ರಮಾನ ಹೊಸ ವರ್ಷವನ್ನು ಕೂಡ ಹೊಂದಿದೆ. ಇದು ಧಾರ್ಮಿಕವಾಗಿ ಹೆಚ್ಚು ಮಹತ್ವಪೂರ್ಣವಾಗಿದೆ. ಒಡಿಯಾ, ಪಂಜಾಬಿ, ಮಲಯಾಳಂ, ತಮಿಳು ಮತ್ತು ಬಂಗಾಳಿ ಕ್ಯಾಲೆಂಡರ್ ಗಳಲ್ಲಿ ಸೌರಚಕ್ರ ವರ್ಷವು ಗಮನಾರ್ಹವಾಗಿದೆ. ಈ ದಿನವು ಪ್ರಾಚೀನ ಸಂಸ್ಕೃತ ಗ್ರಂಥಗಳ ಪ್ರಕಾರ ನಿರ್ದಿಷ್ಟ ಸೌರಚಲನೆಯನ್ನು ಪ್ರತಿನಿಧಿಸುತ್ತದೆ. ಮೇಷ ಸಂಕ್ರಾಂತಿ ಭಾರತೀಯ ಪಂಚಾಂಗದ ಹನ್ನೆರಡು ಸಂಕ್ರಾಂತಿಗಳಲ್ಲಿ ಒಂದಾಗಿದೆ. ಈ ಪರಿಕಲ್ಪನೆಯು ಭಾರತೀಯ ಜ್ಯೋತಿಷ್ಯ ಗ್ರಂಥಗಳಲ್ಲಿ ಕಂಡುಬರುತ್ತದೆ. ಇದರಲ್ಲಿ ಸೂರ್ಯನು ಮೇಷ ರಾಶಿಗೆ ಸ್ಥಿತ್ಯಂತರವಾದ ದಿನವನ್ನು ಉಲ್ಲೇಖಿಸುತ್ತದೆ.

ಉಪಖಂಡದಲ್ಲಿ ಅನುಸರಿಸಿರುವ ಸೌರಮಾನ ಮತ್ತು ಚಾಂದ್ರ-ಸೌರ ಪಂಚಾಂಗಗಳಲ್ಲಿ ಈ ದಿನವು ಮಹತ್ವಪೂರ್ಣವಾಗಿದೆ. ಮೇಷ ಸಂಕ್ರಾಂತಿಯು ಸಾಮಾನ್ಯವಾಗಿ ಏಪ್ರಿಲ್ 13, ಕೆಲವೊಮ್ಮೆ ಏಪ್ರಿಲ್ 14 ರಂದು ಬರುತ್ತದೆ. ಈ ದಿನವು ಪ್ರಮುಖ ಹಿಂದೂ, ಸಿಖ್ ಮತ್ತು ಬೌದ್ಧ ಹಬ್ಬಗಳಿಗೆ ಆಧಾರವಾಗಿದೆ, ಅವುಗಳಲ್ಲಿ ಬೈಸಾಖಿ ಅತ್ಯಂತ ಪ್ರಸಿದ್ಧವಾಗಿವೆ. ಇದು ಥಾಯ್ಲ್ಯಾಂಡ್, ಲಾವೋಸ್, ಕಾಂಬೋಡಿಯಾ, ಮ್ಯಾನ್ಮಾರ್, ಶ್ರೀಲಂಕಾ, ಈಶಾನ್ಯ ಭಾರತದ ಭಾಗಗಳು, ವಿಯೆಟ್ನಾಮ್ ನ ಕೆಲವು ಭಾಗಗಳು ಮತ್ತು ಚೀನಾದಲ್ಲಿ ಸಮಾನವಾದ ಬೌದ್ಧ ಕ್ಯಾಲೆಂಡರ್ ಆಧಾರಿತ ಹೊಸ ವರ್ಷೋತ್ಸವಗಳಿಗೆ ಸಂಬಂಧಿಸಿದೆ; ಮತ್ತು ಸಾಂಗ್ಕ್ರಾನ್ ಎಂದು ಕರೆಯಲಾಗುತ್ತದೆ.

ಮೇಷ ಸಂಕ್ರಾಂತಿ ಎಂಬ ಪದವು ಜ್ಯೋತಿಷ ಎಂಬ ವೇದಾಂಗ ಅಧ್ಯಯನ ಕ್ಷೇತ್ರದ ಪ್ರಾಚೀನ ಸಂಸ್ಕೃತ ಗ್ರಂಥಗಳಲ್ಲಿ ಮತ್ತು ನಂತರದ ಪಠ್ಯಗಳಾದ ಸೂರ್ಯ ಸಿದ್ಧಾಂತದಂತಹ ವೇದಾಂಗಗಳ ಅಧ್ಯಯನದಲ್ಲಿ ಸಮಯ ಪಾಲನೆಯ ಅಭ್ಯಾಸಗಳನ್ನು ಆಧರಿಸಿದ ನಿರ್ದಿಷ್ಟ ದಿನವನ್ನು ಸೂಚಿಸುತ್ತದೆ.

ಆಚರಣೆ

ಅನೇಕ ಪ್ರದೇಶಗಳು ಚಾಂದ್ರಮಾನ ಪಂಚಾಂಗದ ಪ್ರಾರಂಭದೊಂದಿಗೆ ಸ್ಥಳೀಯ ಹೊಸ ವರ್ಷವನ್ನು ಪ್ರಾರಂಭಿಸುತ್ತವೆ: ಮಹಾರಾಷ್ಟ್ರದಲ್ಲಿ ಗುಡಿ ಪಾಡ್ವಾ; ಸಿಂಧಿ ಸಮುದಾಯಕ್ಕೆ ಚೇತಿ ಚಂದ್; ಮತ್ತು ಕಾಶ್ಮೀರದಲ್ಲಿ ನವೆರೆಹ್. ಗುಜರಾತ್ ನಲ್ಲಿ, ದೀಪಾವಳಿಯ ನಂತರ, ಕಾರ್ತಿಕ ಮಾಸದಿಂದ ಪ್ರಾದೇಶಿಕ ವರ್ಷವು ಪ್ರಾರಂಭವಾಗುತ್ತದೆ.

ಚಾಂದ್ರ-ಸೌರ ಕ್ಯಾಲೆಂಡರ್ಗಳ ಪ್ರಕಾರ ಈ ದಿನವನ್ನು ವೈಶಾಖ ಸಂಕ್ರಾಂತಿ ಎಂದೂ ಸಹ ಕರೆಯಲಾಗುತ್ತದೆ. ಚಾಂದ್ರಮಾನ ಪಂಚಾಂಗವನ್ನು ಬಳಸಿಕೊಂಡು ಹೊಸ ವರ್ಷವನ್ನು ಪ್ರಾರಂಭಿಸುವ ಪ್ರದೇಶಗಳಲ್ಲಿ ಕೂಡ ಈ ದಿನವನ್ನು ಭಾರತದಾದ್ಯಂತ ಜನರು ಆಚರಿಸುತ್ತಾರೆ. ಆದರೆ, ಕೆಲವು ಪ್ರದೇಶಗಳು ಮೇಷ ಸಂಕ್ರಾಂತಿಯಂದು ಹೊಸ ವರ್ಷವನ್ನು ಆರಂಭಿಸುತ್ತವೆ.