ಪಂಜ ಪಂಚಲಿಂಗೇಶ್ವರ ರಥ

ಬಂಟ್ವಾಳ ತಾಲೂಕಿನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಊರು ವಿಟ್ಲ. ಇಲ್ಲಿರುವ ಶ್ರೀ ಪಂಚಲಿಂಗೇಶ್ವರ ದೇವಸ್ಥಾನವು ವಿಟ್ಲ ಸೀಮೆಯ ದೇವಸ್ಥಾನಗಳಲ್ಲೆಲ್ಲ ಪ್ರಮುಖವಾದುದು ಮಾತ್ರವಲ್ಲದೇ ಗಾತ್ರದ ದೃಷ್ಟಿಯಿಂದಲೂ ಇದನ್ನು ಮೀರಿಸುವ ದೇವಾಲಯಗಳು ಸುತ್ತುಮುತ್ತಲಿನಲ್ಲಿಲ್ಲ.

ಶ್ರೀ ಪಂಚಲಿಂಗೇಶ್ವರ ದೇವಸ್ಥಾನವು ವಿಟ್ಲ ಸೀಮಾ ಅರಸು ಮನೆತನದ ಆಡಳಿತಕ್ಕೊಳಪಟ್ಟಿದೆ. ಸೀಮೆಯ ಮುಖ್ಯಸ್ಥರು ವಿಟ್ಲದ ಅರಸರು. ಹಲವು ಶತಮಾನಗಳ ಇತಿಹಾಸವುಳ್ಳ ಡೊಂಬಹೆಗಡೆ ಅರಸು ಮನೆತನದವರು ವಿಟ್ಲದ ಅರಸರು. (ಡೊಂಬಹೆಗಡೆ ಎಂಬುದು ವಿಟ್ಲದ ಅರಸರು ಪಡೆಯುತ್ತಿದ್ದ ಬಿರುದು. ಈ ಅರಸು ವರ್ಗದವರಿಗೆ ಬಲ್ಲಾಳ ಎಂಬುದು ಉಪನಾಮ.) ಸೀಮೆಯ ಅರಸರಿಗೆ ಪಂಚಲಿಂಗೇಶ್ವರ ಆರಾಧ್ಯದೇವರು. ವಿಟ್ಲದ ಜಾತ್ರೆ ಮುಖ್ಯ ಉತ್ಸವ. ವಿಟ್ಲವು ಇಷ್ಠಕಾಪುರ ಎಂಬ ಹೆಸರಿನಿಂದಲೂ ಪ್ರಸಿಧ್ಧವಾಗಿತ್ತು.

ಸ್ಥಳೈತಿಹ್ಯ

ಐತಿಹ್ಯದ ಪ್ರಕಾರ ಪುರಾತನ ಕಾಲದ ಏಕಚಕ್ರ ವರ್ಗಗಳ ಸಮೀಪದ ಕಳಂಜಿ ಮಲೆ ಕಾಡಿನಲ್ಲಿಯೇ ಬಕಾಸುರನ ಗುಹೆಯಿತ್ತು. ಭೀಮ ಅವನನ್ನು ಕೊಂದುದು ಅಲ್ಲಿಯೇ. ಅವನನ್ನು ಕೊಂದಾಗ ಹರಿದ ರಕ್ತವು ಬಂದು ತುಂಬಿಕೊಂಡುದರಿಂದ ನೆತ್ತರುಕೆರೆ ಉಂಟಾಯಿತು (ಕಳಂಜಿಮಲೆ ಹಾಗೂ ನೆತ್ತರುಕೆರೆ ವಿಟ್ಲದ ಆಸುಪಾಸಿನ ಸ್ಥಳಗಳು).

