ವ್ಯಾಸ ರಾಯರು ಮೈಸೂರು ಜಿಲ್ಲೆಯ ಬನ್ನೂರಿನಲ್ಲಿ ಜನಿಸಿದರು. ವ್ಯಾಸರಾಯರ ತಂದೆ ರಾಮಾಚಾರ್ಯರು ಮತ್ತು ತಾಯಿಯ ಹೆಸರು
ಸೀತಾಬಾಯಿ. ವ್ಯಾಸರಾಯರ ಪೂರ್ವಾಶ್ರಮದ ಹೆಸರು ಯತಿರಾಜ. ಅಬ್ಬೂರಿನ ಬ್ರಹ್ಮಣ್ಯತೀರ್ಥರಿಂದ
ಸನ್ಯಾಸ ದೀಕ್ಷೆ ಸ್ವೀಕರಿಸಿದರೆಂದು ತಿಳಿದುಬರುತ್ತದೆ. ವ್ಯಾಸರಾಯರು ವಿಜಯ ನಗರ ಸಾಮ್ರಾಜ್ಯಕ್ಕೆ
ರಾಜಗುರುಗಳಾಗಿದ್ದರು. ಮಠಾಧಿಪತಿಗಳಾಗಿ ಒಂದೆಡೆಗೆ ರಾಜಗುರುಗಳು ಎನ್ನಿಸಿದ್ದರೆ, ಮತ್ತೊಂದೆಡೆ
ಧರ್ಮೋಪದೇಶಕರೂ ಆಗಿದ್ದರು. ಸಾಳುವ ನರಸಿಂಹನ ಆಳ್ವಿಕೆಯ ಕಾಲದಿಂದ, ಅಚ್ಚುತರಾಯನ
ಆಳ್ವಿಕೆಯವರೆಗೆ, ಸುಮಾರು ಅರವತ್ತು ವರ್ಷಗಳ ಕಾಲ ಸಕಲ ರಾಜಮಹಾರಾಜರಿಂದ
ಸನ್ಮಾನಿಸಲ್ಪಟ್ಟಿದ್ದರು. ವಿಜಯನಗರದ ಪ್ರಖ್ಯಾತ ದೊರೆಯೆನಿಸಿದ್ದ ಕೃಷ್ಣದೇವರಾಯನು ವ್ಯಾಸರಾಯರನ್ನು
ಗುರುಗಳಾಗಿ ಸ್ವೀಕರಿಸಿದ್ದನೆಂದು ತಿಳಿದುಬಂದಿದೆ.
ವ್ಯಾಸರಾಯರು ೧೫೪೮ , ಫಾಲ್ಗುಣ
ಮಾಸದ ಚತುರ್ಧಿ ದಿನದಂದು, ಹಂಪೆಯಲ್ಲಿ ಕಾಲವಾದರು. ಇವರ ಬೃಂದಾವನವು ಆನೆಗೊಂದಿಯ
ಸಮೀಪವಿರುವ ತುಂಗಭದ್ರಾ ದ್ವೀಪದಲ್ಲಿದೆ. ಈ ಸ್ಥಳವನ್ನು ನವ ಬೃಂದಾವನ ಎಂದು
ಕರೆಯಲಾಗುತ್ತದೆ.ದಾಸಸಾಹಿತ್ಯ ಪರಂಪರೆಯನ್ನು ಶ್ರೀಪಾದರಾಜರ ತರುವಾಯ ಬೆಳೆಸಿದವರೆಂದರೆ
ವ್ಯಾಸರಾಯರು. ಈವರೆಗೆ ವ್ಯಾಸರಾಯರು ರಚಿಸಿರುವ ೧೧೯ ಕೀರ್ತನೆಗಳು ಲಭ್ಯವಾಗಿವೆ. ಇದರಲ್ಲಿ
ಉಗಾಭೋಗಗಳು ಸೇರಿವೆ. ಅಂಕಿತ ಪ್ರಧಾನ ಪಧ್ಧತಿ ಇವರಿಂದಲೇ ಪ್ರಾರಂಭವಾಯಿತು. ಶ್ರೀಕೃಷ್ಣ ಎಂಬುದು
ವ್ಯಾಸರಾಯರ ಅಂಕಿತ.