ದಂಡಿ
ಸತ್ಯಾಗ್ರಾಹವು ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಮುಖ್ಯ ಘಟನೆಯಾಗಿದ್ದು ಸ್ವದೇಶಿ ಅಂದೋಲನದ ಪ್ರಮುಖ ಘಟ್ಟವಾಗಿದೆ. ಮಾರ್ಚ್ ೧೨, ೧೯೩೦ರಂದು ಗಾಂಧೀಜಿಯವರು ೭೮ ಮಂದಿ ಸಹ
ಸತ್ಯಾಗ್ರಹಿಗಳೊಂದಿಗೆ ಸಬರಮತಿಯಿಂದ ಸುಮಾರು ೩೭೫ ಮೈಲಿ ದೊರದ ಕಡಲ ತೀರದಲ್ಲಿನ ದಾಂಡಿ
ಗ್ರಾಮಕ್ಕೆ ನಡೆಯಲು ಪ್ರಾರಂಭಿಸಿದರು. ಈ ನಡಿಗೆಯ ೨೩ ದಿನಗಳಲ್ಲಿ ಸಹಸ್ರಾರು ಸತ್ಯಾಗ್ರಹಿಗಳು
ದಾರಿಯುದ್ದಕ್ಕೂ ಸೇರಿದರು. ನಾಲ್ಕು ಜಿಲ್ಲೆಗಳು ಮತ್ತು ೪೮ ಹಳ್ಳಿಗಳ ಮೂಲಕ ಹಾಯ್ದ ಈ ನಡಿಗೆ
ಏಪ್ರಿಲ್ ೫ರಂದು ದಾಂಡಿ ತಲುಪಿತು.ಮುಂದಿನ ಮುಂಜಾನೆಯ ಪ್ರಾರ್ಥನೆಯ ನಂತರ, ಅಲ್ಲಿ ಗಾಂಧೀಜಿಯವರು ಒಂದು ಹಿಡಿಯಷ್ಟು ಮಣ್ಣು ಮತ್ತು ಉಪ್ಪನ್ನು ತೆಗೆದುಕೊಂಡು
(ಕೆಲವೆಡೆ ಇದನ್ನು "ಒಂದು ಚಿಟಿಕೆಯಷ್ಟು" ಎಂದು, ಇನ್ನು
ಕೆಲವೆಡೆ "ಒಂದು ಕಾಳಿನಷ್ಟು" ಎನ್ನಲಾಗಿದೆ) "ಈ ಮೂಲಕ, ಬ್ರಿಟೀಷ್ ಸಾಮ್ರಾಜ್ಯದ ಅಡಿಪಾಯವನ್ನು ನಾನು ಅಲುಗಾಡಿಸುತ್ತಿದ್ದೇನೆ" ಎಂದು
ಘೋಷಿಸಿದರು. ನಂತರ ಅವರು ಅದನ್ನು ಸಮುದ್ರದ ನೀರಿನಲ್ಲೆ ಕುದಿಸಿ, ಯಾವ ಭಾರತೀಯನೂ ಅಧಿಕೃತವಾಗಿ ತಯಾರಿಸಲಾಗದಂತಹ ಪದಾರ್ಥವನ್ನು ತಯಾರಿಸಿದರು, ಅದುವೇ — ಉಪ್ಪು. ನಂತರ ನೆರೆದಿದ್ದ ಸಹಸ್ರಾರು
ಅನುಯಾಯಿಗಳಿಗೆ "ತಮಗೆ ಎಲ್ಲಿ ಸಾಧ್ಯವೊ ಹಾಗು ಎಲ್ಲಿ ಅನುಕೂಲವೊ," ಅಲ್ಲಿ ಉಪ್ಪನ್ನು ತಯಾರಿಸಲು ಉಪದೇಶಿಸಿದರು.
