ಸೌರ/ಚಾಂದ್ರ ಶ್ರೀರಾಮನವಮಿ

ಅನುಕರಣೀಯ ಆದರ್ಶಗಳ ಪ್ರತೀಕ - ಶ್ರೀರಾಮ

ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯ ದಿನ ಶ್ರೀರಾಮಚಂದ್ರ ದೇವರ ಜನುಮದಿನ. ಹಾಗಾಗಿ ಹಿಂದೂಗಳು ಈ ದಿನವನ್ನು ವಿಶೇಷ ಶ್ರದ್ಧಾ ಭಕ್ತಿಯಿಂದ ದೇಶದಾದ್ಯಂತ ಆಚರಿಸುತ್ತಾರೆ. ದಕ್ಷಿಣ ಭಾರತದಲ್ಲಿ ಈ ದಿನವನ್ನು ಕೆಲವೆಡೆ ರಾಮ ಸೀತೆಯರ ಕಲ್ಯಾಣ ದಿನವನ್ನಾಗಿಯೂ ಆಚರಿಸುವುದುಂಟು.

ಶ್ರದ್ಧೆ ಭಕ್ತಿಗಳ ಸಂಗಮ - ರಾಮೋತ್ಸವ

ಶ್ರೀ ರಾಮನನ್ನು ಮನೆ ದೇವರನ್ನಾಗಿ ಆರಾಧಿಸುವವರ ಪಾಲಿಗೆ ಈ ಹಬ್ಬ ರಾಮೋತ್ಸವವಾಗಿ ಬಹಳ ವಿಶೇಷವಾಗಿರುತ್ತದೆ. ಪಾಡ್ಯ ದಿನದಿಂದ ನವಮಿಯವರೆಗೆ ಸತತ ಒಂಬತ್ತು ದಿನಗಳ ಕಾಲ ಶ್ರೀರಾಮನನ್ನು ಪೂಜಿಸುತ್ತಾ ಪಾರಾಯಣ ಮಾಡುತ್ತಾ ಒಂಬತ್ತನೇ ದಿನ ಪ್ರಧಾನ ಪೂಜೆಯೊಂದಿಗೆ ರಾಮ ಪಟ್ಟಾಭಿಷೇಕ ಪಾರಾಯಣ ಮಾಡಿ ಹಬ್ಬವನ್ನು ಆಚರಿಸುತ್ತಾರೆ. ಹಾಗೆ ನೋಡಿದರೆ ರಾಮ ನವಮಿಯಲ್ಲಿ ಭಕ್ತರ ಶ್ರದ್ಧೆ ಭಕ್ತಿಗಳೇ ಪ್ರಧಾನ. ಆಚರಣೆಯಲ್ಲಿ ಇದು ಸರಳವಾದ ಹಬ್ಬ ಎನಿಸಿಕೊಂಡಿದೆ. ವಿಶೇಷವಾಗಿ ರಾಮನ ಜನ್ಮ ಸ್ಥಳವಾದ ಅಯೋಧ್ಯೆ ಸೇರಿದಂತೆ ಉತ್ತರ ಭಾರತದ ಕೆಲವೆಡೆಗಳಲ್ಲಿ ಈ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ.

ಆಚರಣೆ

ರಾಮದೇವರು ಸೂರ್ಯ ವಂಶದ ರಾಜನೆಂಬ ನಂಬಿಕೆ ಇದೆ. ಹಾಗಾಗಿ ರಾಮ ನವಮಿಯಂದು ಮೊದಲನೆಯದಾಗಿ ಸೂರ್ಯದೇವನಿಗೆ ಪ್ರಾರ್ಥನೆಯನ್ನು ಮಾಡುವ ಮೂಲಕ ಆಚರಣೆಗಳನ್ನು ಆರಂಭಿಸಲಾಗುತ್ತದೆ. ಹನುಮಂತ , ಸಪತ್ನಿ, ಸಹೋದರ ಸಹಿತ ಶ್ರೀರಾಮಚಂದ್ರನಿಗೆ ನೈವೇದ್ಯದ ಜೊತೆಯಲ್ಲಿ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ.

ಹೆಚ್ಚಿನೆಲ್ಲೆಡೆ ಪಾನಕ ಮತ್ತು ಕೋಸಂಬರಿಯ ನೈವೇದ್ಯವನ್ನು ಮಾಡಿ ಅದನ್ನೇ ಪ್ರಸಾದದ ರೂಪದಲ್ಲಿ ಸೇವಿಸುವುದು ವಾಡಿಕೆ. ಕೋಸಂಬರಿ ಹಾಗೂ ಬೆಲ್ಲ, ಬೇಲದ ಹಣ್ಣು, ಲಿಂಬೆ, ಕಾಳು ಮೆಣಸು, ಪುನರ್ಪುಳಿ ಇತ್ಯಾದಿಗಳಿಂದ ತಯಾರಿಸಿದ ಪಾನಕ ಆರೋಗ್ಯದಾಯಕವೂ ಆಗಿದೆ.

