ಕಿಗ್ಗ ಋಷಶೃಂಗೇಶ್ವರ ರಥ

ಶ್ರೀ ಋಷ್ಯಶೃಂಗೇಶ್ವರ ದೇವಸ್ಥಾನವು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಿಂದ 9 ಕಿ. ಮೀ ದೂರದಲ್ಲಿದೆ. ವಿಶಿಷ್ಟ ಇತಿಹಾಸವಿರುವ ಈ ದೇವಳದ ಜೊತೆ, ಮಳೆ ತರಿಸುವ ಶಕ್ತಿಯಿದ್ದ ಋಷ್ಯಶೃಂಗ ಮಹರ್ಷಿಗಳ ಹಿನ್ನೆಲೆಯೂ ಬೆರೆತುಕೊಂಡಿದೆ. ಕಿಗ್ಗದಲ್ಲಿ ನೆಲೆಯಾಗಿರುವ ಈ ಋಷ್ಯಶೃಂಗೇಶ್ವರನನ್ನು ಅರಸಿ ಹಿಮಾಲಯದಿಂದ ಬರುವ ಸನ್ಯಾಸಿಗಳು ಇಲ್ಲಿ ತಿಂಗಳುಗಟ್ಟಲೆ ಮೌನವೃತ, ಉಪವಾಸಗಳನ್ನು ಆಚರಿಸಿ ಕಠಿಣ ಧ್ಯಾನದಲ್ಲಿ ತಲ್ಲೀನರಾಗುವ ದೃಶ್ಯಗಳು ಇಲ್ಲಿ ಕಂಡುಬರುತ್ತವೆ. ಇದರ ಜೊತೆಗೆ ಸಕಾಲಕ್ಕೆ ಮಳೆ-ಬೆಳೆ ಆಗುವಂತೆ ಪ್ರಾರ್ಥಿಸುವ ಸಲುವಾಗಿ ಹಲವು ಭಕ್ತರು ಇಲ್ಲಿಗೆ ಬಂದು ಪೂಜಾಕೈಂಕರ್ಯಗಳನ್ನು ನೆರವೇರಿಸುತ್ತಾರೆ. ಈ ದೇವಳದಲ್ಲಿ ಪೂಜೆ ಮಾಡಿದ ನಂತರ ತುಂಗಾಭದ್ರಾ ನದಿ ತುಂಬಿ ಹರಿಯುತ್ತದೆ ಎಂಬ ಪ್ರತೀತಿಯೂ ಇದೆ.

ಪುರಾಣದಲ್ಲಿ ಮೋಡಗಳನ್ನು ಆಕರ್ಷಿಸಿ ಮಳೆ ತರಿಸುವ ವಿಶಿಷ್ಟ ಶಕ್ತಿಯಿದ್ದ ಕಾರಣಕ್ಕೆ ಹೆಸರಾಗಿದ್ದ ಮಳೆ ಮಹರ್ಷಿ ಋಷ್ಯಶೃಂಗರ ಹಿನ್ನೆಲೆ ಕಿಗ್ಗದ ಶ್ರೀ ಋಷ್ಯಶೃಂಗೇಶ್ವರ ದೇವಸ್ಥಾನಕ್ಕಿದೆ. ಕಶ್ಯಪ ಬ್ರಹ್ಮನ ಮೊಮ್ಮಗನಾದ ಋಷ್ಯಶೃಂಗರು ಸರ್ವವಿದ್ಯಾ ಪಾರಂಗತರು. ದೇವವಾಣಿಯಂತೆ ಅವರು ಶೃಂಗೇರಿ ಸಮೀಪದ ಬೆಟ್ಟದ ಬುಡದಲ್ಲಿ ಚಂದ್ರಮೌಳೇಶ್ವರನನ್ನು ಕುರಿತು ತಪಸ್ಸನ್ನಾಚರಿಸುತ್ತಾರೆ. ಶಿವ ಪ್ರತ್ಯಕ್ಷನಾದಾಗ ಪರಮಾತ್ಮನಲ್ಲಿ ಲೀನನಾಗುವ ಉದ್ದೇಶದಿಂದ ನಾನು ನಿನ್ನಲ್ಲಿ ಐಕ್ಯನಾಗಬೇಕುಎಂದು ವರ ಕೇಳುವ ಭರದಲ್ಲಿ ತಪ್ಪಾಗಿ ನೀನು ನನ್ನಲ್ಲಿ ಐಕ್ಯನಾಗಬೇಕುಎಂದು ಕೇಳಿದ ಪರಿಣಾಮವಾಗಿ ಚಂದ್ರಮೌಳೇಶ್ವರ ಈ ಮಹಾಮಹಿಮನಲ್ಲಿ ಐಕ್ಯನಾಗುತ್ತಾನೆ. ವರ ಕೋರಿಕೆಯಲ್ಲಿ ಉಂಟಾದ ಮಾತಿನ ವ್ಯತ್ಯಾಸದಿಂದಾಗಿ ಈ ಪ್ರದೇಶ ಕಗ್ಗಎಂಬ ಹೆಸರಿನಿಂದ ಗುರುತಿಸಿಕೊಂಡು ಕಾಲಾನುಕ್ರಮದಲ್ಲಿ ಕಿಗ್ಗವಾಗಿ ಬದಲಾಯಿತು ಅನ್ನುವುದು ಪ್ರತೀತಿ. ಈ ಹಿನ್ನೆಲೆಯಂತೆ ಮಳೆ-ಬೆಳೆ ಹಾಗೂ ಸಂತಾನ ಪ್ರಾಪ್ತಿಗಾಗಿ ಚಂದ್ರಮೌಳೇಶ್ವರ ಐಕ್ಯನಾಗಿರುವ ಋಷ್ಯಶೃಂಗೇಶ್ವರನನ್ನು ಆರಾಧಿಸುವ ಪರಿಪಾಠ ಬೆಳೆದುಬಂದಿದೆ.