ಹವಾಮಾನ ಕ್ಷಣ ಕ್ಷಣಕ್ಕೆ ಬದಲಾಗುವುದರಿಂದ ಪ್ರತಿ ದೇಶವೂ ಹವಾಮಾನ ವರದಿಗಳಿಗೆ ತುಂಬಾ ಆದ್ಯತೆಯನ್ನು ನೀಡುತ್ತವೆ. ಭಾರತದಲ್ಲಿ ಆಯಾ ಹವಾಮಾನವನ್ನು ಅವಲಂಬಿಸಿ ವಿವಿಧ ಕೃಷಿ ಚಟುವಟಿಕೆಗಳು ನಡೆಯುತ್ತವೆ. ಹವಾಮಾನಕ್ಕೆ ಇರುವ ಈ ಮಹತ್ವವನ್ನು ಗಮನಿಸಿಯೇ ಇದಕ್ಕೂ ಒಂದು ವಿಶೇಷ ದಿನವನ್ನು ನಿಗದಿಪಡಿಸಲಾಗಿದೆ. ಆ ದಿನವೇ ಮಾರ್ಚ್ 23. ಈ ದಿನವನ್ನು ವಿಶ್ವ ಹವಾಮಾನ ದಿನ ಎಂದು ಆಚರಿಸಲಾಗುತ್ತದೆ. ಹವಾಮಾನ ನಿರ್ಧರಿಸುವಲ್ಲಿ ಮೋಡಗಳ ಪಾತ್ರ ಮಹತ್ವದ್ದು ಹಾಗೂ ಇದರ ಅಧ್ಯಯನ ನಡೆಸುವ ಅಗತ್ಯತೆಯನ್ನು ಈ ದಿನ ಪ್ರತಿಪಾದಿಸುತ್ತದೆ.
ಹಿನ್ನೆಲೆ
ವಿಶ್ವ ಹವಾಮಾನ ಸಂಸ್ಥೆಯು 1950 ಮಾರ್ಚ್ 23ರಂದು ಈ ದಿನಾಚರಣೆಯನ್ನು ಆರಂಭಿಸಿತು. ಜನರ ಸುರಕ್ಷೆ ಮತ್ತು ಕ್ಷೇಮಕ್ಕೆ ಹವಾಮಾನದ ಕೊಡುಗೆ ಅತ್ಯಂತ ಮಹತ್ವದ್ದು ಎಂಬುದನ್ನು ತಿಳಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಈ ಸಂಸ್ಥೆಯು ಹವಾಮಾನ, ಭೌಗೋಳಿಕ ವಿಜ್ಞಾನ ವಿಷಯಗಳ ಬಗ್ಗೆ ಅಧ್ಯಯನಗಳನ್ನು ಕೈಗೊಳ್ಳುವ ಕಾರ್ಯವನ್ನು ಮಾಡುತ್ತಾ ಬಂದಿದೆ.
ಉದ್ದೇಶ
ಹವಾಮಾನ ಬದಲಾವಣೆಯಿಂದ ಆಗುವ ವ್ಯತ್ಯಯಗಳ ಬಗ್ಗೆ ಅರಿವು ಮೂಡಿಸುವುದು ಈ ದಿನಾಚರಣೆಯ ಉದ್ದೇಶವಾಗಿದೆ. ಅಧಿಕ ಬಿಸಿಗಾಳಿ, ಬರ ಪರಿಸ್ಥಿತಿ ಹಾಗೂ ಅತಿವೃಷ್ಟಿ, ಭೂಕಂಪನ, ಅಗ್ನಿ ಪರ್ವತಗಳ ಸ್ಫೋಟ ಸೇರಿದಂತೆ ಇತರೆ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುತ್ತದೆ.
ವಿಶ್ವ ಹವಾಮಾನ ದಿನದ ಇತ್ತೀಚಿನ ವಿಷಯ ಹೀಗಿದೆ:
ವಾಯುಗುಣ ಮತ್ತು ನೀರು
ಸೂರ್ಯ, ಭೂಮಿ ಮತ್ತು ಹವಾಮಾನ
ಮೋಡಗಳನ್ನು ಅರ್ಥಮಾಡಿಕೊಳ್ಳುವುದು
ಬಿಸಿ, ಒಣ, ತೇವ - ಭವಿಷ್ಯವನ್ನು ಎದುರಿಸಿ
ಜೀವ ಮತ್ತು ಆಸ್ತಿಗಳನ್ನು ರಕ್ಷಿಸಲು ಹವಾಮಾನವನ್ನು ನೋಡುವುದು
ಹವಾಮಾನ ಮತ್ತು ನಾವು ಉಸಿರಾಡುವ ಗಾಳಿ