ನಾಮ ಸಂಕೀರ್ತನೆ

ರಾಮ ನವಮಿಯಂದು ರಾಮ ಜಪ, ರಾಮ ಧ್ಯಾನ, ರಾಮನ ಭಜನೆ, ಹಾಡು, ಕುಣಿತ ಎಲ್ಲವೂ ಇರುತ್ತದೆ. ಈ ದಿನ ಮಂದಿರಗಳಲ್ಲಿ ವಿಶೇಷ ಭಕ್ತಿ ಗಾಯನ ಕಾರ್ಯಕ್ರಮಗಳನ್ನು, ಸಂಗೀತ ಕಚೇರಿಗಳನ್ನು, ರಾಮ ನಾಮ ಸಂಕೀರ್ತನೆಗಳನ್ನು ,ಮೆರವಣಿಗೆ, ಉತ್ಸವಗಳನ್ನು ಆಯೋಜಿಸಲಾಗುತ್ತದೆ. ರಾಷ್ಟ್ರ ಮಟ್ಟದ ಕಾರ್ಯಕ್ರಮಗಳು ಕೂಡ ವಾರಗಟ್ಟಲೆ ಅಲ್ಲಲ್ಲಿ ನಡೆಯುತ್ತಿರುತ್ತವೆ.

ಈ ಹಬ್ಬದ ಇನ್ನೊಂದು ವಿಶೇಷತೆಯೆಂದರೆ ರಾಮ ನಾಮವನ್ನು ಪುಸ್ತಕಗಳಲ್ಲಿ ಬರೆಯುವುದು. ರಾಮ ನಾಮವನ್ನು ತಾರಕ ನಾಮ ಎಂದು ಕೂಡ ಕರೆಯಲಾಗುತ್ತದೆ. ತಾರಕ ಎಂದರೆ ಕಾಪಾಡುವವನು 'ರಕ್ಷಕನು' ಎನ್ನುವ ಅರ್ಥವಿದೆ. ರಾಮ ಧ್ಯಾನದ ಪ್ರತೀಕವಾಗಿಯೇ ರಾಮನಾಮವನ್ನು ಬರೆಯಲಾಗುತ್ತದೆ. ಇದು ಏಕಾಗ್ರತೆಯನ್ನು ಮೂಡಿಸಲು ನೆರವಾಗುತ್ತದೆ ಎಂಬ ನಂಬಿಕೆಯೂ ಇದೆ.

ಮೆರವಣಿಗೆ

ಈ ದಿನ ಹಮ್ಮಿಕೊಳ್ಳುವ ಮೆರವಣಿಗೆಯಲ್ಲಿ ರಾಮನ ಆದರ್ಶಗಳನ್ನು ರಾಮನ ಕಾಲದ ಆಡಳಿತದ ಸೊಬಗನ್ನು ಜನರಿಗೆ ತಿಳಿಸುವ ಆಶಯವಿರುತ್ತದೆ. ಶ್ರೀರಾಮ ಅಷ್ಟೋತ್ತರಗಳು, ರಾಮ ರಕ್ಷಾ ಸ್ತೋತ್ರ, ರಾಮಾಷ್ಟಕ ಸೇರಿದಂತೆ ದಿನವಿಡಿ ಶ್ರೀರಾಮನ ಸ್ಮರಣೆಯೊಂದಿಗೆ ವ್ರತಾಚರಣೆಯನ್ನು ಮಾಡಲಾಗುತ್ತದೆ. ಇಂತಹ ವ್ರತಾಚರಣೆ ನಮ್ಮಲ್ಲಿನ ದುಷ್ಟ ಆಲೋಚನೆಗಳನ್ನು ತೊಡೆದು ಹಾಕಿ ಉತ್ತಮ ವಿಚಾರಗಳನ್ನು ಉದ್ದೀಪನಗೊಳಿಸಲು ನೆರವು ನೀಡುತ್ತದೆ.

ಒಟ್ಟಿನಲ್ಲಿ ರಾಮ ನವಮಿಯ ಆಚರಣೆ ಎನ್ನುವಂತಾದ್ದು ಕೇವಲ ಒಂದು ದಿನಕ್ಕಷ್ಟೇ ಸೀಮಿತವಾಗಿರದೆ ಶ್ರೀರಾಮನ ಅನುಕರಣೀಯ ಆದರ್ಶಗಳನ್ನು ನಮ್ಮ ಜೀವನದಲ್ಲೂ ಆಳವಡಿಸಿಕೊಳ್ಳುವತ್ತ ನಮ್ಮನ್ನು ನಿರಂತರವಾಗಿ ಪ್ರೇರೇಪಿಸಲಿ ಎನ್ನುವುದು ಹಬ್ಬದ ಆಶಯ.