ದೇವಸ್ಥಾನಕ್ಕೆ ಸಂಬಂಧಿಸಿದ ಸ್ಥಳ ಪುರಾಣದ ಪ್ರಕಾರ ಪಾಂಡವರು ತಮ್ಮ ಸುತ್ತಾಟಕಾಲದಲ್ಲಿ ಈ ಪ್ರದೇಶದಲ್ಲಿ ವಾಸಮಾಡಿದ್ದರಂತೆ.ತಮ್ಮ ನೆನಪಿಗಾಗಿ ಶಿವನನ್ನು ಸ್ಥಾಪಿಸಲು ಇಚ್ಛಿಸಿ, ಕಾಶಿಯಿಂದ ಲಿಂಗಗಳನ್ನು ತರಲು, ವಾಯುವೇಗದಲ್ಲಿ ಗಮಿಸಬಲ್ಲ ಭೀಮನನ್ನು ಕಳುಹಿಸಿದರು. ಭೀಮನು ಲಿಂಗಗಳೊಂದಿಗೆ ಬರುವಾಗ ತಡವಾದ್ದರಿಂದ ನಿಶ್ಚಿತ ಲಗ್ನದಲ್ಲಿ ಲಿಂಗವೊಂದನ್ನು ಪ್ರತಿಷ್ಟಿಸಿ, ಪೂಜೆ ಮಾಡಿದರಂತೆ. (ಇನ್ನೊಂದು ಪಾಠಾಂತರದ ಪ್ರಕಾರ ಭೀಮನು ಕಾಶಿಗೆ ಹೋದಾಗ ಅವನ ಹಿಂದೆಯೇ ಹನುಮಂತನೂ ಹೋದನಂತೆ. ವೇಗಶಾಲಿಯಾದ ಹನುಮಂತನು ಮೊದಲಿಗೆ ತಂದ ಲಿಂಗವನ್ನು ನಿಶ್ಚಿತ ಲಗ್ನದಲ್ಲಿ ಪ್ರತಿಷ್ಟಾಪಿಸಿದರಂತೆ.) ಭೀಮನು ತಾನು ತಂದ ಲಿಂಗಗಳು ವ್ಯರ್ಥವಾಗಬಾರದೆಂದು ಅದಾಗಲೇ ಫ್ರತಿಷ್ಠಾಪಿಸಿದ್ದ ಲಿಂಗವನ್ನು ಕಿತ್ತೆಸೆದು ತಾನು ತಂದ ಲಿಂಗಗಳನ್ನು ಪ್ರತಿಷ್ಠಿಸಿದನಂತೆ. ನೈವೇದ್ಯಕ್ಕೆ ಬೇರೇನೂ ಇಲ್ಲದಿದ್ದುದರಿಂದ, ಅದಗಲೇ ನೈವೇದ್ಯ ಮಾಡಲಾಗಿದ್ದ ಅನ್ನಕ್ಕಿಷ್ಟು ನೀರು ಚಿಮುಕಿಸಿ ಅದನ್ನೊಮ್ಮೆ ಬೆಂಕಿಗಿರಿಸಿ ತೆಗೆದು ನೈವೇದ್ಯ ಮಾಡಿದನಂತೆ. ಆದುದರಿಂದ ವಿಟ್ಲದ ದೇವರಿಗೆ ತಂಗಳನ್ನ ನೈವೇದ್ಯವೆಂದು ಹೇಳುವುದಿದೆ. (ಈಗಲೂ ಬೇಯಿಸಿ ತಂದಿರಿಸಿದ ಅನ್ನಕ್ಕೆ ನೀರು ಚಿಮುಕಿಸಿ ದೀಪದ ಬೆಂಕಿಗಾದರೂ ತೋರಿಸಿ ನೈವೇದ್ಯ ಮಾಡುವುದೆಂದು ಹೇಳಲಾಗುತ್ತದೆ.) ಭೀಮನು ಕಿತ್ತೆಸೆದ ಲಿಂಗವನ್ನು ದೇವಸ್ಥಾನದ ಉತ್ತರ ಭಾಗದಲ್ಲಿರುವ ಪುಷ್ಕರಣಿಯ ನಡುವಿನ ಕಲ್ಲಿನ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗಿದೆ.

ಪಂಚಲಿಂಗೇಶ್ವರ

ಐದು ಪ್ರಾಕೃತಿಕ ಶಿಲಾಖಂಡಗಳನ್ನು ಏಕಪಾಣಿಪೀಠದ ಮೇಲೆ ಲಿಂಗಗಳಾಗಿ ಸ್ಥಾಪಿಸಿರುವುದರಿಂದ ಪಂಚಲಿಂಗೇಶ್ವರ ದೇವಾಲಯವೆನಿಸಿದೆ. (ಶಿವನ ಸ್ವರೂಪಗಳಾದ ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ, ಈಶಾನ) ಮೂಲ ಪಂಚಲಿಂಗಗಳು.

ಈ ದೇವಸ್ಥಾನವು ಸುಮಾರು ಒಂದು ಸಾವಿರ ವರ್ಷಗಳಿಗಿಂತಲೂ ಹೆಚ್ಚು ಪ್ರಾಚೀನವೆಂದು ಸಂಶೋಧಕರು ನಿರ್ಧರಿಸಿದ್ದಾರೆ.