ಗಂಗಾ
ಸಪ್ತಮಿಯ ಮಹತ್ವವನ್ನು ‘ಪದ್ಮ ಪುರಾಣ’, ‘ಬ್ರಹ್ಮ
ಪುರಾಣ’ ಹಾಗೂ ‘ನಾರದ ಪುರಾಣ’ಗಳಲ್ಲಿ
ನೋಡಬಹುದು. ಭಗೀರಥನ ಪೂರ್ವಜರು ಕಪಿಲ ಮುನಿಯ ಶಾಪಕ್ಕೆ ತುತ್ತಾಗಿದ್ದರು. ಇವರ ಮುಕ್ತಿಗಾಗಿ
ಭಗೀರಥ ತಪಸ್ಸು ಮಾಡಿ ಗಂಗೆಯನ್ನು ಪ್ರಾರ್ಥಿಸಿ, ಜೇಷ್ಠಮಾಸ
ದಶಮಿಯಂದು ಭೂಲೋಕಕ್ಕೆ ಕರೆತಂದ. ಈ ದಿನವನ್ನು ಗಂಗಾವತರಣ ದಿನ ಎಂದು ಕರೆಯಲಾಗುತ್ತದೆ.
ಭೂಮಿಗಿಳಿದ
ಗಂಗೆ ತಾನು ಮೋಕ್ಷದಾಯಕಳೆಂಬ ಅಹಂನಿದ ಭೋರ್ಗರೆದು ಹರಿಯಲಾರಂಭಿಸುತ್ತಾಳೆ. ಈ ವೇಳೆ ಜಹ್ನು
ಮಹರ್ಷಿಯ ಆಶ್ರಮ ನೀರಿನಲ್ಲಿ ಕೊಚ್ಚಿ ಹೋಯಿತು. ಇದರಿಂದ ಕುಪಿತರಾದ ಜಹ್ನು ಮಹರ್ಷಿಗಳು
ಗಂಗೆಯನ್ನು ಆಪೋಶಿಸಿದರು(ಕುಡಿದರು).
ಇದರಿಂದ
ಗಾಭರಿಗೊಂಡ ದೇವತೆಗಳು ಹಾಗೂ ಗಂಗೆಯನ್ನು ಭುವಿಗೆ ಕರೆ ತಂದಿದ್ದ ಭಗೀರಥ, ಜಹ್ನು
ಮಹರ್ಷಿಯನ್ನು ಪರಿಪರಿಯಾಗಿ ಪ್ರಾರ್ಥಿಸಿದರು. ಕೋಪದಿಂದ ಇದ್ದ ಜಹ್ನು ಮಹರ್ಷಿ, ಇವರ
ಮನವಿಗೆ ಮನಸೋತು ಹನ್ನೊಂದು ತಿಂಗಳ ನಂತರ ಗಂಗೆಯನ್ನು ಹೊರಹಾಕುವುದಾಗಿ ಹೇಳಿದರು. ಅದರಂತೆ ತನ್ನ
ಬಲ ಕಿವಿಯಿಂದ ವೈಶಾಖ ಶುಕ್ಲ ಪಕ್ಷ ಸಪ್ತಮಿಯಂದು ಹೊರಗೆ ಹರಿಯ ಬಿಟ್ಟರು. ಈ ದಿನ ಗಂಗೆಯು
ಪುನರ್ಜನ್ಮವನ್ನು ಪಡೆದದ್ದರಿಂದ ಗಂಗೋತ್ಪತ್ತಿ ದಿನ ಎನ್ನಲಾಗುತ್ತದೆ.
ಗಂಗೆಯು ಜಗ್ನು ಋಷಿಯ ಕಿವಿಯಿಂದ ಹೊರಬಂದ ಕಾರಣ, ಋಷಿಯ ಮಗಳೆಂದು ಭಾವಿಸಿ ಜಾಹ್ನವಿ ಎಂದು ಕರೆಯಲಾಗುತ್ತದೆ. ಗಂಗೆ ಪವಿತ್ರ ನದಿಯಾಗಿರುವುದರಿಂದ ದೇಶದಲ್ಲಿನ ಎಲ್ಲ ಸರೋವರ, ನದಿ, ಕೆರೆ, ಕಲ್ಯಾಣಿ, ಕುಂಟೆ, ಬಾವಿಗಳಲ್ಲಿನ ನೀರನ್ನು ಗಂಗಾಜಲ ವೆಂದೇ ಭಾವಿಸಲಾಗುತ್ತದೆ. ನಾವು ಸ್ನಾನ ಮಾಡುವ, ಪೂಜೆಗೆ ಬಳಸುವ ಹಾಗೂ ಕುಡಿಯುವ ನೀರನ್ನು ಗಂಗೆಯೆಂದೇ ಪೂಜ್ಯ ಭಾವನೆಯಿಂದ ಬಳಸುತ್ತೇವೆ.