ಚಳುವಳಿಯ
ಪರಿಣಾಮ ದೇಶದಾದ್ಯಂತ ವ್ಯಾಪಿಸಿತು. ಗಾಂಧೀಜಿಯವರಿಂದ ಪ್ರೇರಿತರಾಗಿ ಸಾವಿರಾರು ಜನರು ಸ್ವತ:
ಉಪ್ಪನ್ನು ತಯಾರಿಸಿದರು ಹಾಗು ಕಾನೂನು ಬಾಹಿರವಾಗಿ ಉಪ್ಪನ್ನು ಕೊಂಡರು. ಇದರೊಂದಿಗೆ ಇತರ
ಬ್ರಿಟಿಷ್ ಸರಕುಗಳನ್ನೂ ಭಾರತೀಯರು ಕೊಳ್ಳುವುದನ್ನು ನಿಲ್ಲಿಸಿದರು. ಕಾನೂನು ಬಾಹಿರವಾಗಿ
ಉಪ್ಪನ್ನು ಮಾರಿದ ಹಾಗು ಕೊಂಡ ಸಹಸ್ರಾರು ಜನರನ್ನು ಬ್ರಿಟಿಷ್ ಸರ್ಕಾರವು ಬಂಧಿಸಿತು. ಭಾರತದ
ಇತರೆಡೆಯೆಲ್ಲ ಈ ಸತ್ಯಾಗ್ರಹ ಹರಡಿತು. ಪೇಶಾವರದಲ್ಲಿ ಗಾಂಧೀಜಿಯವರ ಅನುಯಾಯಿಯಾದ ಗಫರ್ ಖಾನ್ರವರ
ನೇತೃತ್ವದಲ್ಲಿ "ಕುದಾಯ್ ಕಿತ್ಮತ್ಗಾರ್" ಎಂಬ ಸತ್ಯಾಗ್ರಹಿಗಳ ಗಂಪು ಈ ಆಂದೋಲನವನ್ನು
ನಡೆಸುತ್ತಿತ್ತು. ಏಪ್ರಿಲ್ ೨೩ರಂದು ಗಫರ್ ಖಾನರ ಬಂಧನವಾದಾಗ ಇದನ್ನು ವಿರೋಧಿಸಿ ನಡೆಸಿದ
ಅಹಿಂಸಾತ್ಮಕ ಪ್ರತಿಭಟನೆಯ ಮೇಲೆ ಬ್ರಿಟಿಷ್ ಸೇನೆ ಗುಂಡು ಹಾರಿಸಿತು. ಈ ಘಟನೆಯಲ್ಲಿ ಹಲವು
ಸತ್ಯಾಗ್ರಹಿಗಳು ಮೃತರಾದರು. ಕಡೆಗೆ ಮಹಾತ್ಮ ಗಾಂಧಿಯವರನ್ನೂ ಬಂಧಿಸುವಂತೆ ಅಂದಿನ ಭಾರತದ
ವೈಸರಾಯ್‌ರು ಆದೇಶಿಸಿದರು. ಮೇ ೪ರಂದು ದಂಡಿಯ ಬಳಿಯ ಒಂದು ಊರಿನಲ್ಲಿ ಮಧ್ಯರಾತ್ರಿಯಲ್ಲಿ ೩೦
ಪೇದೆಗಳ ಪ್ರಬಲ ಪಡೆಯೊಂದಿಗೆ ಬಂದ ಜಿಲ್ಲಾ ನ್ಯಾಯಾಧೀಶರು ನಿದ್ರಾಮಗ್ನರಾಗಿದ್ದ ಗಾಂಧೀಜಿಯವರನ್ನು
ಬಂಧಿಸಿದರು. ಭಾರತದಾದ್ಯಂತ ಉಪ್ಪಿನ ಸತ್ಯಾಗ್ರಹವು ಸಹಸ್ರಾರು ಜನರನ್ನು ತನ್ನೆಡೆಗೆ ಸೆಳೆಯಿತು
ಹಾಗು ತನ್ಮೂಲಕ ವಿಶ್ವದ ಗಮನವನ್ನು ಭಾರತದಲ್ಲಿ ನಡೆಯುತ್ತಿದ್ದ ಸತ್ಯಾಗ್ರಹ ಚಳುವಳಿಯತ್ತ
ಸೆಳೆಯುವುದರಲ್ಲಿ ಯಶಸ್ವಿಯಾಯಿತು. ಇದಾದ ನಂತರ ಮಹಾತ್ಮಾ ಗಾಂಧಿಯವರನ್ನು ಬಿಡುಗಡೆ ಮಾಡಲಾಯಿತು
ಹಾಗು ಅವರು ಭಾರತದ ಸ್ವಾತ್ರಂತ್ರ್ಯ ಸಂಗ್ರಾಮದ ಮುಂದಾಳತ್ವವನ್ನು ಮುಂದುವರೆಸಿದರು. ಭಾರತದ
ಸ್ವಾತಂತ್ರ್ಯ ಸಂಗ್ರಾಮದಲ್ಲಿ ದಂಡಿ ಸತ್ಯಾಗ್ರಹವು ಒಂದು ಮಹತ್ವಪೂರ್ಣ ಘಟನೆಯಾಗಿತ್ತು.